

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಬ್ಬಿದ ಭರತ ಭೂಮಿಯಲ್ಲಿ ಎಲ್ಲೇ ಹೋದರೂ ಊರು -ಕೇರಿ, ಹಾದಿ- ಬೀದಿ ಬದಲಾದಂತೆ ಜನಜೀವನದಲ್ಲಿ ಹಾಸುಹೊಕ್ಕಿರುವ ಭಾಷೆ, ಪರಂಪರೆ, ಕಲೆ ಸಂಸ್ಕೃತಿಯಲ್ಲಿ ಸಾಕಷ್ಟು ತರಹದ ಬದಲಾವಣೆ ಕಾಣಬಹುದಾಗಿದೆ. ಇಂದಿನದು ಆಧುನಿಕ ಯುಗ. ಯಂತ್ರ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲ ವಿಷಯಗಳಲ್ಲೂ ಪ್ರಗತಿ ಸಾಧಿಸಿದ್ದೇವೆ. ಭೂಮಿ ಬಿಟ್ಟು ಬಾಹ್ಯಾಕಾಶಕ್ಕೂ ನೆಗೆದಿದ್ದೇವೆ. ನಾವು ಅದೆಷ್ಟು ಎತ್ತರಕ್ಕೇರಿದರೂ ನಮ್ಮ ಮೂಲವಿರುವುದು ನಾಡಿನ ನೆಲ-ಜಲದಲ್ಲಿ. ಈ ಜಾನಪದವು ಗ್ರಂಥರೂಪ, ಅಥವಾ ಅಧ್ಯಯನ ಮಾದರಿಯಲ್ಲಾಗಲೀ ಸಮಗ್ರವಾಗಿ ದಾಖಲಾಗಿಲ್ಲ. ದಾಖಲಾಗದಿದ್ದರೂ ಅದು ಅಸ್ತಿತ್ವವನ್ನು ಹೊಂದಿರುವುದು ಜನಪದರ ನಿತ್ಯ ಜೀವನದಲ್ಲಿಯೇ. ಹಾಗಾಗಿ ಜನರ ಜೀವನದಿಂದ ಜಾನಪದವನ್ನು ಬೇರ್ಪಡಿಸಲಾಗದು.
ಸಾಗರದಿಂದ ಎಷ್ಟು ನೀರನ್ನು ತೆಗೆದರೂ ಮುಗಿಯಲಾರದೋ ಅಂತೆಯೇ ಜಾನಪದ ಸಂಗತಿಗಳನ್ನು ಹೇಳ ಹೊರಟರೆ ಮುಗಿಯಲಾರದು. ಇಂದಿನ ದಿನಗಳಲ್ಲಿ ಹೆಚ್ಚಾಗಿ ಜಾನಪದ ಕಲೆ ಮತ್ತು ಸಾಹಿತ್ಯದ ಬಗ್ಗೆ ಸಾಕಷ್ಟು ರೀತಿಯಲ್ಲಿ ಬೆಳಕು ಚೆಲ್ಲಲಾಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲೂ ಚಿಂತನೆಗಳು ನಡೆಯುತ್ತಿವೆ.ಓದು, ಬರಹ ಗೊತ್ತಿಲ್ಲದಿದ್ದರೂ ಜಾನಪದ ಕಲೆ, ಸಾಹಿತ್ಯಗಳ ಬಗ್ಗೆ ಅಪಾರ ಜ್ಞಾನವಿರುವ ಗ್ರಾಮೀಣ ಜನರು ಮಕ್ಕಳಿಗೆ ಜಾನಪದ ಹಾಡು, ಗೀತೆ-ಸಾಹಿತ್ಯಗಳ ಮೂಲಕ ಬೋಧನೆ ಮಾಡುತ್ತಿದ್ದರು. ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾ ‘ತಾಯಿಯು ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಮಾತಿನಲಿ ಚೂಡಾಮಣಿಯಾಗು| ಕಂದಯ್ಯ ಜ್ಯೋತಿಯೇ ಆಗು ಜಗಕೆಲ್ಲ’ ಎಂದು ಹಾರೈಸುತ್ತಾ.. ನೀತಿಯನ್ನು ಕಲಿಸುತ್ತಾಳೆ.
ಪಾಡ್ದನ, ಗೊಬ್ಬಿಯಾಳೋ, ರಾಗಿ ಬೀಸುವಾಗ ಹಾಡುವ ಹಾಡುಗಳು, ನೆಲ್ಲುಕುಟ್ಟುವಾಗ ಹಾಡುವ ಹಾಡುಗಳು, ಹೊಲ ಉಳುವಾಗ, ಬೀಜ ಬಿತ್ತುವಾಗ, ಬೆಳೆ ಕಟಾವು ಮಾಡುವಾಗ, ಹೀಗೆ ವಿವಿಧ ದೈನಂದಿನ ಕೆಲಸ ಕಾರ್ಯಗಳು ಮತ್ತು ಆಚರಣೆ, ಸಂಪ್ರದಾಯಗಳಿಗನುಗುಣವಾಗಿ ನಾನಾ ರೀತಿಯ ಜನಪದ ಹಾಡುಗಳಿವೆ. ಇವೆಲ್ಲ ಮನಸ್ಸನ್ನು ಅರಳಿಸಿ, ದೇಹಾಯಾಸವನ್ನು ನಿವಾರಿಸಿ ಕೆಲಸ ಕಾರ್ಯಗಳಲ್ಲಿ ಮತ್ತಷ್ಟು ಉತ್ತೇಜಿಸುವಂತೆ ಮಾಡುತ್ತಿದ್ದವು. ಅಲ್ಲದೆ, ಜೀವನಕ್ಕೆ ಮೌಲ್ಯವನ್ನೂ ತಿಳಿಸಿಕೊಡುತ್ತಿದ್ದವು. ಹಾಗಾಗಿ ಮಾನವ ಸಂಸ್ಕೃತಿಯಲ್ಲಿ ಕಲೆಗೆ ಅಗ್ರಸ್ಥಾನವಿದೆ.
ಕೇರಳದಿಂದ ಅಸ್ಸಾಂನ ಭಾಗದವರೆಗೆ ಗಮನಿಸಿದರೆ ಅನೇಕ ಅಮೂಲ್ಯವಾದಂತಹ ಸಂಪ್ರದಾಯಗಳನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ. ಕರ್ನಾಟಕವನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿರುವಂತಹ ಜಾನಪದ ಕಲೆಗಳನ್ನು ಕಲ್ಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಬಹುಶಃ 200ರಿಂದ 300 ವರ್ಷಗಳ ಹಿಂದೆ ದೇಶದಲ್ಲಿ ಮಳೆ, ನೆರೆ ಹಾಗೂ ಭೌಗೋಳಿಕವಾದಂತಹ ಸಂಪರ್ಕದ ಕೊರತೆಯಿಂದಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣಿಸುವುದು ಬಹಳ ಕಷ್ಟವಾಗಿತ್ತು. ಆದರೆ, ಆಯಾ ಪ್ರದೇಶವಾರು ಅನೇಕ ವಿಶಿಷ್ಟ ಕಲೆಗಳು, ಸಂಪ್ರದಾಯಗಳು, ಆಚರಣೆಗಳು ಬೆಳೆದುಕೊಂಡು ಬಂದಿವೆ. ಒಂದೇ ಜಿಲ್ಲೆಯಲ್ಲಿ ಅನೇಕ ರೀತಿಯ ಕಲೆಗಳನ್ನು ಹಾಗೂ ಕಲೆಯಲ್ಲಿ ವಿವಿಧ ಪ್ರಕಾರಗಳನ್ನು ಕಾಣಬಹುದು.
ದಕ್ಷಿಣ ಕನ್ನಡ-ಉತ್ತರ ಕನ್ನಡ ಜಿಲ್ಲೆಯನ್ನೇ ಉದಾಹರಣೆಯಾಗಿ ಇಟ್ಟುಕೊಂಡರೆ ಎರಡೂ ಕಡೆ ಯಕ್ಷಗಾನ ಇದೆ. ದಕ್ಷಿಣ ಕನ್ನಡದ ಯಕ್ಷಗಾನ ತೆಂಕುತಿಟ್ಟಾದರೆ ಉತ್ತರ ಕನ್ನಡದ್ದು ಬಡಗು ತಿಟ್ಟು. ಇಲ್ಲಿ ಮೂಲ ಸ್ವರೂಪ ಯಕ್ಷಗಾನ ಒಂದೆಯಾದರೂ ಪ್ರದರ್ಶನ, ವೇಷಭೂಷಣ, ಮಾತುಗಾರಿಕೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದು. ಉತ್ತರ ಕರ್ನಾಟಕದ ಜಾನಪದ ನಾಟಕ ಪ್ರಕಾರಗಳಲ್ಲಿ ಕೃಷ್ಣ ಪಾರಿಜಾತವು ಒಂದು. ಇದು ಯಕ್ಷಗಾನ ಮತ್ತು ಬಯಲಾಟದ ಸಮ್ಮಿಶ್ರಣವಾಗಿದ್ದು, ಮಹಾಭಾರತದ ಕಥೆ ಮತ್ತು ಘಟನೆಗಳನ್ನು ಸುಂದರವಾಗಿ ವರ್ಣಿಸುತ್ತದೆ. ತುಳುನಾಡಿನ ಕಂಬಳ ಒಂದು ಪ್ರಾಚೀನ ಜಾನಪದ ಕ್ರೀಡೆಯಾಗಿದೆ. ಇಲ್ಲಿ ಹುಲಿಕುಣಿತ ಬಹಳ ಪ್ರಸಿದ್ಧಿ. ಆಟಿ-ಕಳೆಂಜ, ಕಂಗೀಲು, ಉತ್ತರಕನ್ನಡದಲ್ಲಿ ಸುಗ್ಗಿ ಕುಣಿತ, ಕೋಲಾಟ, ಗೊಂಬೆಯಾಟ ಇತ್ಯಾದಿ ಪ್ರಖ್ಯಾತಿ ಹೊಂದಿವೆ.
ಸಾಂಪ್ರದಾಯಿಕ ಕಲೆಗಳು ನಾಶವಾಗುತ್ತಿವೆ ಎನ್ನುವ ಭಾವನೆ ಇದೆ. ಎಷ್ಟೋ ಕಲೆಗಳು ಈಗಾಗಲೇ ಅವನತಿಯ ಅಂಚಿನಲ್ಲಿವೆ. ಆದರೆ, ಇಂದು ಒಂದು ಹೊಸ ಆಶಾಂಕುರ ಮೂಡಿದೆ. ನಮ್ಮ ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅನೇಕ ಸಂಘ-ಸಂಸ್ಥೆಗಳು ಕಾರ್ಯತತ್ಪರವಾಗಿವೆ. ಕಲೆಯನ್ನು ಪಾಲಿಸುವ, ಆಚರಿಸುವ, ಅಭಿವ್ಯಕ್ತಿಗೊಳಿಸುವ ಕಲಾವಿದರು ಕಲೆಗಳನ್ನು ಬೆಳೆಸುತ್ತಿದ್ದಾರೆ. ಅವರಿಗೂ ಪೋ›ತ್ಸಾಹ ಲಭ್ಯವಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮನ್ನಣೆಯೂ ದೊರೆತಿದೆ. ಕೊಡವರ ನೃತ್ಯ, ಗೊರವರ ಕುಣಿತ, ವೀರಗಾಸೆ, ಡೊಳ್ಳುಕುಣಿತ ರಾಜ್ಯವ್ಯಾಪಿ ಮಾತ್ರವಲ್ಲ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರವಾಗಿವೆ. ಹಳ್ಳಿಯ ಸಾಮಾನ್ಯ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರದರ್ಶನವನ್ನು ಕೊಡುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.
ದಸರಾ ಉತ್ಸವ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಗಮನಿಸಿದರೆ ಎಷ್ಟು ವೈವಿಧ್ಯಮಯವಾದಂತಹ ಜಾನಪದ ಕಲೆಗಳು ನಮ್ಮ ರಾಜ್ಯದಲ್ಲಿದೆ ಎಂದು ಅರಿವಿಗೆ ಬರುತ್ತದೆ. ಈ ಕಾರ್ಯಕ್ರಮಗಳಲ್ಲಿ ಜಾನಪದ ಕಲಾವಿದರು ಎಷ್ಟು ಅಭಿಮಾನಪೂರ್ವಕವಾಗಿ ಸಂತೋಷದಿಂದ ಕಲಾಪ್ರದರ್ಶನವನ್ನು ನೀಡುತ್ತಾರೆ. ತಮ್ಮ ಕಲೆಯ ಬಗ್ಗೆ ತಿಳಿಸುವಾಗ ಅವರಿಗಾಗುವ ಆನಂದ, ಗೌರವ ಕಂಡು ನಮಗೂ ಹೆಮ್ಮೆ ಅನಿಸುತ್ತದೆ. ಇತ್ತೀಚೆಗೆ ಬಾಗಲಕೋಟೆ ಸಾಂಪ್ರದಾಯಿಕ ನೃತ್ಯದವರು ಮೈಸೂರು ದಸರಾ ಉತ್ಸವ ಮುಗಿಸಿ ಊರಿಗೆ ತೆರಳುವ ಮುನ್ನ ಧರ್ಮಸ್ಥಳದ ಶ್ರೀ ಸ್ವಾಮಿಯ ಅನುಗ್ರಹ ಪಡೆಯಬೇಕು ಎಂದು ಆಗಮಿಸಿದ್ದರು. ಸಾಂಪ್ರದಾಯಿಕ ನೃತ್ಯದ ಪ್ರದರ್ಶನವನ್ನೂ ನೀಡಿದರು. ಅವರ ಪ್ರದರ್ಶನದಲ್ಲಿ ಸುಂದರವಾದ ನೃತ್ಯ ಪ್ರಕಾರವಿತ್ತು. ಈ ಪ್ರಕಾರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉತ್ತಮವಾದ ವ್ಯಾಯಾಮದ ಗತಿಯನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಹೊರನೋಟಕ್ಕೆ ಅದೊಂದು ಜಾನಪದ ಕಲೆಯ ನೃತ್ಯ ಎಂದು ಕಂಡರೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಅದು ಒಳಗೊಂಡಿದೆ. ಆ ನೃತ್ಯ, ಯೋಗದ ವಿವಿಧ ಭಂಗಿಗಳನ್ನು ಒಳಗೊಂಡಿದೆ. ನೃತ್ಯ ಮಾಡುವಾಗ ಅರಿವಾಗುವ ಸಂಗತಿ ಎಂದರೆ ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ಮತ್ತು ಮಾನಸಿಕ ನೆಮ್ಮದಿ ದೊರೆಯುವಂತಹ ಅಭಿನಯ ಇದೆ. ಲಯ-ಬದ್ಧವಿದೆ. ಈ ನೃತ್ಯವನ್ನು ವೀಕ್ಷಿಸುತ್ತಿದ್ದಾಗ ನನಗೆ ಒಂದು ಘಟನೆ ನೆನಪಿಗೆ ಬಂತು.
ನಾನು ಅಮೆರಿಕಕ್ಕೆ ಹೋಗಿ ಬಂಧುಗಳ ಮನೆಯಲ್ಲಿದ್ದಾಗ ಒಂದು ದಿನ ಸಂಜೆಯ ಹೊತ್ತಿಗೆ ವಾಕಿಂಗ್ ಹೋಗಿದ್ದೆವು. ಆಗ ಅಲ್ಲಿ ನನಗೆ ಒಂದು ದೃಶ್ಯ ಕಣ್ಣಿಗೆ ಬಿತ್ತು. ಸುಮಾರು 20 ಮಂದಿ ವಯೋವೃದ್ಧರು, ಹಿರಿಯ ನಾಗರಿಕರು ನಿಂತು ಬಹಳ ನಿಧಾನ ಗತಿಯಲ್ಲಿ ಕೆಲವು ನೃತ್ಯದ ಭಂಗಿಗಳನ್ನು ಮಾಡುತ್ತಿದ್ದರು. ನನಗೆ ಬಹಳ ಆಶ್ಚರ್ಯವೆನಿಸಿತು. ಆ ನೃತ್ಯದ ಬಗ್ಗೆ ವಿಚಾರಿಸಿದಾಗ ನಮಗೆ ತಿಳಿದು ಬಂದ ವಿಚಾರವೇನೆಂದರೆ ಅದೊಂದು ಜಪಾನಿ ಕಲೆ. ಆ ಕಲೆಯಲ್ಲಿ ನಿಧಾನವಾಗಿ ನೃತ್ಯ ರೂಪಕವಾಗಿ ಮೈ-ಕೈಯನ್ನು ತಿರುಗಿಸಿಕೊಂಡು ವ್ಯಾಯಾಮ ಪಡೆಯುತ್ತಾರೆ ಎಂಬುದು. ಇಷ್ಟು ನಿಧಾನವಾಗಿ ಚಲಿಸಿದರೆ ವ್ಯಾಯಾಮ ದೊರೆಯುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿ ಸಿಗುತ್ತದೆ; ಇದು ಅಂತಾರಾಷ್ಟ್ರೀಯ ಮಟ್ಟದ ವ್ಯಾಯಾಮ ಶಿಬಿರ ಎಂದು ಅವರು ತಿಳಿಸಿದರು. ಯೋಗದಲ್ಲೂ ಹಾಗೆ. ಯೋಗಾಭ್ಯಾಸ ಮಾಡುವವರು ತೀವ್ರಗತಿಯಲ್ಲಿ ಮಾಡುವುದಿಲ್ಲ. ಬಹಳ ನಿಧಾನಗತಿಯಲ್ಲಿ ಯೋಗಾಭ್ಯಾಸ ನಡೆಯುತ್ತದೆ. ನಿಧಾನಗತಿಯ ಚಲನೆಯಲ್ಲೇ ಯೋಗದ ಅನೇಕ ಆಸನಗಳು ಇರುವಂತಹದ್ದು. ಪ್ರಾಣಾಯಾಮ, ಧ್ಯಾನವೂ ನಿಧಾನವಾಗಿದ್ದು ಈ ಮೂಲಕ ಇಂದ್ರಿಯಗಳ ಹತೋಟಿ ಸಾಧ್ಯ. ಆ ನೃತ್ಯವನ್ನು ನೋಡಿದ ಬಳಿಕ ನನಗೆ ಅನಿಸಿದ್ದು ಜಾನಪದ ನೃತ್ಯ, ಸಂಗೀತ, ಹಾಡುಗಳಿಂದಲೂ ನವರಸದ ಅಭಿವ್ಯಕ್ತಿ ದೊರೆತು ದೇಹಕ್ಕೆ ವ್ಯಾಯಾಮ ಮನಸ್ಸಿಗೆ ದೃಢತೆ, ಮಾನಸಿಕ ನೆಮ್ಮದಿ ಸಾಧ್ಯ ಎನ್ನುವುದು.
ಇಂತಹ ಕಲೆಗಳಿಗೆ ಪೋ›ತ್ಸಾಹ ನೀಡಬೇಕಿದೆ. ಪ್ರಸ್ತುತ ಅನೇಕ ಕಲೆಗಳು ಪುನರುಜ್ಜೀವ ಆಗುತ್ತಿದ್ದು, ಪೋ›ತ್ಸಾಹ ದೊರೆಯುತ್ತಿದೆ. ಅಲ್ಲದೆ, ವಿಶೇಷವಾಗಿ ಈ ಕಲಾಪ್ರಕಾರವನ್ನು ಮಾಡುವ ಕಲೆಗಾರರು ತಮ್ಮ ಸಂಪ್ರದಾಯವನ್ನು ಬಿಡಬಾರದು. ಓಬಿರಾಯನ ಕಾಲದ್ದು ಎಂದು ಅಲ್ಲಗಳೆಯಬಾರದು. ಈ ಕಲೆಗಳಿಂದ ಮುಂದೆ ಜೀವನಕ್ಕೆ ಉಪಯುಕ್ತವಾಗುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶೇಷ ಗೌರವ ಒದಗಿಸಿಕೊಡುತ್ತದೆ ಎಂಬ ಅರಿವು ಮೂಡಬೇಕು. ಈ ಲೇಖನ ಬರೆಯುತ್ತಿರುವಾಗಲೇ ಮಗಳು ಶ್ರದ್ಧಾ ಮತ್ತು ಮೊಮ್ಮಗಳು ಮಾನ್ಯ ರಾಜಸ್ಥಾನ-ಜೋಧ್ಪುರದ ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿನ ಕಲಾವಿದರೊಂದಿಗೆ ಮಾತನಾಡುವಾಗ ಹಿರಿಯ ಕಲಾವಿದರು- ಇಂದಿನ ಸಿನಿಮಾ, ಕಾರ್ಯಕ್ರಮ ಇತ್ಯಾದಿಗಳನ್ನು ನಾವು ನೋಡುವುದಿಲ್ಲ. ಯಾಕೆಂದರೆ ಅವುಗಳು ಮೂಲಸ್ವರೂಪದ ಜಾನಪದ ಹಾಡು ಮತ್ತು ನೃತ್ಯಗಳ ಮೇಲೆ ಪ್ರಭಾವ ಬೀರಿ ಮೂಲ ಕಲೆಗೆ ಧಕ್ಕೆಯಾಗಬಹುದು ಎಂದು. ಮಕ್ಕಳನ್ನು 10ನೇ ತರಗತಿ ಅಂದರೆ ಹೈಸ್ಕೂಲ್ ಶಿಕ್ಷಣಕ್ಕೆ ನಿಲ್ಲಿಸುತ್ತೇವೆ. ಅನ್ಯಥಾ ಅವರು ನಮ್ಮ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದು ಹೇಳಿದರಂತೆ. ಈಗಾಗಲೇ ಅವರು ಅನೇಕ ವಿದೇಶಗಳಿಗೆ ಪ್ರವಾಸ ಮಾಡಿ ಪ್ರದರ್ಶನ ನೀಡಿ, ಅಲ್ಲಿರುವ ಜಾನಪದ ವಿದ್ವಾಂಸರೊಂದಿಗೆ ರ್ಚಚಿಸಿದ್ದಾರಂತೆ ಎಂಬಿತ್ಯಾದಿ ಮಾಹಿತಿ ತಿಳಿದುಬಂತು.
ವಿಶೇಷವಾಗಿ ಕರಾವಳಿ ಭಾಗದ ಹುಲಿ ವೇಷ ಕುಣಿತದ ಬಗ್ಗೆ ಹೇಳಲೇಬೇಕು. 60 ವರ್ಷಗಳ ಹಿಂದೆ ಕೆಲವರು ಮಾತ್ರ ಹುಲಿವೇಷ ಮಾಡುತ್ತಿದ್ದರು. ಆದರೆ, ಇತ್ತೀಚಿನ 10 ವರ್ಷಗಳಲ್ಲಿ ಹುಲಿ ವೇಷ ಎಷ್ಟು ಪ್ರಖ್ಯಾತಿಯಾಗಿದೆ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಹುಲಿವೇಷ ಎನ್ನುವುದು ಹೆಮ್ಮೆಯ, ಪ್ರತಿಷ್ಠೆಯ ವಿಚಾರವಾಗಿ ಬದಲಾಗಿದೆ. ಕಲಾವಿದರಿಗೆ ಆದಾಯವನ್ನೂ ಒದಗಿಸುತ್ತಿದೆ. ಪ್ರತಿಷ್ಠಿತ ವ್ಯಕ್ತಿಗಳು, ಸಿನಿಮಾ ನಟರೂ ಈ ಕಲೆಯನ್ನು ಪ್ರದರ್ಶಿಸಿ ಹೆಮ್ಮೆಪಟ್ಟುಕೊಳ್ಳುವ ಹಂತಕ್ಕೆ ತಲುಪಿದೆ. ಈಗ ಮಹಿಳೆಯರೂ ಹುಲಿವೇಷದಲ್ಲಿ ಪಾಲ್ಗೊಳ್ಳುತ್ತಾರೆ, ಬಣ್ಣ ಹಚ್ಚಿಕೊಳ್ಳುತ್ತಾರೆ. ಚೆಂಡೆ ವಾದನವನ್ನು ಬಾರಿಸುತ್ತಾರೆ.
1980ರ ಇಸ್ವಿಯಲ್ಲಿ ಫಿನ್ಲೆಂಡ್ ದೇಶದ ಲ್ಯಾರಿಹೊಂಕೋ ಎಂಬವರು ಉಡುಪಿಯ ಸಂಸ್ಥೆಯೊಂದರ ಜೊತೆ ಸೇರಿ ತುಳು ಪಾಡ್ದನಗಳ ಬಗ್ಗೆ ಶಿಬಿರಗಳನ್ನು ಧರ್ಮಸ್ಥಳದಲ್ಲಿ ಏರ್ಪಡಿಸಿದ್ದರು. ಬೆಳಾಲು ಗ್ರಾಮದ ಪಾಡ್ದನ ಕಲಾವಿದನೊಬ್ಬ ನಿರರ್ಗಗಳವಾಗಿ ಹಾಡಿದ ವಿವಿಧ ಪಾಡ್ದನ ಹಾಡುಗಳನ್ನು ರಿಕಾರ್ಡರ್ನಲ್ಲಿ ದಾಖಲಿಸಿಕೊಂಡು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಅದು ನಮ್ಮ ಮಣ್ಣಿನ ಸೊಗಡೇ ಸರಿ. ನಮ್ಮ ದೇಶದ ಅಡಿಪಾಯದ ಗಟ್ಟಿತನಕ್ಕೆ ಕಲೆಗಳೇ ಸಾಕ್ಷಿಯಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸಿವೆ.
ಕಲೆಗಳಲ್ಲಿ ಭೇದಗಳಿಲ್ಲ, ಪ್ರಭೇದಗಳಿವೆ ಎಂದು ತಿಳಿಸಿವೆ. ಜನಪದವು ಪಾರಂಪರಾಗತವಾಗಿ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ, ಆಚರಣೆ, ಅನುಕರಣೆಯ ರೂಪವಾಗಿ ಬೆಳೆದು ಬಂದಿರುವಂಥದ್ದು. ಅದು ಹರಿಯುವ ನದಿ ನೀರಿನಂತೆ. ನದಿಯು ಕಿರು ತೊರೆ, ಹಳ್ಳ-ಕೊಳ್ಳಗಳನ್ನು ತನ್ನೊಂದಿಗೆ ಒಯ್ಯುವಂತೆ, ಹೊಸ ದಾರಿಗಳನ್ನು ಮಾಡಿಕೊಳ್ಳುತ್ತಾ ಮುನ್ನುಗ್ಗುವಂತೆ ಜಾನಪದ ಕೂಡ ಕಾಲ-ಕಾಲಕ್ಕೆ ಹೊಸ ಅಂಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿರುತ್ತದೆ. ಹಳೆಯ ತಲೆಮಾರಿನ ಪರಂಪರೆಯನ್ನು ಹೊಸ ತಲೆಮಾರಿಗೆ ತಲುಪಿಸುವುದರೊಂದಿಗೆ ಹೊಸ ಪ್ರದೇಶ, ಕಾಲಕ್ಕನುಗುಣವಾಗಿ ಹೊಸತನ್ನೂ ಸೃಷ್ಟಿ ಮಾಡುತ್ತದೆ. ಹಾಗಾಗಿ ಇಂದಿನ ಯುವ ಜನಾಂಗ ತಮ್ಮ ಸಂಪ್ರದಾಯವನ್ನು ಬಿಡದೆ ಮುಂದವರಿಸಿಕೊಂಡು ಹೋಗಬೇಕು. ನಶಿಸುವ ಹಂತದಲ್ಲಿರುವ ಅನೇಕ ಕಲಾ ಪ್ರಕಾರಗಳು ವೈಭವ ಕಾಣುವಂತಾಗಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)