

ಡಾ. ಕೆ.ಪಿ. ಪುತ್ತೂರಾಯ
ಒಂದೊಮ್ಮೆ ಒಬ್ಬ ವರದಿಗಾರ, ಮಹಿಳೆಯೊಬ್ಬಳ ಸಂದರ್ಶನ ನಡೆಸುವ ವೇಳೆ ಪ್ರಶ್ನೆಯೊಂದನ್ನು ಕೇಳುತ್ತಾನೆ, ‘ಅಮ್ಮಾ ನಿಮ್ಮ ಜಾತಿ ಯಾವುದು?’ ಪ್ರತಿಯಾಗಿ ಆಕೆ ಮರು ಪ್ರಶ್ನೆಯೊಂದನ್ನು ಅವನಿಗೇ ಕೇಳುತ್ತಾಳೆ. ‘ಒಬ್ಬ ತಾಯಿಯಾಗಿಯೋ ಅಲ್ಲಾ ಓರ್ವ ಸ್ತ್ರೀ ಆಗಿಯೋ?’ ಎರಡೂ ಬಗೆಯಾಗಿ ಹೇಳಿ ಎಂದು ವರದಿಗಾರ ಕೇಳಿಕೊಳ್ಳಲು ಆಕೆ ಹೇಳಲಾರಂಭಿಸುತ್ತಾಳೆ. ‘ಒಬ್ಬಾಕೆ ಸ್ತ್ರೀ ಯಾವುದೇ ಒಂದು ಜಾತಿಗೆ ಸೇರುತ್ತಾಳೆ. ಆದರೆ, ಆಕೆ ಓರ್ವ ತಾಯಿಯಾದಾಗ, ಅವಳು ಯಾವ ಒಂದು ನಿರ್ದಿಷ್ಟ ಜಾತಿಗೂ ಸೇರಿದವಳಾಗಿರೋದಿಲ್ಲ. ಕಾರಣ, ಕಾಲ ಕಳೆದಂತೆ ಆಕೆಯ ಜಾತಿ ಬದಲಾಗುತ್ತಾ ಹೋಗುತ್ತದೆ’. ‘ಅದು ಹೇಗೇ?’ ಎಂದು ಆಶ್ಚರ್ಯಚಕಿತನಾದ ವರದಿಗಾರನು ಕೇಳಲು, ಆಕೆ ಮಾರ್ವಿುಕವಾಗಿ ಹೇಳುತ್ತಾಳೆ.
‘ತಾಯಿ ತನ್ನ ಶಿಶುವಿನ ಮಲಮೂತ್ರಗಳನ್ನು ಸ್ವತಃ ತೆಗೆದು ಮಗುವನ್ನು ಶುದ್ಧಗೊಳಿಸುವಾಗ ಅವಳು ಪುಣ್ಯದ ಕೆಲಸವನ್ನು ಮಾಡುವ ಶೂದ್ರ ಜಾತಿಗೆ ಸೇರಿದವಳಾಗಿರುತ್ತಾಳೆ. ಮುಂದೆ ಮಗು ಬೆಳೆಯುತ್ತಿದ್ದಂತೆ, ಅದನ್ನು ಅಪಾಯಗಳಿಂದ ರಕ್ಷಿಸಲು ಆಕೆ ಕ್ಷತ್ರಿಯಳಾಗುತ್ತಾಳೆ. ಮಗು ಬೆಳೆದು ಪ್ರಬುದ್ಧವಾಗುತ್ತಿದ್ದಂತೆ, ಆ ಮಗುವಿಗೆ ಸಂಸ್ಕಾರ ಸಂಸ್ಕೃತಿಯನ್ನು ತುಂಬಲು, ಮೌಲ್ಯಗಳನ್ನು ತಿಳಿಸಲು, ಉತ್ತಮ ನಡೆನುಡಿಗಳನ್ನು ಬೋಧಿಸಲು ಆಕೆ ಬ್ರಾಹ್ಮಣ ರೂಪವನ್ನು ತಳೆಯುತ್ತಾಳೆ. ಕೊನೆಯದಾಗಿ ಮಗ ಬೆಳೆದು ಯೌವ್ವನಾವಸ್ಥೆಯನ್ನು ಹೊಂದಿ, ದುಡಿಯಲಾರಂಭಿಸಿದಾಗ ದುಡ್ಡಿನ ಸಂಪಾದನೆ, ಅದರ ಬೆಲೆ, ಖರ್ಚು ವೆಚ್ಚಗಳನ್ನು ನಿಭಾಯಿಸುವ ಬಗೆಯನ್ನು ತಿಳಿ ಹೇಳುವಲ್ಲಿ ಆಕೆ ವೈಶ್ಯ ಜಾತಿಯ ಧರ್ಮವನ್ನು ತನ್ನದಾಗಿಸಿಕೊಳ್ಳುತ್ತಾಳೆ. ಈಗ ಹೇಳಿ, ಒಬ್ಬ ತಾಯಿ ಯಾವ ಜಾತಿಗೆ ಸೇರಿದವಳೆಂದು ಹೇಳೋದು ಹೇಗೆ ಸಾಧ್ಯ?’
ಹೌದು ಈ ಜಗತ್ತಿನಲ್ಲಿ ಎಲ್ಲಾ ತಾಯಂದಿರ ಜಾತಿ ಒಂದೇ. ಆಯಾಯ ಕಾಲದಲ್ಲಿ ಅವರು ನಿರ್ವಹಿಸುವ ಕರ್ತವ್ಯಕ್ಕನುಸಾರವಾಗಿ, ಅವರು ಎಲ್ಲಾ ಜಾತಿಯವರ ಗುಣ ಸ್ವಭಾವಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಅಮ್ಮನೆಂದರೆ ತ್ಯಾಗದ ಸಾಕಾರ ಮೂರ್ತಿ; ಕರುಣೆಯ ಕಡಲು, ಪ್ರಶ್ನಾತೀತವಾದ ವಾತ್ಸಲ್ಯದ ಮಡಿಲು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸದಾ ಮಕ್ಕಳ ಹಿತವನ್ನೇ ಬಯಸುವ ಕರುಣಾ ಸಾಗರ. ದೇವರನ್ನು ಪ್ರತ್ಯಕ್ಷವಾಗಿ ಕಾಣಲಾಗದ ನಾವು ಅವನನ್ನು ಅಮ್ಮನ ರೂಪದಲ್ಲಿ ಕಾಣುತ್ತೇವೆ. ಅದಕ್ಕೇ ಮಾತೃದೇವೋಭವ.
ಹಾಗೆ ನೋಡಿದರೆ ಕವಿ ದಿನಕರ ದೇಸಾಯಿಯವರು ಬರೆದಂತೆ ದೇವರಿಗಿಂತ ತಾಯಿಯೇ ಮಿಗಿಲು. ಏಕೆಂದರೆ ದೇವರ ಮೊಲೆಯಲ್ಲಿ ಸಿಗಬಹುದೇ ಅಮ್ಮನ ಎದೆಯ ಹಾಲು? ಅದಕ್ಕೇ ಹೇಳಿದ್ದು ಉಪಾಧ್ಯಾಯಾನ್ ದಶಾಚಾರ್ಯ; ಆಚಾರ್ಯುಣಾಂ ಶತಂ ಪಿತಾ, ಸಹಸ್ರಂತು ಪಿತೃನ್ ಮಾತಾ. ಅಂದರೆ ಉಪಾಧ್ಯಾಯರಿಗಿಂತ ಆಚಾರ್ಯರು ಹತ್ತು ಪಟ್ಟು ಶ್ರೇಷ್ಠರು; ಆಚಾರ್ಯರಿಗಿಂತಲೂ ತಂದೆಯಾದವನು ನೂರು ಪಟ್ಟು ಶ್ರೇಷ್ಠನು. ಆದರೆ, ತಂದೆಗಿಂತಲೂ ತಾಯಿಯಾದವಳು ಸಾವಿರ ಪಟ್ಟು ಶ್ರೇಷ್ಠಳು. ತಾಯಿ ಕುರಿತು ಆದಿ ಶಂಕರಾಚಾರ್ಯರು ಹೀಗೆ ಹೇಳಿದ್ದಾರೆ. ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತೀ. ಅಂದರೆ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು; ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವೇ ಇಲ್ಲ! ಎಷ್ಟೊಂದು ಸತ್ಯ!
(ಲೇಖಕರು ಹವ್ಯಾಸಿ ಬರಹಗಾರರು)