ಜಾಗತಿಕ ವ್ಯಾಪಾರೋದ್ಯಮಕ್ಕೆ ಕರೊನಾ ಪೆಟ್ಟು

Coronavirus
Published on

ಕರೊನಾ ಸೋಂಕಿನ ಕಾರಣ ವ್ಯಾಪಾರೋದ್ಯಮ ಹದಗೆಟ್ಟ 15 ರಾಷ್ಟ್ರಗಳ ಪೈಕಿ ಭಾರತ ಕೂಡ ಇದ್ದು, 2,594 ಕೋಟಿ ರೂ. (348 ಮಿಲಿಯನ್ ಡಾಲರ್) ಹೊಡೆತ ಬದ್ದಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನ ಪ್ರಕಟಿಸಿರುವ ವರದಿ ತಿಳಿಸಿದೆ.

ಭಾರತದಲ್ಲಿ ಅತಿಹೆಚ್ಚು ನಷ್ಟವಾಗಿರುವುದು ರಾಸಾಯನಿಕದ ವ್ಯಾಪಾರದಲ್ಲಿ (959 ಕೋಟಿ ರೂ.). ನಂತರ ಜವಳಿ, ಸಿದ್ಧ ಉಡುಪು (-ಠಿ; 476 ಕೋಟಿ), ಆಟೋಮೊಬೈಲ್ (253 ಕೋಟಿ ರೂ.), ಉಕ್ಕು ಮತ್ತು ಉಕ್ಕಿನ ಉಪಕರಣ (201 ಕೋಟಿ ರೂ.), ಮರದ ಉತ್ಪನ್ನ, ಪೀಠೋಪಕರಣ (111 ಕೋಟಿ ರೂ.), ಚರ್ಮ (96.83 ಕೋಟಿ ರೂ.), ವಿದ್ಯುತ್ ಉಪಕರಣ (89.38 ಕೋಟಿ ರೂ.) ವಲಯದ ವಹಿವಾಟಿನಲ್ಲಿ ನಷ್ಟವಾಗಿದೆ.

ಅತಿ ಹೆಚ್ಚು ತತ್ತರಿಸುವ ಚೀನಾಕ್ಕೆ3.77 ಲಕ್ಷ ಕೋಟಿ ರೂ. (50 ಬಿ.ಡಾಲರ್) ಮೌಲ್ಯದಷ್ಟು ರಫ್ತು ನಷ್ಟವಾಗಿದೆ ಎಂದು ಯುಎನ್​ಸಿಟಿಎಡಿ ತಿಳಿಸಿದೆ. ಜಾಗತಿಕ ಪ್ರಗತಿ ದರ ಶೇ. 2.80ರಿಂದ 2.20ಕ್ಕೆ ಕುಸಿಯಲಿದೆ ಎಂದು ಅಮೆರಿಕ ಕಾರ್ಪ್ ಬ್ಯಾಂಕ್ ಅಂದಾಜಿಸಿದೆ. ಪರಿಸ್ಥಿತಿ ಸುಧಾರಿಸದಿದ್ದರೆ 2008ರ ಸ್ಥಿತಿಗೆ ತಲುಪುವ ಸಾಧ್ಯತೆ ಶೇ. 53 ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕರೊನಾ ಕಾರಣ ಜಾಗತಿಕ ಪ್ರಗತಿ ದರ ಶೇ. 1.9ಕ್ಕೆ ಕುಸಿಯಲಿದೆ ಎಂದು ಜಾಗತಿಕ ಶ್ರೇಯಾಂಕ ಸಂಸ್ಥೆ ಮೂಡಿ’ಸ್ ಅಂದಾಜಿಸಿದೆ.

ನಷ್ಟ ಅನುಭವಿಸಿದ ರಾಷ್ಟ್ರಗಳು

  • ಚೀನಾ- 3.77 ಲಕ್ಷ ಕೋಟಿ ರೂ. (50 ಬಿಲಿಯನ್ ಡಾಲರ್)
  • ಐರೋಪ್ಯ ಒಕ್ಕೂಟ-  1.16 ಲಕ್ಷ ಕೋಟಿ ರೂ. (15.60 ಬಿ.ಡಾಲರ್)
  • ಅಮೆರಿಕ-  43,171 ಕೋಟಿ ರೂ. (5.80 ಬಿ.ಡಾಲರ್)
  • ಜಪಾನ್- 38,705 ಕೋಟಿ ರೂ. (5.20 ಬಿ. ಡಾಲರ್)
  • ದಕ್ಷಿಣ ಕೊರಿಯಾ- 28,283 ಕೋಟಿ ರೂ. (3.80 ಬಿ. ಡಾಲರ್)
  • ತೈವಾನ್-19,352 ಕೋಟಿ ರೂ. (2.60 ಬಿ. ಡಾಲರ್)
  • ವಿಯೆಟ್ನಾಂ-17,121 ಕೋಟಿ ರೂ. (2.30 ಬಿ. ಡಾಲರ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net