ಸೌಹಾರ್ದ, ಸಮನ್ವಯದ ಬದುಕು ನಮ್ಮದಾಗಲಿ

Friends
Published on

ಅವಿಭಕ್ತ ಕುಟುಂಬ ವ್ಯವಸ್ಥೆಯಿದ್ದ ಕಾಲದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ, ಅಮ್ಮ-ಅಪ್ಪ ಮಕ್ಕಳು ಹೀಗೆ ಒಂದು ಮನೆಯಲ್ಲಿ ಕಮ್ಮಿಯೆಂದರೂ 30-40 ಜನರು ಇರುತ್ತಿದ್ದರು. ಮನೆಯಲ್ಲಿ ಸಣ್ಣ-ಪುಟ್ಟ ಮನಸ್ತಾಪಗಳನ್ನು ಗಮನಿಸುವ ಮನೆಯ ಹಿರಿಯರು ತಮ್ಮೊಳಗೆ ರ್ಚಚಿಸಿ, ತಮ್ಮ ಅನುಭವ, ಜ್ಞಾನದ ನೆಲೆಯಲ್ಲಿ ಸೂಕ್ತ ಪರಿಹಾರ ನೀಡುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಈಗಿನ ಟಿ.ವಿ., ಮೊಬೈಲ್​ನಂತೆ ಬೇಕಾದಷ್ಟು ಮನರಂಜನೆಯ ವ್ಯವಸ್ಥೆಗಳು ಇರಲಿಲ್ಲ. ರೇಡಿಯೋ, ಯಕ್ಷಗಾನ ಅಥವಾ ಟೆಂಟ್ ನಾಟಕಗಳೇ ಮನರಂಜನೆಯ ಬಹುದೊಡ್ಡ ಸಂಗತಿಗಳಾಗಿದ್ದವು. ಜನರಿಗೆ ಅವುಗಳು ಮನರಂಜನೆ ಮತ್ತು ಮಾಹಿತಿ ಪ್ರಸಾರದ ಮಾಧ್ಯಮವಾಗಿದ್ದವು. ಆ ಕಾಲದಲ್ಲಿ ‘ಶ್ರೀಕೃಷ್ಣ ಸಂಧಾನ’ ಎಂಬ ಯಕ್ಷಗಾನ ಪ್ರಸಂಗವೊಂದು ಬಹಳ ಪ್ರಸಿದ್ಧವಾಗಿತ್ತು.

ಮಹಾಭಾರತದಲ್ಲಿ ಪಾಂಡವರು ಕೌರವರ ಜೊತೆ ಪಗಡೆಯಾಡಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಕೊನೆಗೆ ಪತ್ನಿ ದ್ರೌಪದಿಯನ್ನೂ ಜೂಜಿನಲ್ಲಿ ಪಣವಾಗಿ ಇಡುತ್ತಾರೆ. ಪರಿಣಾಮವಾಗಿ ತುಂಬಿದ ಸಭೆಯಲ್ಲಿ ದ್ರೌಪದಿ ಅವಮಾನವನ್ನು ಅನುಭವಿಸಬೇಕಾಗುತ್ತದೆ. ಅಷ್ಟೆಲ್ಲ ನಡೆದ ಮೇಲೆ ಪಾಂಡವರು ತಮ್ಮದೆಲ್ಲವನ್ನೂ ಬಿಟ್ಟು ತೆರಳಬೇಕಾಗಿರುತ್ತದೆ. ‘ರಾಜ್ಯ ಬೇಕಿದ್ದರೆ ಯುದ್ಧ ಮಾಡಿ’ ಎಂದು ದುರ್ಯೋಧನ ಹೇಳಿದ್ದ. ಆದರೆ ಯುದ್ಧ ಮಾಡುವ ಮನಸ್ಸು ಧರ್ಮರಾಯನಿಗೆ ಇಲ್ಲವೇ ಇಲ್ಲ. ಹಾಗಾಗಿ ಧರ್ಮರಾಯನು ಸಂಧಾನ ಮಾಡಲು ಶ್ರೀಕೃಷ್ಣನನ್ನು ಕಳುಹಿಸಿಕೊಡುವ ಪ್ರಸಂಗವದು. ಧರ್ಮರಾಯನ ಇಚ್ಛೆಯಂತೆ ಶ್ರೀಕೃಷ್ಣನು ಕೌರವನ ಆಸ್ಥಾನಕ್ಕೆ ಹೋಗಿ ಸಂಧಾನ ಮಾತುಕತೆಗೆ ತೊಡಗಿದ. ‘ಪಾಂಡವರೂ ನಿನ್ನ ಸಹೋದರರೇ ಅರ್ಧರಾಜ್ಯ ಬೇಡ, ಕನಿಷ್ಠ ಐದು ಗ್ರಾಮಗಳನ್ನಾದರೂ ನೀಡು’ ಎಂದು ತಿಳಿಸಿದ. ದರ್ಪ, ದುರಹಂಕಾರ, ಮತ್ಸರದಿಂದ ತುಂಬಿ ಹೋಗಿದ್ದ ಕೌರವನು ‘ಐದು ಗ್ರಾಮವಲ್ಲ, ಸೂಜಿಯ ಮೊನೆಯಷ್ಟು ಜಾಗವನ್ನೂ ನೀಡಲಾರೆ’ ಎಂದು ಕೃಷ್ಣನನ್ನೂ ಅವಮಾನಿಸಿ ಕಳುಹಿಸಿದ. ಶ್ರೀಕೃಷ್ಣನ ಸಂಧಾನ ಪ್ರಯತ್ನ ಯಶಸ್ವಿಯಾಗಲೇ ಇಲ್ಲ. ಒಂದು ವೇಳೆ ಸಂಧಾನ ಯಶಸ್ವಿಗೊಂಡು ಐದು ಗ್ರಾಮಗಳನ್ನಾದರೂ ನೀಡಿದ್ದರೆ ಮಹಾಭಾರತ-ಕುರುಕ್ಷೇತ್ರ ಯುದ್ಧಗಳು ಘಟಿಸುತ್ತಲೇ ಇರಲಿಲ್ಲವೇನೋ!

ರಾಮಾಯಣದಲ್ಲೂ ಹಾಗೆಯೇ ಸೀತೆಯನ್ನು ಅರಸುತ್ತ ಲಂಕೆಯ ಅಶೋಕ ವನಕ್ಕೆ ಬಂದ ಹನುಮಂತನು ಶ್ರೀರಾಮನ ಸಂದೇಶವನ್ನು ಸೀತಾಮಾತೆಗೆ ನೀಡುತ್ತಾನೆ. ಬಳಿಕ ಲಂಕಾಧೀಶ್ವರ ರಾವಣನ ಆಸ್ಥಾನಕ್ಕೆ ಬಂದು ಸೀತೆಯನ್ನು ಕಳುಹಿಸುಕೊಡುವಂತೆ ಸಂಧಾನ ರೀತಿಯಲ್ಲಿ ವಿನಂತಿಸಿಕೊಳ್ಳುತ್ತಾನೆ. ಆದರೆ ಸಾಮಾನ್ಯ ಕಪಿಯೆಂದು ಮೂದಲಿಸಿ ಹನುಮಂತನ ಬಾಲಕ್ಕೆ ಬಟ್ಟೆ ಕಟ್ಟಿ ಬೆಂಕಿ ಕೊಡಿಸುತ್ತಾನೆ ರಾವಣ. ಇಲ್ಲೂ ಅಷ್ಟೇ, ಹನುಮಂತನ ಮಾತನ್ನು ಕೇಳಿದ್ದರೆ ರಾಮ-ರಾವಣರ ನಡುವೆ ಯುದ್ಧವೇ ಸಂಭವಿಸುತ್ತಿರಲಿಲ್ಲ.

ಪುರಾಣದ ಈ ಎರಡೂ ಕತೆಗಳಲ್ಲಿ ಇಬ್ಬರ ನಡುವಿನ ಸಮಸ್ಯೆ ಪರಿಹಾರಕ್ಕೆ ಮೂರನೆಯವರ ಪ್ರವೇಶ ಅಗತ್ಯವಾಗಿ ಬೇಕೇ ಬೇಕಾಗುತ್ತದೆ ಎಂಬುದು ಸ್ಪಷ್ಟ. ಜೊತೆಗೆ ಮೂರನೆಯವರ ಪ್ರವೇಶವಿಲ್ಲದೆ ಸಮಸ್ಯೆಗಳೂ ಅಷ್ಟು ಬೇಗ ಪರಿಹಾರವಾಗಲಾರವು ಎಂಬುದು ನಮಗೆಲ್ಲ ತಿಳಿದಿರುವ ಸಂಗತಿ. ಒಮ್ಮೊಮ್ಮೆ ‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಗಾದೆಮಾತಿನಂತೆ ನಿಜವಾಗುವುದೂ ಇದೆ. ಇಂದಿನ ದಿನಗಳಲ್ಲಿ ‘ಎಲ್ಲರ ಮನೆಯ ದೋಸೆ ತೂತು’ ಎಂಬಂತೆ ಸಮಸ್ಯೆಗಳು ಇದ್ದೆ ಇವೆ ಎನ್ನಬಹುದು. ಸಮಸ್ಯೆಯನ್ನೇ ಗುಡ್ಡೆ ಮಾಡಿಕೊಂಡು ಕೊರಗುತ್ತ, ನರಳುತ್ತ ಜೀವನವನ್ನು ಸಾಗಿಸುವವರು ಅದೆಷ್ಟೋ ಮಂದಿಯಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೇ ಇದೆ ಎಂದು ನಮ್ಮ ಹಿರಿಯರು ಅನುಭವದ ಮಾತುಗಳನ್ನು ಹೇಳಿದ್ದಾರೆ. ಆ ಪರಿಹಾರದ ಮಾರ್ಗೇಪಾಯವನ್ನು ಹುಡುಕಬೇಕು. ನಾವು ಅರಿತುಕೊಳ್ಳಬೇಕು. ಸಮಸ್ಯೆ ಎದುರಾದ ಸಂದರ್ಭದಲ್ಲೂ ಯಾರ ಮಾತನ್ನೂ ಕೇಳದೆ ಅಹಂ ತೋರಿಸಿದರೆ ಸಮಸ್ಯೆ ದ್ವಿಗುಣವಾಗುವುದಲ್ಲದೆ ಶಮನವಾಗುವುದಿಲ್ಲ. ಪುರಾಣಗಳಲ್ಲಿ ನಾರದ ಮಹರ್ಷಿ ಅದೆಷ್ಟೋ ಬಾರಿ ಅಸುರರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸುತ್ತಾರೆ. ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರುತ್ತಾರೆ. ಆದರೆ ಅದನ್ನು ಕೇಳುವ ವ್ಯವಧಾನ ಅಸುರರಲ್ಲಿ ಇರಲಿಲ್ಲ. ಅದೆಷ್ಟೋ ಕಷ್ಟಪಟ್ಟು ದೇವರಿಂದ ಪಡೆದ ವರವನ್ನು ದುರ್ಬಳಕೆ ಮಾಡಿಕೊಂಡು ಲೋಕಕಂಟಕರಾಗಿ ಬದುಕಿ ಶಿಕ್ಷೆಗೆ ಒಳಪಡುತ್ತಾರೆ. ತಮ್ಮ ಕೆಟ್ಟ ಕೆಲಸದಿಂದ ತಮ್ಮ ಅವನತಿಯನ್ನು ಕಾಣುತ್ತಾರೆ.

ಹಿಂದಿನ ಕಾಲದಲ್ಲಿ ಊರಲ್ಲಿ ಸರಪಂಚರು, ಪಟೇಲರು, ಶ್ಯಾನುಭೋಗರು ಮುಂತಾದವರು ಇದ್ದರು. ದೇವಸ್ಥಾನದ ಆವರಣವೋ, ದೊಡ್ಡ ಆಲದ ಮರದಡಿಯಲ್ಲಿಯೋ ಪಂಚಾಯ್ತಿ ಕಟ್ಟೆ ಎಂಬುದಿತ್ತು. ಊರಿನಲ್ಲಿ ಏನಾದರೂ ಕಾನೂನು ತೊಡಕು, ಕುಟುಂಬ ಜಗಳ, ಜಮೀನು ವಾಗ್ವಾದಗಳಿದ್ದರೆ ಅದನ್ನು ಪಂಚಾಯ್ತಿ ಕಟ್ಟೆಗೆ ದೂರು ನೀಡಿ ಅಲ್ಲಿ ಸೇರಿದ ಗೌರವಯುತ ಜನರ ಸಮ್ಮುಖದಲ್ಲಿ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳುತ್ತಿದ್ದರು. ಈಗ ಸಿನಿಮಾಗಳಲ್ಲಿ ಮಾತ್ರ ನೋಡಬಹುದು. ಗ್ರಾಮಸ್ಥರೂ ಅಷ್ಟೇ ಪಂಚಾಯ್ತಿ ಕಟ್ಟೆ ನೀಡಿದ ತೀರ್ಪನ್ನು ಒಪ್ಪಿಕೊಂಡು ಸಮಸ್ಯೆ, ಜಗಳ ಇತ್ಯರ್ಥ ಮಾಡಿಕೊಂಡು ಮುಂದುವರಿಯುತ್ತಿದ್ದರು. ಈಗೀಗ ಪಂಚಾಯ್ತಿ ಕಟ್ಟೆಗಳು ಇಲ್ಲವಾಗಿದ್ದು, ನ್ಯಾಯ ತೀರ್ವನವನ್ನು ಕೋರ್ಟು, ಪೊಲೀಸ್ ಠಾಣೆಗಳು ಮಾಡುತ್ತಿವೆ.

ಅವಿಭಕ್ತ ಕುಟುಂಬ ವ್ಯವಸ್ಥೆಯಿದ್ದ ಕಾಲದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ, ಅಜ್ಜ-ಅಜ್ಜಿ, ಅಮ್ಮ-ಅಪ್ಪ ಮಕ್ಕಳು ಹೀಗೆ ಒಂದು ಮನೆಯಲ್ಲಿ ಕಮ್ಮಿಯೆಂದರೂ 30-40 ಜನರು ಇರುತ್ತಿದ್ದರು. ಮನೆಯಲ್ಲಿ ಸಣ್ಣ-ಪುಟ್ಟ ಮನಸ್ತಾಪಗಳನ್ನು ಗಮನಿಸುವ ಮನೆಯ ಹಿರಿಯ ಮಹಿಳೆ ಅಥವಾ ಪುರುಷರು ತಮ್ಮೊಳಗೆ ರ್ಚಚಿಸಿ, ತಮ್ಮ ಅನುಭವ, ಜ್ಞಾನದ ನೆಲೆಯಲ್ಲಿ ಸೂಕ್ತ ಪರಿಹಾರ ನೀಡುತ್ತಿದ್ದರು. ದಾರಿ ತಪ್ಪಿ ನಡೆಯುವ ಮಕ್ಕಳನ್ನು ಸರಿದಾರಿಗೆ ತರುತ್ತಿದ್ದರು. ತಿದ್ದಿ ಬುದ್ಧಿ ಹೇಳುತ್ತಿದ್ದರು. ಜಗಳಗಳು ನಡೆಯದಂತೆ ಉತ್ತಮ ರೀತಿಯಲ್ಲಿ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಈಗಂತೂ ಇದಕ್ಕೆ ವಿರುದ್ಧವಾದ ಸಂಗತಿಗಳನ್ನು ನಿತ್ಯವೂ ಪತ್ರಿಕೆ, ಟಿ.ವಿ.ಗಳಲ್ಲಿ ಕಾಣುತ್ತಿದ್ದೇವೆ. ದಾಯಾದಿಗಳು ಮಾತ್ರವಲ್ಲದೆ ಒಡಹುಟ್ಟಿದ ಅಣ್ಣ-ತಮ್ಮಂದಿರ ನಡುವೆ ಸಣ್ಣ-ಪುಟ್ಟ ವಿಷಯಗಳಿಗೂ ಜಗಳವಾಗಿ ಆಸ್ತಿಯ ಜೊತೆಗೆ ಹೆತ್ತ ತಂದೆ-ತಾಯಿಯನ್ನು ಕೂಡ ಪಾಲು ಮಾಡುವಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗುತ್ತದೆ.

ಇಷ್ಟಲ್ಲದೆ ಅಕ್ಕ-ಪಕ್ಕದ ಮನೆಯವರು, ಸ್ನೇಹಿತರು, ಬಂಧುಗಳು, ಕುಟುಂಬಸ್ಥರು, ಕೆಲಸ ಮಾಡುವ ಸ್ಥಳ, ಶಾಲೆ ಹೀಗೆ ಎಲ್ಲೆಡೆಗಳಲ್ಲೂ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗಿ ಬೆಳೆದು ಸಾಕಷ್ಟು ಕಷ್ಟ-ನಷ್ಟ ತಂದೊಡ್ಡಬಲ್ಲವು. ಯಾರದೋ ಕೋಪಕ್ಕೆ ಇನ್ಯಾರೋ ಬಲಿಯಾಗಬೇಕಾದ ಸಂದರ್ಭಗಳೂ ಇರುತ್ತವೆ. ಕೋಪ-ತಾಪಗಳು ಅದೇನೇ ಇರಲಿ ಕಡ್ಡಿಯನ್ನು ಗುಡ್ಡ ಮಾಡಬಾರದು. ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ಪರಸ್ಪರ ಮಾತುಕತೆ ನಡೆಸುವುದರಿಂದ ಬಹುತೇಕ ಸಮಸ್ಯೆಗಳನ್ನು ಖಂಡಿತ ಬಗೆಹರಿಸಲು ಸಾಧ್ಯವಿದೆ. ಸಮಸ್ಯೆಯೆಂದರೆ ಬಹುತೇಕರು ಮಾತುಕತೆಗೆ ತೊಡಗಲು, ಒಂದು ವೇಳೆ ಮಾತುಕತೆಗೆ ಒಪ್ಪಿದರೂ ಇನ್ನೊಬ್ಬರ ಮಾತನ್ನು ಕೇಳಲು, ಅರ್ಥ ಮಾಡಿಕೊಳ್ಳಲು ತಯಾರು ಇರುವುದಿಲ್ಲ. ಹಾಗಾಗಿ ಅದೆಷ್ಟೋ ಕೋಪ, ಜಗಳ, ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತೆ ಇರುತ್ತವೆ.

ನಾನು ಕ್ಷೇತ್ರದ ಧರ್ವಧಿಕಾರಿಯಾಗಿ ಕ್ಷೇತ್ರದಲ್ಲಿ ಆಚರಿಸಿಕೊಂಡು ಬಂದ ಪದ್ಧತಿಯಂತೆ ಚತುರ್ದಾನಗಳಲ್ಲಿ ಅಭಯ ದಾನವೂ ಒಂದು. ಅದರಂತೆ, ಕ್ಷೇತ್ರಕ್ಕೆ ಬರುವ ಅನೇಕರು ಕಷ್ಟ-ಸುಖವನ್ನು ಹಂಚಿಕೊಂಡು ನಿರಾಳರಾಗುತ್ತಾರೆ. ಕೆಲವರು ನಮ್ಮಿಂದ ಪರಿಹಾರ, ಸಲಹೆ, ಅಭಿಪ್ರಾಯ, ಹಾರೈಕೆಯನ್ನು ಪಡೆದು ಸಂತೋಷದಿಂದ ತೆರಳುತ್ತಾರೆ. ದುಃಖದುಮ್ಮಾನಗಳನ್ನು ತೋಡಿಕೊಳ್ಳಲು, ವ್ಯಾಜ್ಯಗಳ ಪರಿಹಾರಕ್ಕೆ, ಮನಸ್ತಾಪಗಳ ಬಗ್ಗೆ ಹೇಳಿಕೊಳ್ಳಲು ಬರುತ್ತಿರುತ್ತಾರೆ. ಅವರೆಲ್ಲರಿಗೂ ಎಷ್ಟು ಸಾಧ್ಯವೋ ಧೈರ್ಯ ತುಂಬುತ್ತೇನೆ. ಕೋಪ, ಜಗಳವನ್ನು ತೊರೆಯುವಂತೆ ಹೇಳುತ್ತಿರುತ್ತೇನೆ.

ಹಿಂದಿನ ಕಾಲದಲ್ಲಿ ಬಹಳಷ್ಟು ಪುಣ್ಯಕ್ಷೇತ್ರಗಳು ನ್ಯಾಯತೀರ್ವನವನ್ನು ಮಾಡುತ್ತಿದ್ದವು. ನ್ಯಾಯತೀರ್ವನ ಮಾಡುವ ಕ್ಷೇತ್ರಗಳು, ಮಠ-ಮಾನ್ಯಗಳು ಈಗಲೂ ಅಲ್ಲಲ್ಲಿ ಇವೆ. ನಮ್ಮ ಕ್ಷೇತ್ರದಲ್ಲಿ ಹೊೖಲು ಎಂಬ ನ್ಯಾಯತೀರ್ವನ ಮಾಡುವ ವಿಶೇಷ ಪದ್ಧತಿಯಿತ್ತು. ಅದರಂತೆ ದೂರುದಾರು ಪತ್ರಮುಖೇನ ಬರೆದುಕೊಂಡು ಇಂಥವರಿಂದ ಹೀಗೆ ಅನ್ಯಾಯವಾಗಿದೆ. ಅದಕ್ಕೆ ದೇವರ ಸನ್ನಿಧಿಯಲ್ಲಿ ಪರಿಹಾರ ಕೊಡಿಸಬೇಕೆಂದು ಕೇಳಿಕೊಳ್ಳುತ್ತಿದ್ದರು. ವಾದಿ ಮತ್ತು ಪ್ರತಿವಾದಿಗಳು ಕ್ಷೇತ್ರಕ್ಕೆ ಬಂದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತಿತ್ತು. ನಿಜವಾಗಿ ತಪ್ಪು ಮಾಡಿದವನು, ತಪ್ಪನ್ನು ಒಪ್ಪಿಕೊಂಡು ದೇವರ ಮುಂದೆ ತಪ್ಪುಕಾಣಿಕೆ ಹಾಕಿ ಇನ್ನು ಮುಂದೆ ಒಳ್ಳೆಯ ವ್ಯಕ್ತಿಯಾಗಿ ಬಾಳುತ್ತೇನೆ ಎಂದು ನಿರ್ಧರಿಸಬೇಕಿತ್ತು. ಹೀಗೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಿವಿಧ ರೀತಿಯಲ್ಲಿ ದೂರುಗಳನ್ನು ಪರಿಹರಿಸಿ ಎರಡೂ ಕಡೆಯವರಿಗೂ ಒಳ್ಳೆಯ ಜೀವನ ನಡೆಸಲು ಅವಕಾಶ ನೀಡುವ ಕ್ರಮವಿತ್ತು. ಈಗ ಕೋರ್ಟು-ಕಾನೂನುಗಳು ವ್ಯವಸ್ಥಿತವಾಗಿ ವ್ಯಾಜ್ಯಗಳನ್ನು ಪರಿಹರಿಸುವುದರಿಂದ ಶ್ರದ್ಧಾಕೇಂದ್ರಗಳಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಬಹಳಷ್ಟು ಕಡಿಮೆಯಾಗಿದೆ.

ಮಕ್ಕಳು ಸಣ್ಣವರು ಇರುವಾಗ ತರಗತಿಗಳಲ್ಲಿ ಮುನಿಸುಗಳು ಸಾಮಾನ್ಯ. ನನಗೆ ಹೊಡೆದ, ಚಿವುಟಿದ, ಪೆನ್ಸಿಲ್-ಪೆನ್ ತಗೊಂಡ ಇತ್ಯಾದಿ ಕಾರಣಗಳಿಗೆ ಇಬ್ಬರ ನಡುವೆ ಟೂ ಬಿಡುವುದು ನಡೆಯುತ್ತಿರುತ್ತದೆ. ಆಗ ಶಾಲಾಶಿಕ್ಷಕಿಯು ಇಬ್ಬರೂ ಮಕ್ಕಳನ್ನು ಕರೆದು ಎದುರುಗಡೆ ನಿಲ್ಲಿಸಿ ಪರಸ್ಪರ ಕೈ-ಕೈಹಿಡಿಸಿ ಸ್ನೇಹಿತರಾಗಿ ಇರುವಂತೆ ಹೇಳುತ್ತಾರೆ. ಕೋಪ ಮಾಡಬಾರದು ಎಂದು ತಿಳಿಸುತ್ತಾರೆ. ದೊಡ್ಡವರಾದ ಮೇಲೂ ನಾವು ಮಾಡುವ ಕೋಪ-ಮನಸ್ತಾಪಗಳನ್ನು ಸರಿಪಡಿಸಲು ಇಬ್ಬರಿಗೂ ಆಪ್ತರೆನಿಸುವ ಒಬ್ಬರು ಬೇಕೇ ಬೇಕಾಗುತ್ತದೆ. ಅವರು ಎರಡೂ ಕಡೆಯವರನ್ನು ಕುಳ್ಳಿರಿಸಿ, ಭಿನ್ನಭಿಪ್ರಾಯ, ಕೋಪಗಳನ್ನು ಹೋಗಲಾಡಿಸಿ ಮತ್ತೆ ಒಂದಾಗುವಂತೆ ಮಾಡುವವರು ಆಗಬೇಕೇ ಹೊರತು ಇಬ್ಬರಿಂದಲೂ ಲಾಭ ಪಡೆದುಕೊಳ್ಳುವವರು ಆಗಿರಲೇಬಾರದು.

ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮಮಂದಿರ ಲೋಕಾರ್ಪಣೆಗೊಳಿಸಿ, ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದ್ದಾರೆ. ಈ ಅಭೂತಪೂರ್ವ ಕ್ಷಣಕ್ಕೆ ಅಯೋಧ್ಯೆಯಲ್ಲಿಯೇ ಇದ್ದುಕೊಂಡು ನಾನೂ ಸಾಕ್ಷಿಯಾಗಿದ್ದೆ. ಈ ರಾಮ ಮಂದಿರವು ಇಡೀ ಭಾರತೀಯರಿಗೆ ಸೇರಿದ್ದು. ರಾಮ ಮಂದಿರದ ಕೆಲಸ ಕಾರ್ಯಗಳಲ್ಲಿ ಸರ್ವಧರ್ವಿುಯರು ಶ್ರದ್ಧಾ-ಭಕ್ತಿಯಿಂದ ಕೆಲಸ ಮಾಡಿದ್ದರು. ಅವರ ಊರಿಗೆ ಬಂದ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಿದ್ದಾರೆ. ಅಲ್ಲಿ ಎಲ್ಲೆಡೆಯಲ್ಲಿಯೂ ಸಂಭ್ರಮ ಎದ್ದು ಕಾಣುತ್ತಿತ್ತು.

ಕೆಲವೇ ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ಕಂದಕಗಳು ಏರ್ಪಡುತ್ತಿವೆ. ದೇವರ ನಡುವೆ ಇರದ ತಾರತಮ್ಯ ಭಕ್ತರ ನಡುವೆ ಏಕಿದೆ ಎಂದು ತಿಳಿಯುತ್ತಿಲ್ಲ. ನಾವೆಲ್ಲ ಒಂದೇ ನೆಲದಲ್ಲಿದ್ದುಕೊಂಡು, ಒಂದೇ ನದಿಯ ನೀರನ್ನು ಕುಡಿಯುತ್ತೇವೆ, ಗಾಳಿಯನ್ನು ಉಸಿರಾಡುತ್ತೇವೆ. ನಮ್ಮೆಲ್ಲರ ರಕ್ತವೂ ಒಂದೇ ಆಗಿದೆ. ಹಾಗಿರುವಾಗ ನಾವೇಕೆ ಪರಸ್ಪರ ಭೇದ-ಭಾವ ಮಾಡಬೇಕು? ದ್ವೇಷ ಮಾಡಬೇಕು. ಯಾರೋ ಮಾಡಿದ ಮಣ್ಣಿನ ಹಣತೆ ನಮ್ಮ ಮನೆಯಲ್ಲಿ ಬೆಳಕು ಚೆಲ್ಲುತ್ತದೆ. ಯಾವುದೋ ಕುಲದವರು ಬೆಳೆದ ಅಕ್ಕಿ ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತದೆ, ಇನ್ನು ಯಾವುದೋ ಧರ್ಮದವರು ತಯಾರಿಸಿದ ವಸ್ತುವನ್ನು ನಿತ್ಯ ಬಳಕೆ ಮಾಡುತ್ತೇವೆ. ಹೀಗಿರುವಾಗ ನಾವೆಲ್ಲ ಸೌಹಾರ್ದದಿಂದ ಬಾಳನ್ನು ಸಾಗಿಸುತ್ತಿದ್ದೇವೆ ಎಂದು ಅನಿಸದೆ ಇರದು. ಹೌದು, ಇನ್ನು ಮುಂದೆಯೂ ನಾವೆಲ್ಲ ಸಹೋದರರಂತೆ ಪ್ರೀತಿ-ವಿಶ್ವಾಸದಿಂದ ಜೊತೆಯಾಗಿ ಬಾಳುತ್ತೇವೆ. ಈ ಕಾರಣದಿಂದಾಗಿಯೇ ಇಡೀ ವಿಶ್ವದಲ್ಲಿಯೇ ಭಾರತವು ವಿಶಿಷ್ಟವಾಗಿರುವುದು.

ಸಾವಿರಾರು ವರ್ಷಗಳಿಂದ ಇಂದಿನವರೆಗೂ ಶ್ರೀರಾಮನು ಜನಮಾನಸದಲ್ಲಿ ನೆಲೆನಿಂತಿದ್ದಾನೆ. ಕೋಟ್ಯಾನುಕೋಟಿ ಜನರು ರಾಮನನ್ನು ಆರಾಧಿಸುತ್ತಾರೆ. ಆತನಲ್ಲಿದ್ದ ಸಕಲ ಗುಣಸಂಪನ್ನಗಳಿಂದಾಗಿಯೇ ಆತ ಜನರ ಹೃದಯ ಮಂದಿರಗಳಲ್ಲಿ ಶಾಶ್ವತವಾಗಿರಲು ಸಾಧ್ಯವಾಗಿದೆ. ನಾವೂ ಅಷ್ಟೇ, ರಾಮನ ಗುಣಗಳನ್ನು ಸ್ವಲ್ಪವಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತ ನೆಮ್ಮದಿ, ಸಂತೃಪ್ತಿಯ ಜೀವನವನ್ನು ನಡೆಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net