ಅರಿತು ಮಾತನಾಡೋಣ: ಮನೋಲ್ಲಾಸ

Ladies silence
Published on
| ಭಾರತಿ ಎ. ಕೊಪ್ಪ

ವ್ಯಕ್ತಿಯೊಬ್ಬರು ದೂರದ ಊರಿನಿಂದ ವರ್ಗಾವಣೆಯಾಗಿ ಬಂದರು. ಪ್ರತಿನಿತ್ಯ ಕಾರಿನಲ್ಲಿ ತಮ್ಮ ಕಚೇರಿಗೆ ತೆರಳುತ್ತಿದ್ದರು. ಅವರ ಉಡುಗೆ - ತೊಡುಗೆ ಎಲ್ಲವೂ ಬಹಳಷ್ಟು ಶಿಸ್ತಿನಿಂದ ಕೂಡಿದ್ದವು. ಆದರೆ, ಕಚೇರಿ ಮತ್ತು ಮನೆ ಇವೆರಡೇ ಅವರ ಪ್ರಪಂಚ ಎಂಬಂತೆ ಅವರ ಜೀವನ ಸಾಗುತ್ತಿತ್ತು. ಓರಗೆಯವರ ಜತೆಗೆ ಕಿರುನಗೆಯಷ್ಟೇ. ಅತಿಯಾದ ಬಾಂಧವ್ಯವಿರಲಿಲ್ಲ. ಇದರಿಂದಾಗಿ ವಠಾರದಲ್ಲೆಲ್ಲ ಅವರ ಬಗ್ಗೆ ದುರಹಂಕಾರಿ ಎಂಬೆಲ್ಲ ಮಾತುಗಳು ಹರಿದಾಡುತ್ತಿದ್ದವು. ಕಾರಿನಿಂದ ಕೆಳಗಿಳಿದು ಓಡದಷ್ಟು ದೊಡ್ಡ ಮನುಷ್ಯ ಎಂದು ಕೊಂಕು ನುಡಿಗಳನ್ನಾಡುತ್ತಿದ್ದರು. ಅವರ ಮನೆಯಲ್ಲಿ ವೃದ್ಧ ತಂದೆ-ತಾಯಿಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೂಡ ವೃದ್ಧರೇ ತರುತ್ತಿದ್ದರು.

ಅದೊಂದು ದಿನ ಸಂಜೆಯ ವಾಯುವಿಹಾರದಲ್ಲಿ ವೃದ್ಧ ದಂಪತಿಗೆ ಸಿಕ್ಕಿದ ಒಂದೆರಡು ಜನ ತಮ್ಮ ಕುತೂಹಲಭರಿತ ಪ್ರಶ್ನೆಗಳನ್ನು ಆ ವ್ಯಕ್ತಿಯ ಬಗೆಗೆ ಕೇಳಿಯೇ ಬಿಟ್ಟರು. ಆಗ ದಂಪತಿಯು ತಮ್ಮ ಮಗನು ಬಾಲ್ಯದಲ್ಲಿ ಅಪಘಾತದಿಂದ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರೂ, ಕೃತಕ ಕಾಲುಗಳಿಗೆ ಒಗ್ಗಿಕೊಂಡು ಎದೆಗುಂದದೆ ಓದಿ ಒಳ್ಳೆಯ ನೌಕರಿ ಪಡೆದು, ಕಾರು ಚಾಲನೆ ಕೂಡ ಕಲಿತು ಬದುಕು ಕಟ್ಟಿಕೊಂಡ ಕಥೆ ತೆರೆದಿಟ್ಟರು. ಈ ವಿಚಾರ ಅನೇಕರಿಗೆ ತಿಳಿಯುತ್ತಿದ್ದಂತೆಯೇ ಮೊದಲು ಅವರ ಬಗ್ಗೆ ನಕಾರಾತ್ಮಕ ಮಾತುಗಳನ್ನಾಡಿದ ಜನರಿಗೆ ತಮ್ಮ ಬಗ್ಗೆ ತಾವೇ ಪಶ್ಚಾತ್ತಾಪ ಪಡುವಂತಾಯಿತು.

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತು ನಮ್ಮ ಹಲವು ಕಲ್ಪಿತ ನಕಾರಾತ್ಮಕ ಯೋಚನೆಗಳಿಗೆ ಲಗಾಮು ಹಿಡಿಯಲು ಸೂಕ್ತವಾಗಿದೆ. ತಮ್ಮ ಸುತ್ತಲಿನ ವ್ಯಕ್ತಿಗಳ ಪ್ರತಿಯೊಂದು ಚಲನವಲನಗಳಿಗೂ ಏನಾದರೊಂದು ಸನ್ನಿವೇಶವನ್ನು ಕಲ್ಪಿಸಿ ಗಾಳಿಸುದ್ದಿ ಹರಡಲು ಜನರು ಕಾತುರರಾಗಿರುತ್ತಾರೆ. ತಮ್ಮೊಡಲಲ್ಲಿ ದುಃಖದ ಮಡುವನ್ನೇ ಇಟ್ಟುಕೊಂಡಿದ್ದರೂ ಚಂದದ ಉಡುಗೆ ತೊಡುಗೆ ತೊಟ್ಟು, ಮುಖ ಭಾವದಲ್ಲಿ ಸಂತಸದ ನಗು ಬೀರುತ್ತಾ ಬದುಕುವವರೂ ನಮ್ಮ ನಡುವೆ ಇರುತ್ತಾರೆ. ಅಂತಹವರಿಗೂ ಮೇಲ್ನೋಟದ ಅಲಂಕಾರಕ್ಕೆ ಕುಹಕದ ಮಾತು ತಪ್ಪಿದ್ದಲ್ಲ. ಆದರೆ, ಬಾಹ್ಯ ನೋಟದಿಂದ ಒಬ್ಬ ವ್ಯಕ್ತಿಯ ಅಂತಸ್ತು, ಮನಸ್ಸಿನ ನೋವು ಯಾವುದನ್ನೂ ಅಳೆಯಲಾಗದು ಎಂಬುದನ್ನು ಅರಿತಾಗಲೇ ನಾವು ಹೆಚ್ಚು ಸಕಾರಾತ್ಮಕ ಚಿಂತನೆಯತ್ತ ಹೊರಳಲು ಸಾಧ್ಯ. ಪರರ ಬಗ್ಗೆ ಕಲ್ಪಿಸಿ ಹರಡಿದ ಗಾಳಿಸುದ್ದಿಗಳು ಅವರ ಜೀವನದಲ್ಲಿ ಇನ್ನಷ್ಟು ಹತಾಶೆಯ ದಿನಗಳನ್ನು ತಂದೊಡ್ಡಬಹುದು. ನೋವಿನಲ್ಲಿರುವವರ ವೇದನೆಗೆ ಕಿವಿಯಾಗುವ ಉದಾತ್ತ ಮನಸ್ಸು ಬೆಳೆಸಿಕೊಳ್ಳಬೇಕು. ಅಂತಹ ಉದಾತ್ತ ಮನೋಭಾವ ನಮ್ಮಲ್ಲಿ ಮೂಡದಿದ್ದರೂ ಗಾಯದ ಮೇಲೆ ಬರೆ ಎಳೆಯುವಂತಹ ಪ್ರವೃತ್ತಿ ನಮ್ಮದಾಗಬಾರದು. ನಾವು ನೋಡುವ ಮತ್ತು ಅರಿತುಕೊಳ್ಳುವ ವಿಷಯಕ್ಕೆ ಬೇರೆ ಬೇರೆ ಆಯಾಮಗಳೂ ಇರಬಹುದೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾವುದೇ ವಿಷಯವನ್ನು ಸಮಗ್ರವಾಗಿ ಅರಿಯದೆ ವಿಶ್ಲೇಷಣೆ ಮಾಡಿದರೆ ಅದು ಅನರ್ಥಗಳಿಗೆ ಕಾರಣವಾಗುತ್ತದೆ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net