ಸಾಲ ವಂಚನೆ ಮೊತ್ತ 5 ಲಕ್ಷ ಕೋಟಿ ರೂ.!; ಹೈರಾಣಾದ ಬ್ಯಾಂಕ್​ಗಳು..

Vv Lead
Published on

ದೇಶದಲ್ಲಿ ಬ್ಯಾಂಕ್​ಗಳಿಗೆ ಸಾಲ ವಂಚನೆ ಪ್ರಕರಣ ಹೊಸದೇನಲ್ಲ. ಆದರೆ, ಕಳೆದ ಹಣಕಾಸು ವರ್ಷ ಅಂತ್ಯದ ಡೇಟಾ ಪ್ರಕಾರ ಬ್ಯಾಂಕುಗಳಿಗೆ ಆಗಿರುವ ಸಾಲ ವಂಚನೆಯ ಪ್ರಮಾಣ ಎಲ್ಲರಿಗೂ ಆಶ್ಚರ್ಯವಾಗುವಷ್ಟು ದೊಡ್ಡದಿದೆ.

| ರಮಾನಂದ ಶರ್ಮಾ

ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಮರುಪಾವತಿಯಾಗದ ಸಾಲದ (ಎನ್​ಪಿಎ) ಪ್ರಮಾಣ ಹೆಚ್ಚಳದಿಂದಾಗಿ ಸಂಕಷ್ಟಕ್ಕೀಡಾಗಿದೆ ಎಂಬ ಸುದ್ದಿ ಕಳೆದ ನಾಲ್ಕಾರು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಇತ್ತೀಚಿನ ಮಾಹಿತಿ ಪ್ರಕಾರ, 2021ರ ಮಾರ್ಚ್ 31ರ ತನಕದ ವ್ಯವಹಾರದಲ್ಲಿ ದೇಶದ 90 ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 45,613 ಸಾಲ ವಂಚನೆ ಪ್ರಕರಣಗಳನ್ನು ದಾಖಲಿಸಿವೆ. ಇದರ ಒಟ್ಟು ಮೌಲ್ಯ 5 ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದು ಬ್ಯಾಂಕುಗಳು ನೀಡಿದ ಒಟ್ಟ್ಟು ಸಾಲದ ಶೇಕಡ 4.5ರಷ್ಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗರಿಷ್ಠ ಸಾಲ ವಂಚನೆ ಎದುರಿಸಿದೆ. ಇದರ ಮೊತ್ತ 78,072 ಕೋಟಿ ರೂಪಾಯಿ. ನಂತರದ ಸ್ಥಾನಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) 39,733 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಇಂಡಿಯಾ (ಬಿಒಬಿ) 32,224 ಕೋಟಿ ರೂಪಾಯಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) 29,572 ಕೋಟಿ ರೂಪಾಯಿ ಸಾಲ ವಂಚನೆಗೆ ಒಳಗಾಗಿವೆ. ಸಾಲ ವಂಚನೆ ಪ್ರಮಾಣದಲ್ಲಿ ಟಾಪ್ 5 ಬ್ಯಾಂಕುಗಳ ಪಾಲು ಶೇಕಡ 42.1 ಇದ್ದು 2,06,941 ಕೋಟಿ ರೂಪಾಯಿ ಆಗಿದೆ. ಖಾಸಗಿ ಬ್ಯಾಂಕುಗಳ ಪೈಕಿ ಹೆಚ್ಚು ಸಾಲ ವಂಚನೆ ಎದುರಿಸಿದ ಮೂರು ಬ್ಯಾಂಕುಗಳ ಪಾಲು ಶೇಕಡ 11.87. ಆದಾಗ್ಯೂ, ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್​ಡಿಎಫ್​ಸಿ ಎದುರಿಸಿದ ಸಾಲ ವಂಚನೆ ಪ್ರಮಾಣ ಶೇಕಡ 0.55.

ನಷ್ಟದ ಲೆಕ್ಕಾಚಾರ ಮತ್ತು ಟೀಕೆ: ರಿಸರ್ವ್ ಬ್ಯಾಂಕ್ ನಿಯಮಾವಳಿ ಪ್ರಕಾರ ವಂಚನೆ ಎಂದು ವರ್ಗೀಕರಿಸಲ್ಪಟ್ಟ ಮೊತ್ತಕ್ಕೆ 100% ಪೊ›ವಿಜನ್ ಇರಿಸಬೇಕಾಗುತ್ತದೆ . ಪೊ›ವಿಜನ್ ಅನ್ನು ಬ್ಯಾಂಕ್​ಗಳು ಗಳಿಸಿದ ಲಾಭದಿಂದ ಕೊಡಮಾಡುವುದರಿಂದ, ಬ್ಯಾಂಕಿನ ಲಾಭದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ. ವಂಚನೆಯ ಮೊತ್ತದ ಸಂಗಡ ಸುಸ್ತಿ ಸಾಲ ಮತ್ತು ಅನುತ್ಪಾದಕ ಸಾಲಗಳಿಗೂ ಪೊ›ವಿಜನ್ ಮಾಡುವುದರಿಂದ ಬ್ಯಾಂಕ್ ನಷ್ಟ ಅನುಭವಿಸುತ್ತದೆ ಅಥವಾ ನಿವ್ವಳ ಲಾಭದ ಪ್ರಮಾಣ ಗಮನಾರ್ಹವಾಗಿ ತಳ ಹಿಡಿಯುತ್ತದೆ. ಬ್ಯಾಂಕುಗಳ ಅಕೌಂಟಿಂಗ್ ಸಿಸ್ಟಮ್ ತಿಳಿಯದವರು ಬ್ಯಾಂಕುಗಳು ನಷ್ಟ ಅನುಭವಿಸುತ್ತವೆ ಎಂದು ಬೊಬ್ಬೆ ಹೊಡೆಯುತ್ತಾರೆ. ವಾಸ್ತವವಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಲಾಭ ಗಳಿಸುತ್ತಿದ್ದು, ಈ ಲಾಭವನ್ನು ವಂಚನೆ ಮೊತ್ತ, ಸುಸ್ತಿ ಸಾಲ ಮತ್ತು ಅನುತ್ಪಾದಕ ಸಾಲಗಳಿಗೆ ಪೊ›ವಿಜನ್ ಹೆಸರಿನಲ್ಲಿ ವರ್ಗಾಯಿಸು ವುದರಿಂದ ನಿವ್ವಳ ಲಾಭದಲ್ಲಿ ಗಣನೀಯ ಇಳಿಕೆ ಕಂಡು, ಬ್ಯಾಂಕುಗಳು ಜನರ ಟೀಕೆಗೆ ಆಹಾರವಾಗುತ್ತವೆ.

ವಂಚನೆ ಪ್ರಕರಣಗಳ ಹಾದಿ: ಸಾಲ ವಂಚನೆ ಪ್ರಕರಣಗಳ ಪೈಕಿ, ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಂಚನೆಗಳ ಸಂಖ್ಯೆಯೇ ಹೆಚ್ಚು. 2019ರ ಹಣಕಾಸು ವರ್ಷದಲ್ಲಿ ಇಂಥ 6709 ಪ್ರಕರಣಗಳು ಇದ್ದರೆ, ಇದು 2020ರಲ್ಲಿ ಸುಮಾರು 28%ನಷ್ಟು ಏರಿಕೆ ಕಂಡು 8707 ಪ್ರಕರಣಗಳು ದಾಖಲಾಗಿವೆ. 2019-20ರಲ್ಲಿ ಪತ್ತೆಯಾದ ವಂಚನೆ ಪ್ರಕರಣಗಳಲ್ಲಿ 76% ಪ್ರಕರಣಗಳು ಕೇವಲ 50 ಸಾಲಗಾರರಿಂದ ಆಗಿವೆ. 2014-15ರಿಂದ 2019-20ರವರೆಗಿನ ಅವಧಿಯಲ್ಲಿ ಬ್ಯಾಂಕುಗಳು 3.36 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ.

ಗ್ರಾಹಕರ ಪಾತ್ರವೇ ಅಧಿಕ: ಬ್ಯಾಂಕುಗಳಿಗೆ ಆಗಿರುವ ಸಾಲ ವಂಚನೆಯ ಪ್ರಮಾಣದಲ್ಲಿ ಬ್ಯಾಂಕ್ ಸಿಬ್ಬಂದಿಗಿಂತ ಸಾಲ ಪಡೆದ ಗ್ರಾಹಕರ ಪಾತ್ರವೇ ಹೆಚ್ಚು. ಠೇವಣಿ, ಇಂಟರ್​ನೆಟ್ ಮುಂತಾದ ಬ್ಯಾಲೆನ್ಸ್ ಶೀಟ್ ಹೊರತಾದ ನಿಟ್ಟಿನಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಎಂದು ಹೇಳಲಾಗುತ್ತದೆ. 2019ರ ಹಣಕಾಸು ವರ್ಷದಲ್ಲಿ ಒಟ್ಟೂ ವಂಚನೆ ಪ್ರಕರಣಗಳಲ್ಲಿ 90.2% ಸಾಲ ಗ್ರಾಹಕರಿಗೆ ಸಂಬಂಧ ಪಟ್ಟಿದ್ದರೆ, 2020 ಹಣಕಾಸು ವರ್ಷದಲ್ಲಿ ಇದು 98.1% ಗೆ ಏರಿದೆ. ವಂಚನೆಗೊಳಗಾದ ಬ್ಯಾಂಕುಗಳ ಪೈಕಿ 5 ಟಾಪ್ ಬ್ಯಾಂಕುಗಳಿಗಾದ ನಷ್ಟ ಸುಮಾರು 2,06,941 ಕೋಟಿ ರೂ.

ಸುಸ್ತಿದಾರರ ಪಾಲು ಕಡಿಮೆಯಲ್ಲ!: ಸಾಲ ವಂಚನೆಯ ಒಟ್ಟು 45,613 ಪ್ರಕರಣಗಳಲ್ಲಿ 2,261 ಉದ್ದೇಶಪೂರ್ವಕ ಸುಸ್ತಿದಾರರದ್ದು. ಇವರ ಸಾಲ ಬಾಕಿ 2020ರಲ್ಲಿ 1.64 ಲಕ್ಷ ಕೋಟಿ ಇದ್ದು, 2021ರಲ್ಲಿ ಶೇಕಡ 4.9 ಏರಿಕೆಯಾಗಿ 1.70 ಲಕ್ಷ ಕೋಟಿ ತಲುಪಿದೆ. 2020ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ 147 ಉದ್ದೇಶಪೂರ್ವಕ ಬಾಕಿದಾರರ ಸಂಖ್ಯೆ ಈ ಪಟ್ಟಿಗೆ ಸೇರಿದ್ದು 5785.93 ಕೋಟಿ ರೂ.ಗಳಷ್ಟು ಮೊತ್ತ ಹೆಚ್ಚಾಗಿದೆ.

(ಲೇಖಕರು ಬ್ಯಾಂಕಿಂಗ್ ವಲಯದ ನಿವೃತ್ತ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net