ಮನಸ್ಸೇ ರಣರಂಗ-ಉದ್ಯಾನ: ಮನೋಲ್ಲಾಸ

Manollasa
Published on
| ಹೇಮಲತಾ ಮಲ್ಪೆ ಉಡುಪಿ

‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋ’. ಮನಸ್ಸೇ ನಮ್ಮ ಬಂಧ-ಮೋಕ್ಷಗಳಿಗೆ, ಸುಖ- ದುಃಖಗಳಿಗೆ ಕಾರಣವಾಗಿದೆ. ಮನಸ್ಸು ಸ್ವರ್ಗವನ್ನು ಸೃಷ್ಟಿಸಬಹುದು ಅಥವಾ ನರಕವನ್ನೂ ಸೃಷ್ಟಿಸಬಹುದು. ಮನೋರಂಗವೇ ರಣರಂಗವು ಮತ್ತು ಆಹ್ಲಾದ ನೀಡುವ ಉದ್ಯಾನವನವು. ಮನಸ್ಸು ಇರುವ ಕಾರಣವೇ ‘ಮನುಷ್ಯ’ ಅಂತ ಕರೆಯಲಾಗುತ್ತದೆ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ವಿಚಿತ್ರವಾಗಿ ವರ್ತಿಸುವವರಿಗೆ ಕೆಲವರು ಹೇಳುವುದುಂಟು ಇವನು ಯಾವ ವಿಚಿತ್ರ ಪ್ರಾಣಿಯೋ ಎಂದು. ನಾಯಿಯ ಹಾಗೆ ಬೊಗಳುತ್ತಾನೆ; ಕತ್ತೆಯ ಹಾಗೆ ಕಿರುಚುತ್ತಾನೆ; ಹುಲಿಯ ಹಾಗೆ ಘರ್ಜಿಸುತ್ತಾನೆ; ವಂಚಿಸುವ ಗುಣದವನಾಗಿದ್ದರೆ ನರಿಬುದ್ಧಿಯವನು ಎನ್ನುತ್ತಾರೆ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದವರಿಗೆ ಮಂಗನ ಹಾಗೆ ವರ್ತಿಸುತ್ತಾನೆ ಎಂದು ಹೇಳುವುದುಂಟು. ಇಂತಹ ಪ್ರಾಣಿ ಸಹಜ ವರ್ತನೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಇರುವುದರಿಂದ ಆಗುತ್ತದೆ. ರಾಮಕೃಷ್ಣ ಪರಮಹಂಸರು ಮನಸ್ಸಿನ ಬಗ್ಗೆ ದೃಷ್ಟಾಂತ ಕತೆಯನ್ನು ಬಲು ಸೊಗಸಾಗಿ ತಮ್ಮ ಶಿಷ್ಯರಿಗೆ ವಿವರಿಸುತ್ತಾರೆ. ಮನಸ್ಸು ಹೇಗೆ ಇರುತ್ತದೆ ಎಂದರೆ ಅದು ಮಂಗನ ಹಾಗೆ ಚಂಚಲ ಬುದ್ಧಿಯದು. ಅಂತಹ ಮಂಗನಿಗೆ ಮದ್ಯವ ಕುಡಿಸಿದರೆ ಅದರ ಪಾಡು ಏನಾದಿತು? ಅಷ್ಟೇ ಅಲ್ಲ, ಅದಕ್ಕೆ ಪುನಃ ಚೇಳು ಕಡಿದರೆ ಅದರ ರಂಪಾಟ ಹೇಳಲಿಕ್ಕೆ ಆಗದು. ಅದು ಬಹಳ ವಿಚಿತ್ರವಾಗಿ ವರ್ತಿಸುತ್ತದೆ. ಅಂತಹ ಮನಸ್ಸನ್ನು ಸ್ವಯಂಸಾಧನೆಯ ಮೂಲಕ ಹಿಡಿತದಲ್ಲಿ ಇಟ್ಟುಕೊಳ್ಳಬೇಕು.

ಎಲ್ಲಾ ಆಗುಹೋಗುಗಳಿಗೆ ಮನಸ್ಸೇ ಕಾರಣವಾಗಿರುತ್ತದೆ. ಕಣ್ಣಿಗೆ ಕಾಣದ ಮನಸ್ಸು ಮೂರಡಿಯ ಮನುಷ್ಯನನ್ನು ಕುಣಿಸುತ್ತದೆ. ಆರಡಿಯ ಮನುಷ್ಯನನ್ನು ಕುಣಿಸುತ್ತದೆ. ಎಲ್ಲಾ ಪಾಪ ಪುಣ್ಯಗಳಿಗೆ ಮನಸ್ಸೇ ಕಾರಣ. ಇತರರಿಗೆ ನೋವು ಕೊಡುವುದು ಪಾಪದ ಕೆಲಸ. ನೋವಿರುವ ಮನದಲ್ಲಿ ನಗುವ ಕಾರಂಜಿ ಚಿಮ್ಮುವಂತೆ ಮಾಡುವುದು ಪುಣ್ಯದ ಕೆಲಸ. ಭಗವದ್ಗೀತೆಯಲ್ಲಿ ಒಂದೆಡೆ ಅರ್ಜುನ ಕೇಳುತ್ತಾನೆ, ‘ಶ್ರೀಕೃಷ್ಣ, ಮನಸ್ಸು ಹರಿದಾಡುವಂತಹದು. ಅದು ಬಹಳ ಬಲಶಾಲಿ. ಹಿಡಿದ ಪಟ್ಟನ್ನು ಬಿಡದೆ ಇರುವಂತಹುದು. ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟವೆನಿಸುತ್ತದೆ’ ಎಂದು. ಆಗ ಶ್ರೀಕೃಷ್ಣ ಹೇಳುತ್ತಾನೆ, ‘ಮನಸ್ಸು ಹರಿದಾಡುವಂತಹುದು ಮತ್ತು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಿಕ್ಕೆ ಆಗದೆಂಬುದು ನಿಜ ಅರ್ಜುನ. ಆದರೆ, ಪ್ರಯತ್ನದಿಂದಲೂ, ವೈರಾಗ್ಯದಿಂದಲೂ ಅದನ್ನು ಬಿಗಿ ಹಿಡಿಯುವುದಕ್ಕಾಗುತ್ತದೆ’ ಎಂದು. ಅತಿಯಾದ ವಿಷಯಾಸಕ್ತಿಯಿಂದ ಮನಸ್ಸು ಬಂಧಿಸಲ್ಪಡುತ್ತದೆ. ಮನಸ್ಸು ವಿಷಯಾಸಕ್ತಿಯಿಂದ ಬಿಡುಗಡೆಯಾದಾಗ ಅದುವೇ ಮೋಕ್ಷ. ಮೋಕ್ಷ ಎಂದರೆ ಬಿಡುಗಡೆ. ಅದು ಸತ್ತ ಮೇಲೆ ಸಿಗುವ ಪದವಿಯಲ್ಲ. ಮನಸ್ಸು ನಿರ್ವಿಷಯವಾದಾಗ, ಅಂದರೆ ಕಾಮನೆಗಳಿಂದ ಮುಕ್ತವಾದಾಗ ಅದುವೇ ಮೋಕ್ಷ. ಮನಸ್ಥಿತಿ ಚೆನ್ನಾಗಿದ್ದಾಗ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಹಾಗಾಗಿ ಮನಸ್ಸನ್ನು ಸಮಚಿತ್ತದಲ್ಲಿರಿಸೋಣ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಣ.

(ಲೇಖಕರು ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net