

| ಡಾ.ಗಣಪತಿ ಹೆಗಡೆ
ಯುವಕನೊಬ್ಬ ಪ್ರವಚನಕ್ಕೆ ಹೋದ. ಪ್ರವಚನಕಾರರು ಈ ಶರೀರದ ದಿವ್ಯತೆ, ವೈಶಿಷ್ಟ್ಯಗಳ ಕುರಿತು ಆಕರ್ಷಕವಾಗಿ ಉದಾಹರಣೆ ಸಹಿತ ಹೇಳುತ್ತಿದ್ದರು. ‘ನಮ್ಮ ಈ ಶರೀರ ಭಗವಂತನ ಆಲಯ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ’ ಎಂಬುದಾಗಿ ವಚನಕಾರರು ಹೇಳಿದ್ದನ್ನು ವಿವರಿಸುತ್ತಿದ್ದರು.
‘ನಮ್ಮ ಹೃದಯದ ಗರ್ಭಗುಡಿಯಲ್ಲಿ ಆ ಭಗವಂತನ್ನು ಆವಾಹನೆ ಮಾಡಿ ನಿತ್ಯವೂ ಆರಾಧಿಸಬೇಕು, ನಾವು ಸೇವಿಸುವ ಆಹಾರ ಅವನಿಗೆ ನೈವೇದ್ಯದ ರೂಪದಲ್ಲಿರಬೇಕು. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಅವನು ಮೆಚ್ಚುವಂತಿರಬೇಕು ಆಗ ಭಗವಂತನು ನಮಗೆ ಬೇಕಾದುದೆಲ್ಲವನ್ನೂ ಕರುಣಿಸುತ್ತಾನೆ’ ಎಂದು ಭಾವುಕರಾಗಿ ಹೇಳಿದಾಗ ಯುವಕನಿಗೆ ಸಂತಸವಾಗಿಬಿಟ್ಟಿತ್ತು. ಮರುದಿನ ಯುವಕನಿಗೆ ತೀವ್ರ ಜ್ವರ. ತಡೆಯಲಾರದ ಮೈಕೈನೋವು. ಹೇಗೋ ವೈದ್ಯರಲ್ಲಿಗೆ ನಡುಗುತ್ತಲೇ ಹೋದ. ಇದನ್ನೂ ಓದಿ: ಹುಟ್ಟಿದ ಮೂರುಗಂಟೆಯಲ್ಲೇ ಕೊವಿಡ್- 19 ಸೋಂಕಿನಿಂದ ಮೃತಪಟ್ಟ ಶಿಶು; ಅಂತ್ಯಕ್ರಿಯೆಗೆ ಅಪ್ಪನೂ ಬರಲಿಲ್ಲ
ಪರೀಕ್ಷಿಸಿ, ಔಷಧಗಳನ್ನು ಕೊಟ್ಟ ವೈದ್ಯರು, ‘ನೋಡಪ್ಪ, ಶರೀರವನ್ನು ಆದಷ್ಟೂ ಜೋಪಾನವಾಗಿ ನೋಡಿಕೊಳ್ಳಬೇಕು. ನಮ್ಮ ಹಿರಿಯರು ‘ಶರೀರಂ ರೋಗಮಂದಿರಂ’ ಎಂದು ಹೇಳಿದ್ದಾರೆ. ಈ ಶರೀರ ರೋಗಗಳ ಗೂಡು. ನಿತ್ಯವೂ ಒಂದಿಲ್ಲೊಂದು ವ್ಯಾಧಿಗಳು ನಮ್ಮನ್ನು ಬಾಧಿಸುತ್ತವೆ. ಆದ್ದರಿಂದ ಇದನ್ನು ಸಾಧ್ಯವಾದಷ್ಟೂ ಜತನದಿಂದ ಕಾಪಾಡಿಕೊಳ್ಳಬೇಕು’ ಎಂದು ಹೇಳಿ ಕಳಿಸಿದರು. ಈಗ ಯುವಕನಿಗೆ ಗೊಂದಲವಾಯಿತು. ‘ಶರೀರಂ ರೋಗ ಮಂದಿರಂ|’ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ‘ಶರೀರಂ ದೇವ ಮಂದಿರಂ’| ಎನ್ನುತ್ತಾರೆ. ಯಾವುದನ್ನು ನಂಬುವುದು? ಒಂದುವೇಳೆ ಭಗವಂತನು ನಮ್ಮ ಶರೀರದಲ್ಲಿಯೇ ನೆಲೆಸುವುದಾದರೆ ಈ ರೋಗಗಳು ಹೇಗೆ ಬರುತ್ತವೆ? ಇಲ್ಲ, ಶರೀರದಲ್ಲಿ ರೋಗಗಳೇ ತುಂಬಿರುವುದಾದರೆ ಭಗವಂತ ಹೇಗೆ ತಾನೆ ಇಲ್ಲಿ ಬಂದು ನೆಲೆಸಿಯಾನು? ಅವನು ಬಗೆಹರಿಸಲಾಗದ ಸಮಸ್ಯೆಯೊಂದಿಗೆ ತನ್ನ ಗುರುಗಳಲ್ಲಿಗೆ ಬಂದ. ಎಲ್ಲವನ್ನೂ ವಿವರಿಸಿದ, ಮೌನದಿಂದ ಉತ್ತರಕ್ಕಾಗಿ ಕಾದ. ‘ಮಗು, ಇವರಿಬ್ಬರೂ ಶರೀರವನ್ನು ಭಿನ್ನದೃಷ್ಟಿಯಲ್ಲಿ ನೋಡಿದವರು. ಪ್ರವಚನಕಾರರು ಹೇಳಿದ್ದು ಅದೂ ಸರಿಯೇ. ಯಾಕೆಂದರೆ ಅವರು ಈ ಶರೀರವನ್ನು ನೋಡಿದ್ದು ಆ ದೃಷ್ಟಿಯಲ್ಲಿ. ವೈದ್ಯರೆಂದಿದ್ದೂ ಸರಿ, ಯಾಕೆಂದರೆ ವೈದ್ಯರು ಶರೀರವನ್ನು ನೋಡಿದ ದೃಷ್ಟಿ ಬೇರೆ. ಅದೇ ಸತ್ಯ ಎಂದು ಅಂದುಕೊಂಡಿದ್ದರಲ್ಲಿ ಇಬ್ಬರದೂ ತಪ್ಪಲ್ಲ. ಅವರವರ ದೃಷ್ಟಿಯಲ್ಲಿ್ಲ ಅದು ಸರಿಯೇ. ಆದರೆ ಇಬ್ಬರನ್ನೂ ನೋಡಿ ಅದನ್ನು ವಿವೇಚಿಸದೇ ಅದೇ ಸರಿ ಎಂದುಕೊಂಡರೆ ಅದು ಸರ್ವಥಾ ನಮ್ಮ ತಪ್ಪು. ಇದನ್ನೂ ಓದಿ: ಮನೋಲ್ಲಾಸ: ಕೆರೆಯ ನೀರನು ಕೆರೆಗೆ ಚೆಲ್ಲಿ
ನಮಗೆ ಕಾಣುವ ಪ್ರತಿಯೊಂದನ್ನು ಭಿನ್ನ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ, ವಿವೇಚಿಸಬೇಕಾಗುತ್ತದೆ. ತದನಂತರವೇ ನಿರ್ಣಯ ತೆಗೆದುಕೊಳ್ಳಬೇಕು. ನೋಡಿದ ತಕ್ಷಣ ಅಥವಾ ಯಾರೋ ಹೇಳಿದ ತಕ್ಷಣದಲ್ಲಿ ಯಾವುದನ್ನೂ ನಿರ್ಣಯಿಸಬಾರದು. ವಿವೇಚನೆಯ ಕಣ್ಣಿಂದ ನೋಡಿದ ಸತ್ಯವೇ ಸರಿಯಾದದ್ದು. ಇನ್ನೊಂದು ಸತ್ಯಸಂಗತಿಯೇನೆಂದರೆ ಈ ಶರೀರವನ್ನು ದೇವಮಂದಿರವನ್ನಾಗಿ ಮಾಡುವುದೋ ಇಲ್ಲವೇ ರೋಗಮಂದಿರವನ್ನಾಗಿ ಮಾಡುವುದೋ ಎರಡೂ ನಮ್ಮ ಕೈಯಲ್ಲೇ ಇದೆ. ಭಗಂತನ ಸೃಷ್ಟಿಯ ಅದ್ಭುತವಾದ ಇದನ್ನು ಪರಮಪೂಜ್ಯ ಭಾವನೆಯಿಂದ ಉಪಚರಿಸಿದರೆ ಇದು ದೇವಮಂದಿರವಾಗುತ್ತದೆ. ಇನ್ನು ಮನಸ್ಸಿಗೆ ಬಂದಂತೆ ಈ ಶರೀರದ ಜೊತೆ ನಡೆದುಕೊಂಡರೆ ಅದು ಖಂಡಿತವಾಗಿಯೂ ರೋಗಮಂದಿರವೇ’.
(ಲೇಖಕರು ಸಂಸ್ಕೃತ ಉಪನ್ಯಾಸಕರು)