

ಅಂದಿನ ಗುರುಕುಲದಲ್ಲಿ ಶಿಷ್ಯನೊಬ್ಬ ಗುರುಗಳಿಗೆ ತನ್ನ ಸಹವರ್ತಿ ಶಿಷ್ಯನೊಬ್ಬನ ಬಗೆಗೆ, ‘ಗುರುಗಳೇ, ಸತ್ಯನಾರಾಯಣ ಅಂತ ಹೆಸರಿಟ್ಟುಕೊಂಡಿರುವ ಈ ನನ್ನ ಸಹವರ್ತಿ ಬರೀ ಸುಳ್ಳು ಹೇಳುತ್ತಿದ್ದಾನೆ. ಅವನು ಆಡಿದ ಒಂದು ಮಾತನ್ನೂ ನಡೆಸಿಕೊಳ್ಳುತ್ತಿಲ್ಲ’ ಅಂತ ದೂರು ಹೇಳಿದ. ಗುರುಗಳು ಎಲ್ಲ ಶಿಷ್ಯರ ಕಡೆಗೂ ನೋಡಿದಾಗ ಶಿಷ್ಯರು ಈಗ ಅವರು ಸತ್ಯನಾರಾಯಣನಿಗೆ ಬೈಯಬಹುದು ಅನಿಸಿತು. ಗುರುಗಳು, ‘ಸುಳ್ಳು ಹೇಳುವುದು ತಪ್ಪು. ಆದರೇನು ಮಾಡುವುದು ಜನರು ತಮ್ಮ ತಮ್ಮ ಅನುಕೂಲಕ್ಕಾಗಿ ಸುಳ್ಳುಗಳನ್ನು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ, ಸತ್ಯನಾರಾಯಣ ಅಂತ ಹೆಸರಿಟ್ಟುಕೊಂಡು ಸುಳ್ಳು ಹೇಳಬಾರದು ಎನ್ನುವುದು ನಿಜವಾದರೂ ಅದು ಸಾಮಾನ್ಯ ಜನರಿಗೆ ಕಷ್ಟ. ಇದೇ ನಮಗೂ ಭಗವಂತನಿಗೂ ಇರುವ ವ್ಯತ್ಯಾಸ’ ಅಂದರು. ಆಗ ಶಿಷ್ಯರಿಗೆ ಹೊಸದೊಂದು ಬೆಳಕು ಕಾಣಲಾರಂಭಿಸಿತು.
ಶಿಷ್ಯರ ಕಣ್ಣು ತೆರೆಸಲು ಗುರುಗಳು ತಮ್ಮ ವಿಚಾರಧಾರೆಯನ್ನು ಮುಂದುವರಿಸಿದರು. ‘ಹೆಸರಿನಲ್ಲಿ ಎರಡು ರೀತಿಯಿದೆ. ಒಂದು ಗುಣವಾಚಕ. ವಿಷ್ಣು ಸಹಸ್ರನಾಮದಲ್ಲಿ ಬರುವ ಪರಮಾತ್ಮನ ಗುಣವಾಚಕ ನಾಮಗಳು. ಮತ್ತೊಂದು ಗುಣವಾಚಕವಲ್ಲದ ಬರೀ ವ್ಯವಹಾರದ ಹೆಸರು. ಅಂದರೆ ಮಾನವರು ಒಬ್ಬರನ್ನೊಬ್ಬರು ಗುರುತಿಸಲು ಇಟ್ಟುಕೊಂಡಿರುವ ಮತ್ತು ಕರೆದಾಗ ಓ ಎನ್ನಲು ಇರುವ ಹೆಸರು. ಹಿರಿಯರು ಮಕ್ಕಳಿಗೆ ನಾವು ಇಟ್ಟ ಹೆಸರಿನಂತೆಯೇ ನಮ್ಮ ಮಗನೂ ಬೆಳಗಲಿ ಎನ್ನುವ ಆಸೆಯಿಂದ ಶ್ರೀರಾಮ, ಶ್ರೀಕೃಷ್ಣ, ಶ್ರಿನಿವಾಸ ಅಂತೆಲ್ಲಾ ಹೆಸರಿಟ್ಟು ಜೀವನದಲ್ಲಿ ಕೆಲವು ಸಂದರ್ಭಗಳಲ್ಲಾದರೂ ಅವನು ಈ ಹೆಸರಿನ ಆದರ್ಶವನ್ನು ಪಾಲಿಸಲಿ ಎಂದು ಭರವಸೆ ಇಟ್ಟುಕೊಂಡಿರುತ್ತಾರೆ.
ಆದರೆ, ಸಾಮಾನ್ಯ ಜನರು ಹೆಸರಿಗೆ ತಕ್ಕಂತೆ ಆದರ್ಶ ಪುರುಷನಾಗಿರಬೇಕು ಎಂದು ಬಯಸುವುದೇ ಇಲ್ಲ. ನಮ್ಮ ಹೆಸರುಗಳು ನಮ್ಮನ್ನು ಯಾರಾದರೂ ಕೂಗಿದಾಗ ಓಗೊಡಲು ಇರುವುದಾದರೆ ವಿಷ್ಣುವಿನ ಅಷ್ಟೂ ಹೆಸರುಗಳು ಆತನ ಗುಣಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ ನಾವು ಪರಮಾತ್ಮ ಎನ್ನುವ ಹೆಸರನ್ನು ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತೇವೆ. ಇದು ಎಷ್ಟು ಅನ್ವರ್ಥನಾಮ ಎನ್ನುವುದನ್ನು ನೋಡೋಣ. ಆತ್ಮ ಎಂದರೆ ಅದು ದೇಹವಲ್ಲ, ಮನಸ್ಸು. ಮನಸ್ಸಿನಿಂದ ಎಲ್ಲವನ್ನು ಯೋಚಿಸಿ ನಂತರ ಕಾರ್ಯೋನ್ಮುಖರಾಗುವುದು ಪದ್ಧತಿ.
ಹಾಗಾದರೆ ಈ ಮನಸ್ಸನ್ನು ನಿಯಂತ್ರಿಸುವವರು ಯಾರು ಎಂದರೆ ಅದು ಆತ್ಮ. ಅಂದರೆ ಜೀವ. ಎಲ್ಲ ಆತ್ಮಗಳಿಗೂ ಪರಮವಾದ ಆತ್ಮವೇ ಪರಮಾತ್ಮ. ಹೀಗೆ ವಿಷ್ಣು ಸಹಸ್ರನಾಮದ ಪ್ರತಿಯೊಂದು ಹೆಸರಿಗೂ ಅನ್ವರ್ಥನಾಗಿರುವವನು ವಿಷ್ಣು ಅರ್ಥಾತ್ ಪರಮಾತ್ಮ. ನಾವು ಪರಮಾತ್ಮನಂತೆ ಇರುವುದು ಅಸಾಧ್ಯ. ಆದರೆ, ಪರಮಾತ್ಮನಂತೆ ಇರುವುದಕ್ಕೆ ಪ್ರಯತ್ನಿಸಬಹುದು. ಹೀಗಾಗಿ ನೀವೆಲ್ಲರೂ ಸಾಧ್ಯವಾದಷ್ಟೂ ಮಟ್ಟಿಗೆ ನಿಮ್ಮ ನಿಮ್ಮ ಹೆಸರನ್ನು ಸಾರ್ಥಕಗೊಳಿಸುವಂತಹ ಕೆಲಸಗಳನ್ನೇ ಮಾಡುತ್ತಾ ಇರುವುದಕ್ಕೆ ಪ್ರಯತ್ನಪಡಿ’ ಎಂದರು. ಇದರಿಂದಾಗಿ ಶಿಷ್ಯರಿಗೆ ತಮ್ಮ ತಮ್ಮ ಹೆಸರುಗಳಲ್ಲಿರುವ ಮಹತ್ವದ ಅರಿವು ಉಂಟಾಯಿತು.