ನೂರು ತುಂಬಿದ ಕನ್ನಡದ ಮೇರು ಸಾಧಕ ಎಲ್​ಎಸ್​ಎಸ್

ವಿಜಯವಾಣಿ (2)
Published on
(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು)

ತೊಂಬತ್ತು ವರ್ಷಕ್ಕೂ ಮೀರಿದ ಸಂತೃಪ್ತ ಜೀವನವನ್ನು ನಡೆಸಿದ ಶೇಷಗಿರಿ ರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮೀರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರು ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪುಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿ ರಾಯರು ಯಶಸ್ವಿಯಾಗಿ ನಿರ್ವಹಿಸಿದರು. ಅಲ್ಲದೆ, ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು.

ಕನ್ನಡದ ಮೇರು ವಿಮರ್ಶಕ ಪ್ರೋ.ಎಲ್.ಎಸ್.ಶೇಷಗಿರಿ ರಾವ್ ಅವರಿಗೆ ಇಂದಿಗೆ ನೂರು ವರ್ಷಗಳು ತುಂಬುತ್ತಿದ್ದವು (ಜನನ: 1925ರ ಫೆಬ್ರವರಿ 16). ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಶೇಷಗಿರಿ ರಾಯರಿಗೆ ಅರ್ಧ ಶತಮಾನಕ್ಕೂ ಹೆಚ್ಚಿನ ಸಂಬಂಧ ಇತ್ತು. 1947ರ ವೇಳೆಗೆ ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ.ತಾ.ಶರ್ಮ ಅವರ ಒತ್ತಾಯದ ಮೇರೆಗೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು (ಆಗ ಕಾರ್ಯದರ್ಶಿ ಸ್ಥಾನಕ್ಕೂ ಚುನಾವಣೆ ನಡಯುತ್ತಿತ್ತು). ಆಗ ರಾಯರಿಗೆ ಕೇವಲ 22 ವರ್ಷ. ತಂದೆ ಸ್ವಾಮಿರಾಯರಿಗೆ ಮಗ ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಶೇಷಗಿರಿರಾಯರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

1947ರಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಾಚಾರಿ ಅವರು ಪರಿಷತ್ತಿಗೆ ಭೇಟಿ ನೀಡುವ ಸಂದರ್ಭ ಬಂದಿತು. ಆ ಸಮಯದಲ್ಲಿ ಅಧ್ಯಕ್ಷರು ಊರಿನಲ್ಲಿ ಇರಲಿಲ್ಲ. ಹೀಗಾಗಿ ಸಂಪೂರ್ಣ ಕಾರ್ಯಕ್ರಮದ ವ್ಯವಸ್ಥೆ ಶೇಷಗಿರಿ ರಾಯರ ಮೇಲೆಯೇ ಬಿದ್ದಿತು. ರಾಷ್ಟ್ರದ ಪ್ರಥಮ ಪ್ರಜೆ ಭಾಗವಹಿಸುವ ಕಾರ್ಯಕ್ರಮ ಆಗಿದ್ದರಿಂದ ರಾಜ್ಯದ ಐ.ಜಿ.ಪಿ ಬೊಂಭೋರೆ ಸ್ಥಳ ಪರಿಶೀಲನೆಗೆ ಬಂದರು. ಷರಿಷತ್ತಿನ ಸಭಾಂಗಣ ಕಂಡವರೇ ಹೌಹಾರಿದರು. ‘ಇಲ್ಲಿ ಗಣ್ಯ ಅತಿಥಿಗೂ, ಪ್ರೇಕ್ಷಕರಿಗೂ ಪಾಯಿಂಟ್ ಬ್ಲಾಂಕ್ ರೇಂಜ್ ಇದೆ. ಅನುಮತಿ ನೀಡಲು ಸಾಧ್ಯವೇ ಇಲ್ಲ’ ಎಂದರು. ಶೇಷಗಿರಿ ರಾಯರು, ‘ಇದು ಸಾಹಿತ್ಯದ ಕಾರ್ಯಕ್ರಮ, ರಾಜಕೀಯ ಸಮಾವೇಶವಲ್ಲ. ಬರುವವರೆಲ್ಲರೂ ಸುಸಂಸ್ಕೃತರು.

ಯಾವುದೇ ಅನಾಹುತ ಆಗುವುದು ಸಾಧ್ಯವಿಲ್ಲ. ಪರಿಷತ್ತಿನ ಯಾವುದೇ ಕಾರ್ಯಕ್ರಮ ಪರಿಷತ್ತಿನಲ್ಲಿಯೇ ನಡೆಯಬೇಕು. ಬೇರೆ ಕಡೆ ನಡೆದರೆ ನಾವೇ ಕೆಟ್ಟ ಪರಂಪರೆ ಹಾಕಿಕೊಟ್ಟ ಹಾಗಾಗುತ್ತದೆ’ ಎಂದು ವಾದಿಸಿದರು. ಕೊನೆಗೆ ಬೊಂಭೋರೆ ಅವರು, ‘ನಿಮ್ಮ ವಯಸ್ಸಿಗಿಂತ ಜಾಸ್ತಿ ನನಗೆ ಸರ್ವೀಸ್ ಆಗಿದೆ’ ಎಂದರೂ ಶೇಷಗಿರಿ ರಾಯರು ಪಟ್ಟನ್ನು ಸಡಿಲಿಸಲಿಲ್ಲ. ಕೊನೆಯ ನಿರ್ಧಾರವೆಂಬಂತೆ ಬೊಂಭೋರೆ ಅವರು ‘ನಾನು ಫುಲ್ ಪೊಲೀಸ್ ಫೋರ್ಸ್ ಜೊತೆ ಇಲ್ಲಿಯೇ ಇರುತ್ತೇನೆ, ಏನಾದರೂ ಹೆಚ್ಚುಕಡಿಮೆಯಾದರೆ ಪರಿಸ್ಥಿತಿಯನ್ನು ಕೈಗೆ ತೆಗೆದುಕೊಳ್ಳುತ್ತೇನೆ’ ಎಂದರು.

ರಾಜಾಜಿಯವರು ಕೆಲವೇ ನಿಮಿಷ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ, ಅವರು ಉತ್ಸಾಹದಿಂದ ಸುಮಾರು ಒಂದು ಗಂಟೆಗಳ ಕಾಲ ಅದ್ಭುತವಾಗಿ ಮಾತನಾಡಿದರು. ಬೇರೊಂದು ಕಾರ್ಯಕ್ರಮವಿದ್ದರೂ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮ ನಡೆದ ರೀತಿಯನ್ನು ನೋಡಿ ಬೋಂಭೋರೆ ಸಂತೋಷಪಟ್ಟರು. ‘ಕೇವಲ ಇಪ್ಪತ್ತೆರಡು ವರ್ಷದ ಹುಡುಗ ಇಷ್ಟೊಂದು ದಕ್ಷವಾಗಿ ಕಾರ್ಯಕ್ರಮ ನಡೆಸಿದ್ದ’ ಎಂದು ಬಹುಕಾಲ ಎಲ್ಲರ ಬಳಿ ಹೇಳಿಕೊಂಡು ಬಂದಿದ್ದರು.

2007ರ ಡಿಸಂಬರ್ 12ರಿಂದ 15ರವರೆಗೆ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೇಷಗಿರಿ ರಾಯರು ಅಧ್ಯಕ್ಷರಾಗಿ ಆಯ್ಕೆಯಾದರು. ‘ಈಗಲೂ ಅವರು ಒಂದು ಪಂಥವನ್ನು ಪ್ರತಿನಿಧಿಸುತ್ತಾರೆ’ ಎಂಬ ವಿವಾದ ಎದ್ದಿತು. ಇದಕ್ಕಾಗಿ ಉಡುಪಿಯಲ್ಲಿಯೇ ಒಂದು ಪರ್ಯಾಯ ಸಮ್ಮೇಳನ ಕೂಡ ನಡೆಯಿತು. ಆದರೆ ತಮ್ಮ ಅಧ್ಯಕ್ಷ ಭಾಷಣದಲ್ಲಿ ಶೇಷಗಿರಿ ರಾಯರು ಪಂಥಗಳನ್ನು ಮೀರಿದ ಕನ್ನಡ ಕಾಳಜಿ ತಮಗೆ ಇರುವುದನ್ನು ಖಚಿತವಾಗಿ ಬಿಂಬಿಸಿದರು. ಕನ್ನಡದ ಭವಿಷ್ಯದ ಕುರಿತು ಸ್ಪಷ್ಟ ಚಿಂತನೆಗಳನ್ನು ನೀಡಿದರು. ಅವರದು ಒಂದು ರೀತಿಯಲ್ಲಿ ಮಾದರಿ ಎನ್ನಿಸಬಲ್ಲ ಭಾಷಣವಾಗಿ ರೂಪುಗೊಂಡಿತು.

1980ರಲ್ಲಿ ಆರ್.ಗುಂಡೂರಾಯರು ಸಂದಿಗ್ಧ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದರು. ಅವರಿಗೆ ಆಗ ಮಾಧ್ಯಮವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿಭಾವಂತರ ಅಗತ್ಯ ಕಾಣಿಸಿತು. ಗುಂಡೂರಾಯರು ತಮ್ಮ ಆಪ್ತವಲಯದಲ್ಲಿ ರ್ಚಚಿಸಿದಾಗ ಶೇಷಗಿರಿ ರಾಯರ ಹೆಸರು ಪ್ರಸ್ತಾಪಕ್ಕೆ ಬಂದಿತು. ಅವರ ಮಾಹಿತಿ ಸಂಗ್ರಹಣ ಶಕ್ತಿ, ಇಂಗ್ಲಿಷ್ ಮೇಲಿನ ಪ್ರಭುತ್ವ, ಎರಡಕ್ಕಿಂತಲೂ ಮುಖ್ಯವಾಗಿ ವಿಶ್ವಾಸಾರ್ಹತೆ ಗುಂಡೂರಾಯರನ್ನು ಸೆಳೆಯಿತು. ಆದರೆ ಅಧ್ಯಾಪಕ ವೃತ್ತಿಯಲ್ಲಿದ್ದ ತೃಪ್ತಿ ಮತ್ತು ರಾಜಕೀಯದ ಕುರಿತು ನಿರಾಸಕ್ತಿ ಕಾರಣದಿಂದ ಶೇಷಗಿರಿ ರಾಯರು ಇದನ್ನು ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಆದರೆ ಮುಖ್ಯಮಂತ್ರಿಗಳೂ ತಮ್ಮ ಪಟ್ಟನ್ನು ಬಿಡಲಿಲ್ಲ. ಅವರ ವಿಶ್ವಾಸಕ್ಕೆ ಮಣಿದು ಶೇಷಗಿರಿ ರಾಯರು ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಹುದ್ದೆಯನ್ನು ಒಪ್ಪಿಕೊಂಡರು. ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜ್ಯ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು, ಮುಖ್ಯಮಂತ್ರಿಗಳು ಭಾಗವಹಿಸುವ ಸಭೆ, ಸಮಾರಂಭಗಳ ಅಗತ್ಯಕ್ಕೆ ತಕ್ಕಂತೆ ಕನ್ನಡ ಅಥವಾ ಇಂಗ್ಲಿಷಿನಲ್ಲಿ ಅವರ ಭಾಷಣವನ್ನು ಸಿದ್ಧಪಡಿಸಿ ಕೊಡುವುದು, ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳ ಸಂವಹನಕ್ಕೆ ನೆರವಾಗುವುದು...

ಇವೆನ್ನೆಲ್ಲ ಅವರು ನಿಷ್ಠೆಯಿಂದ ಮಾಡಿದರು. ವಿದೇಶಿ ಗಣ್ಯರು ಭೇಟಿ ನೀಡಿದಾಗ ಮುಖ್ಯಮಂತ್ರಿಗಳಿಗೆ ನೆರವು ನೀಡುವ ಹೊಣೆಯನ್ನು ಅದ್ಭುತವಾಗಿ ನಿರ್ವಹಿಸಿದರು. ಗುಂಡೂರಾಯರು, ‘ಕಾರ್ಯದರ್ಶಿ ಬರೀ ನಂಬಿಕೆಯ ವ್ಯಕ್ತಿ ಆಗಿದ್ದರೆ ಸಾಲದು. ಎಚ್ಚರಿಸುವ ಕೆಲಸವನ್ನೂ ಮಾಡಬೇಕು’ ಎಂದು ಹೇಳಿದ್ದರಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಪಡೆದುಕೊಂಡರು. ಒಮ್ಮೆ ಆವೇಶದಲ್ಲಿ ಗುಂಡೂರಾಯರು, ‘ಪತ್ರಕರ್ತರು ಅರಬ್ಬಿ ಸಮುದ್ರಕ್ಕೆ ಹಾರಿಕೊಳ್ಳಲಿ’ ಎಂಬ ವಿವಾದದ ಹೇಳಿಕೆಯನ್ನು ಕೊಟ್ಟರು. ಉತ್ಸಾಹಗೊಂಡ ಅವರ ಪಕ್ಷದ ಯುವದಳ ಒಂದು ಪತ್ರಿಕೆಯ ಕಚೇರಿಗೆ ಬೀಗಮುದ್ರೆಯನ್ನು ಕೂಡ ಹಾಕಿ ಬಿಟ್ಟಿತ್ತು.

ಗುಂಡೂರಾಯರು ಪತ್ರಿಕಾಗೋಷ್ಠಿಯನ್ನು ನಡೆಸಲು ಸಿದ್ಧರಾದರು. ಆದರೆ ಶೇಷಗಿರಿ ರಾಯರು ಅದನ್ನು ಒಪ್ಪಲಿಲ್ಲ. ಪರಿಸ್ಥಿತಿ ಪ್ರಕ್ಷುಬ್ಧವಾಗಿರುವಾಗ ಮಾತನಾಡುವುದು ಇನ್ನಷ್ಟು ವಿವಾದವನ್ನು ಉಂಟು ಮಾಡಬಲ್ಲದು ಎನ್ನುವುದು ಅವರ ನಿಲುವು. ಗಂಡೂರಾಯರು ಇದನ್ನು ಒಪ್ಪದಿದ್ದರೂ ಶೇಷಗಿರಿ ರಾಯರ ಮಾತಿಗೆ ಬೆಲೆ ಕೊಟ್ಟು ಪತ್ರಿಕಾಗೋಷ್ಠಿಯ ನಿರ್ಧಾರದಿಂದ ದೂರವಾದರು. ಕ್ರಮೇಣ ಪರಿಸ್ಥಿತಿ ತಾನಾಗಿಯೇ ತಿಳಿಯಾಯಿತು. ಇದರಿಂದ ಗುಂಡೂರಾಯರಿಗೆ, ರಾಯರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು. ಸಚಿವ ಸಂಪುಟ ಸಭೆಗಳಲ್ಲಿ ಭಾಗವಹಿಸಿ ವಿಷಯದ ಗೌಪ್ಯತೆ ಹೇಗಿರುತ್ತದೆ ಎನ್ನುವುದನ್ನೂ ಶೇಷಗಿರಿ ರಾಯರು ಇದೇ ಸಂದರ್ಭದಲ್ಲಿ ಅರಿತರು.

ಶೇಷಗಿರಿ ರಾಯರು ‘ಜ್ಞಾನಗಂಗೋತ್ರಿ’, ‘ಕಿರಿಯರ ಕರ್ನಾಟಕ’, ‘ಬೆಂಗಳೂರು ದರ್ಶನ’ ಸೇರಿದಂತೆ ಹಲವು ಯೋಜನೆಗಳ ನೇತಾರರಾಗಿದ್ದರು. ಪ್ರಧಾನ ಸಂಪಾದಕರಾಗಿ ಪ್ರಮುಖ ಪಾತ್ರ ವಹಿಸಿದ ಇನ್ನೊಂದು ಮುಖ್ಯವಾದ ಯೋಜನೆ ಎಂದರೆ ರಾಷ್ಟ್ರೋತ್ಥಾನ ಪರಿಷತ್​ನವರ ‘ಭಾರತ ಭಾರತಿ’ ಪುಸ್ತಕ ಮಾಲಿಕೆ. ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿ ಶೇಷಗಿರಿ ರಾಯರು ಬಹಳ ಮುಖ್ಯವಾದ ಕೊಡುಗೆಯನ್ನು ನೀಡಿದರು. ನಾಡಿನ ಖ್ಯಾತ ಬರಹಗಾರರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಸ.ಸ.ಮಾಳವಾಡ ಮೊದಲಾದವರಿಂದ ಈ ಮಾಲಿಕೆಗೆ ತಮಗಿದ್ದ ಸಂಪರ್ಕದ ಕಾರಣದಿಂದ ಬರೆಸುವಲ್ಲಿ ಶೇಷಗಿರಿ ರಾಯರು ಯಶಸ್ವಿಯಾದರು.

ತೊಂಬತ್ತು ವರ್ಷಕ್ಕೂ ಮೀರಿದ ಸಂತೃಪ್ತ ಜೀವನವನ್ನು ನಡೆಸಿದ ಶೇಷಗಿರಿ ರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮೀರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರು ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪುಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿ ರಾಯರು ಯಶಸ್ವಿಯಾಗಿ ನಿರ್ವಹಿಸಿದರು. ಶೇಷಗಿರಿ ರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲ ವರ್ಗದವರಿಗೂ ತಮ್ಮ ಚಿಂತನೆಗಳು ತಲುಪುವಂತೆ ಬರೆದರು. ಅವರ ಚಿಂತನೆಗಳು ಈ ಪ್ರಕ್ರಿಯೆಯಲ್ಲಿ ಸರಳವಾದರೂ ತಮ್ಮ ಗಹನತೆಯನ್ನು ಕಳೆದುಕೊಳ್ಳಲಿಲ್ಲ. ಗ್ರೀಕ್ ನಾಟಕಗಳು, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಅದರಲ್ಲಿಯೂ ಷೇಕ್ಸಪಿಯರ್ ಮತ್ತು ಮಹಾಕಾವ್ಯಗಳು ಶೇಷಗಿರಿ ರಾಯರಿಗೆ ಪ್ರಿಯವಾದ ಕ್ಷೇತ್ರಗಳು.

ಈ ವಿಷಯಗಳ ಕುರಿತು ಅವರು ನಿರಂತರವಾಗಿ ಬರೆಯುತ್ತಲೇ ಹೋಗಿದ್ದರಿಂದ, ಹೊಸ ಒಳನೋಟಗಳನ್ನು ನೀಡಲು ಸಾಧ್ಯವಾಯಿತು. ತಮ್ಮ ವಿದ್ಯಾರ್ಥಿ ದೆಸೆಯಿಂದ ಕೊನೆಯ ದಿನಗಳವರೆಗೆ ಅವರು ಈ ಕುರಿತು ಅಧ್ಯಯನ ಮಾಡುತ್ತ ಹೋದರು. ಭಾರತದ ವಿವಿಧ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಪರ್ಕವಿರಿಸಿಕೊಂಡ ಶೇಷಗಿರಿ ರಾಯರು ಈ ಒಡನಾಟವನ್ನು ಕನ್ನಡದ ಉಪಯೋಗಕ್ಕೆ ಬಳಸಿಕೊಂಡರು. ಕರ್ನಾಟಕದ ಹೊರಗಿನ ಸಾಹಿತ್ಯಿಕ ವೇದಿಕೆಗಳಲ್ಲಿ ಕನ್ನಡದ ಕಂಪು ಹರಡಿದರು. ಹಾಗೆ ಕನ್ನಡಕ್ಕೆ ಜಾಗತಿಕ ಸಾಹಿತ್ಯದ ಬೆಳವಣಿಗೆ ತಂದು ಸುವರ್ಣ ಸೇತುವೆಯಾದರು. ಹಲವು ಪ್ರಮುಖ ಯೋಜನೆಗಳ ಸಂಪಾದಕರಾಗಿಯೂ ಅವರು ಮಹತ್ವದ ಕೆಲಸ ಮಾಡಿದ್ದಾರೆ. ಕನ್ನಡ ಬರಹಗಾರರಲ್ಲಿ ಇಂತಹ ನಾಯಕತ್ವದ ಗುಣ ಇರುವವರು ತೀರಾ ಅಪರೂಪ.

ಶೇಷಗಿರಿ ರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಹಿತಕ್ಕೆ ಸದಾ ತುಡಿಯುತ್ತಿದ್ದವರು. ಪರಿಷತ್ತಿನ ಬೆಳವಣಿಗೆಯಲ್ಲಿ, ಯೋಜನೆಗಳಲ್ಲಿ ಅವರು ತೋರಿದ ಕಾಳಜಿ ಬಹಳ ದೊಡ್ಡದು. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿಶೇಷವಾಗಿ ಅವರ ಕುರಿತು ಅವರ ಪ್ರೀತಿಯ ಶಿಷ್ಯೆ ಡಾ. ವನಮಾಲಾ ವಿಶ್ವನಾಥ್ ಅವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net