

| ವೇದಾವತಿ ಎಚ್.ಎಸ್. ಬೆಂಗಳೂರು
ಬಿಸಿಲಿನ ಸಮಯದಲ್ಲಿ ಒಣಶುಂಠಿ ಪುಡಿಯನ್ನು ತಯಾರಿಸಿಟ್ಟು ಕೊಂಡರೆ ವರ್ಷಗಳ ಕಾಲ ಅಡುಗೆಗೆ, ಟೀ ತಯಾರಿಸಲು, ಕಷಾಯ ತಯಾರಿಸಲು ಉಪಯೋಗಿಸಬಹುದು. ಅಗತ್ಯಕ್ಕೆ ತಕ್ಕಷ್ಟು ಶುಂಠಿ ತೆಗೆದುಕೊಳ್ಳಿ. ಅದರಲ್ಲಿರುವ ಮಣ್ಣನ್ನು ನೀರಿನಿಂದ ಚೆನ್ನಾಗಿ ತೊಳೆದು ನೀರು ಪೂರ್ತಿ ಆರಲು ಬಿಡಿ. ನಂತರ ಸಿಪ್ಪೆಯನ್ನು ತೆಳುವಾಗಿ ತೆಗೆದು ತುರಿದು ಕೊಳ್ಳಿ. ತುರಿದ ಶುಂಠಿಯನ್ನು ತಟ್ಟೆಯಲ್ಲಿ ಹಾಕಿ 2 ದಿನ ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಶುಂಠಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿಕೊಂಡ ಶುಂಠಿಯನ್ನು ಜರಡಿ ಹಿಡಿಯಿರಿ. ಹೀಗೆ ತಯಾರಿಸಿದ ಶುಂಠಿ ಪುಡಿಯನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟರೆ ಅಗತ್ಯವಿದ್ದಾಗ ಬಳಸಬಹುದು.
1 ಕಪ್ ಅಥವಾ 1/4 ಲೀಟರ್ ನೀರನ್ನು ಪಾತ್ರೆಗೆ ಹಾಕಿ ಕುದಿಸಿ. 1 ಟೀ ಚಮಚ ಜಜ್ಜಿದ ಹಸಿಶುಂಠಿ ಸೇರಿಸಿ 1 ನಿಮಿಷ ಕುದಿಸಿ. ಬಳಿಕ 1 ಕಪ್ ಹಾಲು ಹಾಕಿ ಕುದಿಸಿ. ಹಾಲು ಕುದಿ ಬಂದ ಬಳಿಕ 2 ಟೇಬಲ್ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ. ಈಗ 2 ಟೇಬಲ್ ಚಮಚ ಟೀ ಪುಡಿ ಸೇರಿಸಿ 4 ರಿಂದ 5 ನಿಮಿಷ ಕುದಿಸಿ. ಚೆನ್ನಾಗಿ ಕುದಿ ಬಂದಾಗ ಒಲೆ ಆರಿಸಿ. ಚಹಾವನ್ನು ಸೋಸಿಕೊಂಡು ಬಿಸಿ ಇರುವಾಗಲೇ ಕುಡಿಯಿರಿ. ಈ ವಿಧಾನದಲ್ಲಿ ಚಹಾ ತಯಾರಿಸಿದರೆ ರುಚಿ ಜಾಸ್ತಿ ಇರುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.