ಮನೋಲ್ಲಾಸ ಅಂಕಣ; ಅಪ್ಪ ಹೊಡೆದದ್ದೇಕೆ?!

7989
Published on

ಡ್ಯಾನಿ ಪಿರೇರಾ, ಹಳ್ಳಿಮೈಸೂರು

ಅದು ಭಾರತೀಯ ಸನಾತನ ಕೌಟುಂಬಿಕ ವ್ಯವಸ್ಥೆ ಸದೃಢವಾಗಿದ್ದ ಕಾಲಘಟ್ಟ. ಒಬ್ಬರನೊಬ್ಬರು ಅರಿತು ಬಾಳುವ ಮತ್ತು ಅರಿಯಲು ಶಿಕ್ಷಣ ಸಿಗುತ್ತಿದ್ದ ಸಾಮಾಜಿಕ ವ್ಯವಸ್ಥೆ ಹೊಂದಿದ್ದ ಕಾಲ. ಸಂಬಂಧಗಳನ್ನು ಗಟ್ಟಿಗೊಳಿಸಿ ಕೂಡಿ ಬೆಳೆಯುವ ಅವರ್ಣನೀಯ ಬೆಸುಗೆಯನ್ನು ದೃಢಗೊಳಿಸುತ್ತಿದ್ದದ್ದು ಕುಟುಂಬದಲ್ಲಿಯೇ. ಪ್ರಸ್ತುತ ಕತೆ ಕಾದಂಬರಿಗಳಲ್ಲಿ ಓದಬೇಕಾದ, ಓದಿದಾಗ ಅದೊಂದು ಕಲ್ಪಿತ ಕಥನ ಎಂದು ಭಾವಿಸಬೇಕಾದ ಈ ಕಾಲಘಟ್ಟದಲ್ಲಿ ಹಿರಿಯರೊಬ್ಬರು ಹೇಳಿದ ಈ ಘಟನೆ ಪ್ರೀತಿ, ತಾಳ್ಮೆ, ಸಂವೇದನೆಗೆ ಹಿಡಿದ ಕನ್ನಡಿ.

ಅದೊಂದು ಅವಿಭಕ್ತ ಕುಟುಂಬ. ಯಜಮಾನನಿಗೆ 94 ವರ್ಷ. 3-4 ತಲೆಮಾರಿನ ಕುಟುಂಬವದು. ಅಂದು ಯಾವುದೋ ಕೌಟುಂಬಿಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹೆಂಗಸರು ಮಕ್ಕಳು ಮರಿ ಮಕ್ಕಳ ಮುಂದೆಯೇ ಆ ಹಿರಿಯರು ತನ್ನ 64 ವರ್ಷದ ಮಗನ ಕೆನ್ನೆಗೆ ಒಂದೇಟು ಬಾರಿಸಿಯೇ ಬಿಟ್ಟರು. ಇಡೀ ಮನೆಯ ವಾತಾವರಣ ಸ್ತಬ್ಧ! ಮನೆಯ ಕಂಬ, ಕಿಟಕಿಗಳ ಸಂದಿಯಿಂದ ಇಣುಕುತ್ತಿದ್ದ ಹೆಂಗಸರು, ಮಕ್ಕಳು ಅಲ್ಲಲ್ಲೇ ಮರೆಯಾಗಿ ಬಿಟ್ಟರು, ಗಂಡಸರು ಕೋಣೆ ಸೇರಿದರು. ಆದರೆ, ರಾತ್ರಿ ಆ ಎರಡು ಕೋಣೆಗಳಲ್ಲಿ ಮಾತ್ರ ದೀಪ ಆರಿರಲಿಲ್ಲ. ಆ ಹಿರಿಯರು ನಿದ್ದೆ ಬರದೆ ಹೊರಳಾಡುತ್ತಿದ್ದಾರೆ. ಪಕ್ಕದಲ್ಲಿ ಹೆಂಡತಿ ಗಮನಿಸುತ್ತಿದ್ದಾಳೆ. ಆಕೆಗೂ ನಿದ್ದೆ ಬರುತ್ತಿಲ್ಲ. ಗಂಡನೊಡನೆ ಮಾತಾಡಲು ಭಯ. ಅದಾಗ್ಯೂ ಆಕೆ ಕೇಳಿದಳು- ‘ಯಾಕ್ರಿ? ನಿದ್ರೆ ಬರ್ತಿಲ್ವಾ? ನೀರೇನಾದ್ರೂ ಬೇಕಾ?’ ಎಂದು. ‘ಬೇಡ’ ಎಂದ ಆತ ಒಂದೇ ಶಬ್ದದಲ್ಲಿ! ಮತ್ಯಾಕೆ ನಿದ್ರೆ ಮಾಡಬಾರ್ದ ಎಂದಳಾಕೆ. ಆ ವಯೋವೃದ್ಧ ಮಾತಾಡಿದ-‘ ನಿನ್ನ ಮಗನ ಮುಖ ನೋಡಿದ್ಯಾ? ಯಾವಾಗಲೂ ನಾನು ಹೊಡೆದಾಗ ಕಣ್ಣೀರಿಟ್ಟವನಲ್ಲ! ಇಂದೇಕೆ ಅತ್ತ?’ ವೃದ್ಧನದು ಸಂಕಟದ ಪ್ರಶ್ನೆ. ಹೂಂ! ಎಂದಳಷ್ಟೇ ಅಜ್ಜಿ.

ಇತ್ತ ಇನ್ನೊಂದು ಕೋಣೆಯಲ್ಲೂ ಇಷ್ಟೇ ಮಹಾ ಮೌನ! ಹೆಂಡತಿ ಕೇಳುತ್ತಿದ್ದಾಳೆ-‘ಅವರು ಹೊಡೆದದ್ದು ಇದೇ ಮೊದಲ? ಯಾವತ್ತೂ ಇಲ್ಲದ ನೋವು, ಸಂಕಟ ಈಗೇಕೆ?’

‘ಅಪ್ಪ ಹೊಡೆದಾಗ ನೋಡಿದೆಯಾ? ಹಿಂದೆಲ್ಲ ಅವರ ಏಟುಗಳು ಬಲವಾಗಿರುತ್ತಿದ್ದವು. ಈಗ ಆ ಏಟಿನಲ್ಲಿ ಬಲವಿಲ್ಲ. ಅಪ್ಪ ದುರ್ಬಲರಾಗಿದ್ದಾರೆ. ಅವರ ಆ ಶಕ್ತಿ ಕುಂದಿದೆ. ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಅಪ್ಪನ್ನ ಕಳ್ಕೊಂಡ್ರೆ ನಾವು ಪರದೇಶಿಗಳಾಗ್ತಿವಿ’- ಗಂಡನ ಆತಂಕದ ಮಾತು.ಎಂಥ ಸಂವೇದನಾಶೀಲ ಕುಟುಂಬ! ಸಂಬಂಧಗಳಿಗೆ ಅದೆಷ್ಟು ಬೆಲೆ! ಕೋಪ-ಶಿಕ್ಷೆಯಲ್ಲೂ ಪ್ರೀತಿ ತುಂಬಿದ ಕಾಳಜಿ. ಇಂದು ಹುಡುಕಿದರೂ ಸಿಗದ ಅನ್ಯೋನ್ಯತೆ. ಮರೆಯಾಗುತ್ತಿರುವ ಕೌಟುಂಬಿಕ ಸೆಳೆತ ಸಂಬಂಧಗಳ ನಡುವೆ ಉಡಾಫೆ ವರ್ತನೆ. ಬದುಕಿದ್ದಾಗ ಅಸಡ್ಡೆ. ಸತ್ತ ನಂತರ ಮಾಡುವ ಶ್ರಾಧ್ಧಕರ್ಮಗಳ ಬಗ್ಗೆ ಇನ್ನಿಲ್ಲದ ಮುತುವರ್ಜಿ. ಇದರಿಂದಾಗುವ ಲಾಭ ಏನು?! ಈ ಘಟನೆ, ಸಂಬಂಧಗಳು ಸೂಕ್ಷ್ಮತೆ ಕಳೆದುಕೊಂಡಿರುವ ಇಂದಿನ ದಿನಮಾನಗಳಲ್ಲಿ, ಇರುವ ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಮುಂದೆ ಸಾಗಲು ಪ್ರೇರೇಪಿಸುವಂಥದ್ದು! ಅಲ್ಲವೇ?

(ಲೇಖಕರು ಅಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net