ಮಾನದ ಮಹತ್ವ: ಮನೋಲ್ಲಾಸ

Manollasa
Published on
| ಕೆ. ಸುಮಂಗಲಾ ಅಡೂರು

ಒಬ್ಬ ವ್ಯಕ್ತಿ ಬಿಡುವಿನ ಸಮಯದಲ್ಲಿ ತನ್ನ ಪತ್ನಿಯೊಂದಿಗೆ ಮಾವನ ಮನೆಗೆ ಬಂದ. ಅಲ್ಲಿ ಪತ್ನಿಯ ತಾಯಿ ತಂದೆ ಹಾಗೂ ಆಕೆಯ ಒಡಹುಟ್ಟಿದವರು ತುಂಬಾ ಸಂತೋಷದಿಂದ ಇವರನ್ನು ಬರಮಾಡಿಕೊಂಡರು. ಬೇರೆ ಬೇರೆ ರೀತಿಯ ತಿಂಡಿ ತಿನಿಸುಗಳನ್ನು ಮಾಡಿ ಇವರನ್ನು ಉಪಚರಿಸಿದರು. ಎರಡು ದಿನ ಕಳೆದ ಮೇಲೆ ತಮ್ಮ ಮನೆಗೆ ಹಿಂದಿರುಗುವುದೆಂದು ಹೊರಡುವಾಗ ಆ ದಂಪತಿ ನಿಶ್ಚಯಿಸಿಕೊಂಡಿದ್ದರು. ಆದರೆ ಅಲ್ಲಿನ ಆದರೋಪಚಾರಗಳಿಗೆ ಮನಸೋತ ಅಳಿಯನಿಗೆ ಅಷ್ಟು ಬೇಗ ಹೊರಡಲು ಮನಸ್ಸಾಗಲಿಲ್ಲ.

ಹೀಗೆಯೇ ಹಲವು ದಿನಗಳು ಕಳೆದು ವಾರಗಳಾದರೂ ಆಳಿಯ ಹೊರಡುವ ಮನಸ್ಸು ಮಾಡಲಿಲ್ಲ. ಇದನ್ನು ಗಮನಿಸಿದ ಪತ್ನಿಯ ಅಣ್ಣನಿಗೆ ಸ್ವಲ್ಪ ಕಿರಿಕಿರಿ ಎನಿಸಿತು. ತನ್ನ ತಂಗಿ ಎಂದರೆ ಅವನಿಗೂ ತುಂಬಾ ಪ್ರೀತಿಯೇ.. ಆದರೆ ಭಾವನ ಈ ರೀತಿಯ ವರ್ತನೆಯಿಂದ ನೆರೆಹೊರೆಯವರು ಏನೆಂದು ಕೊಂಡಾರು? ತಂಗಿಯ ಮನಸ್ಸಿಗೂ ಖಂಡಿತ ನೋವಾಗಬಹುದು ಎಂದು ಯೋಚಿಸಿ ಆತ ಒಂದು ಉಪಾಯ ಮಾಡಿದ. ತನ್ನ ಭಾವ ಸಂಸ್ಕೃತ ವಿದ್ವಾಂಸನೆಂದು ಅವನಿಗೆ ಗೊತ್ತಿತ್ತಲ್ಲ, ಅದಕ್ಕಾಗಿ ಭಾವನ ಕೋಣೆಯ ಹೊರಗೆ ಅವನಿಗೆ ಎದ್ದ ತಕ್ಷಣ ಕಾಣುವಂತೆ ಒಂದು ವಾಕ್ಯ ಬರೆದ. ಅದೇನೆಂದರೆ ‘ಶ್ವಶುರಗೃಹೇ ತ್ರಿದಿನಂ’ ಎಂದು. ಇದರ ಅರ್ಥ- ಮಾವನ ಮನೆಯಲ್ಲಿ ಮೂರು ದಿನಗಳಿಗಿಂತ ಹೆಚ್ಚು ನಿಲ್ಲುವುದು ಸೂಕ್ತವಲ್ಲ ಎಂದು. ಅಳಿಯನೂ ಬುದ್ಧಿವಂತನೇ. ಈ ಬರಹ ತನ್ನ ಭಾವಮೈದುನನದ್ದೇ ಎಂದು ಆತ ಗ್ರಹಿಸಿದ. ಆತ ಚಾಕಚಕ್ಯತೆಯಿಂದ ‘ತ್ರಿದಿನಂ’ ಎಂಬುದನ್ನು ಅಳಿಸಿ ‘ತ್ರಿಮಾಸಂ’ (ಮೂರು ತಿಂಗಳು) ಎಂದು ಬರೆದು ತನ್ನ ಪಾಡಿಗೆ ತಾನಿದ್ದ. ಭಾವಮೈದ ಆ ಕಡೆ ಬಂದವನು ಇದನ್ನು ಕಂಡ. ಅವನೂ ಕಡಿಮೆಯಲ್ಲ. ಆ ಸಾಲಿನ ಕೆಳಗೆ ‘ಶುನಕ ಸಮಾನಂ’ ಎಂದು ಸೇರಿಸಿದ. ಬಂಧುಗಳ ಮನೆಯಲ್ಲಿ ಲೆಕ್ಕಕ್ಕಿಂತ ಹೆಚ್ಚು ದಿನ ನಿಂತರೆ ಯಾರಿಗೂ ಬೆಲೆ ಇರುವುದಿಲ್ಲ. ಶುನಕ ಎಂದರೆ ಸಂಸ್ಕೃತದಲ್ಲಿ ನಾಯಿ ಎಂದರ್ಥ. ನಾಯಿಗೆ ಮಾನಮರ್ಯಾದೆ ಎಲ್ಲಿಯದು? ಅದಕ್ಕೆ ಒಂದು ದಿನ ಯಾರಾದರೂ ಅನ್ನ ಹಾಕಿದರೆ ಅಲ್ಲಿಯೇ ಇರುತ್ತದೆ. ಈ ಸತ್ಯವನ್ನು ಮನಗಂಡ ಅಳಿಯ ಮರುದಿನವೇ ಮಡದಿಯೊಡನೆ ಅಲ್ಲಿಂದ ಕಾಲು ಕಿತ್ತ.

ಯಾವುದೇ ಕಾರಣಕ್ಕೂ ನಮ್ಮ ಆತ್ಮಗೌರವಕ್ಕೆ ಚ್ಯುತಿ ಬಾರದಂತೆ ಲೋಕದಲ್ಲಿ ವ್ಯವಹರಿಸಬೇಕು. ಇಲ್ಲವಾದರೆ ಇತರರಿಂದ ವ್ಯಂಗ್ಯಮಾತು, ಚುಚ್ಚುಮಾತು ಕೇಳಬೇಕಾಗಿ ಬರುತ್ತದೆ. ಅದರಿಂದ ವ್ಯಕ್ತಿತ್ವಕ್ಕೆ ಕುಂದು. ಆದ್ದರಿಂದ ಗೌರವದಿಂದ ಬಾಳಿ ಇತರರಿಗೆ ಮಾದರಿಯಾಗುವ ಹಾಗಿರಬೇಕು. ಮಾನವಂತರಾಗಿ ನಿಜವಾದ ಅರ್ಥದಲ್ಲಿ ಮಾನವರಾಗಿ ಜೀವಿಸುವುದರಲ್ಲಿಯೇ ಸಾರ್ಥಕತೆ ಇದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net