

ರಾಜ್ಯದ ಒಂದು ಪಟ್ಟಣದಲ್ಲಿ ಜನಿಸಿ ತನ್ನ ಹುಟ್ಟೂರಿನಲ್ಲಿಯೇ ದಂತವೈದ್ಯ ಪರೀಕ್ಷೆಯನ್ನು ಪಾಸು ಮಾಡಿದ್ದ ನಳಿನಿ (35) ಅದೇ ಊರಿನ ಶಂಕರ್ ಎನ್ನುವವನನ್ನು ಮದುವೆಯಾದಳು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶಂಕರ್ ಲಗ್ನವಾದ ನಂತರ ಎರಡು ಬೆಡ್ರೂಂ ಫ್ಲಾಟೊಂದನ್ನು ಬಾಡಿಗೆಗೆ ಪಡೆದ. ಗಂಡನ ಮನೆಗೆ ಬಂದ ಮೊದಲ ಎರಡು ತಿಂಗಳು ನಳಿನಿ ಮನೆಯನ್ನು ಸಜ್ಜುಮಾಡುವುದರಲ್ಲಿಯೇ ಕಳೆದಳು. ಆನಂತರ ಆಕೆ ಕೆಲಸ ಮಾಡಲು ಉದ್ದೇಶಿಸಿ ಹಲವಾರು ದಂತವೈದ್ಯಕೀಯ ಕಾಲೇಜುಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿದಳು. ಸ್ನಾತಕೋತ್ತರ ಪದವಿ ಇರದಿದ್ದ ಕಾರಣ ಆಕೆಗೆ ಎಲ್ಲಿಯೂ ಕೆಲಸ ಸಿಗಲಿಲ್ಲ.
ಎರಡು ತಿಂಗಳ ನಂತರ ನಳಿನಿ ಒಂದು ಹೆಣ್ಣುಮಗುವಿನ ತಾಯಿಯಾದಳು. ಜನನವಾದ ಕೂಡಲೇ ವೈದ್ಯರು ಅವಳ ಮಗುವಿಗೆ ಜನನಸಂಬಂಧಿ ತೊಂದರೆಯಿರುವುದನ್ನು ಗಮನಿಸಿದರು. ಮಗುವಿನ ರಕ್ತವನ್ನು ಲ್ಯಾಬೊರೇಟರಿಗೆ ಕಳಿಸಿದರು. ಅಲ್ಲಿಂದ ವರದಿ ಬಂದಾಗ ವೈದ್ಯರು ನಳಿನಿ ಮತ್ತು ಶಂಕರ್ರನ್ನುದ್ದೇಶಿಸಿ, ‘ನಿಮ್ಮ ಮಗಳಿಗೆ ಬೆಳವಣಿಗೆಯ ತೊಂದರೆಯಿದೆ. ಅವಳಿಗೆ ಮಾತು ಬರುವುದು ತಡವಾಗುತ್ತದೆ ಹಾಗೂ ಕಲಿಯುವುದರಲ್ಲಿ ಇತರರಿಗಿಂತ ಒಂದೆರಡು ವರ್ಷ ಹಿಂದಿರುತ್ತಾಳೆ, ಆಕೆಗೆ ನೀವು ವಿಶೇಷ ಶಾಲೆಗೆ ಸೇರಿಸಬೇಕಾಗುತ್ತದೆ. ಈ ಮಗುವಿನ ಚಿಕಿತ್ಸೆ ಸುದೀರ್ಘವಾಗಿರುತ್ತದೆ ಹಾಗೂ ಹೆಚ್ಚಿನ ಖರ್ಚೂ ತಗಲುತ್ತದೆ. ಇದಕ್ಕೆ ತಯಾರಾಗಿರಿ’ ಎಂದರು.
ತಮಗೆ ಜನಿಸಿದ ಮೊದಲ ಮಗುವಿಗೇ ಹೀಗಾಗಿದ್ದು ನಳಿನಿ ಮತ್ತು ಶಂಕರ್ರನ್ನು ಮಾನಸಿಕ ಆಘಾತಕ್ಕೊಳಮಾಡಿತು. ಮುಂದೇನು ಮಾಡುವುದೆಂದೇ ತೋಚಲಿಲ್ಲ. ಕೆಲ ಸಮಯದ ನಂತರ ಶಂಕರ್ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು, ‘ಮಗಳನ್ನು ನಾವಿಬ್ಬರೂ ಚೆನ್ನಾಗಿ ಬೆಳೆಸಬೇಕು’ ಎಂದು ಪತ್ನಿಗೆ ತಿಳಿಸಿದ. ಮಗುವಿಗೆ ಸುಷ್ಮಾ ಎಂದು ಹೆಸರಿಟ್ಟರು. ಒಂದು ವರ್ಷ ತುಂಬಿದ ನಂತರ ಅವಳನ್ನು ನೋಡಿಕೊಳ್ಳಲು ಒಬ್ಬ ಆಯಾಳನ್ನು ಗೊತ್ತುಮಾಡಿದ ನಳಿನಿ, ಕ್ಲಿನಿಕ್ಕನ್ನು ಪುನರಾರಂಭ ಮಾಡಿದಳು. ಬಹಳ ಕಾಲ ಕ್ಲಿನಿಕ್ ಮುಚ್ಚಿದ್ದ ಕಾರಣಕ್ಕೋ ಏನೋ ಪ್ರತಿದಿನ ಹತ್ತು ರೋಗಿಗಳು ಬರುತ್ತಿದ್ದ ಆ ಕ್ಲಿನಿಕ್ಗೆ ಇಬ್ಬರೂ ಬರದಂತಾದರು. ಕ್ಲಿನಿಕ್ಕಿನಿಂದ ಯಾವುದೇ ಆದಾಯವಿರದಿದ್ದರೂ ನಳಿನಿ ಬ್ಯಾಂಕಿನ ಇಎಂಐ ಕಟ್ಟಲೇ ಬೇಕಾಗಿತ್ತು. ಹೀಗಾಗಿ ದಂಪತಿ ಮೇಲೆ ಆರ್ಥಿಕ ಹೊರೆ ಹೆಚ್ಚಾಯಿತು.
ಸುಷ್ಮಾಗೆ ನಾಲ್ಕು ವರ್ಷ ತುಂಬುವ ಸಮಯಕ್ಕೆ ನಳಿನಿಗೆ ತನ್ನ ಮಗಳ ಜನ್ಮನಕ್ಷತ್ರ ಕೆಟ್ಟಿರುವ ಕಾರಣದಿಂದಲೇ ವೃತ್ತಿಗೆ ಹೊಡೆತ ಬಂದಿದೆ ಎಂಬ ನಂಬಿಕೆ ಬಂದಿತು. ಹಲವಾರು ಜ್ಯೋತಿಷಿಗಳನ್ನು ಕಂಡಳು. ಒಬ್ಬ ಜ್ಯೋತಿಷಿಯಂತೂ, ‘ಈ ಬಾಲಕಿಯ ಜನ್ಮನಕ್ಷತ್ರ ಕೆಟ್ಟಿರುವ ಕಾರಣದಿಂದಲೇ ಅವಳಿಗೂ ನಿಮ್ಮ ಕುಟುಂಬಕ್ಕೂ ತೊಂದರೆ ಬಂದಿದೆ’ ಎಂದು, ಬಗೆಬಗೆಯ ಪರಿಹಾರಗಳನ್ನು ಸೂಚಿಸಿದ. ಅದರಂತೆ, ನಳಿನಿ ಹಲವಾರು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದಳು. ಆದರೂ ಅವಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.
ಆಗ ನಳಿನಿಗೆ ಸುಷ್ಮಾಳ ಮೇಲೆ ತಿರಸ್ಕಾರದ ಭಾವನೆ ಮೂಡಲಾರಂಭಿಸಿತು. ಏನಾದರೂ ಮಾಡಿ ಮಗಳನ್ನು ಮನೆಯಿಂದ ಹೊರಗೆ ಕಳಿಸಿದರೆ ತನ್ನ ಬಾಳು ಸರಿಯಾಗಬಹುದೆಂದು ರ್ತಸಿದ ಆಕೆ ಹಾಸ್ಟೆಲ್ಗಳನ್ನು ಹುಡುಕತೊಡಗಿದಳು. ಶಂಕರ್ನಿಗೆ ಮಗಳನ್ನು ಕಂಡರೆ ಅತೀವ ಪ್ರೇಮವಿದ್ದು, ಆತ ಯಾವುದೇ ಕಾರಣಕ್ಕೂ ಮಗಳು ತಮ್ಮಿಂದ ದೂರವಿರಬಾರದೆಂದು ಖಡಾಖಂಡಿತವಾಗಿ ನಳಿನಿಗೆ ಹೇಳಿದ. ಮುಂದಿನ ಹಲವಾರು ದಿನಗಳು ಈ ವಿಷಯದ ಬಗ್ಗೆಯೇ ಗಂಡಹೆಂಡಿರ ಮಧ್ಯೆ ಜಗಳಗಳಾದವು. ನಳಿನಿ ತನ್ನ ತಂದೆ-ತಾಯಿಯ ಸಲಹೆಯನ್ನು ಯಾಚಿಸಿದಳು. ಅವರೂ ಶಂಕರ್ನ ಮಾತುಗಳನ್ನೇ ಅನುಮೋದಿಸಿದರು.
ಏತನ್ಮಧ್ಯೆ ಶಂಕರ್ ಕಚೇರಿ ಕೆಲಸದ ಮೇಲೆ ವಿದೇಶಕ್ಕೆ ಹತ್ತು ದಿನಗಳ ಕಾಲ ಹೋಗಬೇಕಾಯಿತು. ಆಗ ನಳಿನಿ ತಲೆಯಲ್ಲಿ ಕೆಟ್ಟ ಯೋಚನೆ ಹೊಳೆಯಿತು. ಒಂದು ದಿನ ಸುಷ್ಮಾಳನ್ನು ತನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಮನೆಯಲ್ಲಿದ್ದ ಆಯಾಳಿಗೆ ತಿಳಿಸಿದ ನಳಿನಿ, ಮಗಳ ಜತೆ ರೈಲುನಿಲ್ದಾಣಕ್ಕೆ ಹೋಗಿ ಸಮೀಪದ ಊರೊಂದಕ್ಕೆ ಟಿಕೆಟ್ ಪಡೆದಳು. ಒಂದು ಗಂಟೆ ಪ್ರಯಾಣದ ನಂತರ ಬಂದ ಸ್ಟೇಷನ್ನಲ್ಲಿ ಮಗಳ ಜತೆ ಕೆಳಗಿಳಿದಳು. ರೈಲು ಹೊರಡುವಾಗ ನಳಿನಿ ಬೇಕೆಂತಲೇ ಸುಷ್ಮಾಳನ್ನು ಪ್ಲಾಟ್ಫಾರ್ವಿುನ ಮೇಲೆಯೇ ಬಿಟ್ಟು ತಾನೊಬ್ಬಳೇ ರೈಲನ್ನು ಹತ್ತಿದಳು. ಇದನ್ನು ಕಂಡ ಇಬ್ಬರು ಪ್ರಯಾಣಿಕರು ಬೇಗನೇ ಓಡಿಬಂದು ಸುಷ್ಮಾಳನ್ನು ಎತ್ತಿಕೊಂಡು ತಾವೂ ರೈಲನ್ನೇರಿ ನಳಿನಿಯ ಬಳಿಗೆ ಬಂದು ಅವಳಿಗೆ ಬಾಲಕಿಯನ್ನು ಹಸ್ತಾಂತರಿಸಿದರು. ಹೀಗಾಗಿ ಅವಳ ಯೋಜನೆ ಹಾಳಾಯಿತು. ಕಡೆಗೆ ಏನೂ ಮಾಡಲು ತೋಚದೆ ಮನೆಗೆ ವಾಪಸ್ಸಾದಳು.
ಮುಂದೇನು ಮಾಡುವುದೆಂದು ಹಲವಾರು ಯೋಜನೆಗಳನ್ನು ಹಾಕಿದಳು. ಕಡೆಗೆ ಒಂದು ದಿನ ಬೇಸತ್ತು ಮಗಳ ಕೊಲೆ ಮಾಡಬೇಕೆಂದು ನಿರ್ಧರಿಸಿದಳು. ತಾನು ವಾಸಿಸುತ್ತಿದ್ದ ನಾಲ್ಕನೆಯ ಮಹಡಿಯ ಮನೆಯ ಬಾಲ್ಕನಿಗೆ ಹೋಗಿ ನಿಂತಳು. ಬಾಲ್ಕನಿಯ ತಡೆಗೋಡೆ ಮೇಲೆ ಬಟ್ಟೆ ಒಣಗಿ ಹಾಕಲು ಹೊರಟಳು. ಆಗ ಸುಷ್ಮಾಳನ್ನು ಅದೇ ತಡೆಗೋಡೆಯ ಮೇಲೆ ಕೂರಿಸಿದಳು. ಅಕ್ಕಪಕ್ಕದಲ್ಲಿ ಹಾಗೂ ಕೆಳಗಿನ ರಸ್ತೆಯಲ್ಲಿ ಯಾರಾದರೂ ಓಡಾಡುತ್ತಿರುವರೇನೋ ಎಂದು ನೋಡಿದಳು. ಆಗ ಮಧ್ಯಾಹ್ನದ 12 ಗಂಟೆಯಾಗಿದ್ದ ಕಾರಣ ಯಾರೂ ಇರಲಿಲ್ಲ. ಸುಷ್ಮಾಳನ್ನು ಮಾತನಾಡಿಸುತ್ತ ಅವಳನ್ನು ದಿಢೀರನೆ ಕೆಳಗೆ ನೂಕಿಬಿಟ್ಟಳು.
ಸುಷ್ಮಾ ಕೆಳಗೆ ಬಿದ್ದ ಕೂಡಲೇ ಜೋರಾಗಿ ಅಳುತ್ತ, ‘ಅಯ್ಯೋ, ನನ್ನ ಮಗಳು ಅಕಸ್ಮಾತ್ತಾಗಿ ಜಾರಿ ಕೆಳಗೆ ಬಿದ್ದಳು, ಅವಳಿಲ್ಲದೆ ನಾನು ಬದುಕಿದ್ದು ಏನು ಪ್ರಯೋಜನ? ನಾನೂ ಆತ್ಮಹತ್ಯೆ ಮಾಡಿಕೊಳ್ಳುವೆ’ ಎನ್ನುತ್ತ ಬಾಲ್ಕನಿಯ ಮೇಲೆ ತಾನೂ ಹತ್ತಿ ಕೆಳಗೆ ಧುಮುಕುವಂತೆ ನಟಿಸಿದಳು. ಏತನ್ಮಧ್ಯೆ ಸುಷ್ಮಾ ಕೆಳಗೆ ಬಿದ್ದ ಅರ್ಧನಿಮಿಷದ ನಂತರ ಅದೇ ಅಪಾರ್ಟ್ವೆುಂಟ್ನಲ್ಲಿ ವಾಸಿಸುತ್ತಿದ್ದ ವೈದ್ಯರೊಬ್ಬರು ಕಾರಿನಲ್ಲಿ ಮನೆಗಾಗಮಿಸುತ್ತಿದ್ದರು. ಬಾಲಕಿ ಕೆಳಗೆ ಬಿದ್ದುದನ್ನು ಕಂಡ ಅವರು ಅವಳತ್ತ ಧಾವಿಸಿದರು. ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಿತ್ತು. ವೈದ್ಯರು ಬಾಲಕಿಗೆ ಪ್ರಥಮ ಚಿಕಿತ್ಸೆಯನ್ನು ಮಾಡಿ, ಕೂಡಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಎರಡು ದಿನಗಳು ಜೀವನ್ಮರಣದ ನಡುವೆ ಹೋರಾಡಿದ ಸುಷ್ಮಾ ಅಸುನೀಗಿದಳು. ಶಂಕರ್ ಆಘಾತಗೊಂಡು ಖಿನ್ನತೆಗೆ ಜಾರಿದ.
ವೈದ್ಯರ ವರದಿ ಮೇರೆಗೆ ಪೊಲೀಸರು ಆಸ್ಪತ್ರೆಗೆ ಬಂದು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ತನಿಖೆಯನ್ನಾರಂಭಿಸಿದರು. ಆ ಸಮಯದಲ್ಲಿ ಶಂಕರ್ ಸುಷ್ಮಾಳ ಸಾವಿನ ಬಗ್ಗೆ ಹೆಂಡತಿ ಮೇಲೆ ಶಂಕೆ ವ್ಯಕ್ತಪಡಿಸಿದ. ಸುಷ್ಮಾ ಹೇಗೆ ಕೆಳಗೆ ಬಿದ್ದಳು ಎನ್ನುವುದನ್ನರಿಯಲು ತನಿಖಾಧಿಕಾರಿ ಅಪಾರ್ಟ್ವೆುಂಟ್ ಬ್ಲಾಕಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಫುಟೇಜ್ಗಳನ್ನು ಅವಲೋಕಿಸಿದರು. ಅದರಲ್ಲಿ ಸುಷ್ಮಾಳನ್ನು ಬಾಲ್ಕನಿಯ ಗೋಡೆ ಮೇಲೆ ಕೂರಿಸಿದ ನಳಿನಿ ಕೆಲ ನಿಮಿಷಗಳ ನಂತರ ಅವಳನ್ನು ಕೆಳಗೆ ತಳ್ಳಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪೊಲೀಸರು ನಳಿನಿಯ ವಿಚಾರಣೆ ಮಾಡಿದಾಗ ಆಕೆ ಸತ್ಯವನ್ನು ಬಾಯಿಬಿಟ್ಟಳು. ಅವಳನ್ನು ಪೊಲೀಸರು ಮನೋವೈದ್ಯರ ಬಳಿ ಕರೆದೊಯ್ದು ಆಕೆಗೇನಾದರೂ ಮಾನಸಿಕ ತೊಂದರೆಯಿದೆಯೇ ಎಂದು ಪರೀಕ್ಷಿಸಲು ಕೋರಿದರು. ವೈದ್ಯರು ಅವಳಿಗೆ ಯಾವುದೇ ಮಾನಸಿಕ ರೋಗವಿಲ್ಲ ಎಂದು ವರದಿ ಕೊಟ್ಟರು.
ಸುಷ್ಮಾಳನ್ನು ಕೊಂದ ಆರೋಪದ ಮೇಲೆ ನಳಿನಿಯ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ವಿಚಾರಣೆ ನಂತರ ಅವಳಿಗೆ 10 ವರ್ಷಗಳ ಜೈಲುಶಿಕ್ಷೆಯಾಯಿತು. ‘ಸತ್ತ ಹೆಣನಿಗೆ ನೀರ ಹೊತ್ತು ತಂದೆರೆವಂತೆ ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣದ ಹತ್ತಿ ತಿಂಬಂತೆ ಸರ್ವಜ್ಞ’ ಎನ್ನುವ ವಚನದಂತಾಯಿತು ಶಂಕರ್ನ ಸ್ಥಿತಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)