ಮಾನವನ ಬದುಕಿನಲ್ಲಿ ತಾಯಿಯ ಸ್ಥಾನವನ್ನು ಯಾವ ಪದಗಳಿಂದಲೂ ಸಂಪೂರ್ಣವಾಗಿ ವರ್ಣಿಸಲಾಗದು. ತಾಯಿ ಎಂದರೆ ಕೇವಲ ಜನ್ಮ ನೀಡುವವಳಲ್ಲ; ಮೌಲ್ಯಗಳನ್ನು ಬೆಳೆಸುವ ಶಕ್ತಿ, ಬದುಕಿಗೆ ದಿಕ್ಕು ತೋರುವ ದೀಪ, ಸಂಕಷ್ಟಗಳಲ್ಲಿ ಧೈರ್ಯ ತುಂಬುವ ಸಾನ್ನಿಧ್ಯ. ನನ್ನ ಬದುಕಿನಲ್ಲಿ ಅಂಥ ಪ್ರೇರಣಾಶಕ್ತಿಯಾಗಿ ನೆಲೆಸಿದವರು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು. ಮೂಡಬಿದಿರೆಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಧರ್ಮ, ಸಂಸ್ಕೃತಿ ಮತ್ತು ಶಿಸ್ತಿನ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಜೈನಶಾಸ್ತ್ರಗಳ ಅಧ್ಯಯನ, ವ್ರತ-ಉಪವಾಸಗಳ ಆಚರಣೆ, ಸಾತ್ವಿಕ ಜೀವನಶೈಲಿ ಇವೆಲ್ಲವೂ ಅವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದ್ದವು. ತಂದೆ-ತಾಯಿಯ ಸಂಸ್ಕಾರ ಹಾಗೂ ಗುರುಗಳ ಮಾರ್ಗದರ್ಶನದಿಂದ ಅವರು ಆಧ್ಯಾತ್ಮಿಕ ಚಿಂತನೆಗಳಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡಿದ್ದರು. ಧರ್ಮಸ್ಥಳಕ್ಕೆ ಬಂದ ನಂತರ ಅವರ ಜೀವನವೇ ಒಂದು ತಪಸ್ಸಾಗಿ ಮಾರ್ಪಟ್ಟಿತು. ಧರ್ಮಸ್ಥಳದ ಮನೆ ಎಂದರೆ ಸಾವಿರಾರು ಜನರ ಸಂಚಾರ, ಅನ್ನದಾಸೋಹ, ಧಾರ್ಮಿಕ ಕಾರ್ಯಕ್ರಮಗಳು, ಅತಿಥಿ ಸತ್ಕಾರ ಇವೆಲ್ಲವೂ ನಿರಂತರ ನಡೆಯುವ ಕಾರ್ಯಗಳು. ಈ ಎಲ್ಲಾ ಕಾರ್ಯಗಳ ಹಿಂದಿನ ಮೌನ ಶಕ್ತಿ ಮಾತೃಶ್ರೀಯವರೇ ಆಗಿದ್ದರು. ಅವರು ಎಲ್ಲರಿಗೂ ಪ್ರೀತಿಯಿಂದ ದೊಡ್ಡಮ್ಮ ಆಗಿದ್ದರು. ಮನೆಯವರಿಗಷ್ಟೇ ಅಲ್ಲ, ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಮಮತೆಯ ತಾಯಿಯಾಗಿದ್ದರು. ನಮ್ಮ ಜೀವನದಲ್ಲಿ ಸತ್ಯ, ಶಿಸ್ತು, ಸೇವಾಭಾವ ಮತ್ತು ವಿನಯವನ್ನು ಬೆಳೆಸಿದವರು ಅಮ್ಮ. ಸಮಾಜದ ನೋವಿಗೆ ಸ್ಪಂದಿಸಬೇಕು, ಧರ್ಮವನ್ನು ಬದುಕಿನಲ್ಲಿ ಅಳವಡಿಸಬೇಕು ಎಂಬ ಪಾಠವನ್ನು ಅವರು ತಮ್ಮ ಬದುಕಿನ ಮೂಲಕವೇ ಕಲಿಸಿದರು. ಅವರ ಸಾತ್ವಿಕತೆ ಮತ್ತು ಅನುಕಂಪ ನಮಗೆ ಸದಾ ಮಾರ್ಗದರ್ಶಕವಾಗಿದೆ.