ಶಾಲೆಯ ಹಾದಿ ಬಿಟ್ಟು ಸಪ್ತಪದಿ!; ಚಿಕ್ಕ ಹರೆಯದಲ್ಲಿ ದೊಡ್ಡ ಹೊರೆ ಏಕೆ?

Lalitha Lead
Published on
ಇತರ ಮಕ್ಕಳೊಂದಿಗೆ ಆಡುವ, ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಸಪ್ತಪದಿ ತುಳಿಸಿ ಮದುವೆ ಎಂಬ ಬಂಧನಕ್ಕೆ ಸಿಲುಕುವ ಹೆಣ್ಣುಮಕ್ಕಳ ಪಾಡು ನೋಡಿದವರಿಗೇ ಗೊತ್ತು. ತಮ್ಮ ಇನ್ನೆಲ್ಲ ಕನಸುಗಳನ್ನು ಬದಿಗೊತ್ತಿ ಸಂಸಾರದ ತಾಪತ್ರಯಗಳನ್ನು ನಿಭಾಯಿಸುವ, ವರ್ಷದೊಳಗೆ ಕೂಸೊಂದನ್ನು ಹೆತ್ತು ಕೊಡುವ ಸವಾಲುಗಳು ಹುಡುಗಿಯರ ಆತ್ಮಸ್ಥೈರ್ಯವನ್ನು ಕುಗ್ಗಿಸದೆ ಇರದು. ಬಾಲಕರಂತೆಯೇ ಕಲಿತು ಸಮಾಜದ ಮತ್ತು ಅರ್ಥವ್ಯವಸ್ಥೆಯ ಪ್ರಗತಿಗಾಗಿ ದುಡಿಯಬಲ್ಲ ಹೆಣ್ಣುಮಕ್ಕಳ ಜೀವನಕ್ಕೆ ಬಾಲ್ಯವಿವಾಹದ ಸರಪಳಿಗಳು ಘಾತಕವಾಗಿವೆ.

| ರಶ್ಮಿ ರಾ. ಹೆಬ್ಬೂರು

ಜಗತ್ತಿನ 650 ಮಿಲಿಯನ್​ಗೂ ಹೆಚ್ಚು (65 ಕೋಟಿ)ಹುಡುಗಿಯರು ಬಾಲ್ಯದಲ್ಲೇ ಮದುವೆ ಬಂಧನಕ್ಕೆ ಒಳಗಾಗಿದ್ದಾರೆ. ಈ ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಬಾಂಗ್ಲಾದೇಶ, ಬ್ರೆಜಿಲ್, ಇಥಿಯೋಪಿಯ, ಭಾರತ ಮತ್ತು ನೈಜೀರಿಯಾ ದೇಶಗಳಲ್ಲಿದ್ದಾರೆ ಎಂದು ಯೂನಿಸೆಫ್ ವರದಿ ಹೇಳುತ್ತದೆ. ಜೊತೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಘಇಆ) ಪ್ರಕಾರ, 2020ರಲ್ಲಿ ಭಾರತದಲ್ಲೇ ಅತಿಹೆಚ್ಚು ಬಾಲ್ಯವಿವಾಹಗಳನ್ನು ದಾಖಲಿಸಿರುವ ರಾಜ್ಯ ಕರ್ನಾಟಕ ಆಗಿರುವುದು ಚಿಂತೆಯ ವಿಷಯ. ಭಾರತದಲ್ಲಿ ಬಾಲ್ಯವಿವಾಹವನ್ನು ಅಪರಾಧವನ್ನಾಗಿ ಘೊಷಿಸಲಾಗಿದೆ ಹಾಗೂ ಅದನ್ನು ತಡೆಯಲು ಹಲವು ಕಾನೂನು ಜಾರಿಯಲ್ಲಿವೆ. ಆದರೂ, ಪಾಲಕರು ಕದ್ದುಮುಚ್ಚಿ ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡಿ ಗಂಡನ ಮನೆಗೆ ಸಾಗಹಾಕುವ ಹುನ್ನಾರದಲ್ಲಿರುತ್ತಾರೆ. 2020ರಲ್ಲಿ ಕರ್ನಾಟಕದಲ್ಲಿ 185 ಬಾಲ್ಯವಿವಾಹ ಪ್ರಕರಣ ವರದಿಯಾಗಿವೆ. ಇದು 2019ರಲ್ಲಿ ವರದಿಯಾದ 111 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 66ರಷ್ಟು ಹೆಚ್ಚಾಗಿದೆ.

ಬೆಳವಣಿಗೆಗೆ ಮಾರಕ: ಬಾಲ್ಯವಿವಾಹದಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಬಾಲ್ಯವಿವಾಹಕ್ಕೆ ಒಳಗಾಗುವ ಹೆಣ್ಣುಮಕ್ಕಳಲ್ಲಿ ದೇಹ ಸಿದ್ಧವಿಲ್ಲದಾಗಲೆ ಲೈಂಗಿಕ ಕ್ರಿಯೆ ಮಾಡುವುದರಿಂದ ಮತ್ತು ಗರ್ಭ ಧರಿಸುವುದರಿಂದ ಆರೋಗ್ಯ ಸಮಸ್ಯೆಗಳಾಗುತ್ತವೆ. ಎಳೇ ವಯಸ್ಸಿನಲ್ಲಿ ಹೆರಿಗೆ ಆಗುವಾಗ ಎಷ್ಟೋ ಹೆಣ್ಣುಮಕ್ಕಳ ಪ್ರಾಣ ಹೋಗುತ್ತದೆ. ಹುಟ್ಟುವ ಮಗುವಿನಲ್ಲೂ ನ್ಯೂನತೆ ಕಂಡುಬರುತ್ತದೆ. ಸಂಸಾರ ನಡೆಸಲು ಸಿದ್ಧರಾಗಿಲ್ಲದ ವಯಸ್ಸಲ್ಲಿ ಮದುವೆಯಾದ ಹೆಣ್ಣುಮಕ್ಕಳು ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದು, ಕುಟುಂಬ ನಿರ್ವಹಣೆಯಲ್ಲಿ, ಮಕ್ಕಳನ್ನು ಬೆಳೆಸುವಲ್ಲಿ ಅಸಮರ್ಥತೆ ತೋರುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ ವರನಿಗೆ ಹೆಚ್ಚು ವಯಸ್ಸಾಗಿರುವ ಕಾರಣಕ್ಕೆ ಕುಟುಂಬದಲ್ಲಿ ಹೊಂದಾಣಿಕೆಯೂ ಇರುವುದಿಲ್ಲ.

ಮದುವೆಯಾಗದಿದ್ರೆ ಹಣ: ವಿವಿಧ ರಾಜ್ಯಗಳು ಬಾಲ್ಯವಿವಾಹ ತಪ್ಪಿಸಲು ಅನೇಕ ಕ್ರಮ ತೆಗೆದುಕೊಂಡಿವೆ. ಹರಿಯಾಣ ಸರ್ಕಾರ 1994ರಲ್ಲಿ ಜಾರಿಗೆ ತಂದ ’ಅಪ್ನಿ ಬೇಟಿ, ಅಪ್ನಾ ಧನ್’ ಯೋಜನೆ ವಿಶಿಷ್ಟವಾಗಿದೆ. ’ನನ್ನ ಮಗಳು, ನನ್ನ ಸಂಪತ್ತು’ ಎಂಬ ಘೊಷವಾಕ್ಯದಡಿ ಸರ್ಕಾರ ಹೆಣ್ಣುಮಕ್ಕಳ ಹೆಸರಿಗೆ ಬಾಂಡ್ ನೀಡುತ್ತದೆ. ಮಗಳಿಗೆ 18ನೇ ವರ್ಷದ ಜನ್ಮದಿನದಂದು ವಿವಾಹವಾಗಿಲ್ಲದಿದ್ದಲ್ಲಿ, 25,000 ರೂಪಾಯಿಯನ್ನು ಸರ್ಕಾರ ಅವಳ ಹೆಸರಿಗೆ ವರ್ಗಾಯಿಸುತ್ತದೆ. ಇದು ಬಡಕುಟುಂಬಗಳು 18 ತುಂಬಿದ ನಂತರವೇ ಹೆಣ್ಣುಮಕ್ಕಳ ಮದುವೆಯನ್ನು ಮಾಡುವುದಕ್ಕೆ ಪ್ರೇರೇಪಿಸಿದಂತಾಗುತ್ತದೆ.

ತಡೆಯುವುದು ಹೇಗೆ?: ಹೆಣ್ಣು ಮಕ್ಕಳು ಯಾವಾಗಲು ಒಟ್ಟಾಗಿದ್ದರೆ ಒಳಿತು. ಬಾಲ್ಯವಿವಾಹ ತಡೆಯಲು ಹುಡುಗಿಯರ ಪರಸ್ಪರ ಒಡನಾಟ ಬಹುಪಾಲು ಸಹಾಯ ಮಾಡುತ್ತದೆ. ಏಕೆಂದರೆ, ಶಾಲೆಯಿಂದ ಹೊರಗುಳಿದ ಅಥವಾ ಕಡಿಮೆ ಓದಿದ ಹೆಣ್ಣುಮಕ್ಕಳು, ಸಮಾನವಯಸ್ಕರೊಂದಿಗೆ ಒಡನಾಟವಿಲ್ಲದ ಹುಡುಗಿಯರು ಬಾಲ್ಯವಿವಾಹಕ್ಕೆ ಈಡಾಗುವುದು ಹೆಚ್ಚು ಎಂದು ಅಂಕಿ-ಅಂಶ ಹೇಳುತ್ತದೆ. ಜಗತ್ತಿನ ಆಗುಹೋಗುಗಳ ಅರಿವು ಮತ್ತು ಸಾಮಾನ್ಯ ವ್ಯವಹಾರ ಜ್ಞಾನ ಹೆಚ್ಚಿರುವ ಸಮುದಾಯಗಳಲ್ಲಿ ಹುಡುಗಿಯರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಟಿವಿ, ರೇಡಿಯೋ ಮತ್ತು ಪತ್ರಿಕೆ ಓದುವುದು, ಸಮೂಹ ಮಾಧ್ಯಮಗಳ ಪ್ರಭಾವ, ಸಾರಿಗೆ ಸಂಪರ್ಕ ಮತ್ತು ಸಂವಹನ ಉತ್ತಮವಾಗಿರುವ ಸಮುದಾಯಗಳ ನಿರ್ವಣ, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣ ಅತಿ ಮುಖ್ಯ.

ಅಪಾಯ ಯಾರಿಗೆ?: ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುವ ಮೂಲಕ ಅವರ ಭವಿಷ್ಯ ಭದ್ರಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ದೇಶದ ಹಲವು ರಾಜ್ಯಗಳಲ್ಲಿ ವಧುವಿನ ವಯಸ್ಸು ಹೆಚ್ಚಾದಂತೆಲ್ಲಾ ವರದಕ್ಷಿಣೆ ಪ್ರಮಾಣವೂ ಹೆಚ್ಚು! ಬಾಲ್ಯವಿವಾಹಕ್ಕೆ ಬಹುಮುಖ್ಯ ಕಾರಣಗಳೆಂದರೆ ಕುಟುಂಬದಲ್ಲಿ ಬಡತನ, ಅಭದ್ರತೆಯ ಚಿಂತೆ ಮತ್ತು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಇಲ್ಲದ ಕಾಳಜಿ. ಹಲವು ಬಾರಿ ಹಿರಿಯರ ಆಸ್ತಿಯಲ್ಲಿ ಪಾಲು ನೀಡುವುದನ್ನು ತಪ್ಪಿಸಲು ಕೂಡ ಹುಡುಗಿಯರಿಗೆ ಬೇಗ ಮದುವೆ ಮಾಡುತ್ತಾರೆ. ಹದಿಹರೆಯದಲ್ಲಿ ಪ್ರೀತಿಪ್ರೇಮಕ್ಕೆ ಬಿದ್ದು ಲೈಂಗಿಕ ಸಂಬಂಧ ಹೊಂದಿ, ಕುಟುಂಬಕ್ಕೆ ಕೆಟ್ಟ ಹೆಸರು ತರಬಹುದು ಎಂಬ ಹೆದರಿಕೆಯಲ್ಲಿ ಹಲವರು ಬೇಗ ಮದುವೆ ಮಾಡಿಬಿಡುತ್ತಾರೆ. ಇತರ ಹೆಣ್ಣುಮಕ್ಕಳಿಗೆ ಮದುವೆಯಾಗುವುದನ್ನು ನೋಡಿ, ತಾವೂ ಜವಾಬ್ದಾರಿ ಕಳೆದುಕೊಂಡುಬಿಡೋಣ ಎಂದು ಪಾಲಕರು ಯೋಚಿಸುತ್ತಾರೆ. ಗಡಿಪ್ರದೇಶಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳು ಶಾಲಾ-ಕಾಲೇಜಿಗೆ ಹೋದಾಗ ಅನ್ಯಜಾತಿ ಅಥವಾ ಅನ್ಯಧರ್ಮದ ಹುಡುಗನನ್ನು ಪ್ರೀತಿಸುತ್ತಾರೆ ಅನ್ನುವ ಭಯದಲ್ಲಿ ಮದುವೆ ಮಾಡಿಬಿಡುತ್ತಾರೆ.

ಬಾಲ್ಯವಿವಾಹ ಕಂಡುಬಂದಲ್ಲಿ, ಹುಡುಗಿಯ ಪಾಲಕರು, ವರ ಮತ್ತು ವರನ ಪಾಲಕರ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಲಗ್ನಪತ್ರಿಕೆ ಪ್ರಕಟಿಸಿದವರು, ಮದುವೆ ಮಾಡಿಸಿದ ಪೂಜಾರಿ, ಕಲ್ಯಾಣ ಮಂಟಪದ ಮಾಲೀಕರೂ ಶಿಕ್ಷೆಗೆ ಅರ್ಹರು. ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕರೆ ಯಾರೇ ಆಗಲಿ ತಕ್ಷಣ 1098ಗೆ ಅಥವಾ 14499ಗೆ ಕರೆ ಮಾಡಿ ತಿಳಿಸಬೇಕು. ಅಧಿಕಾರಿಗಳು ಪೊಲೀಸ್ ಸಹಾಯದೊಂದಿಗೆ ಮದುವೆ ನಿಲ್ಲಿಸುತ್ತಾರೆ.

| ಎಂ.ಜಿ.ಪಾಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ, ಕೋಲಾರ

ಕರೊನಾ ಎಫೆಕ್ಟ್: ಕರೊನಾ ಮಹಾಮಾರಿ ತಂದ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಾಲ್ಯವಿವಾಹಗಳ ವಿರುದ್ಧ ಜಗತ್ತು ಸಾಧಿಸಿದ್ದ ಪ್ರಗತಿಯು ಒಂದು ದಶಕದಷ್ಟು ಮಟ್ಟಿಗೆ ಹಿನ್ನಡೆ ಕಂಡಿದೆ ಎಂದು ಅಂತಾರಾಷ್ಟ್ರೀಯ ಸಂಘಟನೆಗಳು ಹೇಳುತ್ತಿವೆ. ಹೆಣ್ಣುಮಕ್ಕಳ ಬಾಲ್ಯವಿವಾಹದಲ್ಲಿ ಭಾರೀ ಪಾಲು ಹೊಂದಿರುವ ಭಾರತದಲ್ಲಿ ಶಾಲೆ-ಕಾಲೇಜು ಮುಚ್ಚಿದ್ದರಿಂದ, ಕರೊನಾ ಸಮಯದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಾಂಕ್ರಾಮಿಕದ ನಿರ್ವಹಣೆಯಲ್ಲಿ ತೊಡಗಿದ್ದರಿಂದ ಎಷ್ಟೋ ಪಾಲಕರು ಮದುವೆ ತಯಾರಿ ನಡೆಸಿದರು. ಅನೇಕರು ಖರ್ಚು ಕಡಿಮೆಯಾಗುತ್ತದೆ ಎಂಬ ಕಾರಣದಿಂದಲೂ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಲು ಮುಂದಾದರು. ಕಳೆದ 10 ವರ್ಷಗಳಲ್ಲಿ, ಜಾಗತಿಕವಾಗಿ ಬಾಲ್ಯದಲ್ಲಿ ವಿವಾಹವಾದ ಯುವತಿಯರ ಪ್ರಮಾಣ ಶೇಕಡ 15ರಷ್ಟು ಕಡಿಮೆಯಾಗಿದೆ, ಸರಿಸುಮಾರು 25 ಮಿಲಿಯನ್​ಗೂ ಹೆಚ್ಚು (2.5 ಕೋಟಿ)ಎಳೆವಯಸ್ಸಿನ ಹೆಣ್ಣುಮಕ್ಕಳ ಮದುವೆ ತಡೆಯಲಾಗಿದೆ, ಆದರೆ ಈಗ ಮತ್ತೆ ಅಪಾಯ ಹೆಚ್ಚಿದೆ ಎಂದು ಯೂನಿಸೆಫ್ ಹೇಳುತ್ತದೆ. ಬಹುತೇಕ ದೇಶಗಳಲ್ಲಿ ಬಾಲ್ಯವಿವಾಹ ಹೆಚ್ಚುವುದು ಶಾಲೆಗಳಿಗೆ ರಜೆ ಇರುವ ದಿನಗಳಲ್ಲಿ. ಹೀಗಾಗಿ ಕರೊನಾದಿಂದಾಗಿ ಮುಚ್ಚಿದ ಶಾಲೆಗಳನ್ನು ಆದಷ್ಟು ಬೇಗ ಮತ್ತೆ ತೆರೆಯಬೇಕು ಎಂದು ಯೂನಿಸೆಫ್ ಸರ್ಕಾರಗಳನ್ನು ಆಗ್ರಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net