

ದೇಶವಾಸಿಗಳ ಅಭ್ಯುದಯಕ್ಕಾಗಿ ನವನವೀನ ಯೋಜನೆಗಳನ್ನು ತಾವೇ ರೂಪಿಸಿದ್ದಲ್ಲದೆ, ಅವುಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಸಂಕಲ್ಪ ಯಾತ್ರೆಯನ್ನು ಕೈಗೊಂಡಿರುವ ಏಕೈಕ ಪ್ರಧಾನಿ ಅಂದರೆ ಅದು ನಮ್ಮ ನರೇಂದ್ರ ಮೋದಿಯವರು ಮಾತ್ರ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರದ ಸೌಲಭ್ಯಗಳನ್ನು ತಲುಪಿಸುವ ಚಿಂತನೆ 2047ರ ಸದೃಢ, ನವಭಾರತದ ದಿಕ್ಸೂಚಿ.
ನಮ್ಮ ಬಸವಣ್ಣನವರ ತತ್ವಗಳನ್ನು ಆಡಳಿತಯಂತ್ರದ ಇಂಧನವಾಗಿಸಿರುವ ಏಕೈಕ ರಾಜಕಾರಣಿ ಇದ್ದರೆ ಅದು ನರೇಂದ್ರ ಮೋದಿಯವರು ಮಾತ್ರ.
ದೇಶದ ಅಭಿವೃದ್ಧಿ ಎಂದರೆ ಏನು? ನಮ್ಮ ಹಳ್ಳಿ, ಅಲ್ಲಿರುವ ಜನ ಅದರಲ್ಲೂ ಕಡುಬಡವರ ಬದುಕಿನ ಕಲ್ಯಾಣ. ಜನ್ಧನ್ ಮೂಲಕ 51.04 ಕೋಟಿ ಜನರಿಗೆ ಬ್ಯಾಂಕ್ ಖಾತೆ, ಉಜ್ವಲ ಯೋಜನೆ ಮೂಲಕ 9.6 ಕೋಟಿ ಮನೆಗಳಿಗೆ ಉಚಿತ ಸಿಲಿಂಡರ್ ಸಂಪರ್ಕ, ಕರ್ನಾಟಕದ 53 ಲಕ್ಷ ಅನ್ನದಾತರ ಖಾತೆಗೆ 11.191 ಕೋಟಿ ಪಿಎಂ ಕಿಸಾನ್ ಹಣ ಜಮೆ, ರಾಜ್ಯದ 51 ರೈಲ್ವೇ ಸ್ಟೇಷನ್ ಸ್ವರೂಪ ಬದಲಿಸಿದ್ದು, 300 ಹೊಸ ರೈಲುಗಳು ಕೊಟ್ಟಿದ್ದೆಲ್ಲ ಪ್ರಧಾನಿ ಮೋದಿಯವರ ಅಮೃತಕಾಲದ ಹೆಜ್ಜೆ ಗುರುತುಗಳು.
ಹಳ್ಳಿಗಳ ಅಭಿವೃದ್ಧಿ ಮೂಲಕ ದೇಶವನ್ನು ಪ್ರಗತಿಪಥದ ಕಡೆಗೆ ಕರೆದೊಯ್ಯುವ ದೊಡ್ಡ ಸವಾಲನ್ನು ಮೋದಿಯವರು ತೆಗೆದುಕೊಂಡಿದ್ದಾರೆ. ಹಳ್ಳಿಗಳ ಅಭಿವೃದ್ಧಿ ಮಾಡುವುದು ನಮ್ಮ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೇರುಗಳನ್ನು ಗಟ್ಟಿ ಮಾಡುವ ಒಂದು ಪ್ರಕ್ರಿಯೆ ಕೂಡ. ಹೀಗಾಗಿ, ಅವರ ಬೆನ್ನಿಗೆ ನಿಲ್ಲುವ, ಅವರೊಂದಿಗೆ ಕೈ ಜೋಡಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಉದ್ದೇಶದಿಂದ ಮೋದಿಯವರ ಮಹತ್ವಾಕಾಂಕ್ಷಿಯ ನೂರಾರು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ರೂಪಿಸುವ ಅವರ ಕಾರ್ಯತಂತ್ರಕ್ಕೆ ನಾನು ಕೂಡ ಬೆರಗಾಗಿದ್ದೇನೆ.
ಈ ದೇಶದ, ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎನ್ನುವ ವಿಶಿಷ್ಟ ಯಾತ್ರೆಯನ್ನೇ ಆಯೋಜಿಸಿದ್ದಾರೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕೇಂದ್ರದ ಯೋಜನೆಗಳ ಮಾಹಿತಿಯನ್ನು ಮಾತ್ರವಲ್ಲ; ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಕದವನ್ನೇ ತಟ್ಟುತ್ತಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯು ದೇಶದಾದ್ಯಂತ ಪ್ರತಿಯೊಂದು ಗ್ರಾಮ ಪಂಚಾಯಿತಿಯನ್ನು ಮುಟ್ಟುವ ಪ್ರಯತ್ನ ಮಾಡುತ್ತಿದೆ. ಅರ್ಹ ಫಲಾನುಭವಿಗಳ ನೋಂದಣಿ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾತ್ರೆಗಾಗಿಯೇ ವಿಶೇಷವಾಗಿ ರೂಪಿಸಿರುವ ಐಇಸಿ ವಾಹನಗಳಿವೆ. ಸ್ಥಳೀಯ ಭಾಷೆಗಳಲ್ಲಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಿಂದುಳಿದ, ರೈತರು, ಬಡವರು ಹಾಗೂ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲ ಯೋಜನೆಗಳನ್ನು ಅವರ ಮನೆಮನೆಗೇ ಮುಟ್ಟಿಸುತ್ತಿರುವುದು ಪ್ರಧಾನಿಗಳಿಗಿರುವ ಜನಪರ ಕಳಕಳಿಯನ್ನು ಎತ್ತಿ ತೋರಿಸುತ್ತಿದೆ.
ಯಾತ್ರೆಯ ಆರಂಭದ 24 ದಿನಗಳಲ್ಲೇ ದೇಶವಾಸಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. 36 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗೆ ಯಾತ್ರೆ ತಲುಪಿದೆ. 1 ಕೋಟಿಗೂ ಹೆಚ್ಚು ದೇಶವಾಸಿಗಳು ಪಾಲ್ಗೊಂಡಿದ್ದಾರೆ. 26,752ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು ಶೇಕಡ 100ರಷ್ಟು ಆಯುಷ್ಮಾನ್ ಕಾರ್ಡ್ಗಳನ್ನು ಪಡೆದುಕೊಂಡಿದ್ದು ವಿಕಸಿತ ಯಾತ್ರೆಯಿಂದಲೇ. 63 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡದ್ದು, ಈ ತನಕ 79 ಲಕ್ಷ ಮಂದಿ ಭಾರತದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ತೊಟ್ಟಿರುವುದೆಲ್ಲ ಯಾತ್ರೆ ಗಳಿಸಿರುವ ಜನಪ್ರಿಯತೆಯನ್ನು ಸಾರಿ ಸಾರಿ ಹೇಳುತ್ತಿದೆ.
ಕರ್ನಾಟಕದಲ್ಲಿ 70 ಸ್ಥಳಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮತ್ತು ಸ್ಥಳದಲ್ಲೇ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಒದಗಿಸುವ ಜನಾರ್ದನ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತಿನಿತ್ಯ 10 ಸಾವಿರ ಫಲಾನುಭವಿಗಳನ್ನು ವಿಕಸಿತ ಯಾತ್ರೆ ತಲುಪುತ್ತಿದೆ.
ಪ್ರಧಾನಿಗಳು ಜನರ ಜೀವನಮಟ್ಟವನ್ನು ಏರಿಸುತ್ತಲೇ 2047ರ ಭಾರತವನ್ನು ಅಭಿವೃದ್ಧಿ ಹೊಂದಿದ ಸದೃಢ ರಾಷ್ಟ್ರವನ್ನಾಗಿಸುವ ಕೈಂಕರ್ಯಕ್ಕೆ ಈ ವಿಕಸಿತ ಭಾರತ ಯಾತ್ರೆಯ ಮೂಲಕ ಅಡಿಗಲ್ಲು ಹಾಕಿದ್ದಾರೆ. ಇದರ ಸುತ್ತ ‘ಇವನಮ್ಮವ ಇವನಮ್ಮವ’ ಎನ್ನುವ ಸಮಷ್ಠಿ ಪ್ರಜ್ಞೆ ಟಿಸಿಲೊಡೆಯುತ್ತಿದೆ.
(ಲೇಖಕರು ಬಿಜೆಪಿಯ ರಾಜ್ಯಾಧ್ಯಕ್ಷರು)