ಪ್ರೀತಿ ಎಂಬುದು ಒಂದು ಸುಂದರ ಸೋಂಕು!

Help Lift
Published on
ಜೀವನೋಪಾಯಕ್ಕೆಂದು ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಾಕೆ, ಒಮ್ಮೆ ಒಂದು ಮನೆಯ ಯಜಮಾನತಿ ಯನ್ನು ಕೇಳುತ್ತಾಳೆ. ‘ಮೇಡಂ, ನನಗೆ ಸ್ವಲ್ಪ ಮುಂಗಡ ಹಣ ಬೇಕು. ಪ್ರತಿಯಾಗಿ ನಾನುಹೆಚ್ಚು ಸಮಯ ಕೆಲಸ ಮಾಡುತ್ತೇನೆ.’ ಹಣ ಏಕೆ ಬೇಕೆಂದು ಮನೆಯೊಡತಿ ಕೇಳಲಾಗಿ ಆ ಕೆಲಸದವಳು ಹೇಳುತ್ತಾಳೆೆ. ‘ಹಬ್ಬ ಬರುತ್ತಿದೆ. ನನ್ನ ಮಗನಿಗೆ ಹೊಸ ಬಟ್ಟೆ ಕೊಡಿಸಬೇಕೆಂಬ ಆಸೆಯಾಗಿದೆ. ಪಾಪ, ಕಳೆದ ಎರಡು ವರುಷಗಳಿಂದ ಅವನಿಗೆ ಏನನ್ನೂ ಕೊಡಿಸಲಾಗಲಿಲ್ಲ ನನ್ನಿಂದ’. ಇದನ್ನು ಕೇಳಿ ಮನ ಕರಗಿದ ಮನೆಯೊಡತಿ ನೀನು ಹೆಚ್ಚು ಸಮಯ ಕೆಲಸ ಮಾಡಬೇಕಾಗಿಲ್ಲ ಹಣ ತಗೋ ಎಂದು ಕೊಡುತ್ತಾಳೆ.

ಸಂತೋಷಗೊಂಡ ಆ ಕೆಲಸದವಳು ಮಗನಿಗೆ ಹೊಸ ಬಟ್ಟೆಯನ್ನು ಖರೀದಿಸಿ, ಮನೆಗೆ ಹಿಂತಿರುಗುವ ಹಾದಿಯಲ್ಲಿ ಹರಿದು ಹೋದ ಅಂಗಿಯನ್ನು ತೊಟ್ಟಿದ್ದ ಹುಡುಗನೊಬ್ಬ ಚಳಿಯಲ್ಲಿ ನಡುಗುತ್ತಾ ಭಿಕ್ಷೆ ಬೇಡುತ್ತಿದ್ದ. ಇವನನ್ನು ನೋಡಿ ಮನಕರಗಿದ ಆ ಕೆಲಸದಾಕೆ ‘ನನ್ನ ಮಗನ ಬಳಿ ಸದ್ಯ ಹಳೆಯ ಅಂಗಿಯಾದರೂ ಇದೆ. ಪಾಪ ಈ ಹುಡುಗನ ಬಳಿ ಏನೂ ಇಲ್ಲವಲ್ಲ’ ಎಂದು ಯೋಚಿಸಿ ಮಗನಿಗೆಂದು ಖರೀದಿಸಿದ್ದ ಹೊಸ ಬಟ್ಟೆಯನ್ನು ಅವನಿಗೆ ನೀಡುತ್ತಾಳೆ. ಪ್ರತಿಯಾಗಿ ಬಡ ಬಾಲಕ ಸಂತಸ ವ್ಯಕ್ತಪಡಿಸುತ್ತಾನೆ. ಬರಿ ಕೈಯ್ಯಲ್ಲಿ ಮನೆಗೆ ವಾಪಸ್ಸಾದ ಈ ಕೆಲಸದಾಕೆ ತಾನು ಕೆಲಸ ಮಾಡುವ ಇನ್ನೊಂದು ಮನೆಯೊಡತಿಯ ಜತೆ, ಬಟ್ಟೆ ಅಂಗಡಿಗೆ ಹೋಗುತ್ತಾಳೆ. ಅಲ್ಲಿ ಮಗನಿಗೆ ಕಡಿಮೆ ದರದ ಒಂದು ಅಂಗಿಯನ್ನಾದರೂ ಕೊಡಿಸಬೇಕೆಂಬ ಆಸೆಯಿಂದ ಅದರ ಬೆಲೆಯನ್ನು ಕೇಳಲಾಗಿ, ಅಷ್ಟು ಹಣವೂ ತನ್ನಲ್ಲಿ ಇಲ್ಲವೆಂದು ಸಪ್ಪೆ ಮುಖ ಮಾಡಿಕೊಂಡು ಮೂಲೆಯಲ್ಲಿ ನಿಂತಿರುತ್ತಾಳೆ. ಇದನ್ನು ಗಮನಿಸಿದ ಆ ಶ್ರೀಮಂತ ಮಹಿಳೆಯ ಮಗಳು, ಅಮ್ಮ ತನಗೆಂದು ಖರೀದಿಸಿದ ಬೆಲೆ ಬಾಳುವ ಲಂಗವನ್ನು ಅಂಗಡಿ ಮಾಲೀಕನಿಗೆ ಹಿಂತಿರುಗಿಸಿ, ಒಂದು ಸಾಧಾರಣ ಲಂಗವನ್ನು ಆರಿಸಿ, ಮಿಕ್ಕ ಹಣದಿಂದ ಆ ಕೆಲಸದವಳ ಮಗನಿಗೆ ಶರ್ಟ್ ಕೊಡಿಸುವಂತೆ ಸೂಚಿಸುತ್ತಾಳೆ. ಇದನ್ನು ನೋಡಿದ ಆ ಅಂಗಡಿ ಮಾಲೀಕ ಈ ಬಡ ಮಗುವಿಗೆ ದಾನ ಮಾಡುವ ಸದ್ಗುಣ ನಿಮ್ಮಲ್ಲಿ ಇದ್ದಲ್ಲಿ, ನನ್ನಂತಹ ಶ್ರೀಮಂತನಿಗೆ ಯಾಕಿರಬಾರದು ಎನ್ನುತ್ತಾ ಕೆಲಸದಾಕೆಯ ಮಗನಿಗೆ ಅಂಗಿಯನ್ನು ಹಾಗೂ ಹರಿದ ಸೀರೆಯನ್ನುಟ್ಟಿದ್ದ ಆ ಬಡ ಹೆಂಗಸಿಗೆ ಒಂದು ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾನೆ.

ಹೌದು, ಪ್ರೀತಿ ಎಂಬುದು ಹಾಗೆ; ಹಂಚಿದಷ್ಟು ಹೆಚ್ಚುತ್ತಿರುತ್ತದೆ. ಇಬ್ಬರೂ ಸೋಲುವ ಆಟ ಕೆಲವೊಮ್ಮೆ ಮದುವೆ ಎಂದಾದರೂ, ಇಬ್ಬರೂ ಸ್ಪರ್ಧಿಸಿ, ಇಬ್ಬರೂ ಗೆಲ್ಲಬಹುದಾದ ಆಟವೆಂದರೆ ಪ್ರೀತಿ. ಹಾಲಿಗಿಂತ ಜೇನು ಮಧುರ; ಜೇನಿಗಿಂತ ಸ್ನೇಹ; ಸ್ನೇಹಕ್ಕಿಂತಲೂ ಪ್ರೀತಿ ಇನ್ನೂ ಮಧುರ. ನಾವು ಯಾರನ್ನಾದರೂ ಪ್ರೀತಿಸುವುದು ಒಂದು ರೋಚಕ ಅನುಭವ; ಯಾರಾದರೂ ನಮ್ಮನ್ನು ಪ್ರೀತಿಸುವುದು ಒಂದು ಸುಂದರ ಅನುಭವ. ಆದರೆ ನಾವು ಪ್ರೀತಿಸುವವರೇ ನಮ್ಮನ್ನು ಪ್ರೀತಿಸುತ್ತಿದ್ದರೆ ಅದು ಅತ್ಯಂತ ಮಧುರ. ಕೈಗಳ ಸಹಾಯವಿಲ್ಲದೆಯೇ ಇನ್ನೊಬ್ಬರನ್ನು ತಲುಪಲು ಸಾಧ್ಯವಾಗುವುದು ಪ್ರೀತಿಯಿಂದ ಮಾತ್ರ. ಪ್ರೀತಿ ಪ್ರೇಮಗಳಿಗೆ ಜಾತಿ, ಮತ, ಧರ್ಮ, ದೇಶ, ಬಡವ, ಬಲ್ಲಿದನೆಂಬ ಅಡ್ಡಗೋಡೆಗಳಿಲ್ಲ. ಇದು ಜಾಗತಿಕ. ಗ್ರಂಥ ಗ್ರಂಥವನು ಓದಿದವರೆಲ್ಲಾ ಪಂಡಿತರಲ್ಲ! ಪ್ರೀತಿ ಪ್ರೇಮವೆನೇಂಬುದನ್ನು ಅರಿತವನೇ ಪಂಡಿತ. ಪ್ರೀತಿ ಪ್ರೇಮವೆಂಬುದೇ ಇಲ್ಲದಿರುತ್ತಿದ್ದಲ್ಲಿ, ಈ ಜಗತ್ತೇ ಮಸಣ ಮೌನದಿಂದ ಆವರಿಸಿದ ಒಂದು ಗೋರಿಯಂತಾಗಿರುತ್ತಿತ್ತು. ನಿಜವಾದ ಪ್ರೀತಿ ನೀಡುವುದರಲ್ಲಿದೆ; ಪಡೆಯುವುದರಲ್ಲಿ ಅಲ್ಲ. ಇದನ್ನು ಅನುಭವಿಸಿಯೇ ಆನಂದಿಸಬೇಕು. ಅದು ಸದ್ದು ಗದ್ದಲವಿಲ್ಲದೆ ಹರಿಯುವ ಒಂದು ಮೋಹಕ ಹೊಳೆ. ನಿಜವಾದ ಪ್ರೀತಿ ಎಂದರೆ ಹೃದಯಾಳದಲ್ಲಿ ಬೇರುಬಿಟ್ಟು ಅರಳುವ ಮಂದಾರ ಕುಸುಮ. ಪ್ರೀತಿಯೆಂಬುದು ಬಹಳ ಸೂಕ್ಷ್ಮವಾದುದು. ನೀರು ಕಡಿಮೆ ಆದರೆ ಬಾಡಿ ಹೋಗುವ, ಹೆಚ್ಚಾದರೆ ಕೊಳೆತು ನಾರುವ ಹೂವಿನಂತೆ. ಇನ್ನೊಬ್ಬರನ್ನು ಪ್ರೀತಿಸುವ ಗುಣವನ್ನು ಹೆಚ್ಚಿಸಿಕೊಂಡಷ್ಟೂ ಅವರೂ ನಮ್ಮನ್ನು ಪ್ರೀತಿಸಲಾರಂಭಿಸುತ್ತಾರೆ. ಕಾರಣ ಪ್ರೀತಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲ ಒಂದು ಸುಂದರ ಸೋಂಕು. ಪ್ರೀತಿಯೊಂದೇ ಸಾಕು ಬದುಕಲು-ಬದುಕಿಸಲು. ಆದುದರಿಂದ ಇತರರಿಗೆ ನೀಡಲು ತಮ್ಮ ಬಳಿ ಏನೂ ಇಲ್ಲವೆಂಬುದು ಒಂದು ಪೊಳ್ಳು ವಾದ; ಪ್ರೀತಿ-ಪ್ರೇಮ ಸ್ನೇಹ ಸೌಹಾರ್ದತೆ, ಒಳ್ಳೆಯ ಮಾತುಗಳಿವೆಯಲ್ಲ. ಇದಕ್ಕೆ ಯಾವ ಖರ್ಚೂ ಇಲ್ಲ; ಯಾವ ಬಂಡವಾಳವೂ ಬೇಕಿಲ್ಲ. ಆದುದರಿಂದ ಬನ್ನಿ ಪ್ರೀತಿಯನ್ನು ಹಂಚೋಣ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net