ಮಿಶ್ರ ಬೇಸಾಯ, ಹಲವು ಫಲ; ಮಾದರಿ ರೈತ ಮಂಜೇಗೌಡ

Vittavani 2
ಬಿ.ಜಿ.ಮಂಜೇಗೌಡ ಹಾಗೂ ಪತ್ನಿ ನಿಶ್ಚಿತಾ ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕುತ್ತಿರುವುದು.
Published on

| ಚನ್ನೇಗೌಡ ಬಿ.ಸಿ. ಭೂವನಹಳ್ಳಿ ಬಾಗೂರು(ಹಾಸನ)

ಬಳದಾರೆ ಗ್ರಾಮದ ಯುವ ರೈತ ಬಿ.ಜಿ.ಮಂಜೇಗೌಡ ತನ್ನ 3 ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಬೆಳೆಯ ಜತೆಗೆ ತೆಂಗು, ಹಲಸು, ಬಾಳೆ, ಕಾಳುಮೆಣಸು, ವೀಳ್ಯದೆಲೆ ಕೃಷಿ ಮಾಡುತ್ತಿದ್ದಾರೆ. ಅಲ್ಲದೆ, ಕೃಷಿ ಹೊಂಡದಲ್ಲಿ ಮೀನು ಸಾಕಣೆಯನ್ನೂ ಮಾಡುವ ಮೂಲಕ ಅಂಗೈ ಅಗಲದಷ್ಟು ಜಾಗವನ್ನೂ ಬಿಡದ ಮಿಶ್ರ ಬೇಸಾಯ ಮಾಡಿ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ 8 ವರ್ಷಗಳಿಂದ ಹಿಪ್ಪುನೇರಳೆ ಬೆಳೆದು ರೇಷ್ಮೆ ಕೃಷಿ ಮಾಡುತ್ತಿದ್ದು, ವರ್ಷಕ್ಕೆ 4 ಬೆಳೆ ಬೆಳೆದು ಕನಿಷ್ಠ 4 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ. ವಿವಿಧ ತಳಿಯ ಬಾಳೆ, ಹಲಸು, ಕಾಳುಮೆಣಸು, ವೀಳ್ಯದೆಲೆ ಜತೆಗೆ, ಮನೆಗೆ ಅಗತ್ಯವಾದಷ್ಟು ತರಕಾರಿಗಳನ್ನೂ ಬೆಳೆದುಕೊಳ್ಳುತ್ತಾರೆ. ಇದಲ್ಲದೆ, ಕೃಷಿ ಹೊಂಡದಲ್ಲಿ ಕಾಮನ್​ಕಾರ್ಫ್, ಕಾಟ್ಲಾ, ರುಹೊ ತಳಿಯ ಮೀನುಗಳನ್ನು ಸಾಕಿ ಇದರಿಂದ ವರ್ಷಕ್ಕೆ 1.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. 1 ಜೊತೆ ಹಳ್ಳಿಕಾರ್ ಹೋರಿಗಳನ್ನು ಸಾಕಿ ಅವುಗಳಿಂದಲೇ ಉಳುಮೆ ಮಾಡುತ್ತಾರೆ. 10 ಹಂದಿಗಳು, 20 ಮೊಲಗಳು, 8 ಆಡುಗಳು, ಬಣ್ಣ ಬಣ್ಣದ ಪಾರಿವಾಳಗಳು, ನಾಟಿ ತಳಿಯ ಕೋಳಿಗಳು, ಬಾತುಕೋಳಿಗಳು, ಡ್ಯಾಷ್ಯಾಂಡ್, ಲ್ಯಾಬರ್​ಡಾಗ್, ರ್ಯಾಟ್​ವಿಲ್ಲರ್ ತಳಿಯ ನಾಯಿಗಳನ್ನು ಸಾಕಿದ್ದಾರೆ. ಜೇನು ಸಾಕಣೆ ಕೃಷಿಗೆ ಸಂಬಂಧಿಸಿದಂತೆ ಕಾರೆಕೆರೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ತಮ್ಮ ಜಮೀನಿನಲ್ಲೇ ಮಾರ್ಗದರ್ಶನ ನೀಡುತ್ತಾರೆ. ಕೃಷಿಯನ್ನು ತಪಸ್ಸಿನಂತೆ ಮಾಡಿದರೆ ಸುಖ ಸಂಸಾರ ನಡೆಸಬಹುದು ಎಂಬುದನ್ನು ಮಂಜೇಗೌಡ ಹಾಗೂ ಅವರ ಪತ್ನಿ ನಿಶ್ಚಿತಾ ಮಾಡಿ ತೋರಿಸಿದ್ದಾರೆ.

ಈ ಗ್ರಾಮದ 100ಕ್ಕೂ ಹೆಚ್ಚು ರೈತರು ರೇಷ್ಮೆ ಕೃಷಿಯನ್ನೇ ಈಗಲೂ ಮಾಡುತ್ತಿದ್ದಾರೆ. 40 ವರ್ಷಗಳ ಹಿಂದೆ ದೊಡ್ಡಮನೆ ಬೋರೇ ಗೌಡರು ರೇಷ್ಮೆ ಕೃಷಿ ಪರಿಚಯಿಸಿದ್ದನ್ನು ಗ್ರಾಮದ ರೈತರು ಸ್ಮರಿಸುತ್ತಾರೆ. ಈ ಹಿಂದೆ ದಂಡಿಗನಹಳ್ಳಿ ಹೋಬಳಿ ಎಲಿಯೂರು ಹಾಗೂ ಉದಯಪುರದಲ್ಲಿ ತಾಲೂಕು ರೇಷ್ಮೆ ಇಲಾಖೆ ಕಚೇರಿ ಇದ್ದುದರಿಂದ ಇಲ್ಲಿನ ರೈತರು ರೇಷ್ಮೆ ಕೃಷಿ ಪ್ರಾರಂಭಿಸಿದರು. ಇದೀಗ ಕೃಷಿ ತಜ್ಞರಿಗಿಂತಲೂ ತಮ್ಮ ಅನುಭವಗಳ ಮೂಲಕ ಪರಿಣತರಾಗಿ ಜಿಲ್ಲೆಯಲ್ಲೇ ಹೆಚ್ಚು ರೈತರು ಬಳದಾರೆಯಲ್ಲಿ ರೇಷ್ಮೆ ಕೃಷಿ ಮಾಡಿ ಮಾದರಿ ಜೀವನ ನಡೆಸುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net