ಮೋಟೋವಾ ರುಚಿ-ಲಾಭ ವ್ಹಾ ವ್ಹಾ ...

ವಿಜಯವಾಣಿ (9)
Published on

| ತಿಪ್ಪಣ್ಣ ಅವಧೂತ, ಹುಬ್ಬಳ್ಳಿ

ತೋಟಗಾರಿಕೆ ಬೆಳೆಯಲ್ಲಿ ಅತೀ ಹೆಚ್ಚು ಲಾಭ ತಂದು ಕೊಡುವಲ್ಲಿ ಅಡಕೆ ಮೇಲುಗೈ ಸಾಧಿಸಿದೆ. ಆದರೆ, ಅದಕ್ಕಿಂತ ಹೆಚ್ಚು ಲಾಭದಾಯಕ ಬೆಳೆಯೊಂದು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಈಗ ಪರಿಚಿತಗೊಂಡಿದೆ. ಇಲ್ಲಿಯವರೆಗೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಅಡಕೆ ವ್ಯಾಪ್ತಿ ಕ್ರಮೇಣ ಕುಂಠಿತವಾಗುತ್ತಿದೆ. ಆ ಜಾಗದಲ್ಲೀಗ ‘ಮೋಟೋವಾ’ ಬೆಳೆ ಸದ್ದಿಲ್ಲದೆ ಹೆಜ್ಜೆ ಇಡುತ್ತಿದೆ. ಕಡಿಮೆ ಖರ್ಚು ಹಾಗೂ ಲಾಭದಾಯಕ ಬೆಳೆಯಾಗಿರುವ ಮೋಟೋವಾ ಕೆಲವೇ ಕೆಲವು ಭಾಗದಲ್ಲಿ ಬೆಳೆಯುವ ಹಣ್ಣಿನ ಜಾತಿಯ ಗಿಡ. ಇದು ನಾಟಿ ಮಾಡಿದಾಗಿನಿಂದ ಫಸಲು ಕೊಡಲು ಕನಿಷ್ಠ ಮೂರ್ನಾಲ್ಕು ವರ್ಷ ಬೇಕು.

ಒಮ್ಮೆ ಫಸಲು ಆರಂಭವಾದರೆ 40 ವರ್ಷಗಳವರೆಗೆ ಫಸಲು ನಿರೀಕ್ಷೆ ಮಾಡಬಹುದು. ದ.ಕನ್ನಡ, ಉ.ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕೆಲವೆಡೆ ಈಗಾಗಲೇ ಹಣ್ಣು ಬಿಡುತ್ತಿರುವ ಮರಗಳನ್ನು ಕಾಣಬಹುದಾಗಿದೆ. ಆದರೆ, ಬಿಸಿಲ ನಾಡಿನಲ್ಲಿ ಈ ಜಾತಿಯ ಮರಗಳನ್ನು ಈವರೆಗೆ ಯಾರೊಬ್ಬರೂ ನಾಟಿ ಮಾಡಿಲ್ಲ. ಹೀಗಾಗಿ, ಅಲ್ಲಿ ಮರ ಬೆಳವಣಿಗೆ ಕಾಣುತ್ತದೆಯೋ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಯಲ್ಲಾಪುರ ತಾಲೂಕಿನ ಕಾನ್​ಕೊಡ್ಲುವಿನ ಮೋಟೋವಾ ಬೆಳೆಗಾರ ಪ್ರಸಾದ ರಾಮ ಹೆಗಡೆ. ಸದ್ಯದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮೋಟೋವಾ ಜಾತಿಯ 5000 ಗಿಡಗಳಿರಬಹುದು. ಹೀಗಾಗಿ ಹಣ್ಣಿಗೆ ಬಲು ಬೇಡಿಕೆ ಇದೆ. ಗಿಡಗಳಲ್ಲಿ ಗೊಂಚಲು ಲೆಕ್ಕದಲ್ಲಿ ಹಣ್ಣುಗಳು ಬೆಳೆಯುತ್ತವೆ. ಒಂದೊಂದು ಗೊಂಚಲಿನಲ್ಲಿ 8, 10, ಅಥವಾ 15 ಕೆಜಿಯಂತೆ ಹಣ್ಣು ಬರುತ್ತವೆ.

ಹಣ್ಣು ಹೇಗಿರುತ್ತದೆ?: ಗಿಡದಲ್ಲಿ ತಿಂಗಳಿಗೊಮ್ಮೆ ಬರುವ ಈ ಹಣ್ಣು ಪೂಲಾಸಾನ್, ಲಾಂಗಾನ್ ಅಥವಾ ಲಂಬುಟಾನ್ ರೀತಿಯ ಅಡಕೆಯಂತೆ ಸಿಪ್ಪೆ ಗಾತ್ರ ಇರುತ್ತದೆ. ಅದರೊಳಗಡೆ ಪಲ್ಪ್ ರೀತಿ ಹಣ್ಣು ಇದ್ದು, ತಿನ್ನಲು ರಚಿಕರವಾಗಿರುತ್ತದೆ. ಒಮ್ಮೆ ಇದರ ರುಚಿ ಕಂಡವರು ಮತ್ತೆ ತಿನ್ನಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಾರೆ. ಹಣ್ಣಿನ ಸಿಪ್ಪೆ ಒಣಗಿದರೂ 10 ದಿನಗಳವರೆಗೆ ಒಳಗಡೆಯ ಹಣ್ಣು ಹಾಳಾಗುವುದಿಲ್ಲ. ಮೋಟೋವಾ ಮರದಲ್ಲಿ ಎರಡು ರೀತಿ ಇದ್ದು, ಕೇರಳ ಜಾತಿಯದು ಗಿಡ್ಡ ಮರ, ಅದರ ಹಣ್ಣು ಕೂಡ ಚಿಕ್ಕವು. ಹೀಗಾಗಿ, ಆ ಹಣ್ಣಿಗೆ ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆಯಿಲ್ಲ. ಮತ್ತೊಂದು ದೊಡ್ಡ ಮರ, ಅದರಂತೆ ಹಣ್ಣು ಕೂಡ ದೊಡ್ಡವು. ಕೆಜಿ ಹಣ್ಣಿಗೆ 450 ರೂ. ನಿಂದ 800 ರೂ. ವರೆಗೂ ಮಾರಾಟವಾದ ದಾಖಲೆ ಇದೆ. ಈ ಮರಕ್ಕೆ ರೋಗಗಳು ಕಡಿಮೆ.

ಹಣ್ಣಿನ ಜತೆಗೆ ಗಿಡವೂ ಮಾರಾಟ: ಪ್ರಸಾದ ರಾಮ ಹೆಗಡೆ ಅವರು ಈ ಬೆಳೆ ಬೆಳೆದಿದ್ದು, ಹಣ್ಣು ಕೂಡ ಮಾರುಕಟ್ಟೆಗೆ ಬಂದಿದೆ. ಇವರು ಹಣ್ಣಿನ ಜತೆಗೆ ಗಿಡಗಳನ್ನೂ ಮಾರಾಟ ಮಾಡುತ್ತಾರೆ. ಕಾಯಿ ಆದ ಒಂದು ಗಿಡಕ್ಕೆ 2500 ರೂ. ನಂತೆ ಮಾರಾಟ ಮಾಡಿದ್ದಾರೆ.

ಹಲವು ರೋಗಗಳಿಗೆ ರಾಮಬಾಣ

ಮೋಟೋವಾ ಹಣ್ಣನ್ನು ಪಾನೀಯ ಗಳಲ್ಲಿ ಬಳಸಬಹುದು ಅಥವಾ ಸಿರಪ್​ಗಳಲ್ಲಿ ಸಂರಕ್ಷಿಸಬಹುದು. ಈ ಹಣ್ಣಿನಲ್ಲಿ ವಿಟಮಿನ್ ಇ, ಸಿ ಸಮೃದ್ಧವಾಗಿ ರುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಿದೆ. ವಿಟಮಿನ್ ಇ ಒತ್ತಡ ನಿವಾರಿಸಲು, ಕ್ಯಾನ್ಸರ್, ಹೃದಯ ಕಾಯಿಲೆಯ ಅಪಾಯ ತಡೆಗಟ್ಟಲು ಸಹಾಯಕವಾಗುತ್ತದೆ.

ಗಿಡ ಹಾಗೂ ಹಣ್ಣಿನಿಂದ ಆದಾಯ ಬಂದರೆ ಕೃಷಿ ಆದಾಯಕ್ಕೆ ಸಮಾನವಾಗಿ ದುಡಿಯಬಹುದು. ನಮ್ಮ ಭಾಗದಲ್ಲಿ ಅಡಕೆಗೆ ಪರ್ಯಾಯ ಬೆಳೆಯಾಗಿ ಮೋಟೋವಾ ಬೆಳೆಯಲಾಗುತ್ತದೆ. ಇದರಲ್ಲಿ ಖರ್ಚು ಕಡಿಮೆ, ಲಾಭ ಹೆಚ್ಚು. ಈ ಬೆಳೆ ಬಗ್ಗೆ ನಮ್ಮ ಭಾಗದ ರೈತರು ಇನ್ನಷ್ಟು ತಿಳಿದುಕೊಂಡು ಬೆಳೆದರೆ ಒಂದು ಗಿಡದಿಂದ ವರ್ಷಕ್ಕೆ 12000 ರೂ.ವರೆಗೆ ಲಾಭ ಗಳಿಸಬಹುದು. | ಪ್ರಸಾದ ರಾಮ ಹೆಗಡೆ ಕಾನ್​ಕೊಡ್ಲು ಹೆಮ್ಮಾಡಿ, ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net