

ಅವರು ಶ್ರೀರಘುನಾಥತೀರ್ಥರು. ಉತ್ತರಾದಿಮಠದ ಪರಂಪರೆಯಲ್ಲಿ ವಿರಾಜಮಾನರಾದ ವಿಭೂತಿಪುರುಷರು. ಶಾಪಾನುಗ್ರಹಸಮರ್ಥರು. ತಪಸ್ವಿಗಳು. ಅವರು ಒಮ್ಮೆ ಶಿಷ್ಯರಿಗೆ ಪಾಠ ಹೇಳುತ್ತ ಕುಳಿತಿರುವಾಗ, ಒಬ್ಬ ಹೆಣ್ಣುಮಗಳು ಬಂದು ದೂರದಿಂದ ನಮಸ್ಕರಿಸಿದಳು. ಪಾಠದಲ್ಲಿ ಮುಳುಗಿದ್ದ ಗುರುಗಳು, ‘ಅಷ್ಟಪುತ್ರಾ ಭವ’ ಎಂದು ಆಶೀರ್ವಾದ ಮಾಡಿದರು. ಅದನ್ನು ಕೇಳಿ ಆ ಹೆಣ್ಣುಮಗಳು ಮತ್ತು ಶಿಷ್ಯರು ದಿಗ್ಭಾ›ಂತರಾದರು. ಕಾರಣ, ತನ್ನ ಗಂಡ ಮೃತನಾಗಿದ್ದರಿಂದ, ಗಂಡನ ಜೊತೆ ತಾನೂ ಸಹಗಮನ ಹೋಗಬೇಕೆಂದು ನಿಶ್ಚಯಿಸಿ, ಅದಕ್ಕಾಗಿ ಗುರುಗಳ ಅಪ್ಪಣೆ ಪಡೆಯಲು ಬಂದು ನಮಸ್ಕರಿಸಿದ್ದಾಳೆ ಆ ಹೆಣ್ಣುಮಗಳು. ಆದರೆ ಗುರುಗಳು ಅಷ್ಟಪುತ್ರಾ ಭವ (ಎಂಟು ಮಕ್ಕಳನ್ನು ಹೆತ್ತು ಸುಖವಾಗಿರು) ಎಂದು ಆಶೀರ್ವಾದ ಮಾಡಿದರು. ಆಮೇಲೆ ಗುರುಗಳಿಗೆ ಈ ಬಗ್ಗೆ ತಿಳಿಸಿದಾಗ, ‘ನನ್ನಲ್ಲಿ ನಿಂತು ದೇವರು ಹಾಗೆ ನುಡಿಸಿದ್ದಾನೆ, ನುಡಿದೆ’ ಎಂದು ಉತ್ತರಿಸಿದರು.
ಆಶ್ಚರ್ಯವೆಂದರೆ, ಗುರುಗಳ ಆ ಮಾತು ಸತ್ಯವಾಯಿತು. ಪವಾಡಸದೃಶವಾಗಿ ಅವಳ ಗಂಡ ಪುನಃ ಬದುಕಿ ಬಂದ. ನಂತರ ಅವರಿಗೆ ಎಂಟು ಮಕ್ಕಳೂ ಆದರು. ಇದು ಇತಿಹಾಸ. ಇಂದಿಗೂ ಅಷ್ಟಪುತ್ರಿ ಎಂಬ ಅವರ ವಂಶದವರು ಮಹಾರಾಷ್ಟ್ರದಲ್ಲಿ ಇದ್ದಾರೆ. ಇದರಿಂದ ನಾವು ತಿಳಿಯಬೇಕಾದದ್ದು- ಯಾವಾಗಲೂ ಸತ್ಯವನ್ನೇ ಮಾತನಾಡುವ ವ್ರತ ಮಹಾತ್ಮರಲ್ಲಿ ಇರುತ್ತದೆ. ಅವರ ಸತ್ಯನಿಷ್ಠೆಯಿಂದ ಪ್ರಸನ್ನನಾಗುವ ಪರಮಾತ್ಮ ಮಹಾತ್ಮರು ಏನು ಮಾತನಾಡುತ್ತಾರೆ ಅದನ್ನು ಸತ್ಯಗೊಳಿಸುತ್ತಾನೆ.
ರಾಮಾಯಣದಲ್ಲಿ ಈ ಮಾತನ್ನು ರಾವಣ ಹೇಳುತ್ತಾನೆ-
ಉಮಾ ನಂದೀಶ್ವರಶ್ಚಾಪಿ ರಂಭಾ ವರುಣಕನ್ಯಕಾ |
ಯಥೋಕ್ತಾಸ್ತಪಸಾ ಪ್ರಾಪ್ತಂ ನ ಮಿಥ್ಯಾ ಋಷಿಭಾಷಿತಮ್ ||
‘ಸ್ತ್ರೀನಿಮಿತ್ತವಾಗಿ ನಿನಗೆ ಮರಣವಾಗುತ್ತದೆ ಎಂದು ನನಗೆ ಅನೇಕ ಮಹಾತ್ಮರ ಶಾಪ ಇದೆ. ಮಹಾತ್ಮರು ಆಡಿದ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಹಾಗಾಗಿ ನನಗೆ ಅವಧ್ಯತ್ವವರ ಇದ್ದರೂ ಸಹ ಮಹಾತ್ಮರ ಮಾತಿನಂತೆ ನನಗೆ ಸೀತೆಯ ನಿಮಿತ್ತ ರಾಮನಿಂದ ಮರಣ ಬರುವುದು ನಿಶ್ಚಿತ’ ಎಂದು ರಾವಣ ತಿಳಿಸುತ್ತಾನೆ.
ಅಂದರೆ, ಯಾವಾಗಲೂ ಸತ್ಯವನ್ನೇ ನುಡಿಯುವ ಮಹಾತ್ಮರು ವಸ್ತುವನ್ನು ನೋಡಿ ಮಾತನಾಡಬೇಕಿಲ್ಲ. ಕಿಂತು ಅವರ ಮಾತಿನಂತೆ ವಸ್ತು ಸಿದ್ಧವಾಗುತ್ತದೆ. ಇದು ಅವರ ಸತ್ಯವಚನತಪಸ್ಸಿನ ಫಲ ಎಂಬುದನ್ನು ಅರಿಯಬೇಕು. ಪ್ರಕೃತ ನಾವೂ ಅವರಂತೆ ಯಾವಾಗಲೂ ಸತ್ಯವನ್ನೇ ನುಡಿಯುವ ಮಹಾತ್ಮರಾಗುವುದು ಅಸಾಧ್ಯ ಎನಿಸಬಹುದು. ಆದರೆ, ಸಣ್ಣಸಣ್ಣ ಕಾರಣಕ್ಕೂ ಸುಳ್ಳು ಮಾತನಾಡುವ ದುರಭ್ಯಾಸ ಬಿಟ್ಟರೆ, ಸಾಧ್ಯವಾದಷ್ಟು ಸತ್ಯ ಮಾತನಾಡುವ ಅಭ್ಯಾಸ ಮಾಡಿಕೊಂಡರೆ, ನಾವೂ ಕಲಿಕಾಲದ ಹರಿಶ್ಚಂದ್ರರೇ. ಅನಾವಶ್ಯಕ ಸುಳ್ಳು ಹೇಳುವುದನ್ನು ಬಿಟ್ಟು, ಸತ್ಯ ಮಾತನಾಡಲು ಶಕ್ತಿಮೀರಿ ಪ್ರಯತ್ನಿಸೋಣ. ಅದನ್ನು ಜೀವನವ್ರತವಾಗಿಸಿಕೊಳ್ಳೋಣ. ಆ ಮೂಲಕ ವಾಗಿಂದ್ರಿಯವನ್ನು ಶುದ್ಧವಾಗಿ ಇಟ್ಟುಕೊಳ್ಳೋಣ. ಸತ್ಯನಾಮಕ ಪರಮಾತ್ಮನ ಪ್ರೀತಿಗೆ ಪಾತ್ರರಾಗಿ, ನಿಜವಾದ ಸಾರ್ಥಕತೆ ಅನುಭವಿಸೋಣ.
(ಲೇಖಕರು ಸಂಸ್ಕೃತ ವಿದ್ವಾಂಸರು)