

ರಾಮ-ರಾವಣರ ನಡುವೆ ಜರುಗಿದ ಮಹಾಯುದ್ಧಕ್ಕೆ ಸಮಾನವಾದುದು ವಿಶ್ವದಲ್ಲಿ ಇನ್ನೊಂದು ಇಲ್ಲವೆಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಮಹಾರಥದ ಮೇಲೆ ನಿಂತು ಯುದ್ಧ ಮಾಡುತ್ತಿದ್ದ ದಶಕಂಠನಾದ ರಾವಣನು ಇಂದ್ರನಿಂದ ಕಳುಹಿಸಲ್ಪಟ್ಟ ದಿವ್ಯವಾದ ರಥದ ಮೇಲೆ ನಿಂತು ಬಾಣವನ್ನು ಪ್ರಯೋಗಿಸುತ್ತಿದ್ದ ರಾಮನನ್ನು ಪ್ರಶ್ನಿಸುತ್ತಾನೆ. ‘ಅಂದೊಮ್ಮೆ ಮುನಿಗಳು ನೀಡಲು ಬಂದ ಕೆಲವು ಸುವಸ್ತುಗಳನ್ನು ನಿರಾಕರಿಸಿ ಪರರ ಋಣದಲ್ಲಿ ಇರಲು ಬಯಸುವುದಿಲ್ಲ ಎಂದಿದ್ದ ನೀನು, ಇಂದು ದೇವೇಂದ್ರನು ಸಾರಥಿಯೊಂದಿಗೆ ಕಳುಹಿಸಿದ ದಿವ್ಯವಾದ ರಥವನ್ನು ಸ್ವೀಕರಿಸಿದ್ದೆಯಲ್ಲಾ? ಇದೆಂತಹ ನ್ಯಾಯ?’ ಎಂದು ರಾವಣ ಕೇಳಿದಾಗ ಶ್ರೀರಾಮನು, ‘ನಿಜ ರಾವಣೇಶ್ವರ, ಇಕ್ಷಾಕು ವಂಶದವರಾದ ನಾವು ಪರರ ಹಂಗಿನಲ್ಲಿ, ಋಣದಲ್ಲಿ ಬದುಕಲು ಬಯಸುವುದಿಲ್ಲ. ಉಚಿತವಾಗಿ ಏನನ್ನೂ ಪಡೆಯುವುದಿಲ್ಲ. ಆದರೆ, ಹಿಂದೆ ದಶರಥ ಚಕ್ರವರ್ತಿಯು ದೇವತೆಗಳ ಕೋರಿಕೆಯಂತೆ ಶತ್ರುಗಳನ್ನು ನಾಶ ಮಾಡಿ ದೇವತೆಗಳಿಗೆ ಜಯವನ್ನು ಸಂಪಾದಿಸಿ ಕೊಟ್ಟಿದ್ದರು. ಅದಕ್ಕೆ ದಿವ್ಯವಾದ ಕಾಣಿಕೆಯನ್ನು ತಂದೆಗೆ ಕೊಡಲು ಬಂದಾಗ, ಮುಂದೊಂದು ದಿನ ಉಪಯೋಗಿಸಿಕೊಳ್ಳುತ್ತೇವೆ ಎಂದಿದ್ದನ್ನು ತಂದೆಯವರು ನನಗೆ ತಿಳಿಸಿದ್ದರಿಂದ ದೇವೇಂದ್ರನ ಆಗ್ರಹಕ್ಕೆ ಕಟುಬಿದ್ದು ರಥವನ್ನು ಸ್ವೀಕರಿಸಿದ್ದೇನೆ’ ಎಂದು ಉತ್ತರಿಸಿದ. ಶತ್ರುವಾದರೂ ರಾಮನನ್ನು ಆಗ ಶ್ಲಾಘಿಸಿದ ದಶಕಂಠ.
‘ಋಣಂಕೃತ್ವಾ ಘೃತಂಪಿಬೇತ್’ ಎಂಬ ಚಾರ್ವಾಕನ ಸಿದ್ಧಾಂತವನ್ನೇ ಪಾಲಿಸುತ್ತಿರುವ ಬಹುತೇಕರಿಗೆ ಇಂದು ಋಣದ ಅರ್ಥ ತಿಳಿದಂತಿಲ್ಲ. ಯಾರಿಂದ ಎಷ್ಟು ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಕೆಲವರಿಗೆ ಪಡೆಯುವುದು ಮಾತ್ರ ಗೊತ್ತೇ ವಿನಃ ಕೊಡುವುದು ಗೊತ್ತೇ ಇಲ್ಲ. ಅನೇಕರು ಪಡೆದುಕೊಳ್ಳುವ ಸಾಲವೂ ಇದೇ ರೀತಿಯಾಗಿರುತ್ತದೆ. ಅದನ್ನು ಹಿಂದಿರು
ಗಿಸುವ ಯೋಚನೆ ಯನ್ನೇ ಬಿಟ್ಟುಬಿಡು ತ್ತಾರೆ. ಸಾಲವನ್ನು ಕೊಟ್ಟವನು ಕೇಳಿಕೇಳಿ ಕೊನೆಗೆ ಹಾಳಾಗಲೆಂದು ಬೇಸರದಿಂದ ಸುಮ್ಮನೇ ಇರುವ ದುಃಸ್ಥಿತಿಗೆ ತಲುಪುತ್ತಾನೆ. ಅದಕ್ಕೆ ನಮ್ಮ ಜನಪದೀಯರು, ‘ಕೊಟ್ಟವನು ಕೋಡಂಗಿ, ಇಸ್ಕೊಂಡವನು ಈರಭದ್ರ’ ಎಂದು ಹೇಳಿದ್ದಾರೆ. ಅನೇಕ ಕಚೇರಿಗಳಲ್ಲಿ ಲಂಗುಲಗಾಮು ಇಲ್ಲದೇ ಹಣ ಕೇಳುವ, ಕೀಳುವ ದುರಭ್ಯಾಸ ಅವ್ಯಾಹತವಾಗಿ ಈಗ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿ ಲಂಚವನ್ನು ಪಡೆಯುವಾಗ ಸಿಕ್ಕುಬಿದ್ದರೂ ಕೆಲವರು ಕಾನೂನಿನ ಕುಣಿಕೆಗಳಿಂದಲೂ ತಪ್ಪಿಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಒಬ್ಬ ವ್ಯಾಪಾರಿ ಹೆಚ್ಚು ಹೆಚ್ಚು ಲಾಭ ಮಾಡಲು ಹಾತೊರೆಯುತ್ತಾನೆ. ಆದರೆ, ನ್ಯಾಯಮಾರ್ಗದಲ್ಲಿ ಸಂಪಾದನೆ ಮಾಡದವರು ಅಂತ್ಯದಲ್ಲಿ ಅದರ ದುಷ್ಪಲವನ್ನು ಉಣ್ಣುತ್ತಾರೆ ಎಂಬುದು ಖಚಿತವಾಗಿದೆ. ಪ್ರತಿನಿತ್ಯ ನಾವು ದೇವಋಣ, ಪಿತೃಋಣ, ಸಮಾಜದ ಋಣ... ಹೀಗೆ ಒಂದಲ್ಲಾ ಒಂದು ಹಂಗಿನಲ್ಲಿ ಬದುಕುತ್ತಿದ್ದೇವೆ. ಈ ಋಣಗಳನ್ನು ತೀರಿಸಲು ಶಕ್ತಿಮೀರಿ ಪ್ರಯತ್ನಿಸಿ ಋಣಮುಕ್ತರಾಗಬೇಕು. ಆಗಲೇ ನಮ್ಮ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)