

| ಭಾರತಿ ಹೆಗಡೆ ಶಿರಸಿ
ಚಿಕ್ಕ ಪುಟ್ಟ ಸಮಸ್ಯೆಗಳಿಗೂ ನಾವು ವೈದ್ಯರ ಬಳಿ ತೆರಳುವ ಬದಲು ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಈ ಮನೆ ಮದ್ದುಗಳು ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರಿಗೂ ಸಹಾಯ ಮಾಡುವುದಲ್ಲದೆ, ನಿಜಕ್ಕೂ ಬಹೂಪಯೋಗಿಯಾಗಿವೆ. ಜತೆಗೆ ಯಾವುದೇ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಉಷ್ಣ ತಲೆನೋವು, ಜೀರ್ಣಕ್ರಿಯೆ ಸಮಸ್ಯೆ, ಅತಿಯಾದ ಪಿತ್ತದ ಸಮಸ್ಯೆ ಇಂತಹ ಅನೇಕ ರೋಗಗಳಿಗೆ ಔಷಧೀಯ ಗುಣಗಳನ್ನು ಹೊಂದಿರುವ ಜೀರಿಗೆ, ಲಿಂಬು, ತುಪ್ಪ, ಬಸಳೆ ಎಲೆ, ಇಂಗು ಹೀಗೆ ಇನ್ನಿತರ ಪದಾರ್ಥಗಳು ರಾಮಬಾಣವಿದ್ದಂತೆ ಎಂದರೆ ಅತಿಶಯೋಕ್ತಿಯಲ್ಲ.
ಅತಿಯಾದ ಉಷ್ಣಕ್ಕೆ ಜೀರಿಗೆ: ಸೂರ್ಯನ ತಾಪಮಾನಕ್ಕೆ ವಿಪರೀತವಾಗಿ ತಲೆನೋವು ಎದುರಾಗುತ್ತದೆ. ಕೇವಲ ಅರ್ಧಗಂಟೆಯ ಸಮಯ ಹೊರಗಿನ ವಾತಾವರಣದಲ್ಲಿ ಕಳೆದರೆ ಸುಡು ಬಿಸಿಲಿನಿಂದಾಗಿ ನೆತ್ತಿ ಕಾಯ್ದು ತಲೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ತಲೆನೋವಿನ ನಿವಾರಣೆಗೆ ಜೀರಿಗೆಯಂತಹ ಪರಿಹಾರ ಇನ್ನೊಂದಿಲ್ಲ. ಎರಡು ಚಮಚ ಜೀರಿಗೆಯನ್ನು ನೀರಿನಲ್ಲಿ ನುಣ್ಣಗೆ ಅರೆದು, ಈ ಜೀರಿಗೆಯ ಪೇಸ್ಟನ್ನು ವೀಳ್ಯದೆಲೆಯ ಮೇಲೆ ಹಾಕಬೇಕು. ಜೀರಿಗೆಯ ಪೇಸ್ಟ್ ಸರಿಯಾಗಿ ತಲೆಗೆ ನಾಟುವಂತೆ ನೆತ್ತಿಯ ಮಧ್ಯಭಾಗದಲ್ಲಿ ವೀಳ್ಯದೆಲೆಯನ್ನು ಒಂದು ಗಂಟೆ ಇಟ್ಟುಕೊಂಡರೆ ತಲೆನೋವು ತಾನಾಗಿಯೇ ವಾಸಿಯಾಗುತ್ತದೆ. ಇದೇ ರೀತಿ ಲಿಂಬೆಹಣ್ಣಿನ ರಸ ಮತ್ತು ತೆಂಗಿನ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ನೆತ್ತಿಗೆ ತಟ್ಟುವುದರಿಂದ ಉಷ್ಣದಿಂದ ಉಂಟಾಗುವ ತಲೆನೋವು ವಾಸಿಯಾಗುತ್ತದೆ. ಬಹೂಪಯೋಗಿ ಅಲೊವೆರಾವನ್ನು ಎರಡು ಇಂಚು ಕತ್ತರಿಸಿ, ಒಂದು ಭಾಗದ ಸಿಪ್ಪೆ ತೆಗೆದು, ಅದನ್ನು ನೆತ್ತಿಯ ಮೇಲೆ ಇಟ್ಟುಕೊಳ್ಳುವುದರಿಂದಲೂ ತಲೆನೋವು ಬೇಗ ಕಡಿಮೆಯಾಗುತ್ತದೆ.
ಬಾಯಿಹುಣ್ಣಿಗೆ ಬಸಳೆಸೊಪ್ಪು ಬಹೂಪಯೋಗಿ: ಉಷ್ಣ ಹೆಚ್ಚಾದಂತೆ ದೇಹದಲ್ಲಿ ಅನೇಕ ರೀತಿಯಲ್ಲಿ ಏರುಪೇರಾಗುತ್ತದೆ. ಅದರಲ್ಲಿ ಬಾಯಿಹುಣ್ಣು ಅಥವಾ ಅಲ್ಸರ್ ಕೂಡ ಒಂದು ಸಮಸ್ಯೆ. ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾದಂತೆ ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಸುಲಭವಾಗಿ ಪರಿಹಾರಬೇಕೆಂದರೆ, ಮನೆಯಲ್ಲಿಯೇ ಸಿಗುವ ಬಸಳೆಸೊಪ್ಪನ್ನು ಹಸಿಯಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಅಗೆದು ತಿಂದರೆ ಹುಣ್ಣು ತಾನಾಗಿಯೇ ಗುಣಮುಖವಾಗುತ್ತದೆ. ಅಲ್ಲದೇ, ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಬೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದಲೂ ಬಾಯಿಹುಣ್ಣನ್ನು ನಿವಾರಿಸಿಕೊಳ್ಳಬಹುದು. ಹಸಿ ತೆಂಗಿನತುರಿ ಮತ್ತು ಅರಿಶಿನ ಪುಡಿಯನ್ನು ಚೆನ್ನಾಗಿ ಮಿಶ್ರಣಮಾಡಿ ಅಗೆದು ತಿನ್ನುವುದರಿಂದ ಸರಳವಾಗಿ ಅಲ್ಸರ್ನಿಂದ ಮುಕ್ತಿ ಪಡೆಯಬಹುದು
ಜೀರ್ಣಕ್ರಿಯೆಯ ಸಮಸ್ಯೆಗೆ ಲಿಂಬೆಹಣ್ಣು ರಾಮಬಾಣ: ಎಷ್ಟೇ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ಅಜೀರ್ಣವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಉತ್ತಮ ಜೀರ್ಣಕ್ರಿಯೆಗೆ ಲಿಂಬೆಹಣ್ಣು ಸಿದ್ಧೌಷಧ. ಅಜೀರ್ಣದಿಂದಾಗುವ ತಲೆನೋವು, ಹೊಟ್ಟೆನೋವಿನ ಸಮಸ್ಯೆಗೆ ಒಂದು ಲೋಟ ಬಿಸಿ ಬಿಸಿ ನೀರಿಗೆ ಅರ್ಧ ಚಮಚ ಉಪ್ಪು, ಅರ್ಧ ಲಿಂಬು ರಸ ಮತ್ತು ಎರಡು ಚಮಚದಷ್ಟು ಶುಂಠಿರಸವನ್ನು ಬೆರೆಸಿ ಕುಡಿಯುವದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದಲ್ಲದೇ ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಉಪ್ಪು, ಲಿಂಬು ರಸ ಮತ್ತು ಒಂದು ಚಿಟಿಕೆ ಇಂಗು ಬೆರೆಸಿ ಕುಡಿಯುವುದರಿಂದ ಅಜೀರ್ಣ ಮಾಯವಾಗುತ್ತದೆ.
ಪಿತ್ತ ನಿವಾರಣೆಗೆ ದೊಡ್ಡಪತ್ರೆ ಸೊಪ್ಪು: ಉಷ್ಣದ ತಲೆನೋವು ಮತ್ತು ಪಿತ್ತ ಈ ಎರಡು ಸಮಸ್ಯೆಗಳು ಒಂದರಿಂದ ಒಂದು ಬರುತ್ತವೆ. ಅತಿಯಾದ ಪಿತ್ತದ ಪ್ರಮಾಣ ದೇಹದಲ್ಲಿರುವುದರಿಂದ ಪಿತ್ತ ನೆತ್ತಿಗೆ ಏರಿ ತಲೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ಪಿತ್ತದ ಅಂಶವನ್ನು ನಿಯಂತ್ರಣದಲ್ಲಿಡಲು ಉತ್ತಮ ವಿಧಾನ ಎಂದರೆ, ಮನೆಯಲ್ಲಿಯೇ ದೊರಕುವ ದೊಡ್ಡಪತ್ರೆಯ ಹತ್ತು ಎಲೆಗಳನ್ನು ಚೆನ್ನಾಗಿ ಕಿವುಚಿ ಅದರ ರಸ ತೆಗೆದು ಆ ರಸಕ್ಕೆ, ಸ್ವಲ್ಪ ಬೆಲ್ಲವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಪಿತ್ತ ನಿಯಂತ್ರಣದಲ್ಲಿರುತ್ತದೆ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಸವತೆಕಾಯಿಯನ್ನು ಚೆನ್ನಾಗಿ ಮಿಕ್ಸರ್ನಲ್ಲಿ ರುಬ್ಬಿ ಒಂದು ಲೋಟ ರಸವನ್ನು ತೆಗೆದು ನಲವತ್ತೈದು ದಿನಗಳ ಕಾಲ ಕುಡಿಯುವುದರಿಂದ ಪಿತ್ತ ಸಮಸ್ಯೆ ಮಾಯವಾಗುತ್ತದೆ.