ಸಣ್ಣ ಕಾರ್ಯದಲ್ಲೂ ಶ್ರೇಷ್ಠತೆ ಕಾಣೋಣ: ಮನೋಲ್ಲಾಸ

Manollasa
Published on
| ರೇಖಾ ಗಜಾನನ ಭಟ್ಟ

ಒಬ್ಬ ಶಿಷ್ಯ ಹೊಸಮನೆಯನ್ನು ಕಟ್ಟಿಸಿದ. ತಾನು ಕಟ್ಟಿಸಿದ ಮನೆಯನ್ನು ಬಂದು ನೋಡಬೇಕೆಂದು ತನ್ನ ಗುರುಗಳನ್ನು ಗೌರವಪೂರ್ವಕವಾಗಿ ಆಮಂತ್ರಿಸಿದ. ಒಂದು ದಿನ ಗುರುಗಳು ಮನೆ ನೋಡಲೆಂದು ಬಂದರು. ಮನೆ ನೋಡುತ್ತ ಶಿಷ್ಯನ ಬಳಿ- ‘ಈ ಮನೆಗೆ ಬಾಗಿಲನ್ನು ಯಾಕಾಗಿ ಇರಿಸಿರುವೆ?’ ಎಂದು ಪ್ರಶ್ನಿಸಿದರು. ಶಿಷ್ಯನು ಥಟ್ಟನೆ, ‘ನಾವೆಲ್ಲರೂ ಮನೆಯಿಂದ ಹೊರಗೆ ಒಳಗೆ ಓಡಾಡಲು’ ಎಂದು ಉತ್ತರಿಸಿದ. ಗುರುಗಳು ಮುಂದೆ ಸಾಗಿ ‘ಈ ಕಿಟಕಿಯನ್ನು ಯಾಕೆ ಇರಿಸಿರುವೆ?’ ಎಂದು ಕೇಳಿದರು. ‘ಮನೆಯೊಳಗೆ ಗಾಳಿ, ಬೆಳಕು ಚೆನ್ನಾಗಿ ಬರಬೇಕೆಂದು ಸಾಕಷ್ಟು ಕಿಟಕಿಗಳನ್ನು ಇರಿಸಿದ್ದೇನೆ’ ಎಂದ ಶಿಷ್ಯ. ಆಗ ಗುರುಗಳು- ‘ಇದು ಸಾಮಾನ್ಯವಾದ ಆಸೆಯಾಯಿತು. ಇದರೊಂದಿಗೆ ಬಾಗಿಲಿನಿಂದ ಸಾಧು, ಸಜ್ಜನರು ಮನೆಯೊಳಗೆ ಅಡಿಯಿಡಲಿ. ಕಿಟಕಿಯಿಂದ ಗಾಳಿ, ಬೆಳಕುಗಳ ಜೊತೆಗೆ ದೂರದಲ್ಲಿರುವ ಗುಡಿಯ ಭಜನೆಯು ನಿತ್ಯ ಕೇಳಲಿ ಎಂಬ ಉದ್ದೇಶ ಸೇರಿದ್ದರೆ ನಿನ್ನ ಬಯಕೆ ಉದಾತ್ತ ಹಾಗೂ ಶ್ರೇಷ್ಠವಾಗಿ ಇರುತ್ತಿತ್ತಲ್ಲವೇ?’ ಎಂದರು.

ಗುರುಗಳ ಮಾತಿನಿಂದ ಶಿಷ್ಯ ತಿಳಿಯಬೇಕಾದ್ದನ್ನು ತಿಳಿದುಕೊಂಡ. ಸಾಮಾನ್ಯ ಸಂಗತಿಗಳು ಉತ್ತಮ ಅನ್ನಿಸುವುದು ಅವುಗಳ ಜೊತೆಗಿರುವ ಶ್ರೇಷ್ಠ ಮೌಲ್ಯಗಳಿಂದ ಹಾಗೂ ಅವುಗಳ ಹಿಂದಿರುವ ಉದಾತ್ತ ಪರಿಕಲ್ಪನೆಗಳಿಂದಲೇ ಅಲ್ಲವೇ? ಅರಿವಿಗೆ ಬಾರದೇ ಬೆಲ್ಲದ ಮಡಿಕೆಯೊಂದು ಸೋರಿಹೋಗಿ ಬೆಲ್ಲ ವ್ಯರ್ಥ ಆಗಿದ್ದನ್ನು ಕಂಡು ಹೆಚ್ಚು ವ್ಯಥೆಪಡುವ ಬದಲಾಗಿ ಆ ಬೆಲ್ಲವನ್ನು ಮುತ್ತಿ ತಿನ್ನುತ್ತಿರುವ ಇರುವೆ ಗುಂಪನ್ನು ಕಂಡು, ಚೆಲ್ಲಿದ್ದು ವ್ಯರ್ಥವಾಗದೇ ಇರುವೆಗಳ ಆಹಾರವಾದರೂ ಆಯಿತಲ್ಲ... ಎಂದುಕೊಂಡರೆ ಅಲ್ಲೊಂದು ಸಮಾಧಾನ ಭಾವ ಆವರಿಸುತ್ತದೆ. ಗಿಡದಲ್ಲಿ ಅರಳಿದ ಹೂವು ದೇವರ ಪಾದ ಸೇರಿದಾಗ ಪ್ರಸಾದವಾಗುತ್ತದೆ. ಬಿಂದಿಗೆಯ ನೀರು ದೇವರನ್ನು ರ್ಸ³ಸಿದಾಗ ತೀರ್ಥವಾಗುವುದು, ತಯಾರಿಸಿದ ಆಹಾರ ದೇವರಿಗೆ ನೈವೇದ್ಯ ಮಾಡುವುದದಿಂದ ಮಹಾಪ್ರಸಾದವಾಗುವುದು. ಅಂತೆಯೇ ನಾವು ನಿತ್ಯ ಮಾಡುವ ಸಾಮಾನ್ಯ ಕೆಲಸ ಕಾರ್ಯಗಳನ್ನು ಹಗುರವಾಗಿ ಭಾವಿಸದೆ ಅದರ ಹಿಂದೆ ಉದಾತ್ತತೆ ಅಳವಡಿಸಿಕೊಂಡರೆ ಪ್ರತಿ ಕಾರ್ಯದಲ್ಲೂ ಶ್ರೇಷ್ಠತೆಯ ಭಾವ ಮೈದಾಳುತ್ತದೆ.

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |

ಆಯಸಂಬಡಿಸದವೊಲಂತರಾತ್ಮನನು ||

ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |

ಆಯುವನು ಸಾಗಿಸೆಲೊ- ಮಂಕುತಿಮ್ಮ ಎಂಬ ಡಿವಿಜಿಯವರ ಕಗ್ಗದ ಸಾಲಿನಂತೆ ಕಾಯಕವನ್ನು ಮಾಡುತ್ತ ಮನಸ್ಸನ್ನು ಸಂತೈಸಿಕೊಂಡು ಆತ್ಮಕ್ಕೆ ಆಯಾಸವಾಗದಂತೆ ನೋಡಿಕೊಳ್ಳಲು ದೇವನಾಮ ಸ್ಮರಣೆ ಎಷ್ಟು ಮುಖ್ಯವೋ ಅಷ್ಟೇ ಮಹತ್ವವಾದದ್ದು ಬಸವಣ್ಣನವರು ಹೇಳುವಂತೆ ಕಾಯಕದಲ್ಲಿ ಕೈಲಾಸ ಕಾಣುವುದಾಗಿದೆ.

ಸಾಮಾನ್ಯ ಸಂಗತಿಗಳಲ್ಲೂ ವಿಶೇಷತೆಯನ್ನು ಧನಾತ್ಮಕತೆಯನ್ನು ಹುಡುಕುವ ಅಭ್ಯಾಸವನ್ನು ಮಾಡಬೇಕು. ಆಗ ಬದುಕಿನಲ್ಲಿ ಧನ್ಯತಾ ಭಾವ ಮನೆ ಮಾಡುತ್ತದೆ.

ಮಾಡುವ ಕೆಲಸದೊಳಿರೆ ಉದಾತ್ತ ಭಾವ

ನಲಿಯುವುದು ನಿತ್ಯ ಆತ್ಮದೊಡನೆ ಜೀವ

ಗಿಡ ನೆಟ್ಟ ಕೈಯಳಿದರೂ ನೆರಳಿರುವ ಹಾಗೆ

ಸದುದ್ದೇಶಗಳು ಸುಫಲವೀಯುವವು ಕೊನೆಗೆ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net