MOOCs ಬಗ್ಗೆ ಕೇಳಿದ್ದೀರಾ..?; XI ಮತ್ತು XIIನೇ ತರಗತಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ವೇದಿಕೆ

Moocs
Published on

| ಕೋಟಮಾರನಹಳ್ಳಿ ತಿಮ್ಮೇಗೌಡ ಬೆಂಗಳೂರು

ಕರೋನಾ ಸಂಕಷ್ಟದಿಂದಾಗಿ ಪದೇಪದೆ ರಜೆಯ ಕಾರಣ ಸಿಬಿಎಸ್​ಇ ಮತ್ತು ಸಿಐಎಸ್​ಸಿಇ ಪಠ್ಯಕ್ರಮ ಅನುಸರಿಸುವ ಹನ್ನೊಂದು ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆ ನಷ್ಟವಾಗಿರುವುದು ವಾಸ್ತವ. ಈ ನಷ್ಟ ಭರ್ತಿಗೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರೀಸರ್ಚ್ ಆಂಡ್ ಟ್ರೇನಿಂಗ್ (ಎನ್​ಸಿಇಆರ್​ಟಿ) ಸ್ವಯಂ ಪೋರ್ಟಲ್ ಮೂಲಕ ಹೊಸ ಉಪಕ್ರಮವನ್ನು ಜಾರಿಗೊಳಿಸಿದೆ. ಮ್ಯಾಸಿವ್ ಓಪನ್ ಆನ್​ಲೈನ್ ಕೋರ್ಸಸ್ (MOOCs) ಅನ್ನು ಅದು ಈ ವಿದ್ಯಾರ್ಥಿಗಳಿಗಾಗಿ ಪರಿಚಯಿಸಿದೆ. ‘MOOCs’ನಲ್ಲಿ ಸದ್ಯ 28 ಕೋರ್ಸ್ ಗಳಿದ್ದು, ವಿದ್ಯಾರ್ಥಿಗಳ ಪಾಲಿಗೆ ಡಿಜಿಟಲ್ ಸಂಪನ್ಮೂಲವಾಗಿರಲಿದೆ. ವೃತ್ತಿಪರ ಕೋರ್ಸ್ ಗಳಿಗೆ ತಯಾರಿ ನಡೆಸಲು ಮತ್ತು ವಿದ್ಯಾರ್ಥಿ ಗಳಿಗೆ ಅವರ ಟರ್ವಿುನಲ್ ಮತ್ತು ಇಂಟರ್​ನಲ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಇದು ನೆರವಾಗಲಿದೆ. ಆನ್​ಲೈನ್ ಕೋರ್ಸ್​ಗಳು ಸರಳ ಭಾಷೆಯಲ್ಲಿ ಇದ್ದು, ಎನ್​ಸಿಇಆರ್​ಟಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಇದೆ ಎಂದು ಎನ್​ಸಿಆರ್​ಟಿ ಮೂಲಗಳು ತಿಳಿಸಿವೆ.

ಕೋರ್ಸ್​ಗಳು ಹೀಗಿವೆ ನೋಡಿ..

‘MOOCs’ನಲ್ಲಿರುವ ಕೋರ್ಸ್​ಗಳು ಪಠ್ಯದ ಮಾದರಿಯಲ್ಲಿ, ವಿಡಿಯೋ ಮಾದರಿಯಲ್ಲಿ ಮತ್ತು ಮೌಲ್ಯಮಾಪನ ಪ್ರಶ್ನೆಗಳ ಮಾದರಿಯಲ್ಲಿ ಇವೆ. ಶಾಲೆ, ಕಾಲೇಜು ಮತ್ತು ಯೂನಿವರ್ಸಿಟಿ ಬೋಧಕರು, ಶಿಕ್ಷಕರು ಈ ಪಠ್ಯಗಳನ್ನು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಂದೇಹ, ಪ್ರಶ್ನೆಗಳನ್ನು ಪೋಸ್ಟ್ ಮಾಡಿ ಉತ್ತರ ಪಡೆಯಲೂ ಅವಕಾಶವಿದೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಸಂದೇಹಗಳನ್ನು ನಿವಾರಿಸಬಹುದು. ಚರ್ಚಾವೇದಿಕೆಯಲ್ಲಿ ಸಹಪಾಠಿಗಳೊಂದಿಗೆ ಪಠ್ಯ ಸಂಬಂಧಿಸಿ ಸಂವಹನ ನಡೆಸಲೂ ಅವಕಾಶವಿದೆ ಎಂದು ಎನ್​ಸಿಇಆರ್​ಟಿ ಹೇಳಿದೆ.

ಉಚಿತ ಕೋರ್ಸ್ ವಿಷಯಗಳಿವು..: ‘MOOCs’ನಲ್ಲಿರುವ ಕೋರ್ಸ್​ಗಳು ಉಚಿತವಾಗಿದ್ದು, ಅಕೌಂಟೆನ್ಸಿ, ಬಿಜಿನೆಸ್ ಸ್ಟಡೀಸ್, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಗಣಿತ, ಭೌತಶಾಸ್ತ್ರ, ಮನಃಶಾಸ್ತ್ರ, ಇಂಗ್ಲಿಷ್, ಸಮಾಜಶಾಸ್ತ್ರ ಮುಂತಾದ ವಿಷಯಗಳಿವೆ. ಸದ್ಯದಲ್ಲೇ ಹ್ಯುಮಾನಿಟೀಸ್, ಹೋಮ್ ಸೈನ್ಸ್, ದೈಹಿಕ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ವಿಷಯಗಳನ್ನೂ ಪರಿಚಯಿಸಲು ಎನ್​ಸಿಇಆರ್​ಟಿ ಮುಂದಾಗಿದೆ.

ನೋಂದಣಿಗೆ ಮಾ.31 ಕೊನೇ ದಿನ: ‘MOOCs’ ಕುರಿತು ಸಿಐಎಸ್​ಸಿಇ ನೋಟಿಸ್ ಪ್ರಕಟಿಸಿದ್ದು, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಈ ಕೋರ್ಸ್​ಗಳಿಗೆ ಹೆಸರು ನೋಂದಾಯಿಸಲು ಮಾ.31 ಕೊನೇ ದಿನ ಎಂದು ಹೇಳಿದೆ. ಸ್ವಯಂ ಪೋರ್ಟಲ್ (swayam.gov.in) ಮೂಲಕ ಇದಕ್ಕೆ ಹೆಸರು ನೋಂದಾಯಿಸಬಹುದಾಗಿದೆ.

ಪ್ರಮಾಣಪತ್ರ ಬೇಕೆಂದರೆ..: ಈ ಕೋರ್ಸ್ ಸಂಬಂಧಿತ ಪ್ರಮಾಣಪತ್ರ ಬೇಕಾದಲ್ಲಿ ಪ್ರತಿ ಕೋರ್ಸ್​ನ ಮೌಲ್ಯಮಾಪನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದು ವಿದ್ಯಾರ್ಥಿಗಳ ಅರ್ಥೈಸುವಿಕೆ ಮತ್ತು ಕಲಿಕೆಯ ಗುಣಮಟ್ಟವನ್ನು ನಿರ್ಧ ರಿಸುತ್ತದೆ. ಇದರ ಅಧಾರದ ಮೇಲೆ ಅವರಿಗೆ ಪ್ರಮಾಣಪತ್ರ ಸಿಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net