

ಅಂದಿನ ಗುರುಕುಲದಲ್ಲಿ ಪಾಠ ಮುಗಿದಾಗ ಒಬ್ಬ ಶಿಷ್ಯ ಎದ್ದು ನಿಂತು ‘ಗುರುಗಳೇ ನಾವು ಮನುಷ್ಯರಿಗೆ ಹೆಸರಿನ ಮೊದಲು ‘ಶ್ರೀ’ ಎಂದು ಸೇರಿಸುವ ಹಾಗೆ ದೇವರಿಗೂ ಸೇರಿಸಿದರೆ ಅದು ತಪ್ಪೇ ಸರಿಯೇ’ ಎಂದು ಕೇಳಿದ. ‘ನಿನ್ನ ಪ್ರಶ್ನೆ ಸಮಂಜಸವಾಗಿದೆ. ಶ್ರೀ ಅಥವಾ ಶ್ರೀಮಾನ್ ಎಂದರೆ ಸಾಮಾನ್ಯ ಮನುಷ್ಯರಿಗೆ ಗೌರವಸೂಚಕ ಪದ. ಆದರೆ ಆಧ್ಯಾತ್ಮಿಕವಾಗಿ ಶ್ರೀಮಾನ್ ಎಂದರೆ ಅದು ವಿಷ್ಣು, ಅವನು ವಿಶ್ವದ ಒಡೆತನ ಇರುವ ಶ್ರೀಮಂತ. ಹೀಗಾಗಿ ಅವನು ಶ್ರೀಮಾನ್. ಅದಕ್ಕೆ ಇನ್ನೊಂದು ಅರ್ಥ ಎಂದರೆ ಸಮಸ್ತ ವೇದಗಳಿಂದ ಪ್ರತಿಪಾದ್ಯನಾದವನು ಎಂದು.
ನಮ್ಮ ಎಲ್ಲಾ ಜ್ಞಾನಕ್ರಿಯೆಗಳಿಗೂ ಬಹಳ ಮುಖ್ಯವಾದುದು ನಮ್ಮ ಪಂಚೇಂದ್ರಿಯಗಳು. ಇವುಗಳೆಲ್ಲಾ ನಮ್ಮ ಶಿರದಲ್ಲಿ ನೆಲೆಸಿರುವುದು ಬಹಳ ಮುಖ್ಯ. ಒಂದೊಂದು ಪಂಚೇಂದ್ರಿಯಕ್ಕೂ ಶ್ರೀ ಅನ್ವಯವಾಗುತ್ತದೆ. ಹೇಗೆಂದರೆ ಕಣ್ಣು ಒಂದು ಶ್ರೀ, ಮನಸ್ಸು ಒಂದು ಶ್ರೀ, ಕಿವಿಗಳು ಮತ್ತೊಂದು ಶ್ರೀ, ಮಾತು ಒಂದು ಶ್ರೀ, ಉಸಿರು ಒಂದು ಶ್ರೀ. ಇವುಗಳೆಲ್ಲಾ ಶಿರಸ್ಸನ್ನು ಆಶ್ರಯಿಸಿಕೊಂಡಿವೆ. ಮನುಷ್ಯನಿಗೆ ಯಾವುದೇ ಜ್ಞಾನದ ಅರಿವು ಮೂಡಬೇಕಾದರೆ ಅದು ಕಣ್ಣು ಮತ್ತು ಕಿವಿಗಳಿಂದ. ನೀವೆಲ್ಲಾ ನಾನು ಹೇಳುವ ಪಾಠಗಳನ್ನು ಕಿವಿಗಳಿಂದ ಕೇಳುತ್ತೀರ. ನಾನು ಹೇಳಿದ್ದನ್ನು ನೀವು ಬರೆದುಕೊಳ್ಳುವುದು ಕಣ್ಣಿನ ಸಹಾಯದಿಂದ ಮತ್ತು ಅದನ್ನು ಪುನಃ ಓದುವುದೂ ಕಣ್ಣುಗಳ ಸಹಾಯದಿಂದ. ಹೀಗಾಗಿ ಕಣ್ಣು ಮತ್ತು ಕಿವಿಗಳನ್ನು ದೇಹದ ಸೂರ್ಯ ಚಂದ್ರರು ಎನ್ನುತ್ತೇವೆ. ಇನ್ನು ನಮ್ಮ ಬಾಯನ್ನು ಅಗ್ನಿಸ್ವರೂಪ ಎನ್ನುತ್ತಾರೆ. ಮಾತಿನಿಂದ ಎಂಥವರನ್ನೂ, ಎಂಥದನ್ನೂ ಸುಟ್ಟುಬಿಡಬಹುದು. ಹೀಗಾಗಿ ಬಾಯಿ ಅಗ್ನಿಗೆ ಸಮಾನ. ಕೆಲವರು ಮಾತಾಡುವಾಗ ‘ಅವನ ಬಾಯಿಗೆ ತುತ್ತಾಗಬೇಡ’ ಎನ್ನುತ್ತಾರಲ್ಲ. ಮಾತು ಭಗವಂತ ನಮಗೆ ಕೊಟ್ಟಿರುವ ಅಪೂರ್ವ ಸಂಪತ್ತು. ಸರ್ವಜ್ಞ ‘ಮಾತು ಬಲ್ಲಾತನಿಗೆ ಏತವದು ಸುರಿದಂತೆ, ಮಾತಾಡಲು ಅರಿಯದವನಿಗೆ ಏತವದು ನೇತಾಡಿದಂತೆ’ ಎಂದಿದ್ದಾನೆ. ‘ಮಾತೇ ಮುತ್ತು ಮಾತೇ ಮೃತ್ಯು’ ಎನ್ನುವುದೂ ಇದೆ.
ಹೀಗಾಗಿ ಮಾತು ಎಂದರೆ ಅದು ಕೆಂಡದ ಮನೆಯಿಂದ ಬರುವ ಹಬೆ. ಅದರಿಂದ ಮೈಯನ್ನು ಬೆಚ್ಚಗೆ ಮಾಡಿಕೊಳ್ಳಲೂ ಬಹದು, ಇಲ್ಲ ಸುಟ್ಟುಕೊಳ್ಳಲೂಬಹುದು. ನಮ್ಮ ಬಾಯಿಂದ ಚೆನ್ನಾದ ಮಾತು ಹೊರಡಬೇಕಾದರೆ ಮನಸ್ಸು ಚೆನ್ನಾಗಿರಬೇಕು. ಇಲ್ಲದಿದ್ದರೆ ಆಡುವ ಒಳ್ಳೆಯ ಮಾತೂ ಒಳಗೇ ಉಳಿದುಹೋಗುತ್ತದೆ. ಹೀಗಾಗಿ ಕಣ್ಣು, ಕಿವಿ, ಬಾಯಿ, ಉಸಿರು, ಮನಸ್ಸು ಇವುಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗಗಳು ಎನ್ನಬಹುದು. ಮನುಷ್ಯನ ಅಳಿವು, ಉಳಿವು, ಗೌರವ ಗಳಿಕೆ, ಮರ್ಯಾದೆ ಅವಮರ್ಯಾದೆ ಇವುಗಳೆಲ್ಲಾ ಲಭಿಸುವುದು ಈ ಅಂಗಗಳ ಬಳಕೆಯಿಂದಲೇ. ಹೀಗಾಗಿ ನಾವು ಈ ಎಲ್ಲ ಅಂಗಗಳನ್ನು ಹೇಗೆ ಬಳಸಬೇಕೆಂಬುದನ್ನು ಚೆನ್ನಾಗಿ ಅರಿತಿರಬೇಕು. ಈ ಅಂಗಗಳನ್ನು ನಮಗೆ ದಯಪಾಲಿಸಿದ ಆ ಕರುಣಾಮಯಿ ಭಗವಂತನೇ ಶ್ರೀಮಾನ್. ಹೀಗಿರುವಾಗ ನಾವು ಭಗವಂತನನ್ನೂ ಸಂಬೋಧಿಸುವಾಗ ಶ್ರೀ ಅಥವಾ ಶ್ರೀಮಾನ್ ಎಂದರೆ ಅದು ಹೆಚ್ಚು ಭಕ್ತಿಪೂರ್ವಕವೇ ಹೊರತು ಅನ್ಯಥಾ ಅಲ್ಲ’ ಎಂದರು ಗುರುಗಳು.
(ಲೇಖಕರು ಸಾಹಿತಿ)