

ಇವೆಲ್ಲವೂ ಒಂದು ಪಾರ್ಶ್ವವಾದರೆ ಇನ್ನೊಂದು ಪಾರ್ಶ್ವ ಅವರು ಎಂದಿಗೂ ರಾಜಿಯಾಗದೆ ನಡೆಸಿಕೊಂಡು ಬಂದ ಒಂದು ವೈಶಿಷ್ಟ್ಯಪೂರ್ಣ ಸಂತ ಜೀವನ. ಕೆಲವೊಮ್ಮೆ, ಕೆಲವರಿಗೆ ವಿಚಿತ್ರವೆಂದು ಕಂಡರೂ ಅವರ ಸತ್ಯ ಮತ್ತು ಅಹಿಂಸೆಯೆಡೆಗಿನ ಬದ್ಧತೆ ಪ್ರಶ್ನಾತೀತ! ಇನ್ನೂ ಪ್ರಶಂಸನೀಯವಾಗಿ ನನಗೆ ಕಾಣುವುದೆಂದರೆ ಯೌವನಾವಸ್ಥೆಯಲ್ಲಿ ಒಬ್ಬ ಸಾಮಾನ್ಯ ಹುಡುಗನಂತಿದ್ದ ಗಾಂಧಿ ತಾನು ಬದಲಾಗಬೇಕು ಎಂದು ಪಣತೊಟ್ಟು ಆ ಪರಿವರ್ತನೆಯ ಮಾರ್ಗದಲ್ಲಿ ಕ್ರಮಿಸಿದ ಯಶಸ್ಸು ಮತ್ತು ದೂರ. ತಾತ್ವಿಕ ನೆಲೆಯಲ್ಲಿ ಯಾರು ಎಷ್ಟೇ ಅವರನ್ನು ಒಪ್ಪದಿದ್ದರೂ ಈ ವಿಷಯದಲ್ಲಿ ಎಲ್ಲರೂ ಅವರನ್ನು ಮೆಚ್ಚುತ್ತಾರೆ.
ಹುತಾತ್ಮರೆಂದರೆ ಕೇವಲ ಗಾಂಧೀಜಿಯವರಷ್ಟೇ ಅಲ್ಲ. ರಾಷ್ಟ್ರಕ್ಕಾಗಿ ಮಡಿದ ಎಲ್ಲ ದಿವ್ಯಾತ್ಮರ ಸೇವೆಯನ್ನು ಗಾಂಧೀಜಿ ಮಡಿದ ಜನವರಿ 30ರಂದು ಸ್ಮರಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದೇವೆ ಅಷ್ಟೇ. ಮಹಾನ್ ವೀರ-ಶೌರ್ಯ, ಧೈರ್ಯ, ರಾಷ್ಟ್ರಪ್ರೇಮ, ಆತ್ಮಗೌರವ, ಮುತ್ಸದ್ಧಿತನಗಳೇ ಮೂರ್ತಿವೆತ್ತಂತಿದ್ದ- ಸುಭಾಷ್ ಚಂದ್ರ ಬೋಸರ ಜಯಂತಿಯನ್ನೂ ಕೇವಲ ಒಂದು ವಾರದ ಹಿಂದೆಯಷ್ಟೆ ಆಚರಿಸಿದ್ದೇವೆ. ಇಪ್ಪತ್ತರ ಹರೆಯದಲ್ಲೇ ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಆಂಗ್ಲರ ಗುಲಾಮನಾಗುವುದಕ್ಕೆ ತಾನು ಹುಟ್ಟಿಲ್ಲವೆಂದು ಘೊಷಿಸಿ ರಾಜೀನಾಮೆ ಎಸೆದು ಪೆಸಿಫಿಕ್, ಅಟ್ಲಾಂಟಿಕ್ ಸಾಗರಗಳಡಿಯಿಂದ ಹಿಡಿದು ಸಿಂಗಾಪುರ, ಜಪಾನ್ ಅಷ್ಟೇಕೆ ಇಡೀ ದಕ್ಷಿಣ-ಆಗ್ನೇಯ ಏಷ್ಯಾದ ನಭೋಮಂಡಲದವರೆಗೂ ತನ್ನ ವೀರಬಾಹುಗಳನ್ನು ಚಾಚಿ ಆಧುನಿಕ ಅಭಿಮನ್ಯುವಿನಂತೆ ಒಮ್ಮೆಲೆ ಮಿಂಚಿ ಕಣ್ಮರೆಯಾದ ಬೃಹತ್ ತಾರೆ ಅವರು. ತಮ್ಮ ಗುರು, ಆರಾಧ್ಯದೈವ ಸ್ವಾಮಿ ವಿವೇಕಾನಂದರಂತೆ ಯುವಜನರ ಸಾರ್ವಕಾಲಿಕ ಆದರ್ಶ ಅವರು. ಇದೇ ಸಾಲಿನಲ್ಲೇ ಬರುವ ಜ್ವಲಂತ ಉದಾಹರಣೆಗಳು ಹಲವು. ಪ್ರಾತಃಸ್ಮರಣೀಯ ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು. ಬಂಗಾಳದ ಅರವಿಂದ್ ಘೊಷ್, ವಿವೇಕಾನಂದರ ತಮ್ಮ ಭೂಪೇಂದ್ರನಾಥ್ ದತ್ತಾ ಮತ್ತೂ ಹಿಂದಕ್ಕೆ ಹೋದಂತೆ ಜನರಲ್ ಡಯರ್ನನ್ನು ಹತ್ಯೆ ಮಾಡಿದ ಉಧಮ್ ಸಿಂಗ್, ಇವರೆಲ್ಲರಿಗೂ ನಾಂದಿ ಹಾಡಿದ ವಾಸುದೇವ ಬಲವಂತ್ ಫಡಕೆ, ಚಾಫೇಕರ್ ಸಹೋದರರು ಇದೇ ರೀತಿಯ ಹತ್ತು ಹಲವು ಸಹಸ್ರ ಯುವಕ-ಯುವತಿಯರು ಇಂದು ಸ್ಮರಣೀಯರು. ಇದೇ ಒಂದು ಅಧ್ಯಯನ ಯೋಗ್ಯ ಬೃಹತ್ ಸಂಹಿತೆಯಾದೀತು, ಇವರೆಲ್ಲರೂ ಜೀವದ ಹಂಗು ತೊರೆದು ಮೃತ್ಯುವನ್ನು ಯಾವ ಕ್ಷಣದಲ್ಲೂ ಅಪ್ಪಿಕೊಳ್ಳಲು ಸಿದ್ಧರಾಗಿದ್ದ ಪುರುಷಸಿಂಹರು. ಇವರೆಲ್ಲ ತೀವ್ರವಾದಿಗಳು. ಶಸ್ತ್ರಧಾರಿಗಳು. ಶಸ್ತ್ರ ಹಿಡಿಯದ ತೀವ್ರಗಾಮಿಗಳು ತಿಲಕ್, ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್ ಇತ್ಯಾದಿಗಳು. ಇವರ ಅಸ್ತ್ರವಾದರೋ ಪ್ರಖರ ಭಾಷಣಗಳು ಮತ್ತು ಪ್ರಖರ ಲೇಖನಗಳು.
‘ಗಾಂಧಿ ಪರಂಪರೆ’ಯಲ್ಲಿ ಬಂದ ಸೌಮ್ಯವಾದಿಗಳ ತ್ಯಾಗ ಕಡಿಮೆಯಾದ್ದೇನಲ್ಲ. ಜೈಲುವಾಸಕ್ಕಿಂತ ಹೆಚ್ಚಾಗಿ ಮಡದಿ, ಮುದ್ದು ಮಕ್ಕಳು, ವೃದ್ಧ ತಾಯಿ-ತಂದೆಯರ ಯೋಗಕ್ಷೇಮವನ್ನೂ ಬದಿಗೊತ್ತಿ ಪ್ರತಿದಿನವೆಂಬಂತೆ ಲಾಠಿಯ ರುಚಿ ಸವಿದು ಜೈಲುಸೇರಿ ಉಪವಾಸ, ವನವಾಸ ಅನುಭವಿಸಿದ್ದು ಇವರೆಲ್ಲರನ್ನೂ ಅರ್ಥಾತ್ ಮೇಲೆ ಹೇಳಿದ ಇಡೀ ಪರಂಪರೆಯನ್ನೇ ಹುತಾತ್ಮರನ್ನಾಗಿಸಿದೆ, ಮಹಾತ್ಮರನ್ನಾಗಿಸಿದೆ. ಸಾಮಾನ್ಯವಾಗಿ ಗಾಂಧೀಜಿಯವರಿಗೆ ನಾವು ಮಹಾತ್ಮ ಎಂದು ಸಂಬೋಧಿಸಿದರೂ ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬರೂ ಮಹಾತ್ಮರೇ. ಪರಿಮಾಣದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದೆ ಅಷ್ಟೇ! ರಾಷ್ಟ್ರಕ್ಕೆ, ಧರ್ಮಕ್ಕೆ ಅರ್ಥಾತ್ ಈ ಮಹಾನ್ ಪರಂಪರೆಗೆ ಧಕ್ಕೆ ತಂದ ವ್ಯಕ್ತಿ, ವ್ಯವಸ್ಥೆಗಳನ್ನು ಕೊನೆಗಾಣಿಸಲು ಇತಿಹಾಸದುದ್ದಕ್ಕೂ ತ್ಯಾಗಿಗಳ ಬೃಹತ್ ಪರಂಪರೆಯನ್ನೇ ನಾವು ನೋಡುತ್ತೇವೆ.
ಮುಸಲ್ಮಾನರ ದಬ್ಬಾಳಿಕೆಯ ವಿರುದ್ಧ ಹೋರಾಡಿ ಬಲಿದಾನಗೈದವರು ಹಲವರೇ? ವಿಲ್ ಡ್ಯೂರೆಂಟ್ ಪ್ರಕಾರ ಮಾನವ ಇತಿಹಾಸದಲ್ಲೇ ಅತ್ಯಂತ ರಕ್ತಸಿಕ್ತವಾದ ಅಧ್ಯಾಯ ಭಾರತದಲ್ಲಿನ ಇಸ್ಲಾಂ ಆಡಳಿತ. ಸಹಸ್ರಮಾನಗಳೇ ಕಳೆದರೂ ಅದರ ಗಾಯಗಳು ವಾಸಿಯಾಗಲಾರವೇನೋ ಎನ್ನುವಷ್ಟು ತೀವ್ರ ಅವು. ಸೀತೆಯನ್ನು ಕಾಪಾಡ ಹೊರಟ ಜಟಾಯು ಯಾರಿಗಿಂತ ಕಡಿಮೆ ಹುತಾತ್ಮ? ಕಾರ್ತವಿರ್ಯಾರ್ಜುನನ ತಡೆರಹಿತ ಅವಿವೇಕಗಳನ್ನು ವಿರೋಧಿಸಿ ಕತ್ತು ಕುಯ್ಯಿಸಿಕೊಂಡ ಮಹರ್ಷಿ ಜಮದಗ್ನಿ ಇಲ್ಲಿ ಸ್ಮರಣೀಯ. ಮುಂದೆ ಅವನ ಮಗ ಪರಶುರಾಮ ಕಾರ್ತವೀರ್ಯಾರ್ಜುನನ್ನಷ್ಟೇ ಅಲ್ಲದೆ ; ಇಡೀ ಕ್ಷತ್ರಿಯ ಕುಲದ ರುಂಡ ಚಂಡಾಡಿದ ಎನ್ನುವುದು ಬೇರೆ ವಿಷಯ. ವ್ರತ್ರಾಸುರನೆಂಬ ದುರುಳ ದುಷ್ಟ ರಾಜನನ್ನು ಮುಗಿಸಲು ಬೇಕಾದ ವಜ್ರಾಯುಧಕ್ಕೆ ತನ್ನ ಬೆನ್ನುಮೂಳೆಯೇ ಮೂಲದ್ರವ್ಯ ಎಂಬುದನ್ನರಿತ ಮಹರ್ಷಿ ದಧೀಚಿ ಇನಿತಿಷ್ಟೂ ತಡವರಿಸದೆ ತನ್ನ ಶರೀರವನ್ನೇ ದಾನಗೈದು ಹುತಾತ್ಮ ಲೋಕದ ಧ್ರುವತಾರೆಯಾಗಿದ್ದಾನೆ. ಇದೊಂದು ಸಂಸ್ಮರಣೀಯ ಘಟನೆ. ಭಾರತೀಯ ಪರಂಪರೆಯಲ್ಲಿ ಹುತಾತ್ಮರ ಮೂಲವನ್ನು ಕೆದುಕುತ್ತ ಹೋದರೆ ಅದು ಸಿಗುವುದೇ ಇಲ್ಲವೆನೋ ಎನ್ನುವಷ್ಟು ಪ್ರಾಚೀನತೆಯನ್ನು ಹೊಂದಿದೆ. ತ್ಯಾಗ ಈ ದೇಶದ ಉಸಿರನಲ್ಲೇ ಇದೆ. ಭಾರತದ ದುಃಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ ಸ್ವಾಮಿ ವಿವೇಕಾನಂದರು ಮೊಳಗಿಸಿದ್ದು ‘ಭಾರತ ತನ್ನ ಅತ್ಯುತ್ತಮ ಮತ್ತು ಧೈರ್ಯವಾನ ಸುತರ ತ್ಯಾಗವನ್ನು ಅಪೇಕ್ಷಿಸುತ್ತದೆ’ ಎಂದು. ಅಷ್ಟೇ ಅಲ್ಲ ‘ಸಾವು ಖಚಿತವೇ ಆದಲ್ಲಿ ಒಂದು ಮಹಾನ್ ಉದ್ದೇಶಕ್ಕಾಗಿ ಸಾಯುವುದೇ ಲೇಸು’ ಎಂದರು. ಎಲ್ಲ ಕಾಲಕ್ಕೂ ಮಹತ್ತರ ತ್ಯಾಗಗಳಿಲ್ಲದೆ ಮಹತ್ತರ ಬದಲಾವಣೆಗಳು ಸಾಧ್ಯವೇ ಇಲ್ಲ. ಪ್ರಾರಂಭದಲ್ಲಿ ಹೆಸರಿಸಿದ ಪಟ್ಟಿಯಲ್ಲಿ ಎಲ್ಲರೂ ಒಂದೇ ಸಿದ್ಧಾಂತವನ್ನು ಒಪ್ಪಿಕೊಂಡವರಲ್ಲ. ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿ ಕೆಲವರು ಕಾಂಗ್ರೆಸ್ ಪ್ರಣೀತ ಸಿದ್ಧಾಂತಕ್ಕೆ ಬದ್ಧರಾದರೆ ಇನ್ನೂ ಹಲವರು ಶಸ್ತ್ರ ಸಜ್ಜಿತರಾಗುವುದೇ ಮಾರ್ಗ ಎಂದವರು. ಸುಭಾಷರಂತೂ ಈ ನಿಟ್ಟಿನಲ್ಲಿ ಬ್ರಿಟಿಷರ ಶತ್ರುರಾಷ್ಟ್ರಗಳಾದ ಜರ್ಮನಿ, ಜಪಾನ್ ಮತ್ತು ಇಟಲಿಗಳ ಸಹಾಯವನ್ನು ಪಡೆದರು. ಈ ಹೃದಯಹೀನ ಆಂಗ್ಲರಿಂದ ಶತಾಯಗತಾಯ ಮುಕ್ತರಾಗಬೇಕೆನ್ನುವುದೇ ಅವರ ಏಕಮೇವ ಧ್ಯೇಯ. ಆದರೆ ಇವರೆಲ್ಲರಲ್ಲೂ ಇದ್ದ ಏಕಸೂತ್ರವೆಂದರೆ ‘ಭಾರತ ಇಂಗ್ಲಿಷರ ಶೃಂಖಲೆಗಳಿಂದ ಮುಕ್ತರಾಗಬೇಕು’ ಎನ್ನುವುದು. ದಧೀಚಿ, ಜಮದಗ್ನಿ, ಜಟಾಯುವಿನಿಂದ ಹಿಡಿದು ಗುರು ಗೋವಿಂದ್ ಸಿಂಗರವರೆಗೆ ವಾಸುದೇವ ಫಡಕೆಯಿಂದ ಹಿಡಿದು ಬೋಸರವರೆಗೆ ಎದ್ದು ಕಾಣುವುದು ಪ್ರಾಣದ ಹಂಗಿಲ್ಲದೇ ಬದುಕಿದ್ದು! ‘ರಾಷ್ಟ್ರ ಸಾಯುತ್ತಿರುವಾಗ ನಾನು ಬದುಕುವುದರಲ್ಲಿ ಅರ್ಥವಿಲ್ಲ’ ಎನ್ನುವ ಚರಮತ್ಯಾಗ, ಚರಮ ಆದರ್ಶವೇ ಇವರೆಲ್ಲರ ಉಸಿರಾಗಿತ್ತು. ಇದನ್ನೂ ಮೀರಿದ ಸಾಮಾಜಿಕ ನ್ಯಾಯ, ಸಂಸ್ಕೃತಿ, ಆಧ್ಯಾತ್ಮಿಕತೆ, ರಾಷ್ಟ್ರೀಯತೆ ; ಸಮಷ್ಟಿ ಪ್ರಜ್ಞೆ ನನಗೆ ಕಾಣುವುದಿಲ್ಲ. ಇದು ವೇದಾಂತದ ಅತ್ಯುಚ್ಚ ತತ್ವ, ಅತ್ಯುಚ್ಚ ಆದರ್ಶ, ಇದೇ ಪ್ರಾಕ್ಟಿಕಲ್ವೇದಾಂತ ; ಅನುಷ್ಠಾನ ವೇದಾಂತ. ‘ಪರಾರ್ಥಕ್ಕಾಗಿ ಸ್ವಾರ್ಥವನ್ನು ತ್ಯಜಿಸಬೇಕು’ ಎನ್ನುವುದೇ ಮಹಾನ್ ಆದರ್ಶವಾದರೆ ಬಹುಜನ ಹಿತಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡುವುದಕ್ಕೆ ಸಿದ್ಧವಾಗಬೇಕು ಎನ್ನುವುದೇ ನಾನು ಕಾಣುವ ನೈತಿಕ ಆದರ್ಶಗಳ ಪರಮೋಚ್ಚ ಪಲ್ಲವಿ. ಸುಖ, ತ್ಯಾಗ, ಒಂದೆಡೆಯಾದರೆ ಇದರ ಅಂತಿಮ ಹಂತವೇ ಪ್ರಾಣತ್ಯಾಗ. ಅದನ್ನ ಮೀರಿದ ತಪಸ್ಸೇ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಈ ಆದರ್ಶ ಅತ್ಯುನ್ನತ ಸ್ತರವನ್ನು ಮುಟ್ಟಿತು. ಆದ್ದರಿಂದಲೇ ಇಡೀ ಎರಡನೇ ಸಹಸ್ರಮಾನದಲ್ಲಿ ಪರಕೀಯರ ಗುಲಾಮಗಿರಿಗೆ ಸಿಕ್ಕಿ ಭರಿಸಲಾಗದ ಕಷ್ಟಗಳಿಂದ ಒದ್ದಾಡಿ ಹೋಗಿದ್ದ ಭಾರತ ಸ್ವಾತಂತ್ರ್ಯದ ಫಲವನ್ನು ಉಣ್ಣಲು ಸಾಧ್ಯವಾಯಿತು. ತ್ಯಾಗ ಮತ್ತು ಸೇವೆಗಳೇ ಈ ಜನಾಂಗದ ಅವಳಿ ಆದರ್ಶಗಳು ; ಭಾರತವನ್ನು ಈ ಎರಡೂ ನಾಲೆಗಳಲ್ಲಿ ತೀವ್ರಗೊಳಿಸಿ ; ಮಿಕ್ಕಿದ್ದೆಲ್ಲವನ್ನು ತಾನೇ ನೋಡಿಕೊಳ್ಳುತ್ತದೆ ಎನ್ನುವ ವೀರವೇದಾಂತಿ ವಿವೇಕಾನಂದರ ಕರೆಗೆ ನಾಡು ಓಗೊಟ್ಟಿತ್ತು. ಆದರೆ ಈ ಮಹಾನ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಎನ್ನುವುದನ್ನು ಭಾರತ ಮರೆತಂತಿದೆ. ಇಲ್ಲೇ ನಾವೆಲ್ಲ ತಪ್ಪೆಸಗುತ್ತಿರುವುದು. ಸ್ವತಂತ್ರ ಭಾರತದಲ್ಲಿ ಪುರುಷಸಿಂಹರನ್ನು ನಿರ್ವಿುಸಿದ ಬೃಹತ್ ಯೋಜನೆ ಇನ್ನೂ ಬೇಕಾದಷ್ಟು ಬಾಕಿಯಿದೆ. ಶಿಕ್ಷಣ ಕ್ಷೇತ್ರಕ್ಕೆ ಇದರ ಪರಿವೆಯೇ ಇಲ್ಲವೆನಿಸುತ್ತಿದೆ. ಕಬ್ಬಿಣದ ಮಾಂಸಖಂಡಗಳ, ಉಕ್ಕಿನ ನರಮಂಡಲ, ವಿದ್ಯುಚ್ಛಕ್ತಿಯಂಥ ಇಚ್ಛಾಶಕ್ತಿ, ಅಂಜಿಕೆ, ಅಳುಕು, ಅಪ್ರಾಮಾಣಿಕತೆ ಎಂದರೇನೆಂತಲೂ ಅರಿಯದ ಸಹಸ್ರಾರು ಅಷ್ಟೇಕೆ ಲಕ್ಷಾಂತರ ಯುವಕ-ಯುವತಿಯರ ನಿರ್ಮಾಣ ಇನ್ನೂ ಬಾಕಿ ಇದೆ. ಶಿಕ್ಷಣ ಕ್ಷೇತ್ರ ಬೇಜವಾಬ್ದಾರಿ, ಭ್ರಷ್ಟ, ಕಾರ್ವಿುಕರ ನಿರ್ವಣದಲ್ಲೇ ತನ್ನ ಸಾರ್ಥಕತೆ ಕಾಣುತ್ತಿದೆ. ನಪುಂಸಕತೆಯನ್ನು ಸಜ್ಜನಿಕೆ ಎಂತಲೂ, ದಾರಿದ್ರ್ಯವನ್ನು ಸರಳತೆಯೆಂತಲೂ, ದುಷ್ಟತನವನ್ನು ಧಾರ್ವಿುಕ ಶ್ರದ್ಧೆಯಂತಲೂ ಬಿಂಬಿಸುತ್ತಿದ್ದೇವೆ. ರಾಷ್ಟ್ರೀಯತೆ ಜಾತೀಯತೆಗಿಂತಲೂ ಅಪಾಯಕಾರಿ ಎಂದು ಹೇಳುವಷ್ಟು ಶುದ್ಧ ಅಜ್ಞಾನಿ, ಅವಿವೇಕಿ ಉನ್ನತ ಮಟ್ಟದ ಅಧಿಕಾರಿಯಾಗಬಲ್ಲ, ಒಂದು ಜಿಲ್ಲೆಯ ಆಡಳಿತಯಂತ್ರಕ್ಕೆ ಮುಖ್ಯಸ್ಥನಾಗಬಲ್ಲ ಎಂದರೆ ಯಾವ ದುಸ್ಥಿತಿಯಲ್ಲಿದ್ದೇವೆ ಎಂದು ಪ್ರಜ್ಞಾವಂತರು ಯೋಚಿಸಬೇಕಾಗಿದೆ. ಇಂತಹ ನಪುಂಸಕ ಸಂಸ್ಕೃತಿಯನ್ನು ಹೇಳಹೆಸರಿಲ್ಲದಂತೆ ಮಾಡಬೇಕೆಂದರೆ ವೀರ, ಪೌರುಷವಂತ, ರಾಷ್ಟ್ರಪ್ರೇಮಿ, ಸರ್ವತ್ಯಾಗಕ್ಕೂ ಸಿದ್ಧವಾದ ಬಲಿಷ್ಠ ಸಿಂಹಸದೃಶರು ನಿರ್ವಣವಾಗಬೇಕು. ಹುತಾತ್ಮರ ಪಡೆ ವಿಸ್ತರಿಸಬೇಕು. ಹುತಾತ್ಮನಿಗಿಂತ ಮಹಾತ್ಮ ಯಾರು?
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)