ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಪೇಕ್ ವಿಡಿಯೋ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಬೆನ್ನಲ್ಲೆ ಬೆಂಗಳೂರು ನಗರ ಪೊಲೀಸರ ಡೀಪ್‌ಪೇಕ್ ಸಂಬಂಧಿಸಿದಂತೆ ಸಹಾಯವಾಣಿಯನ್ನು ಆರಂಭಿಸಿದ್ದಾರೆ.
ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಸೇರಿ ಅನೇಕ ಕಲಾವಿದರ ಮತ್ತು ಸಾಮಾನ್ಯ ಮಹಿಳೆಯರ ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಡೀಪ್‌ಫೇಕ್ ಕಾಟಕ್ಕೆ ಬೇಸತ್ತ ಪ್ರತಿಯೊಬ್ಬರೂ ಕಿಡಿಗೇಡಿಗಳಿಗೆ ಅತೀ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನು ಕೂಡಲೇ ತಡೆಗಟ್ಟಬೇಕು ಎಂಬ ಒತ್ತಾಯ ಕೂಡ ಮಾಡುತ್ತಿದ್ದಾರೆ.
ಇದರ ಬೆನ್ನಲೇ ಬೆಂಗಳೂರು ಪೊಲೀಸರು ಡೀಪ್‌ಫೇಕ್ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಇಂತಹ ವಿಡಿಯೋಗಳಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ, ಈಗಾಗಲೇ ಚಾಲ್ತಿಯಲ್ಲಿರುವ ಸೈಬರ್ ಕ್ರೈಂ ಸಹಾಯವಾಣಿಯಾದ 1930 ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಹಿಂಜರಿಯಬೇಡಿ, ಜಾಗೃತರಾಗಿ!
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್‌ಗೆ ಒಳಗಾಗಿದ್ದಲ್ಲಿ 1930 ಗೆ ಕರೆ ಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ. ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ ಎಂಬ ಅಭಯವನ್ನು ನಗರ ಪೊಲೀಸರು ಜನರಿಗೆ ನೀಡಿದ್ದಾರೆ.
ಡೀಪ್‌ಫೇಕ್ ಎಂದರೇನು?
ವ್ಯಕ್ತಿಯ ದೇಹ ಮತ್ತು ಮುಖಕ್ಕೆ ಕೊಂಚವೂ ವ್ಯತ್ಯಾಸ ಇಲ್ಲದಂತೆ ವೀಡಿಯೋಗಳನ್ನ ಸೃಷ್ಟಿಸಲಾಗುತ್ತದೆ. ವೀಡಿಯೋ ನೋಡಿದರೆ ಇದು ಬೇರೆ ಯಾರೂ ಅಲ್ಲ. ಅವರೇ ಎನ್ನುವಷ್ಟು ನಿಖರತೆಯಿಂದ ಕೂಡಿರುತ್ತದೆ.
ಕೃತಕ ಬುದ್ದಿಮತ್ತೆ (ಎಐ ) ಮಷಿನ್ ಲರ್ನಿಂಗ್ ಸಹಾಯದಿಂದ ಮಾರ್ಫಿಂಗ್ ವೀಡಿಯೋ, ಫೋಟೋ ಸೃಷ್ಟಿಸುವುದಕ್ಕೆ ಡೀಪ್‌ಫೇಕ್ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯಂತೆಯೇ ಸೇಮ್ ಟು ಸೇಮ್ ಡೂಪ್ ಸೃಷ್ಟಿಸಬಹುದು. ವೀಡಿಯೋ/ಫೋಟೋ ನೋಡಿದಾಗ ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ತಿಳಿಯುವುದೇ ಇಲ್ಲ. ಈ ತಂತ್ರಜ್ಞಾನ ಬಳಸಿ ಯಾರನ್ನು ಬೇಕಾದರೂ ಸ್ಕ್ರೀನ್ ಮೇಲೆ ತೋರಿಸಬಹುದು. ಹಿಂದಿ, ಇಂಗ್ಲಿಷ್ ಅಷ್ಟೇ ಬರುವ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದಂತೆಯೂ, ಹಾಡಿದಂತೆಯೂ ತೋರಿಸಬಹುದು. ಕೆಲವೊಮ್ಮೆ ಈ ತಂತ್ರಜ್ಞಾನ ಲಾಭದಾಯಕ ಎನಿಸುತ್ತದೆ. ಆದರೆ ಅಷ್ಟೇ ದುರ್ಬಳಕೆ ಕೂಡ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ ಪ್ರಕರಣವಾಗಿದೆ.