

ದೊಡ್ಡ ಮಗಳಿಗೆ ಐದು ವರ್ಷ ತುಂಬಿದಾಗ ತಾವು ಭಾರತಕ್ಕೆ ಮರಳುವುದು ಸೂಕ್ತವೆಂದು ಸುಷ್ಮಾ ಗಂಡನಿಗೆ ಸೂಚಿಸಿದಳು. ‘ಈ ದೇಶದ ಆಚಾರ, ವಿಚಾರ, ಸಂಪ್ರದಾಯಗಳನ್ನು ನಮ್ಮ ಹೆಣ್ಣು ಮಕ್ಕಳು ರೂಢಿಸಿಕೊಳ್ಳುವುದು ನನಗಿಷ್ಟವಿಲ್ಲ. ನಾವು ಅಮೆರಿಕದಲ್ಲಿ ನೆಲೆಸುವುದು ಬೇಡ. ನೀವೀಗಾಗಲೇ ದುಡಿದು ಸಾಕಷ್ಟು ಹಣ ಗಳಿಸಿದ್ದೀರಿ. ನಮ್ಮ ಊರಿಗೆ ಹೋಗಿ ಹಾಯಾಗಿರೋಣ’ ಎಂದಳು. ಅಜಿತ್ ಹೆಂಡತಿಯ ಮಾತಿಗೆ ಒಪ್ಪಿದ. ಆರು ತಿಂಗಳ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ರಾಜ್ಯಕ್ಕೇ ವಾಪಸ್ಸಾದ. ರಾಜ್ಯದ ರಾಜಧಾನಿಯಲ್ಲಿ ಒಂದು ಭವ್ಯವಾದ ಅಪಾರ್ಟ್ವೆುಂಟ್ ಖರೀದಿಸಿದ. ಹಿರಿಯ ಮಗಳನ್ನು ನರ್ಸರಿಗೆ ಸೇರಿಸಿದ. ತನ್ನ ಹಣವನ್ನು ಹೂಡಿಕೆ ಮಾಡಿ ಒಂದು ಪುಟ್ಟ ಸಾಫ್ಟ್ವೇರ್ ಕಂಪನಿ ತೆಗೆದ. ಅದರಲ್ಲಿ ಪತ್ನಿಯನ್ನೂ ಪಾಲುದಾರಳನ್ನಾಗಿ ಮಾಡಿಕೊಂಡ. ಅಮೆರಿಕದ ತನ್ನ ಸಂಪರ್ಕಗಳನ್ನು ಬಳಸಿ ಅಲ್ಲಿಯ ಕಂಪನಿಗಳಿಗೆ ಬೇಕಾದಂತಹ ಪ್ರಾಡಕ್ಟ್ಗಳನ್ನು ತಯಾರಿಸಿ ಅವನ್ನು ರಫ್ತು ಮಾಡತೊಡಗಿದ. ಕಂಪನಿ ಲಾಭದಿಂದ ನಡೆಯತೊಡಗಿತು. ಏತನ್ಮಧ್ಯೆ ಊರಿನಲ್ಲಿದ್ದ ತಂದೆ ನಿಧನರಾದ ನಂತರ ಅವರ ಒಬ್ಬನೇ ಮಗನಾದ ಅಜಿತ್ ತನ್ನ ತಾಯಿ ರತ್ನಮ್ಮರನ್ನೂ ತಮ್ಮೊಡನೆ ವಾಸಮಾಡಲು ಕರೆತಂದ.
ಸಂಸಾರ ಸುಖದಿಂದ ಸಾಗುತ್ತಿದೆ ಎಂದು ತೃಪ್ತಿಯಿಂದಿರುವಾಗ ಅಮೆರಿಕದಲ್ಲಿ ತೀವ್ರ ಅರ್ಥಿಕ ಹಿಂಜರಿತವುಂಟಾಗಿ ಅಜಿತನ ಕಂಪನಿಯ ರಫ್ತಿಗೆ ಭಾರಿ ಹೊಡೆತ ಬಿದ್ದಿತು. ಆತನಿಗೆ ಭಾರತದಲ್ಲಿ ಯಾವುದೇ ಗ್ರಾಹಕರಿರಲಿಲ್ಲ. ತನ್ನ ಸಾಫ್ಟ್ವೇರ್ ಉತ್ಪನ್ನವನ್ನು ಮಾರಲು ಆತ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದುವು. ಕಡೆಗೆ ಅಜಿತ್ ಕಂಪನಿಯನ್ನು ಮುಚ್ಚುವ ಹಂತಕ್ಕೆ ಬಂದ. ಆಗ ಸುಷ್ಮಾ ತಾನು ನೌಕರಿಗೆ ಹೋಗುತ್ತೇನೆಂದು ಹೇಳಿದರೂ ಆತ ಅವಳಿಗೆ ನೌಕರಿಗೆ ಹೋಗಲು ಬಿಡಲಿಲ್ಲ.
ಹಣವೂ ಇಲ್ಲದೆ, ಉದ್ಯೋಗವೂ ಇಲ್ಲದೆ ಅಜಿತ್ ತೀವ್ರ ಖಿನ್ನತೆಗೆ ಜಾರಿ ಕುಡಿತದ ದಾಸನಾದ. ಸದಾಕಾಲವೂ ತನ್ನ ರೂಮಿನಲ್ಲಿಯೇ ಕುಳಿತು ಮೊಬೈಲ್ಫೋನಿನಲ್ಲಿ ವಿಡಿಯೋಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದ. ‘ನಿನಗೆ ಹೆಚ್ಚೇನೂ ವಯಸ್ಸಾಗಿಲ್ಲ, ಕೇವಲ 45 ಆಗಿದೆ. ಜೀವನ ಇನ್ನೂ ಸಾಕಷ್ಟು ಬಾಕಿಯಿದೆ. ನಿನಗೆ ಅನುಭವವಿದೆ, ಯಾವುದಾದರೊಂದು ಕೆಲಸಕ್ಕೆ ಸೇರಿಕೋ, ನಿನಗೆ ಬೇಕಾದ ಸಹಾಯ ನಾನು ಮಾಡುವೆ’ ಎಂದು ಸುಷ್ಮಾ ಹೇಳಿದಾಗ ಅವಳ ಮೇಲೆ ಕೋಪಗೊಂಡು ಮನಬಂದಂತೆ ಬೈದ. ‘ನೋಡು ಜೀತೂ, ನಮ್ಮ ದೊಡ್ಡ ಮಗಳು ಎಂಟು ವರ್ಷದವಳು, ಚಿಕ್ಕವಳು ಆರು ವರ್ಷದವಳು, ನಾವು ಅವರ ಭವಿಷ್ಯದ ಬಗ್ಗೆಯೂ ಯೋಚಿಸಬೇಕಲ್ಲವೇ?’ ಎಂದು ಆಕೆ ಹೇಳಿದಾಗ ಅವಳನ್ನು ರೂಮಿನಿಂದ ಹೊರದಬ್ಬಿ ಬಾಗಿಲನ್ನು ಹಾಕಿಕೊಂಡ. ಕುಟುಂಬ ನಿರ್ವಹಣೆಗಾಗಿ ಸುಷ್ಮಾ ತಂದೆಯಿಂದ ಸಾಲ ಪಡೆದಿದ್ದಲ್ಲದೆ ಅಮೆರಿಕದಲ್ಲಿ ಮಾಡಿದಂತೆಯೇ ಮನೆಯಲ್ಲಿಯೇ ತಿಂಡಿತಿನಿಸುಗಳನ್ನು ಮಾಡಿ ಅವನ್ನು ಮಾರಿ ಹಾಗೂ ಹೀಗೂ ಸಂಸಾರ ಸಾಗಿಸತೊಡಗಿದಳು.
ಬರಬರುತ್ತಾ ಅಜಿತನಿಗೆ ಖಿನ್ನತೆ ಹೆಚ್ಚಾಗತೊಡಗಿತು. ತನ್ನ ರೂಮಿನಿಂದಲೇ ಹೊರಬರುತ್ತಿರಲಿಲ್ಲ. ಮಕ್ಕಳ ಹೊರತಾಗಿ ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಸುಷ್ಮಾ ಆಗಲೀ ರತ್ನಮ್ಮನವರಾಗಲೀ ಅವನನ್ನು ಮಾತನಾಡಿಸಲು ಹೋದರೆ ಗಟ್ಟಿದನಿಯಲ್ಲಿ ಅವರನ್ನು ಬೈಯುತ್ತಿದ್ದ. ಆರಂಭದಲ್ಲಿ ಬೈಗುಳದಿಂದ ಶುರುವಾದ ಪತಿಯ ಹಿಂಸೆ ಸುಷ್ಮಾಳಿಗೆ ಕಾಲಕ್ರಮೇಣ ದೈಹಿಕ ಕಿರುಕುಳಕ್ಕೆ ತಿರುಗಿತು. ಕುಡಿದು ಅಮಲೇರಿದಾಗ ಮನಬಂದಂತೆ ಸುಷ್ಮಾಳನ್ನು ಥಳಿಸುತ್ತಿದ್ದ. ಬರಬರುತ್ತಾ ಅವನ ಹಿಂಸೆಯನ್ನು ತಡೆಯಲು ಸಾಧ್ಯವೇ ಆಗದಾದಾಗ ಸುಷ್ಮಾ ಮಾತಾಪಿತರಲ್ಲಿ ಹೇಳಿಕೊಂಡಳು. ಸುಷ್ಮಾಳ ತಂದೆ ಅಳಿಯನಿಗೆ ಬುದ್ಧಿ ಹೇಳಲು ಬಂದರು. ಅಜಿತ್ ಮಾವನವರಿಗೇ ಬೈದು ಅವರನ್ನು ತನ್ನ ಮನೆಯಿಂದ ಹೊರಗಟ್ಟಿದ. ಆಗ ಕೋಪಗೊಂಡ ಸುಷ್ಮಾ ಉಟ್ಟಬಟ್ಟೆಯಲ್ಲಿಯೇ ತಂದೆಯೊಡನೆ ತನ್ನ ತವರು ಮನೆಗೆ ಹೊರಟು ಹೋದಳು. ಮಕ್ಕಳನ್ನು ಜತೆಯಲ್ಲಿ ಕರೆತರುವಂತೆ ಅವಳ ಮಾತಾಪಿತರು ಸೂಚಿಸಿದಾಗ, ‘ಮಕ್ಕಳ ಜವಾಬ್ದಾರಿ ತನ್ನ ಮೇಲೆ ಬಿದ್ದಾಗ ಅಜಿತ್ ಸುಧಾರಿಸಬಹುದು. ಒಂದೆರಡು ತಿಂಗಳು ಕಾದು ನೋಡೋಣ’ ಎಂದಳು ಸುಷ್ಮಾ. ಅದೃಷ್ಟವಶಾತ್ ಅಜಿತ್ನ ತಾಯಿ ರತ್ನಮ್ಮ ಮನೆಯಲ್ಲಿ ಇದ್ದದ್ದರಿಂದ ಆಕೆ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರಲ್ಲದೆ, ಅಡುಗೆ ಕೆಲಸವನ್ನು ನಿಭಾಯಿಸುತ್ತಿದ್ದರು. ತಾಯಿಯ ಪ್ರೇಮವಿಲ್ಲದೆ ಮಕ್ಕಳೂ ಮಂಕಾದರು. ರತ್ನಮ್ಮ ತಮ್ಮ ಒಡವೆಗಳನ್ನು ಅಡವಿಟ್ಟು ಮನೆಯನ್ನು ನಡೆಸತೊಡಗಿದ್ದರು.
ಎರಡು ತಿಂಗಳು ಕಳೆದ ನಂತರ ಕೋವಿಡ್ ಪಿಡುಗು ಬಂದು ಮಕ್ಕಳ ಶಾಲೆಗಳಿಗೆ ರಜೆ ಬಂದಿತು. ಆಗ ರತ್ನಮ್ಮ ಸೊಸೆಗೆ ಫೋನ್ ಮಾಡಿ ಮನೆಗೆ ವಾಪಸ್ಸಾಗಲು ವಿನಂತಿಸಿದರು. ‘ನನ್ನ ಗಂಡ ಕುಡಿಯುವುದನ್ನು ಬಿಟ್ಟಾಗ ಮಾತ್ರ ವಾಪಸಾಗುವೆ’ ಎಂದಳು ಸುಷ್ಮಾ. ‘ನೀನಿಲ್ಲದೆ ಮಕ್ಕಳಿಗೆ ತೀರಾ ತೊಂದರೆಯಾಗಿದೆ, ಅವರನ್ನಾದರೂ ನಿನ್ನೊಡನೆ ಕರೆದುಕೊಂಡು ಹೋಗು, ಹೇಗಿದ್ದರೂ ಶಾಲೆಗೆ ರಜೆಯಿದೆ’ ಎಂದರು. ಅದಕ್ಕೂ ಆಕೆ ಒಪ್ಪಲಿಲ್ಲ. ಹೀಗಿರುವಾಗ ಒಂದು ದಿನ ಬಹಳ ಖಿನ್ನತೆಗೆ ಜಾರಿದ್ದ ಅಜಿತ್ ಕ್ಷುಲ್ಲಕ ವಿಷಯಕ್ಕೆ ತಾಯಿಯ ಮೇಲೆಯೇ ಕೋಪಗೊಂಡು ಆಕೆಗೆ ಕೋಲಿಂದ ಥಳಿಸಿದ. ಆಕೆಗೆ ತೀವ್ರ ಭಾರಿ ಗಾಯಗಳಾಗಿ ಆಸ್ಪತ್ರೆಗೆ ಹೋಗಬೇಕಾಯಿತು. ಆಸ್ಪತ್ರೆಯಲ್ಲಿ ತಾನು ಎಡವಿ ಬಿದ್ದು ಗಾಯವಾಯಿತು ಎಂದು ರತ್ನಮ್ಮ ಸುಳ್ಳು ಹೇಳಿದ ಕಾರಣ ಅಜಿತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲಿಲ್ಲ. ಆಸ್ಪತ್ರೆಯಲ್ಲಿ ಐದಾರು ದಿನ ಇರಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ರತ್ನಮ್ಮಳಿಗೆ ಮೊಮ್ಮಕ್ಕಳ ಚಿಂತೆ ಕಾಡತೊಡಗಿತು. ಆಗ ಆಕೆ ಸುಷ್ಮಾಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಕೂಡಲೇ ಬಂದು ಮಕ್ಕಳನ್ನು ಕರೆದುಕೊಂಡು ಹೋಗಲು ವಿನಂತಿಸಿದಳು.
ಇದಕ್ಕೊಪ್ಪಿದ ಸುಷ್ಮಾ ಮಾರನೆಯ ದಿನವೇ ಗಂಡನೂರಿಗೆ ಬಂದು ಅವನ ಅಪಾರ್ಟ್ವೆುಂಟಿಗೆ ಹೋದಳು. ನಾಲ್ಕೈದು ಬಾರಿ ಮನೆಯ ಕರೆಗಂಟೆ ಬಾರಿಸಿದರೂ ಯಾವುದೇ ಉತ್ತರ ಬರಲಿಲ್ಲ. ಕಡೆಗೆ ಆಕೆ ಅತ್ತೆಯಿದ್ದ ಆಸ್ಪತ್ರೆಗೆ ಹೋದಳು. ಮನೆಯಲ್ಲಿ ಯಾರೂ ಇಲ್ಲವೆಂದೆನಿಸುತ್ತದೆ, ಬಾಗಿಲು ತೆರೆಯಲಿಲ್ಲ ಎಂದಳು. ಗಾಬರಿಯಾದ ರತ್ನಮ್ಮ, ‘ನಿನ್ನ ಗಂಡ ಮನೆ ಬಿಟ್ಟು ಹೊರಗಡೆಯೇ ಹೋಗುವುದಿಲ್ಲ, ಅವನಿಗೆ ಬೇಕಾದ ಮದ್ಯವನ್ನೂ ಎಂ.ಆರ್.ಪಿ ಅಂಗಡಿಯ ಹುಡುಗ ತಂದುಕೊಡುತ್ತಾನೆ’ ಎಂದು ಹೇಳಿ ಮಗನ ಸೆಲ್ಫೋನ್ ಸಂರ್ಪಸಿದಳು. ಉತ್ತರ ಬರಲಿಲ್ಲ. ಗಾಬರಿಯಾದ ರತ್ನಮ್ಮ ಮತ್ತೊಮ್ಮೆ ಅಪಾರ್ಟ್ವೆುಂಟಿಗೆ ಧಾವಿಸಿ ಬಾಗಿಲು ಬಡಿಯಲು ಸೊಸೆಗೆ ಸೂಚಿಸಿದರು. ಸುಷ್ಮಾ ಅಪಾರ್ಟ್ವೆುಂಟಿಗೆ ಹೋದಾಗ ಬಾಗಿಲ ಮುಂದೆ ಎರಡನೇ ಮಗಳು ಅಳುತ್ತಾ ಕುಳಿತಿದ್ದಳು. ತಾಯಿಯನ್ನು ನೋಡಿದ ಕೂಡಲೇ ಓಡಿಬಂದು ಅವಳನ್ನು ಅಪ್ಪಿಕೊಂಡಳು. ‘ಏಕೆ ಇಲ್ಲಿ ಕುಳಿತಿರುವೆ?’ ಎಂದು ಸುಷ್ಮಾ ಕೇಳಿದಾಗ, ‘ಅಪ್ಪ ಅಕ್ಕನನ್ನು ತಮ್ಮ ರೂಮಿನಲ್ಲಿಟ್ಟುಕೊಂಡು ನನ್ನನ್ನು ಹೊರಗೆ ಕಳುಹಿಸಿ ಬಾಗಿಲು ಹಾಕಿಕೊಂಡಿದ್ದಾರೆ’ ಎಂದಳು. ಗಾಬರಿಯಾದ ಸುಷ್ಮಾ ಎಡಬಿಡದೇ ಕರೆಗಂಟೆ ಬಾರಿಸಿದಳು. ಸ್ವಲ್ಪ ಸಮಯದ ನಂತರ ಟವಲನ್ನುಟ್ಟುಕೊಂಡಿದ್ದ ಅಜಿತ್ ಬಾಗಿಲು ತೆರೆದ. ಅವನ ಸ್ಥಿತಿ ಕಂಡ ಸುಷ್ಮಾ ಹೆದರಿ ಮಗಳೆಲ್ಲಿ ಎಂದು ಕೇಳುತ್ತಾ ಅವನನ್ನು ನೂಕಿಕೊಂಡು ಬೆಡ್ರೂಮಿಗೆ ಓಡಿದಳು. ಮಂಚದ ಮೇಲೆ ಮಗಳು ನಗ್ನಳಾಗಿ ನಡುಗುತ್ತಾ ಮಲಗಿದ್ದು ತಾಯಿಯನ್ನು ಕಂಡ ಕೂಡಲೇ ಅಳಲಾರಂಭಿಸಿದಳು. ‘ಏನಾಯಿತು’ ಎಂದು ಕೇಳಿದಾಗ, ಆಕೆ ಆಳುತ್ತಾ ಅಪ್ಪ ತನ್ನನ್ನು ವಿವಸ್ತ್ರಗೊಳಿಸಿ ತಾನೂ ವಿವಸ್ತ್ರಗೊಂಡು ತನ್ನ ಅಂಗಾಂಗಗಳನ್ನು ಮುಟ್ಟುತ್ತಿದ್ದ ಎಂದು ತಿಳಿಸಿದಳು. ತಲ್ಲಣಗೊಂಡ ಸುಷ್ಮಾ ಕೂಡಲೇ ಆಕೆಯನ್ನು ತನಗೆ ಪರಿಚಯವಿರುವ ಮನೋವೈದ್ಯೆಯ ಬಳಿ ಕರೆದುಕೊಂಡು ಹೋದಳು. ವಿಷಯವರಿತ ವೈದ್ಯೆ ಪೊಲೀಸರಿಗೆ ದೂರು ಕೊಟ್ಟಳು. ಸ್ಥಳಕ್ಕೆ ಬಂದ ಪೊಲೀಸರು ಅಜಿತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಾಲಕಿಯ ಹೇಳಿಕೆ ಪಡೆದು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆಕೆಯ ಗುಪ್ತಾಂಗಗಳ ಮೇಲೆ ಉಗುರಿನ ಗುರುತುಗಳಿವೆ, ಲೈಂಗಿಕ ಕಿರುಕುಳವಾಗಿದೆ ಎಂದರು ತಪಾಸಿಸಿದ ವೈದ್ಯರು. ಆ ಬಾಲಕಿಯನ್ನು ಆಪ್ತ ಸಮಾಲೋಚಕರು ವಿವರವಾಗಿ ವಿಚಾರಿಸಿದರು. ಅಜಿತ್ ಅಶ್ಲೀಲ ವಿಡಿಯೋ ಚಿತ್ರಗಳನ್ನು ನೋಡುವ ಚಟ ಬೆಳೆಸಿಕೊಂಡಿದ್ದು ಮಗಳ ಶಾಲೆ ಮುಚ್ಚಿದಾದಾಗಿನಿಂದ ಅವಳಿಗೂ ಆ ಚಿತ್ರಗಳನ್ನು ತೋರಿಸುತ್ತಿದ್ದನೆಂದು ತಿಳಿಯಿತು. ಅವನ್ನು ನೋಡುತ್ತಾ ಕೆಟ್ಟ ರೀತಿಯಲ್ಲಿ ಮಗಳ ಮೈಮುಟ್ಟುತ್ತಾ ಲೈಂಗಿಕ ಶೋಷಣೆ ನಡೆಸುತ್ತಿದ್ದನೆಂದೂ ಅಂತಹ ಸಮಯದಲ್ಲಿ ಕಿರಿಯ ಮಗಳನ್ನು ತನ್ನ ಕೋಣೆಯಿಂದ ಹೊರಗೆ ಕಳಿಸುತ್ತಿದ್ದನೆಂದೂ ತಿಳಿಯಿತು.
ಅಜಿತನ ಮನೆಗೆ ಪೊಲೀಸರು ಹೋಗಿ ಅವನನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದರು. ಅಜಿತನ ಸೆಲ್ಫೋನಿನಲ್ಲಿ ಅಪ್ರಾಪ್ತ ಬಾಲಕ ಬಾಲಕಿಯರ ಅಶ್ಲೀಲ ವಿಡಿಯೋ ಕ್ಲಿಪ್ಗಳು ಹಲವಾರು ಇದ್ದವು. ಇವಲ್ಲದೆ ಅವನ ಬಳಿ ಹಲವಾರು ಅಶ್ಲೀಲ ಮ್ಯಾಗಝೀನ್ಗಳೂ ಇದ್ದವು. ಆನಂತರ ಅವನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಆಗ ನ್ಯಾಯಾಲಯವು ಸುಷ್ಮಾಳಿಗೆ ಅವಳ ಎರಡೂ ಮಕ್ಕಳ ಸುಪರ್ದಿಯನ್ನು ನೀಡಿತು. ಒಂದೇ ತಿಂಗಳಲ್ಲಿ ಪ್ರಕರಣದ ತನಿಖೆ ಮುಗಿಸಿದ ಪೊಲೀಸರು ಅಜಿತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯವು ಅವನಿಗೆ ಐದು ವರ್ಷಗಳ ಕಠಿಣ ಸಜೆ ವಿಧಿಸಿತು. ತಾಯಿಯಾದ ಸುಷ್ಮಾ ಎಚ್ಚರ ಮತ್ತು ಜವಾಬ್ದಾರಿ ತೋರಿಸಿದ್ದರೆ ಈ ಪ್ರಕರಣವೇ ನಡೆಯುತ್ತಿರಲಿಲ್ಲವೇನೋ. ‘ತನ್ನ ಮಕ್ಕಳನ್ನು ರಕ್ಷಿಸಲು ತಾಯಿಗಿಂತ ದೊಡ್ಡ ಯೋಧಳಿಲ್ಲ’ ಎನ್ನುತ್ತಾಳೆ ಅಮೆರಿಕದ ಕಾದಂಬರಿಗಾರ್ತಿ ನೋರಾ ಜೆಮಿಸಿನ್. ಸುಷ್ಮಾ ಮಕ್ಕಳನ್ನು ಬಿಟ್ಟು ತವರಿಗೆ ಹೋಗಿದ್ದೇ ಬಾಲಕಿಗೆ ಮುಳುವಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)