ಸದ್ಗುಣಗಳು ಅನಂತವಾಗಲಿ: ಮನೋಲ್ಲಾಸ

Birds
Published on
| ಸುಜಾತಾ ಕುಲಕರ್ಣಿ

ಒಂದಾನೊಂದು ಕಾಲದಲ್ಲಿ ಮಿಥಿಲಾ ಪಟ್ಟಣದಲ್ಲಿ ನಿಮಿ ಹೆಸರಿನ ರಾಜನಿದ್ದ. ಬಹು ಪರಾಕ್ರಮಿಯಾದ ಅವನು ಸಕಲ ಶಾಸ್ತ್ರ ಪಾರಂಗತನೂ ಆಗಿದ್ದ. ಮಧ್ಯಾಹ್ನದ ಊಟ ಮುಗಿಸಿ ಕಾವ್ಯಶಾಸ್ತ್ರ ವಿನೋದದಲ್ಲಾಗಲಿ, ಮಂತ್ರಿಯೊಡನೆ ಸಂಭಾಷಣೆಯಲ್ಲಾಗಲಿ, ಕೆಲ ವೇಳೆಯನ್ನು ಕಳೆಯುವುದು ವಾಡಿಕೆಯಾಗಿತ್ತು.

ಒಂದು ದಿನ ಹೀಗೆಯೇ ಮಂತ್ರಿಯೊಡನೆ ಮಾತಾಡುತ್ತ ನಿಂತಾಗ, ಮಾಂಸದ ತುಂಡೊಂದನ್ನು ಕಚ್ಚಿಕೊಂಡು ಹಾರುತ್ತಿದ್ದ ಹದ್ದಿನ ಮೇಲೆ ಆತನ ದೃಷ್ಟಿ ಬಿತ್ತು. ಏನಾಶ್ಚರ್ಯ, ಕ್ಷಣಾರ್ಧದಲ್ಲೇ ನೂರಾರು ಹದ್ದುಗಳು ಎಲ್ಲಿಂದಲೋ ಹಾರಿ ಬಂದು ಮಾಂಸದ ತುಂಡಿಗಾಗಿ ಆ ಹದ್ದನ್ನು ಪೀಡಿಸತೊಡಗಿದವು. ಮಾಂಸದ ತುಂಡು ಹಿಡಿದಿದ್ದ ಹದ್ದು ಇವುಗಳಿಂದ ಪಾರಾಗಲು ಶಕ್ತಿ ಮೀರಿ ಪ್ರಯತ್ನಿಸುತ್ತಿತ್ತು. ಕೊನೆಗೆ ಅದು ಉಳಿದ ಹದ್ದುಗಳ ಹಿಂಸೆಯನ್ನು ತಾಳಲಾರದೆ ಮಾಂಸದ ತುಂಡನ್ನು ಎಸೆದು ಓಡಿಹೋಯಿತು. ಅದನ್ನು ಬಹು ಪ್ರಯಾಸದಿಂದ ಇನ್ನೊಂದು ಹದ್ದು ಹೆಕ್ಕಿಕೊಂಡಿದ್ದೇ ತಡ ಉಳಿದ ಹದ್ದುಗಳು ಅದನ್ನು ಪೀಡಿಸಲಾರಂಭಿಸಿದವು. ತುಸು ಸಮಯದ ನಂತರ ಪೀಡೆಯನ್ನು ತಾಳದೆ ಅದು ಮೊದಲಿನ ಹದ್ದಿನ ಹಾಗೆ ಪಲಾಯನಸೂತ್ರ ಅನುಸರಿಸಿತು. ಅನಂತರ ಮತ್ತೊಂದು ಹದ್ದು ಮಾಂಸದ ತುಂಡನ್ನು ಹೆಕ್ಕಿಕೊಂಡು ಓಡಿಹೋಗಲು ಯತ್ನಿಸಿದ್ದೇ ತಡ, ಉಳಿದ ಹದ್ದುಗಳು ಬಂದು ಅದನ್ನು ಕುಕ್ಕಿ ಹಾಕಿದವು. ಪಾಪ, ಅದರ ಮೈಯೆಲ್ಲ ರಕ್ತಸಿಕ್ತವಾಯಿತು. ಅದೂ ನಿರುಪಾಯವಾಗಿ ಮಾಂಸದ ತುಂಡನ್ನು ಎಸೆದು ಓಡಿಹೋಯಿತು.

ಇದನ್ನೆಲ್ಲ ತದೇಕಚಿತ್ತನಾಗಿ ನೋಡುತ್ತಿದ್ದ ಮಹಾರಾಜನ ಮುಖ ಗಂಭೀರವಾಯಿತು. ಕ್ಷಣಕಾಲ ಆತ ಅಂತಮುಖಿಯಾದ. ಆನಂತರ ಮಂತ್ರಿಗೆ ಹೇಳಿದ: ‘ಮಾಂಸದ ತುಂಡನ್ನು ಕಚ್ಚಿಕೊಂಡು ಹೋಗಲು ಯತ್ನಿಸಿದ ಹದ್ದುಗಳ ಗತಿ ನೋಡಿದೆಯಾ? ತನಗೆ ದೊರೆತದ್ದನ್ನೆಲ್ಲ ತಾನೇ ಅನುಭವಿಸಬೇಕು ಎನ್ನುವವರಿಗೆ ಕೊನೆಗೆ ಒದಗುವ ಗತಿ ಇದು. ದೇವರು ಕೊಟ್ಟಿದ್ದನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡು ಅನುಭೋಗಿಸುವುದರಲ್ಲಿ ನಿಜವಾದ ಸುಖವಿದೆ’ ಎಂದ.

ನಿಜ, ನಮ್ಮ ಕಣ್ಣುಗಳು ಕಾಣುವುದು ಬಾಹ್ಯಜಗತ್ತನ್ನು ಮಾತ್ರ, ಆದರೆ ನಮ್ಮ ಮನಸ್ಸು ಅನುಭವಗಳನ್ನು ಮೂಡಿಸುವುದರ ಮೂಲಕ ಅದರ ಅರ್ಥವನ್ನು ನೀಡುತ್ತದೆ. ಹಂಚಿಕೆಯ ಮನೋಭಾವ ಇದ್ದರೆ ಅದರ ಅನುಭವವೂ ಆನಂದದಿಂದ ಕೂಡಿರುತ್ತದೆ. ಈ ಭಾವನೆಯು ಇತರರೊಡನೆ ಹಂಚಿಕೊಂಡು ಜೀವನವನ್ನು ಸಾಗಿಸುವಲ್ಲಿ ಸಹಕಾರಿಯಾಗಿದೆ. ಇದು ನಮ್ಮ ಸಂಬಂಧಗಳನ್ನು ಉಳಿಸುತ್ತದೆ ಮತ್ತು ಪ್ರತಿ ಅನುಭವವನ್ನೂ ಪೂರೈಸುವಲ್ಲಿ ನಮಗೆ ಹೆಚ್ಚಿನ ಆನಂದ ತರುವುದಲ್ಲದೆ ಸದ್ಗುಣಗಳನ್ನೂ ಬೆಳೆಸುತ್ತದೆ. ಈ ಸದ್ಗುಣಗಳು ಮತ್ತು ಮಾನವೀಯ ಮೌಲ್ಯಗಳು ವ್ಯಕ್ತಿಯನ್ನು ಶ್ರೇಷ್ಠರನ್ನಾಗಿಸುತ್ತವೆ. ಒಂದು ರಾಷ್ಟ್ರವು ತನ್ನ ನಾಗರಿಕತೆಯನ್ನು ಬೆಳೆಸಿ ಬಲಪಡಿಸಲು ಸದ್ಗುಣಗಳ ಅಗತ್ಯವಿದೆ. ಸಹಕಾರ ಮತ್ತು ಸಾಮರಸ್ಯದಿಂದ ಬಾಳುವ ಸಮಾಜವನ್ನು ಸದ್ಗುಣಗಳು ನಿರ್ವಿುಸುತ್ತವೆ ಎಂಬುದನ್ನು ಮರೆಯದಿರೋಣ.

(ಲೇಖಕರು ಸಹ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net