

ರಾಜಶೇಖರ ಪುರಾಣಿಕಮಠ
ಒಂದು ಮುಂಜಾನೆ ನಾನು ಜಾಗಿಂಗ್ ಮಾಡುತ್ತಿದ್ದೆ. ನನಗಿಂತ ಮುಂದೆ ಅರ್ಧ ಕಿಲೋಮೀಟರ್ನಲ್ಲಿ ಒಬ್ಬರು ಜಾಗಿಂಗ್ ಮಾಡುತ್ತ ಸಾಗಿದ್ದನ್ನು ಗಮನಿಸಿದೆ. ನನಗಿಂತ ಅವರು ನಿಧಾನವಾಗಿ ಓಡುತ್ತಿದ್ದಾರೆಂಬುದನ್ನು ಗ್ರಹಿಸಿಕೊಂಡ ನಾನು ಅವರನ್ನು ಹಿಂದೆ ಹಾಕಬಲ್ಲೆನೆಂದು ಓಟವನ್ನು ಹೆಚ್ಚಿಸುತ್ತ ಅವರನ್ನು ಸಮೀಪಿಸುತ್ತ ಕೆಲ ನಿಮಿಷಗಳಲ್ಲೇ ಅವರನ್ನು ಹಿಂದೆ ಹಾಕಿ ಸೋಲಿಸಿಬಿಟ್ಟೆ. ಮನದೊಳಗಡೆ ಒಂದು ಥರದ ಖುಷಿ. ಪಾಪ, ಆ ವ್ಯಕ್ತಿಗೆ ಗೊತ್ತೂ ಇಲ್ಲ, ನಾವು ಓಟದ ರೇಸಿನಲ್ಲಿದ್ದೇವೆಂದು! ನಾನೇ ಮಾಡಿಕೊಂಡ ಈ ಸ್ಪರ್ಧೆಯಲ್ಲಿ ಅವರನ್ನು ಸೋಲಿಸಿದ ನಂತರ ನನಗೆನಿಸಿತು, ನಾನು ಅವರೊಡನೆ ಸ್ಪರ್ಧಿಸುವ ವಿಚಾರದಲ್ಲಿ ಎಷ್ಟೊಂದು ತಲ್ಲೀನನಾಗಿದ್ದೆನೆಂದರೆ ನನ್ನ ಮನೆ ಕಡೆಗೆ ತಿರುಗಬೇಕಾಗಿದ್ದ ರಸ್ತೆಯನ್ನು ಮರೆತಿದ್ದೆ; ನನ್ನ ಮಾನಸಿಕ ಶಾಂತಿ ಕಳೆದುಕೊಂಡಿದ್ದೆ; ಸುತ್ತ ಮುತ್ತಲಿನ ಹಸಿರು ಹಸಿರಾಗಿದ್ದ ನಿಸರ್ಗ ಸೌಂದರ್ಯ ಮರೆತಿದ್ದೆ; ಆತ್ಮಶಾಂತಿಗಾಗಿ ಮಾಡಬೇಕಿದ್ದ ಧ್ಯಾನವನ್ನೂ ಮರೆತಿದ್ದೆ. ಅಷ್ಟೇ ಅಲ್ಲ, ಈ ಅನವಶ್ಯಕ ಓಡುವ ಭರದಲ್ಲಿ ಎರಡು-ಮೂರು ಸಲ ಎಡವಿ ಪಕ್ಕದ ಫುಟ್ಪಾತ್ ಬಳಿಯ ಕಂಬಕ್ಕೆ ತಲೆ ಬಡಿಸಿಕೊಳ್ಳುವುದರಿಂದ ಉಳಿದುಕೊಂಡಿದ್ದೆ.
ಈ ವ್ಯರ್ಥ ವಿಜಯದ ನಂತರ ನನಗೆ ಹೊಳೆಯಿತು! ನಮ್ಮ ಜೀವನದಲ್ಲೂ ಆಗುತ್ತಿರುವುದೂ ಇದೇ ಅಲ್ಲವೇ? ನಮ್ಮ ಸಹೋದ್ಯೋಗಿಗಳು, ನೆರೆ-ಹೊರೆಯವರು, ಸ್ನೇಹಿತರು, ಕುಟುಂಬದ ಸದಸ್ಯರುಗಳೊಡನೆ ಹೀಗೇ ಸ್ಪರ್ಧಿಸುತ್ತ ಅವರನ್ನು ಹಿಂದಿಕ್ಕಲು, ಅಥವಾ ಅವರಿಗಿಂತ ನಾವು ಹೆಚ್ಚು ಸಾಧಿಸಿದವರು ಅಥವಾ ಮಹತ್ವ ಪಡೆದವರು ಎಂದು ಪ್ರತಿಪಾದಿಸುವದರಲ್ಲಿಯೇ ನಿರತರಾಗಿರುತ್ತೇವಲ್ಲ! ಈ ಗಾಳಿಗುದ್ದಾಟದಲ್ಲಿ ನಮ್ಮೊಳಗಿನ ಹಾಗೂ ಸುತ್ತಮುತ್ತಲೂ ಹರಡಿರುವ ಸಂತೋಷವನ್ನೇ ಕಳೆದುಕೊಳ್ಳುತ್ತಿದ್ದೇವೆ.
ನಮ್ಮ ಸಮಯ ಹಾಗೂ ಸಾಮರ್ಥ್ಯಗಳನ್ನು ಹೀಗೆ ಇತರರೊಡನೆ ರೇಸಿನಲ್ಲಿ ವ್ಯರ್ಥಗೊಳಿಸುತ್ತ ನಮ್ಮ ನಿರ್ದಿಷ್ಟ ಧ್ಯೇಯಾದರ್ಶಗಳ ಪಥದಿಂದ ಭ್ರಷ್ಟರಾಗುತ್ತಿದ್ದೇವೆ. ಈ ಅನಾರೋಗ್ಯಕರ ಸ್ಪರ್ಧೆ ಎನ್ನುವುದೊಂದು ಎಂದೂ ನಿಲ್ಲದ ವಿಷಚಕ್ರ. ಜೀವನಪಥದಲ್ಲಿ ನಮಗಿಂತ ಮುಂದೆ ಯಾರಾದರೂ ಇದ್ದೇ ಇರುತ್ತಾರೆ. ನಮಗಿಂತಲೂ ಒಳ್ಳೆಯ ಉದ್ಯೋಗ, ಶ್ರೀಮಂತಿಕೆ, ಹೆಚ್ಚಿನ ಶಿಕ್ಷಣ, ಲಕ್ಷಣವಾದ ಹೆಂಡತಿ/ಗಂಡ, ಒಳ್ಳೆಯ ನಡತೆಯ ಮಕ್ಕಳು, ಸುಸ್ಥಿರ ಬದುಕಿನ ಸ್ಥಿತಿ-ಗತಿಗಳನ್ನು ಪಡೆದವರು ಅನೇಕರಿರಬಹುದಲ್ಲವೆ? ಆದರೆ, ಬದುಕಿನ ಮುಖ್ಯ ಗ್ರಹಿಕೆ ಏನೆಂದರೆ ನೀವು ಇನ್ನೊಬ್ಬರೊಡನೆ ಅನ್ಯಥಾ ಸ್ಪರ್ಧೆಯಲ್ಲಿಲ್ಲದಿದ್ದರೆ ನಿಮ್ಮ ಸಾಮರ್ಥ್ಯಗಳೊಡನೆ ನಿಮಗೆ ನೀವೇ ಅತ್ಯುತ್ತಮರಾಗಬಲ್ಲಿರಿ ಎಂಬುದು.
ಬದುಕಿನಲ್ಲಿ ಕೆಲವರು ಅಭದ್ರತೆಯ ಭಾವದಲ್ಲಿರುತ್ತಾರೆ. ಕಾರಣವೆಂದರೆ ಅವರು ಇತರರ ಬಗ್ಗೆ ಅತಿ ಹೆಚ್ಚು ಗಮನ ಕೊಡುತ್ತಾರೆ. ಇತರರಲ್ಲೇನಿದೆ? ಅವರೇನು ಮಾಡುತ್ತಾರೆ? ಏನು ಮಾತನಾಡುತ್ತಾರೆ ಎಂಬ ಯೋಚನೆಗಳಲ್ಲೇ ಇರುತ್ತಾರೆ. ಇದೆಲ್ಲ ಏಕೆ? ನಿಮಗಿ ರುವುದನ್ನು ನೀವು ಒಪ್ಪಿಕೊಳ್ಳಿ. ನಿಮ್ಮವ್ಯಕ್ತಿತ್ವ, ಎತ್ತರ, ತೂಕ, ಅದು ನಿಮ್ಮದು. ನೀವು ಭಾಗ್ಯವಂತರೆಂಬುದನ್ನು ಅರಿತು ಆರೋಗ್ಯಕರ ಬದುಕಿನ ಬಗ್ಗೆ ಗಮನ ಇರಲಿ. ಭಾಗ್ಯದಲ್ಲಿ ಸ್ಪರ್ಧೆ ಇಲ್ಲ; ಪ್ರತಿಯೊಬ್ಬರಿಗೂ ಅವರದೇ ಆದ ಭಾಗ್ಯವಿದೆ.
(ಲೇಖಕರು ಹವ್ಯಾಸಿ ಬರಹಗಾರರು)