ಮನೋಲ್ಲಾಸ: ಸದ್ಗುಣದಿಂದ ಸಂಪನ್ನತೆ

Manollasa
Published on
| ದೀಪಶ್ರೀ ಎಸ್. ಕೂಡ್ಲಿಗಿ

ದಿಗ್ವಿಜಯ ಬಳಿಕ ಭರತ ತನ್ನ ಸಾಮ್ರಾಜ್ಯಕ್ಕೆ ವಾಪಸ್ಸಾದ. ಆಗ ಅವನಿಗೊಂದು ಆಲೋಚನೆ ಬಂತು. ಅದೇನೆಂದರೆ, ಜನತೆಗೆ ಸಹಾಯ ಮಾಡಲು ತನ್ನ ಐಶ್ವರ್ಯವನ್ನು ಹೇಗೆ ಬಳಸಬೇಕು ಎಂಬುದಾಗಿತ್ತು. ಯಜ್ಞಗಳನ್ನು ಮಾಡಿ ಹಣವನ್ನು ಹಂಚಬೇಕು ಎಂದರೆ ಋಷಿಗಳು ಹಣವನ್ನು ಸ್ವೀಕರಿಸುವುದಿಲ್ಲ. ಹೀಗೆ ಆಲೋಚನೆಗೈಯುತ್ತ, ಯೋಗ್ಯರಾದ ಗೃಹಸ್ಥರಿಗೆ ಐಶ್ವರ್ಯವನ್ನು ಹಂಚೋಣ ಎಂದು ನಿರ್ಧಾರ ಮಾಡಿದ. ಗೃಹಸ್ಥರಿಗೆ ಐಶ್ವರ್ಯವನ್ನು ನೀಡಲು ಭರತ ಕಾರ್ಯಕ್ರಮ ಆಯೋಜಿಸಿದ. ಸಾಮ್ರಾಜ್ಯದ ಜನರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ನೀಡಿದ. ಸದ್ವಿಚಾರಿಗಳನ್ನು ಪರೀಕ್ಷೆ ಮಾಡಲು ಅರಮನೆಯ ಅಂಗಳವನ್ನು ಹಸಿರು ಹುಲ್ಲು ಹಾಗೂ ಸುಂದರವಾದ ಹೂವುಗಳಿಂದ ಅಲಂಕೃತಗೊಳಿಸಿದ.

ರಾಜನ ಆಗಮನಾಭಿಲಾಷಿಗಳು ಕಾರ್ಯಕ್ರಮಕ್ಕೆ ಬರಲು ಆರಂಭಿಸಿದರು. ಕೆಲವರು ಯಾವ ಪರಿಜ್ಞಾನವಿಲ್ಲದೆ ಹೂವು, ಹುಲ್ಲಿನ ಹಾಸಿನ ಮೇಲೆ ನಡೆದು ಅರಮನೆಗೆ ತೆರಳಿದರು. ರಾಜ ಇವರೆಲ್ಲರನ್ನು ಒಂದು ಪಕ್ಷಕ್ಕೆ ಸೇರಿಸಿದ. ಕೆಲವರು ಅರಮನೆಯ ಒಳಗೆ ಬರಲು ಮನಸ್ಸು ಮಾಡಲಿಲ್ಲ, ಹಿಂದಕ್ಕೆ ಸರಿದರು. ಎಷ್ಟೇ ಒಳಗೆ ಬರುವಂತೆ ಒತ್ತಾಯ ಮಾಡಿದರೂ ರಾಜನ ಒತ್ತಡಕ್ಕೂ ಮಣಿಯಲಿಲ್ಲ. ಕೊನೆಗೆ, ಅವರು ಹುಲ್ಲು ಇಲ್ಲದಿರುವ ದಾರಿ ಮೂಲಕ ಅರಮನೆ ಪ್ರವೇಶಿಸಿದರು. ರಾಜ ಇವರನ್ನು ಎರಡನೇ ಪಕ್ಷಕ್ಕೆ ಸೇರಿಸಿದ.

ಅಂಗಳದ ಮೂಲಕ ಅರಮನೆಗೆ ಬಾರದಿರಲು ಕಾರಣವೇನೆಂದು ಕೇಳಿದಾಗ ಎರಡನೇ ಪಕ್ಷದವರು ಹೀಗೆ ಉತ್ತರಿಸಿದರು.

‘ಪ್ರವಾಲ ಪತ್ರ ಪುಷ್ಪಾದೇಃ ಪರ್ವಣಿ ವ್ಯಪರೋಪಣಂ| ನಕಲ್ಪ ತೇದ್ಯ ತಜ್ಞಾನಾಂ ಜಂತೂನಾಂ ನೋನಭಿದ್ರುಹಾಂ|| ಸಂತ್ಯೇವಾ ನಂತ ಶೋ ಜೀವಾ ಹರಿತೇಷ್ವಂಕುರಾದಿಷು | ನಿಗೋತಾ ಇತಿ ಸಾರ್ವಜ್ಞಂ ದೇವಾಸ್ಮಾಭಿಃ ಶ್ರುತಂ ವಚಃ || ತಸ್ಮಾನ್ನಾ ಸ್ಮಾಭಿ ರಾಕ್ರಾಂತ ಮದ್ಯತ್ವೇ ತ್ವದ್ ಗೃಹಾಂಗಣಮ್ | ಕೃತೋಪ ಹಾರ ಮಾದ್ರಾ ದ್ರೖೆಃ ಫಲ ಪುಷ್ಪಾಂಕುರಾದಿಭಿಃ ||

‘ಇಂದು ಪರ್ವದಿನ. ಮೊಳಕೆ, ಎಲೆ, ಹೂವುಗಳನ್ನು ಹಾನಿ ಮಾಡಬಾರದು, ಅದರಲ್ಲಿರುವ ಜೀವಿಗಳಿಗೆ ಘಾಸಿ ಮಾಡಬಾರದು. ಪ್ರಭು, ಹಸಿರು ಮೊಳಕೆಯಲ್ಲಿಯೂ ಸರ್ವ ನಿಗೋದಿಯ ಜೀವವಿದೆ. ಆದ ಕಾರಣ ಅಂಗಳದಲ್ಲಿ ಶೋಭೆಗಾಗಿ ಇಟ್ಟಿರುವ ಮೃದುವಾದ ಹೂವು, ಹಣ್ಣು, ಮೊಳಕೆಗೆ ಹಾನಿ ಮಾಡಬಾರದು. ಅದರಲ್ಲಿರುವ ಹಲವಾರು ಜೀವರಾಶಿಗಳನ್ನು ಕೊಲ್ಲಬಾರದು ಎಂದು ಅಂಗಳದ ಮೇಲೆ ಹೆಜ್ಜೆ ಇಡಲಿಲ್ಲ’ ಎಂದರು. ಇವರ ಸದ್ಗುಣಗಳು ಭರತನ ಮೇಲೆ ಅಪಾರ ಪ್ರಭಾವ ಬೀರಿದವು. ಎರಡನೇ ಪಕ್ಷದ ಯೋಗ್ಯ ಗೃಹಸ್ಥರಿಗೆ ಅಪಾರ ಪ್ರಮಾಣದ ಹಣ, ಐಶ್ವರ್ಯವನ್ನು ದಾನವಾಗಿ ಕೊಟ್ಟ. ಸೂಕ್ಷಾ್ಮಣು ಜೀವಿಗಳಲ್ಲೂ ಪ್ರಾಣವಿದೆ; ಅವುಗಳಿಗೂ ಹಾನಿ ಮಾಡಬಾರದು ಎಂಬುದು ಮಹೋನ್ನತ ಆಲೋಚನೆ. ನಿರ್ಜೀವದಲ್ಲಿಯೂ ಜೀವವಿದೆ ಎಂಬುದನ್ನು ಅರಿತಾಗ ಮಾತ್ರ ಸದ್ಗುಣ ಸಂಪನ್ನರಾಗಲು ಸಾಧ್ಯ. ಹಾನಿ ಮಾಡದವರು ಸರ್ವೇತ್ತಮರಾಗುವರು. ಮನುಷ್ಯ, ಪ್ರಾಣಿಗಳು ಮಾತ್ರ ಜೀವಿಗಳು ಉಳಿದವೆಲ್ಲವೂ ನಮಗೆ ಉಪಯೋಗಿಸಿ ಬಿಸಾಡುವ ವಸ್ತುಗಳು ಎಂಬ ಅಹಂ ಹೊಕ್ಕಿತೋ ಮನುಷ್ಯ ತೃಣಕ್ಕಿಂತ ಕ್ಷೀಣನಾಗುತ್ತಾನೆ ಎಂಬುದು ನಾವೂ ತಿಳಿಯುವ ಜರೂರಿದೆ.

(ಲೇಖರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net