

|ಉಮೇಶ್ ಕುಮಾರ್ ಶಿಮ್ಲಡ್ಕ ಬೆಂಗಳೂರು
ಪೀಪಲ್ ಅನಲಿಟಿಕ್ಸ್ ಅಥವಾ ವರ್ಕ್ಫೋರ್ಸ್ ಅನಲಿಟಿಕ್ಸ್ ಎಂಬುದು ಮಾನವ ಸಂಪನ್ಮೂಲ ಕ್ಷೇತ್ರದ ನಿರ್ವಹಣೆಯ ಸ್ತರದಲ್ಲಿ ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ವಿಚಾರ. ಇತ್ತೀಚೆಗೆ ಪ್ರಕಟವಾಗಿರುವ ಇನ್ಸೈಟ್222 ಸಮೀಕ್ಷೆಯಲ್ಲಿ ಇದಕ್ಕೆ ಪೂರಕ ಅಂಶದ ಉಲ್ಲೇಖವಿದೆ. ಇದರಂತೆ, ಶೇಕಡ 90 ಸಂಸ್ಥೆಗಳು ವರ್ಕ್ಫೋರ್ಸ್ ಅಥವಾ ಪೀಪಲ್ ಡೇಟಾ ಅಥವಾ ಅನಲಿಟಿಕ್ಸ್ ಮೇಲೆ ನಂಬಿಕೆ ಇರಿಸಿಕೊಂಡಿವೆ. ಹೀಗಾಗಿ ಎಚ್ಆರ್ಗಳನ್ನು ನೇಮಕ ಮಾಡುವಾಗ ಪೀಪಲ್ ಅನಲಿಟಿಕ್ಸ್ ಮತ್ತು ಡಿಜಿಟಲ್ ಎಚ್ಆರ್ ಕೌಶಲಗಳನ್ನು ಹೊಂದಿರುವಂಥವರನ್ನೇ ನೇಮಕ ಮಾಡುತ್ತಿವೆ.
ಸಾಂಪ್ರದಾಯಿಕವಾಗಿ ಎಚ್ಆರ್ ಕೆಲಸ ನಿರ್ವಹಿಸುವುದಕ್ಕೂ ಡಿಜಿಟಲ್ ಕೌಶಲದೊಂದಿಗೆ ಎಚ್ಆರ್ ಕೆಲಸ ನಿರ್ವಹಿಸುವುಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಬದಲಾದ ಕಾಲಘಟ್ಟದಲ್ಲಿ ಡೇಟಾ ಪ್ರಾಮುಖ್ಯತೆ ಪಡೆದುಕೊಂಡ ಕಾರಣ, ಹೊಸ ಕೌಶಲವನ್ನು ಕಲಿತು ಕೆಲಸ ನಿರ್ವಹಿಸಿದ ಅನುಭವಿಗಳಿಗೆ ಕೆಲಸದ ಅವಕಾಶ ಹೆಚ್ಚು. ಕಂಪನಿಗಳಲ್ಲಿ ಎಚ್ಆರ್-ಪೀಪಲ್ ಅನಲಿಟಿಕ್ಸ್ ಅಥವಾ ಡಿಜಿಟಲ್ ಎಚ್ಆರ್ ಎಂಬ ವಿಭಾಗ ಸೃಷ್ಟಿ ಆಗಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ಕೂಡ ನಡೆಯುತ್ತಿದೆ.
ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಹ್ಯೂಮನ್ ರಿಸೋರ್ಸ್ ಇನ್ಫೋಮೇಶನ್ ಸಿಸ್ಟಮ್ (ಎಚ್ಆರ್ಐಎಸ್) ಕುರಿತ ಕಾರ್ಯ ಜ್ಞಾನ ಇದ್ದರೆ ತುಂಬ ಪ್ರಯೋಜನಕಾರಿ. ಈಗಾಗಲೇ ಎಚ್ಆರ್ ವೃತ್ತಿ ನಿರತರಾದವರು ಪೀಪಲ್ ಅನಲಿಟಿಕ್ಸ್ ನಲ್ಲಿ ಸರ್ಟಿಫಿಕೇಶನ್ ಮಾಡಿಕೊಳ್ಳುವುದು ಮತ್ತು ಕೌಶಲ ವೃದ್ಧಿ ಮಾಡಿಕೊಳ್ಳುವುದು ಅತ್ಯುತ್ತಮ. ಉದಯೋನ್ಮುಖ ಟ್ರೆಂಡ್ಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ವೃತ್ತಿ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಯಾವತ್ತಿದ್ದರೂ ಉತ್ತಮ ನಡವಳಿಕೆ. ಪೀಪಲ್ ಅನಲಿಟಿಕ್ಸ್ ಸಂಬಂಧಿಸಿ ಆನ್ಲೈನ್ನಲ್ಲಿ ಕೆಲವು ಉತ್ತಮ ಕೋರ್ಸ್ಗಳಿವೆ. ಈ ಕೋರ್ಸ್ಗಳು ತಾಜಾ ವೃತ್ತಿ ಅನುಭವದೊಂದಿಗೆ ಕಲಿಕೆಯನ್ನೂ ಒದಗಿಸುತ್ತವೆ. ಹೀಗೆ ಹೊಸ ಕೌಶಲವನ್ನು ವೃತ್ತಿಪರರಿಗೆ ಕಲಿಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಲ್ಲಿ ಪದವಿಯಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕಾದ್ದು ಮತ್ತು ಎಚ್ಆರ್ ವಿಭಾಗದಲ್ಲಿ ಎರಡು ವರ್ಷ ವೃತ್ತಿ ಅನುಭವ ಇರಬೇಕಾದ್ದು ಕಡ್ಡಾಯ. ಈ ಕೋರ್ಸ್ ಮುಗಿದ ಬಳಿಕ, ಎಚ್ಆರ್ ಅನಲಿಸ್ಟ್, ಎಚ್ಆರ್ ಅನಲಿಸ್ಟ್ ಆಂಡ್ ರಿಪೋರ್ಟಿಂಗ್ ಸ್ಪೆಷಲಿಸ್ಟ್, ಎಚ್ಆರ್ ಅಪ್ಲಿಕೇಶನ್ಸ್ ಸ್ಪೆಷಲಿಸ್ಟ್ ಮತ್ತು ಇನ್ನೂ ಹೆಚ್ಚಿನ ಜಾಬ್ ರೋಲ್ಗಳಲ್ಲಿ ಸೂಕ್ತವಾದ್ದನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಬಹುದು.
ಏನಿದು ಪೀಪಲ್ ಅನಲಿಟಿಕ್ಸ್?: ಕಂಪನಿ ತನ್ನ ಒಟ್ಟಾರೆ ಕಾರ್ಯಸಾಧನೆ ಮಾಡುವುದಕ್ಕೆ ಯಾವ ರೀತಿ ಮಾನವ ಸಂಪನ್ಮೂಲವನ್ನು ಆಕರ್ಷಿಸುತ್ತದೆ, ನೇಮಕ ಮಾಡುತ್ತದೆ, ಅವರನ್ನು ಹೇಗೆ ಬಳಸಿಕೊಳ್ಳುತ್ತದೆ, ಅವರಿಗೆ ಯಾವ ರೀತಿ ತರಬೇತಿ ನೀಡುತ್ತದೆ ಮತ್ತು ಉಳಿಸಿಕೊಳ್ಳುತ್ತದೆ ಎಂಬಿತ್ಯಾದಿಗಳ ಡೇಟಾವನ್ನು ಸಂಗ್ರಹಿಸುತ್ತದೆ. ಭವಿಷ್ಯದಲ್ಲಿ ವರ್ಕ್ ಫೋರ್ಸ್ಗೆ ಸಂಬಂಧಿಸಿದ ನಿರ್ಣಯವನ್ನು ಕಂಪನಿಯು ತೆಗೆದುಕೊಳ್ಳುವಾಗ ಈ ಡೇಟಾ ಅದಕ್ಕೆ ಬುನಾದಿ ಆಗಿರುತ್ತದೆ. ಎಚ್ಆರ್ ವೃತ್ತಿಪರರು ವಿಶ್ವಾಸಾರ್ಹ ಡೇಟಾ ಬಳಸಿಕೊಂಡು ಸಾಕ್ಷ್ಯಾಧಾರ ಸಹಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಈ ಡೇಟಾದಲ್ಲಿ ಮಾನವ ಸಂಪನ್ಮೂಲದ ಭೌಗೋಳಿಕ ಮತ್ತು ವ್ಯಕ್ತಿಗತ ಮಾಹಿತಿ, ಶೈಕ್ಷಣಿಕ, ಜಾಬ್ ರೋಲ್, ವೇತನ ಮತ್ತು ಸೇವಾ ಸಂಬಂಧಿತ ತರಬೇತಿ, ಸಾಧನೆ ಮುಂತಾದ ಮಾಹಿತಿಗಳಿರುತ್ತವೆ. ಎಚ್ಆರ್ ಅನಲಿಸ್ಟ್ ಪಾತ್ರದಲ್ಲಿ ಕೆಲಸ ಮಾಡುವವರಿಗೆ ಅನಲಿಟಿಕಲ್ ಮೈಂಡ್ ಸೆಟ್ ಇರಬೇಕಾದ್ದು ಅವಶ್ಯ. ಇಲ್ಲಿ ಅವರಿಗೆ ಬೃಹತ್ ಪ್ರಮಾಣದಲ್ಲಿ ಡೇಟಾ ಸಂಗ್ರಹಿಸುವ ಕೆಲಸ, ಅವುಗಳನ್ನು ವಿಶ್ಲೇಷಿಸಿ ಅರ್ಥಪೂರ್ಣವಾದ ಪರಿಹಾರವನ್ನು ಸಹಜವಾಗಿಯೇ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಪರಿಣತ ಪೀಪಲ್ ಅನಲಿಟಿಕ್ಸ್ ವೃತ್ತಿಪರರು ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಸಿಸ್ಟಮ್ ಅನಾಲಿಸಿಸ್ ಮಾಡಿ, ವರ್ಕ್ಫೋರ್ಸ್ನ ಒಟ್ಟಾರೆ ಸಾರವನ್ನು ತಿಳಿದುಕೊಂಡುಬಿಡುತ್ತಾರೆ. ವಿಸõತ ವರದಿಯನ್ನೂ ಕ್ಷಿಪ್ರವಾಗಿ ತಯಾರಿ ಮಾಡಿಕೊಡುತ್ತಾರೆ. ಇದಕ್ಕಾಗಿ ಸಿಸ್ಟಮ್ ಮ್ಯಾನೇಜ್ವೆುಂಟ್ನ ತಿಳಿವಳಿಕೆ ಕೂಡ ಇರಬೇಕಾಗುತ್ತದೆ.