

ತಾರಸಿ ತೋಟದಲ್ಲಿ ಸೊಪು್ಪ, ತರಕಾರಿ, ಹಣ್ಣು ಹಾಗೂ ಹೂಗಳನ್ನು ಬೆಳೆಯುತ್ತಿದ್ದ ಜನರು ಇದೀಗ ಆಹಾರದಲ್ಲಿ ಪೌಷ್ಟಿಕಾಂಶ ಹಾಗೂ ಸತ್ವಯುತವಾದ ‘ಮೈಕ್ರೊಗ್ರೀನ್ಸ್’ (ಮೊಳಕೆ ಸಸಿಗಳು) ಬಳಕೆಯತ್ತ ಒಲವು ತೋರುತ್ತಿದ್ದಾರೆ.
ಹೆಚ್ಚುತ್ತಿರುವ ಕಾಯಿಲೆಗಳಿಗೆ ಬದಲಾದ ಆಹಾರ ಪದ್ಧತಿಯೇ ಕಾರಣ ಎನ್ನುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಮೈಕ್ರೊಗ್ರೀನ್ಸ್ ಉತ್ತಮ ಹಾಗೂ ಆರೋಗ್ಯ ವೃದ್ಧಿಸುವ ಆಹಾರವಾಗಿದ್ದು, ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ಪದಾರ್ಥ ಅಗಿದೆ. ಹೀಗಾಗಿ ನಗರದ ಜನರು ತಾರಸಿ ತೋಟಗಳಲ್ಲಿ ಮೈಕ್ರೊಗ್ರೀನ್ಸ್ ಬೆಳೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವತ್ತ ಮುಖಮಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಇದಕ್ಕಾಗಿ ಹೊಟೇಲ್, ರೆಸ್ಟೋರೆಂಟ್ಗಳಿಗೆ ಹೋಗುವ ಬದಲು ಮನೆಯ ತಾರಸಿಯಲ್ಲೇ ಸಣ್ಣ ಸಣ್ಣ ಕುಂಡಗಳಲ್ಲಿ ಮೈಕ್ರೊಗ್ರೀನ್ಸ್ ಬೆಳೆಯುತ್ತಿದ್ದಾರೆ.
ಬೆಳೆಸುವ ವಿಧಾನ
ಮೈಕ್ರೊಗ್ರೀನ್ಸ್ ಬೆಳೆಸಲು ಹೆಚ್ಚು ಸಮಯ ಬೇಕಿಲ್ಲ. ಎರಡರಿಂದ ಮೂರು ಇಂಚು ಆಳವಿರುವ ಯಾವುದೇ ಟ್ರೇ ಅಥವಾ ಪಾತ್ರೆ, ಪ್ಲಾಸ್ಟಿಕ್ ಕಂಟೈನರ್ ಅಥವಾ ಮಣ್ಣಿನ ಕುಂಡಗಳಲ್ಲಿ ಮಣ್ಣು, ಗೊಬ್ಬರ ತುಂಬಿಸಿ ನೀರು ಹಾಕಿ ಹದಗೊಳಿಸಿ, ನಂತರ ಬೀಜಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ನಿತ್ಯ ಬೆಳಗ್ಗೆ, ಸಂಜೆ ನೀರು ಸಿಂಪಡಿಸಬೇಕು. ಬಿತ್ತಿದ ವಾರದಲ್ಲೇ ಮೊಳಕೆಯೊಡೆದು 20 ದಿನಗಳಲ್ಲಿ ಎಲೆಗಳು ತಳೆಯುತ್ತವೆ. ಅವು 2-3 ಇಂಚು ಬೆಳದಾಗ ಕೊಯ್ಲಿಗೆ ಉತ್ತಮ.
ಉತ್ತಮ ರುಚಿ
ಮೈಕ್ರೊಗ್ರೀನ್ನ ರುಚಿಯೂ ವಿಶೇಷವಾಗಿದ್ದು, ಯಾವುದೇ ಆಹಾರದಲ್ಲಿ ಬಳಸಿದರೂ ವಿಭಿನ್ನ ಪರಿಮಳ ನೀಡುತ್ತದೆ. ಪೌಷ್ಟಿಕಾಂಶಗಳ ಆಗರವಾಗಿರುವ ಇದನ್ನು ಜನರು ಸಲಾಡ್ ರೂಪದಲ್ಲಿ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ಗಳಲ್ಲಿ ಮೈಕ್ರೊಗ್ರೀನ್ಸ್ ಸಲಾಡ್ ಹೆಚ್ಚು ಪ್ರಚಲಿತದಲ್ಲಿದೆ. ವಿಟಮಿನ್, ಖನಿಜ ಮತ್ತು ಆಮಿನೊ ಆಸಿಡ್ನ ಮೂಲವಾಗಿದ್ದು, ಪೌಷ್ಟಿಕಾಂಶದ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ಆಳವಾದ ಅಧ್ಯಯನವೂ ನಡೆಯುತ್ತಿದೆ ಎನ್ನುತ್ತಾರೆ ಆಹಾರ ತಜ್ಞರು.
ಸತ್ವಯುತ ಆಹಾರ
ಆಹಾರ ತಜ್ಞರು ಹೇಳುವಂತೆ ಮೈಕ್ರೊಗ್ರೀನ್ಸ್ ನೀರು, ಮಣ್ಣಿನ ಸತ್ವಗಳನ್ನು ಹೀರಿಕೊಂಡು ಸಸ್ಯವಾಗುವುದರಿಂದ ಪೌಷ್ಟಿಕಾಂಶದ ಸಾಂದ್ರತೆ ಹೆಚ್ಚಿರುತ್ತದೆ. ಹೀಗಾಗಿ ಇದರಲ್ಲಿ ಜೀವ ಸತ್ವಗಳು ಹೆಚ್ಚಿರುತ್ತವೆ. ಲಘು ಪೋಷಕಾಂಶಗಳನ್ನು ಹೊಂದಲು ಇದನ್ನು ಬಳಸಬಹುದು. ಏಕದಳ, ಧಾನ್ಯದ 100 ಗ್ರಾಂ ಮೊಳಕೆ ಸಸಿಗಳಲ್ಲಿ ಶೇ. 2-3 ಪ್ರೊಟೀನ್ ಅಂಶವಿರುತ್ತದೆ. 100 ಗ್ರಾಂ ಬೇಳೆ ಕಾಳು ದ್ವಿದಳ ಧಾನ್ಯ, ಎಣ್ಣೆಕಾಳುಗಳಲ್ಲಿ ಶೇ. 10-12 ಪ್ರೋಟೀನ್ ಸತ್ವ ಹೊಂದಿರುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ದಿನಕ್ಕೆ 50 ಗ್ರಾಂ ಮಿತಿಯಲ್ಲಿ ಮೈಕ್ರೊಗ್ರೀನ್ ಸೇವಿಸಿದರೆ ಸಾಕು. ಈ ಸತ್ವಯುತ ಆಹಾರವನ್ನು ಹಸಿಯಾಗಿ ಇಲ್ಲವೇ ಸಲಾಡ್ ರೂಪದಲ್ಲಿ ಸೇವಿಸಬಹುದು.
ಏನೇನು ಬೆಳೆಯಬಹುದು?
ಸಾಸಿವೆ, ಸೂರ್ಯಕಾಂತಿ, ಕೆಂಪು ಹರಿವೆ, ಬಟಾಣಿ, ಕೊತ್ತಂಬರಿ, ಮೆಂತ್ಯೆ, ಬಿಳಿ ಸಾಸಿವೆ, ಮೂಲಂಗಿ, ಬೀಟ್ರೂಟ್, ಈರುಳ್ಳಿ, ಎಲೆಕೋಸು, ಹುರುಳಿ, ಪಾಲಕ್, ದಂಟು, ಸಬ್ಬಸಿಗೆ, ಕಡ್ಲೆಬೀಜ, ಕಡ್ಲೆಕಾಳು ಇತ್ಯಾದಿ ಬೀಜಗಳನ್ನು ಬಿತ್ತಿ ಸಾವಯನ ಪದ್ಧತಿಯಲ್ಲಿ ಹೆಚ್ಚು ಖರ್ಚು ಹಾಗೂ ಶ್ರಮ ಇಲ್ಲದೆ ಮನೆಯಲ್ಲಿಯೇ ಮೈಕ್ರೊಗ್ರೀನ್ ಬೆಳೆಯಬಹುದು.
| ಪಂಕಜ ಕೆ.ಎಂ.