ಅಮೂಲ್ಯ ಕ್ಷಣಗಳು: ಮನೋಲ್ಲಾಸ

Manollasa
Published on
| ಸುಮಾ ವೀಣಾ 

ಒಂದು ಆಶ್ರಮ. ಅಲ್ಲಿಯ ಗುರುವಿಗೆ ಪ್ರಪಂಚ ಪರ್ಯಟನೆ ಮಾಡಬೇಕೆಂಬ ವಾಂಛೆಯಾದ ಕಾರಣ ಇಬ್ಬರು ಪ್ರೀತಿಯ ಶಿಷ್ಯರನ್ನು ಕರೆದು ‘ನಾನು ದೀರ್ಘ ಕಾಲದವರೆಗೆ ಪರ್ಯಟನೆಗೆ ಹೊರಡುತ್ತೇನೆ. ನೀವಿಬ್ಬರೂ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗಬೇಕು’ ಎನ್ನುತ್ತಾರೆ. ಪ್ರತಿಯಾಗಿ ಶಿಷ್ಯರು ಅನುಗ್ರಹಪೂರ್ವಕವಾಗಿ ಏನಾದರೂ ಕೊಡಬೇಕೆಂದು ಕೇಳಿಕೊಂಡಾಗ ಗುರುಗಳು ಇಬ್ಬರಿಗೂ ಬೊಗಸೆ ತುಂಬಾ ಕಡಲೆಕಾಳುಗಳನ್ನು ಕೊಟ್ಟರು.

ಗುರುಗಳಿಗೆ ಕೊಟ್ಟ ಮಾತಿನ ಅನ್ವಯ ಅನುಗ್ರಹ ಪೂರ್ವಕವಾಗಿ ಬಂದ ಕಡಲೆಕಾಳನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಾರೆ. ಮೊದಲನೇ ಶಿಷ್ಯ ಅದನ್ನು ರೇಷ್ಮೆ ವಸ್ತ್ರದಲ್ಲಿ ಕಟ್ಟಿ ಪೆಟ್ಟಿಗೆಯಲ್ಲಿಟ್ಟು ತ್ರಿಕಾಲ ಪೂಜೆ ಮಾಡುತ್ತಾನೆ. ಎರಡನೇ ಶಿಷ್ಯ ಅದನ್ನು ಬಿತ್ತಿ ಬೆಳೆ ತೆಗೆದು, ಮತ್ತೆ ಬಿತ್ತಿ ಬೆಳೆ ತೆಗೆಯುತ್ತಾನೆ. ಗೋದಾಮನ್ನು ತುಂಬುವವರೆಗೆ ನಿರಂತರ ಕೃಷಿಯನ್ನು ಮಾಡಿ ಬಂದ ಉತ್ಪತ್ತಿಯನ್ನು ಊರಿನ ಎಲ್ಲರಿಗೂ ಹಂಚುತ್ತಾನೆ.

ಮೊದಲನೇ ಶಿಷ್ಯನು ಎರಡನೇ ಶಿಷ್ಯನನ್ನು ಕಂಡು, ‘ನೀನು ಗುರುಗಳ ಮಾತಿಗೆ ತಕ್ಕುದಾಗಿ ನಡೆದುಕೊಳ್ಳಲಿಲ್ಲ. ನಾನು ನೋಡು, ಜೋಪಾನವಾಗಿ ಇರಿಸಿದ್ದೇನೆ’ ಎನ್ನುತ್ತಾನೆ. ಕಾಲಾಂತರದಲ್ಲಿ ಪರ್ಯಟನೆ ಮುಗಿಸಿ ಬಂದ ಗುರುಗಳು ತಾವು ನೀಡಿದ ಕಡಲೆಕಾಳಿನ ಬಗ್ಗೆ ಶಿಷ್ಯರಲ್ಲಿ ವಿಚಾರಿಸುತ್ತಾರೆ. ಮೊದಲನೇ ಶಿಷ್ಯ, ‘ಗುರುಗಳೆ ಬನ್ನಿ’ ಎಂದು ತಾನು ಪೂಜೆ ಮಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಗುರುಗಳು ಆ ಗಂಟನ್ನು ಬಿಚ್ಚಿ ತೋರಿಸಲು ಹೇಳಿದಾಗ, ಬಿಚ್ಚಿದರೆ ಕಡಲೆಕಾಳು ಸಂಪೂರ್ಣ ಹಾಳಾಗಿ ಧೂಳಾಗಿ ಹೋಗಿರುತ್ತದೆ. ‘ನನ್ನ ಅನುಗ್ರಹವನ್ನು ಧೂಳು ಮಾಡಿದೆ’ ಎಂದು ಬೇಸರಿಸುತ್ತಾ, ಎರಡನೇ ಶಿಷ್ಯನಿಗೆ, ‘ನಿನಗೆ ಕೊಟ್ಟ ಕಾಳುಗಳನ್ನು ತೆರೆ’ ಎಂದಾಗ, ‘ತೆರೆಯಲಾಗದು ಅದನ್ನು ತೋರಿಸಬೇಕು’ ಎನ್ನುತ್ತ ಹೊರಗೆ ಕರೆದುಕೊಂಡು ಹೋಗಿ ಹಚ್ಚಹಸುರಾಗಿ ಬೆಳೆದು ನಿಂತಿದ್ದ ಕಡಲೆ ಹೊಲವನ್ನು ತೋರಿಸುತ್ತಾನೆ. ಹಾಗೆ ತೋರಿಸುತ್ತಾ ಗುರುಗಳೆ, ‘ನಾನು ನಿಮ್ಮಅನುಗ್ರಹವನ್ನು ಊರವರಿಗೂ ಹಂಚಿದ್ದೇನೆ’ ಎನ್ನುತ್ತಾನೆ. ಗುರುಗಳಿಗೆ ಸಂತೋಷವಾಗುತ್ತದೆ.

ಇಲ್ಲಿ ಅನುಗ್ರಹವನ್ನು ರಕ್ಷಿಸುವುದು ಎಂದರೆ ಪದಶಃ ಅರ್ಥ ಅಲ್ಲ; ಅದನ್ನು ಲೋಕೋತ್ತರವಾಗಿಸುವುದು. ಇಲ್ಲಿ ಬೊಗಸೆ ತುಂಬಾ ಕಾಳುಗಳು ಅಂದರೆ ಅಮೂಲ್ಯ ಬದುಕಿನ ಕ್ಷಣಗಳು. ಅದನ್ನು ಕೊಟ್ಟ ಗುರು ಎಂದರೆ ಪರಮಾತ್ಮ. ಅವನು ಬದುಕಿನ ಅಮೂಲ್ಯ ಕ್ಷಣಗಳನ್ನು ನಮಗೆ ಕರುಣಿಸಿದ್ದಾನೆ ಎಂದರೆ ಅದನ್ನು ನಾವು ಸ್ನೇಹವಾಗಿ, ಸೌಧರ್ವಿುಕೆಯಾಗಿ, ಸಂತೋಷವಾಗಿ, ಸಾರ್ಥಕವಾಗಿ ಬಿತ್ತಬೇಕು. ಬಿತ್ತಿದ್ದನ್ನು ಅಕ್ಷಯವಾಗಿಸಬೇಕು. ಬಿತ್ತಿದಂತೆ ಬೆಳೆ ಎಂಬಂತೆ ನಾವು ಒಳ್ಳೆಯದನ್ನು ಬಿತ್ತಿದರೆ ಒಳ್ಳೆಯದೇ ಬರುತ್ತದೆ. ಸಮಯ ನಮ್ಮ ಕೈಯಲ್ಲಿ ಇರುವ ಅಮೂಲ್ಯ ಹರಳುಗಳು. ಒಮ್ಮೆ ಕೈಚೆಲ್ಲಿದರೆ ಮತ್ತೆ ಕೈ ಸೇರಲಾರವು. ಅಮೂಲ್ಯವಾದ ಕ್ಷಣಗಳನ್ನು ವ್ಯಯಿಸದೆ ಅಕ್ಷಯವಾಗಿಸಿಕೊಳ್ಳುವವನೆ ಚಾಣಾಕ್ಷ.

(ಲೇಖಕರು ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net