

ಹದಿಹರೆಯ ಅತಿ ಅಪಾಯ. ಈವೊತ್ತಿನ ಸಿನಿಕ ಜಗತ್ತಿನಲ್ಲಿ ನಮ್ಮ ಆಲೋಚನೆಗಳೂ ಸಿನಿಮಾ ತರಹವೇ ಭ್ರಾಮಕ ಲೋಕವನ್ನೇ ಸೃಷ್ಟಿಸುತ್ತವೆ. ಪ್ರೌಢಾವಸ್ಥೆಯ ಕಾಲದಲ್ಲಿ ಆಲೋಚನೆಗಳು ವಾಸ್ತವಕ್ಕಿಂತ ಕಲ್ಪಿತ ಲೋಕದಲ್ಲಿ ವಿಹರಿಸಲು ಪ್ರಲೋಭಿಸುವುದೇ ಇದಕ್ಕೆ ಕಾರಣ. ಹುಚ್ಚುಕೋಡಿ ಮನಸ್ಸು ಭವಿಷ್ಯವನ್ನು ರೂಪಿಸಿಕೊಳ್ಳುವ ಕಾಲದಲ್ಲಿ ಪ್ರೀತಿ ಪ್ರೇಮದ ಅಮಲಿನಲ್ಲಿ ತೇಲಿಸುವುದೇ ಹೆಚ್ಚು. ಓದುವ ವಯಸ್ಸಿನಲ್ಲಿ ಓದದೆ ಪ್ರೇಮಶೋಧ ಮಾಡುವ ತವಕ. ಮಾಡುವ ಕೆಲಸ ಬಿಟ್ಟು ಇನ್ಯಾವುದೋ ಕೆಲಸ ಮಾಡಿ ಜೀವನ ಹಳಿ ತಪ್ಪಿ ಮುಂದೊಂದು ದಿನ ಪಶ್ಚಾತ್ತಾಪಪಡುವ ಹಂತ ತಲುಪುವ ಮೊದಲು ವಾಸ್ತವ ಅರಿತು ನಡೆದರೆ ಬದುಕು ಸುಂದರ. ದಟ್ಟಾರಣ್ಯವೊಂದರಲ್ಲಿ ಹಸಿದ ಸಿಂಹವೊಂದು ಬೇಟೆಯಾಡಲೆಂದು ಬರುವಾಗ ದೂರದ ಹೊಲವೊಂದರಲ್ಲಿ ದುಡಿಯುತ್ತಿರುವ ರೈತನ ಮಗಳೋರ್ವಳನ್ನು ಗಮನಿಸಿತಂತೆ. ಹಸಿದಿದ್ದ ಸಿಂಹಕ್ಕೆ ಬೇಟೆಯಾಡುವುದು ಮರೆತು ಆ ಹೆಣ್ಣಿನೊಡನೆ ಪ್ರೇಮಭಿಕ್ಷೆ ಬೇಡುವ ಮನಸ್ಸಾಯಿತಂತೆ! ಹೊಲದೊಳಗಿದ್ದ ಆ ಹೆಣ್ಣು ಮಗಳೊಡನೆ ಸಿಂಹ ಪ್ರೇಮ ನಿವೇದನೆ ಮಾಡಿಕೊಂಡು, ‘ನಾನು ನಿನ್ನೊಂದಿಗೆ ವಿವಾಹವಾಗುವೆ’ ಎಂದಿತು. ಕಾರ್ಯಸಾಧುವಲ್ಲದ ಈ ಪ್ರಸ್ತಾಪ ಹುಡುಗಿಗೆ ಒಪ್ಪಿತವಲ್ಲದಿದ್ದರೂ ವನರಾಜನೊಡನೆ ವಿರೋಧ ಸಾಧ್ಯವೇ?!
ಆಕೆ ಬಲು ಜಾಣೆ, ‘ನನ್ನಪ್ಪ ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ, ಅದೋ ನೋಡು ಆತ ದೂರದ ಆ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾನೆ. ಹೋಗಿ ಆತನ ಒಪ್ಪಿಗೆ ಪಡೆ’ ಎಂದಳು ಹುಡುಗಿ. ಸಿಂಹಕ್ಕೋ ಸ್ವರ್ಗ ಮೂರೇ ಗೇಣು. ಪ್ರೇಮದಮಲಿನಲ್ಲಿ ಸಿಂಹ ಹಸಿವನ್ನು ಮರೆತು ಕನ್ಯಾಯಾಚನೆಗೆ ರೈತನ ಬಳಿ ಬಂದು, ‘ನಾನು ನಿನ್ನ ಮಗಳ ಪ್ರೇಮ ಪಂಜರದ ಬಂದಿಯಾಗಿರುವೆ, ನನಗೆ ಕನ್ಯಾದಾನ ಮಾಡು’ ಎಂದು ಘರ್ಜಿಸಿತು. ರೈತನಿಗೆ ನಖಶಿಖಾಂತ ಕೋಪ ಬಂದರೂ ಸಿಂಹದೆದುರು ತಾನೇನೂ ಮಾಡಲಾರೆನೆಂಬ ವಾಸ್ತವದ ಅರಿವಾಗಿ ಇದಕ್ಕೆ ತಕ್ಕ ಪಾಠ ಕಲಿಸುವ ಉಪಾಯ ಮಾಡಿ, ‘ನನ್ನ ಮಗಳಿಗೆ ನಿನ್ನ ಉಗುರು ಹಾಗೂ ಹಲ್ಲುಗಳನ್ನು ಕಂಡರಾಗದು. ಅವುಗಳನ್ನು ತೆಗೆಸಿಕೊಂಡು ಬಂದು ವಿವಾಹ ಪ್ರಸ್ತಾಪ ಮುಂದಿಟ್ಟರೆ ನಿನ್ನ ಪಾದ ತೊಳೆದು ಕನ್ಯಾದಾನ ಮಾಡುವೆ’ ಎಂದ. ಅತ್ತ ಹುಡುಗಿಯ ಒಪ್ಪಿಗೆ, ಇತ್ತ ತಂದೆಯ ಕನ್ಯಾದಾನದ ವಾಗ್ದಾನ! ಆ ನಡುವೆ ಈ ಹಲ್ಲು- ಉಗುರುಗಳು ಯಾರಿಗೆ ಬೇಕು?! ಪ್ರೇಮಪಂಜರದೊಳಗೆ ಬಂದಿಯಾಗಿದ್ದ ಸಿಂಹಕ್ಕೆ ಅವೆರಡನ್ನೂ ಮುರಿದುಕೊಳ್ಳುವುದು ಅದರ ಪರಾಕ್ರಮಕ್ಕೆ ಸವಾಲಾಗಲಿಲ್ಲ.
ಅವೆರಡನ್ನೂ ಮುರಿದುಕೊಂಡ ಸಿಂಹ ಮಗಳನ್ನು ಕೊಡುವಂತೆ ರೈತನ ಎದುರು ನಿಂತಾಗ, ಇದನ್ನು ನಿರೀಕ್ಷಿಸಿದ್ದ ರೈತ ದೊಣ್ಣೆ ಹಿಡಿದು ತನ್ನ ಸ್ನೇಹಿತರೊಡಗೂಡಿ ಸಾಯುವಂತೆ ಹೊಡೆಯಲು ನಿಂತಾಗ ಮಗಳನ್ನು ಕೊಡುವುದಿರಲಿ, ಪ್ರಾಣ ಉಳಿದರೆ ಸಾಕೆಂದು ದಟ್ಟಡವಿಯೊಳಗೆ ಓಡಿ ತಪ್ಪಿಸಿಕೊಂಡಿತು ಸಿಂಹ.
ಕಲಿಯುವ ವಯಸ್ಸಿನಲ್ಲಿ ಕಲಿತರೆ ನಾವು ಬಲಾಢ್ಯ ಸಿಂಹದಂತೆ, ಓದು ಮರೆತು ಭ್ರಮೆಯಲ್ಲಿ ತೇಲಿದರೆ ತನ್ನ ಹಲ್ಲು ಉಗುರು ತಾನೇ ಕಿತ್ತುಕೊಂಡ ದುರ್ಬಲ ಸಿಂಹದಂತೆ. ಓದುವ ವಯಸ್ಸಿನವರು ಯೋಚಿಸಬೇಕಾದ ವಿಷಯವಿದು.