

ವಿಜ್ಞಾನ ಲೋಕದ ಕೆಲ ವಿಶಿಷ್ಟ ಪ್ರಯೋಗಗಳಿಗೆ ನವೆಂಬರ್ ತಿಂಗಳು ಸಾಕ್ಷಿಯಾಯಿತು. ಅವುಗಳಲ್ಲಿ ಹೆಚ್ಚು ಗಮನಸೆಳೆದ ಎರಡು ಪ್ರಯೋಗಗಳ ಪೈಕಿ ಒಂದು ಪ್ರಯೋಗ ಆಗಸದಲ್ಲಿ ನಡೆಯುತ್ತಿದ್ದರೆ ಇನ್ನೊಂದು ಸಾಗರದಡಿಯಲ್ಲಿ ನಡೆಯುತ್ತಿದೆ. ಈ ಪ್ರಯೋಗಗಳು ಯಶಸ್ಸು ಕಂಡರೆ ಮುಂಬರುವ ದಿನಗಳಲ್ಲಿ ಕೆಲವು ಕ್ರಾಂತಿಕಾರಿ ಬೆಳವಣಿಗೆಗಳಿಗೆ ನಾಂದಿ ಹಾಡಬಲ್ಲ ಸಾಧ್ಯತೆ ಇರುವುದರಿಂದ ಇಡೀ ಜಗತ್ತು ಈಗ ಅವುಗಳ ಫಲಿತಾಂಶಕ್ಕೆ ಎದುರು ನೋಡುತ್ತಿದೆ.
ಮಾನವ ಅಂತರಿಕ್ಷಕ್ಕೆ ಹಾರಿಸಿದ ಉಪಗ್ರಹಗಳ ಸಂಖ್ಯೆ ಹನ್ನೆರಡು ಸಾವಿರಕ್ಕೆ ತಲುಪಿದ್ದು ಆ ಪೈಕಿ ನಾಲ್ಕೂವರೆ ಸಾವಿರದಷ್ಟು ಮಾತ್ರ ಇನ್ನೂ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಮೂರು ಸಾವಿರದಷ್ಟು ಉಪಗ್ರಹಗಳು ನಿಷ್ಕ್ರಿಯವಾಗಿವೆ. ಒಮ್ಮೆ ಉಡಾಯಿಸಲ್ಪಟ್ಟ ಉಪಗ್ರಹಗಳಿಗೆ ಅಂತರಿಕ್ಷದಲ್ಲಿ ಅವುಗಳ ನಿಗದಿತ ಕಾರ್ಯ ಮುಕ್ತಾಯಗೊಂಡ ಬಳಿಕ ವ್ಯವಸ್ಥಿತವಾಗಿ ಮುಕ್ತಿ ತೋರಲು ಎರಡು ದಾರಿಗಳಿವೆ. ಮೊದಲನೇ ದಾರಿ ಭೂಮಿಯ ಹತ್ತಿರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳನ್ನು ಇನ್ನಷ್ಟು ಎತ್ತರದ, ಯಾನೆ ಭೂಮಿಯಿಂದ ದೂರದ ಕಕ್ಷೆಯಲ್ಲಿ ಸೇರಿಸಿ ಕಾರ್ಯನಿರತ ಉಪಗ್ರಹಗಳ ಏರಿಯಾಗೆ ಬರದಂತೆ ನೋಡಿಕೊಳ್ಳುವುದು. ಇದಕ್ಕೆ ಸಾಕಷ್ಟು ಇಂಧನದ ಲಭ್ಯತೆ ಇರಬೇಕಾಗಿರುವುದರಿಂದ ಈ ತಂತ್ರವನ್ನು ಹೆಚ್ಚಿನವರು ಆಯ್ದುಕೊಳ್ಳುವುದಿಲ್ಲ. ಇನ್ನು ಎರಡನೇ ದಾರಿ - ಉಪಗ್ರಹವನ್ನು ಭೂಮಿಗೆ ವಾಪಸ್ಸು ಕರೆತರುವುದು. ಈ ವಿಧಾನ ವ್ಯಾವಹಾರಿಕವಾಗಿ ಕಡಿಮೆ ಖರ್ಚಿನದಾಗಿರುವ ಕಾರಣ ಹೆಚ್ಚಿನ ಉಪಗ್ರಹದ ನಿರ್ವತ್ಯರು ಇದನ್ನೇ ಆಯ್ದುಕೊಳ್ಳುತ್ತಾರೆ. ಎರಡನೇ ವಿಧಾನದಲ್ಲಿ ಉಪಗ್ರಹವು ಒಂದು ವೇಳೆ ಗಾತ್ರದಲ್ಲಿ ಚಿಕ್ಕದಾಗಿದ್ದರೆ ಭೂಮಿಯತ್ತ ಮರಳುವಾಗ ವಾತಾವರಣದ ಸಂಪರ್ಕಕ್ಕೆ ಬರುತ್ತಿದ್ದಂತೆಯೇ ಗಾಳಿಯ ಜೊತೆಗಿನ ಘರ್ಷಣೆಯಿಂದ ಉತ್ಪತ್ತಿಯಾಗುವ ಶಾಖದಿಂದ ಭೂಮಿಯನ್ನು ತಲುಪುವ ಮೊದಲೇ ಸುಟ್ಟುಹೋಗುತ್ತದೆ. ಆದರೆ ಅದೇ ದೊಡ್ಡ ಗಾತ್ರದ ಉಪಗ್ರಹವಾದರೆ ಪೂರ್ತಿ ಸುಡದೇ ಅರ್ಧಂಬರ್ಧ ಸುಟ್ಟಿರುವ ಸ್ಥಿತಿಯಲ್ಲಿ ಭೂಮಿಯತ್ತ ಮುನ್ನುಗ್ಗುತ್ತದೆ. ಇಂತಹ ಉಪಗ್ರಹಗಳನ್ನು ಅವುಗಳ ನಿಯಂತ್ರಣ ಕೊಠಡಿಗಳು ಸಾಗರದತ್ತ ತಿರುಗಿಸಿ ಸುರಕ್ಷಿತವಾಗಿ ಅಲ್ಲಿ ಮುಳುಗುವಂತೆ ಮಾಡಿ ಜನಜೀವನಕ್ಕೆ ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳುತ್ತವೆ. ಇಂತಹ ಕಾರ್ಯಕ್ಕೆ ಹೆಚ್ಚಾಗಿ ನಿಯಂತ್ರಕರು ಬಳಸಿಕೊಳ್ಳುವುದು ಪೆಸಿಫಿಕ್ ಸಾಗರವನ್ನು. ಹೀಗಾಗಿ ಪೆಸಿಫಿಕ್ ಸಾಗರಕ್ಕೆ ‘ಉಪಗ್ರಹಗಳ ಶವಾಗಾರ’ವೆಂಬ ಹೆಸರೂ ಇದೆ.
ಆದರೆ ಕೆಲವು ಉಪಗ್ರಹಗಳು ಮೇಲೆ ಹೇಳಿದ ಎರಡೂ ಗುಂಪಿಗೆ ಸೇರದೇ ಅರ್ಧ ಆಯಸ್ಸಿನಲ್ಲಿ ತಾಂತ್ರಿಕತೆ ಕೈಕೊಟ್ಟಿದ್ದಕ್ಕೋ ಮತ್ತೊಂದು ಕಾರಣಕ್ಕೋ ಸುರಳೀತವಾಗಿ ಮುಕ್ತಿ ಕಾಣದೇ ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಆಗಸದ ಕಸವಾಗಿ ಪರಿಣಮಿಸುತ್ತವೆ. ಹೀಗೆ ಸುತ್ತುತ್ತಿರುವ ನಿರುದ್ಯೋಗಿ ಉಪಗ್ರಹಗಳ ಸಂಖ್ಯೆ ಅಂತರಿಕ್ಷದಲ್ಲಿ ಹೇರಳವಾಗಿದ್ದು ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಏರುತ್ತಲೇ ಇದೆ. ಈ ಕಸಗಳು ಅಂತರಿಕ್ಷದಲ್ಲಿ ಕಾರ್ಯನಿರತ ಉಪಗ್ರಹಗಳಿಗೆ ಡಿಕ್ಕಿ ಹೊಡೆದು ಜಖಂ ಮಾಡಿ ಹಲವು ಆವಾಂತರಗಳನ್ನು ಸೃಷ್ಟಿಸುತ್ತಿವೆ. ಈ ನಡುವೆ ವರ್ಷದಿಂದ ವರ್ಷಕ್ಕೆ ದೇಶಗಳು ಯಾವುದೋ ಒಂದು ಕಾರಣ ಹೇಳಿ ನಭಕ್ಕೆ ಹಾರಿಸುವ ಉಪಗ್ರಹಗಳ ಸಂಖ್ಯೆ ಏರುತ್ತಲೇ ಹೋಗಿದ್ದು ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ವ್ಯವಸ್ಥಿತ ವಿಲೇವಾರಿಯ ಯೋಜನೆ ಇರದಿದ್ದಲ್ಲಿ ಇವುಗಳು ಆಗಸದಲ್ಲಿ ಮತ್ತಷ್ಟು ಕಸವನ್ನು ಸೃಷ್ಟಿಸಲಿದ್ದು ಡಿಕ್ಕಿಯಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿ ನಿಷ್ಕ್ರಿಯ ಉಪಗ್ರಹಗಳ ಉಪಟಳದ ಪೀಡೆ ಜಟಿಲವಾಗುತ್ತ ಹೋಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಎಲ್ಲ ತೊಂದರೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳ ಫಲವೇ ಲೈಗ್ನೋಸ್ಯಾಟ್.
ಅಮೆರಿಕದ ನಾಸಾ ಮತ್ತು ಜಪಾನಿನ ಬಾಹ್ಯಾಕಾಶ ಇಲಾಖೆ ಜಾಕ್ಸಾ ಜಂಟಿಯಾಗಿ ಜಪಾನಿನ ಕ್ಯೋಟೊ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಯೋಜನೆ ಲೈಗ್ನೋಸ್ಯಾಟ್. ಇದರ ಹಿಂದಿರುವ ಯೋಚನೆ ಸರಳವಾದದ್ದು. ಅಂತರಿಕ್ಷದಲ್ಲಿ ನೀರಿನ ಲಭ್ಯತೆ ಇರದಿರುವ ಕಾರಣಕ್ಕೆ ಮರವು ಶುಷ್ಕ ಮತ್ತು ಗಾಳಿಯಿಲ್ಲದ ವಾತಾವರಣದಲ್ಲಿ ಕೆಡುವುದಿಲ್ಲ. ಜೊತೆಗೆ ಆಗಸದಲ್ಲಿ ನಿಷ್ಕ್ರಿಯವಾಗಿರುವ ಮರದ ಉಪಗ್ರಹವೊಂದು ಮತ್ತೊಂದು ಉಪಗ್ರಹಕ್ಕೆ ಡಿಕ್ಕಿ ಹೊಡೆದರೆ ಅದು ಮಾಡುವ ಲುಕ್ಸಾನು ಏನೂ ಇಲ್ಲ. ಸೇವಾ ನಿವೃತ್ತಿಯಾದ ಮೇಲೆ ಇಂತಹ ಉಪಗ್ರಹವನ್ನು ಭೂಮಿಯತ್ತ ದೌಡಾಯಿಸಿದರೆ ಅದು ಭೂಮಿಯ ವಾತಾವರಣದ ಸಂಪರ್ಕಕ್ಕೆ ಬಂದ ತಕ್ಷಣ ಗಾಳಿಯೊಡಗಿನ ಘರ್ಷಣೆಯಿಂದ ಉಂಟಾಗುವ ಶಾಖಕ್ಕೆ ಸುಟ್ಟು ಭಸ್ಮವಾಗುವುದರಿಂದ ಮತ್ತೆ ಸಾಗರದೊಳಗೆ ಮುಳುಗಿಸುವ ಪ್ರಮೇಯವೇ ಇರುವುದಿಲ್ಲ. ಅದೇ ಲೋಹದ ಉಪಗ್ರಹಗಳಾದರೆ ಅವುಗಳು ವಾತಾವರಣದ ಸಂಪರ್ಕಕ್ಕೆ ಬಂದು ಸುಡುತ್ತಿದ್ದಂತೆಯೇ ಓಜೋನ್ ಪದರಕ್ಕೆ ಹಾನಿ ಮಾಡುವ ಅಲ್ಯೂಮಿನಿಯಂ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಮರದ ಉಪಗ್ರಹವಾದರೆ ಆ ಪ್ರಮೇಯವೇ ಇರುವುದಿಲ್ಲ. ಹೀಗಾಗಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯೋಚನೆ ಇದರ ವಿನ್ಯಾಸಕಾರರದ್ದು. ಯೋಚನೆಯೇನೋ ಚೆನ್ನಾಗಿದೆ, ಆದರೆ ಅಂತರಿಕ್ಷದಲ್ಲಿ ತೀರ ಸೆಖೆ ಮತ್ತು ತೀರ ಚಳಿಯಂತಹ ಪ್ರತಿಕೂಲ ಹವಾಮಾನದ ಜೊತೆಗೆ ಸೂರ್ಯನಿಂದ ಹೊರಹೊಮ್ಮುವ ವಿಕಿರಣಗಳೂ ಇರುತ್ತವೆ. ಹೀಗೆ ಹಲವು ಸವಾಲುಗಳನ್ನು ಎದುರಿಸಬಲ್ಲ ಕ್ಷಮತೆಯಿರುವ ಮರಕ್ಕಾಗಿ ವಿಜ್ಞಾನಿಗಳಿಂದ ಹುಡುಕಾಟ ಶುರುವಾಯಿತು. ಈ ಹುಡುಕಾಟದ ಅಂಗವಾಗಿ ಜಪಾನ್ 2022ರಲ್ಲಿ ಹಾರಿಸಿದ್ದ ಉಪಗ್ರಹವೊಂದರಲ್ಲಿ ಮೂರು ಬೇರೆ ಬೇರೆ ಜಾತಿಯ ಮರದ ತುಂಡುಗಳನ್ನು ಇಡಲಾಗಿತ್ತು. ಇವುಗಳನ್ನು ಹೊತ್ತುಕೊಂಡು ಆಗಸಕ್ಕೆ ಹಾರಿದ ಉಪಗ್ರಹದ ಜೊತೆಯಲ್ಲಿ ಈ ಮರದ ತುಂಡುಗಳು ಮೈನಸ್ 100ರಿಂದ ಪ್ಲಸ್ 100 ಡಿಗ್ರಿ ಸೆಂಟಿಗ್ರೇಡ್ವರೆಗಿನ ಪ್ರತಿಕೂಲ ಹವಾಮಾನದ ಜೊತೆಗೆ ಅಲ್ಲಿನ ವಿಕಿರಣಗಳಿಗೂ ಮೈಒಡ್ಡಿ ತನ್ನ ಕಾರ್ಯ ಮುಗಿಸಿದ ಉಪಗ್ರಹದ ಜೊತೆಗೆ ಭೂಮಿಗೆ ವಾಪಸ್ಸು ಬಂದವು. ಹೀಗೆ ಅಂತರಿಕ್ಷ ರಿಟರ್ನ್್ಡ ಮರಗಳ ಮೇಲೆ ನಡೆಸಿದ ಹಲವು ಪರೀಕ್ಷೆಗಳ ನಂತರ ಲೈಗ್ನೋಸ್ಯಾಟ್ ನಿರ್ವಣಕ್ಕೆ ಆ ಮೂರು ಮರದ ತುಂಡುಗಳ ಪೈಕಿ ಜಪಾನಿನಲ್ಲಿ ಕಂಡು ಬರುವ ಮೆಗ್ನೋಲಿಯ ಎಂಬ ಮರವನ್ನು ಆಯ್ಕೆ ಮಾಡಲಾಯಿತು. ಮರದ ಆಯ್ಕೆಯಲ್ಲಷ್ಟೇ ಅಲ್ಲ, ಜಪಾನೀಯರು ಈ ಪುಟ್ಟ ಉಪಗ್ರಹದ ವಿನ್ಯಾಸದಲ್ಲೂ ತಮ್ಮತನವನ್ನು ಮೆರೆದಿದ್ದಾರೆ. ಈ ಪೂರ್ತಿ ಉಪಗ್ರಹದಲ್ಲಿ ಎಲ್ಲೂ ಮೊಳೆ ಅಂಟುಗಳು ಬಳಕೆಯಾಗದೇ ಅಪ್ಪಟ ಜಪಾನಿ ಶೈಲಿಯಾದ ಶಾಶಿಮೋನೋ ಎಂಬ ಮರಗೆಲಸದ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಥಿತವಾಗಿರುವ ಲೈಗ್ನೋಸ್ಯಾಟ್ ಶೀಘ್ರವೇ ಭೂಮಿಯಿಂದ ಅಜಮಾಸು ನಾಲ್ಕುನೂರು ಕಿಲೋಮೀಟರ್ ದೂರದ ಕಕ್ಷೆಗೆ ಹಾರಲಿದೆ. ಮುಂದಿನ ಆರು ತಿಂಗಳುಗಳನ್ನು ಅಲ್ಲೇ ಕಳೆದು ತನ್ನೊಳಗೆ ಆಳವಡಿಸಿರುವ ಸಂವೇದಕಗಳ ಮೂಲಕ ಅಂತರಿಕ್ಷದಲ್ಲಿ ವಿವಿಧ ವಾತಾವರಣದಲ್ಲಿ ಮರವು ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಎಷ್ಟು ಟಿಕಾಯಿಸಬಲ್ಲದು ಎಂಬುದರ ಕುರಿತು ಬಹುಮೂಲ್ಯ ಮಾಹಿತಿಯನ್ನು ಹಂಚಿಕೊಳ್ಳಲಿದೆ.
ಲ್ಯಾಟಿನ್ ಭಾಷೆಯಲ್ಲಿ ಲೈಗ್ನೋ ಎಂದರೆ ಮರ. ಈ ಮರದ ಬಳಕೆ ಸ್ವಲ್ಪಮಟ್ಟಿಗೆ ಮೊದಲೂ ಉಪಗ್ರಹಗಳಲ್ಲಿ ಇತ್ತು. ಭೂಮಿಗೆ ವಾಪಸ್ಸು ಬರುವಂತೆ ರೂಪಿಸಿರುವ ಉಪಗ್ರಹ ಮತ್ತು ಅಂತರಿಕ್ಷ ವಾಹನಗಳ ಹೊರಮೈಗೆ ಕಾರ್ಕ್ನಂತಹ ಮರದ ಪದರವನ್ನು ಇಂದಿಗೂ ಅಳವಡಿಸಲಾಗುತ್ತದೆ. ಇದು ಈ ಉಪಗ್ರಹಗಳು ಅಂತರಿಕ್ಷದಲ್ಲಿ ತಮ್ಮ ಕಾರ್ಯ ಮುಗಿಸಿ ಮರಳಿ ಬರುವಾಗ ಭೂಮಿಯ ವಾತಾವರಣದಲ್ಲಿ ಗಾಳಿಯೊಂದಿಗೆ ಉಂಟಾಗುವ ಘರ್ಷಣೆಯ ಪರಿಣಾಮವನ್ನು ಉಪಗ್ರಹಗಳ ಲೋಹದ ಹೊರಮೈಯ ಮೇಲೆ ಕಡಿಮೆ ಮಾಡಲು ಕಾರ್ಕ್ ತಾನೇ ಉರಿದುಹೋಗುತ್ತದೆ. ಇನ್ನು ಲೈಗ್ನೋಸ್ಯಾಟ್ನ ವಿನ್ಯಾಸಕರೇ ಹೇಳುವಂತೆ ವಿಮಾನದ ವಿನ್ಯಾಸದ ಆರಂಭದ ದಿನಗಳಲ್ಲಿ ಮರದ ವಿಮಾನ ಬಳಕೆಯಾಗಿದ್ದು ಅವರಿಗೆ ಸ್ಪೂರ್ತಿಯಂತೆ. ಬರುವ ಆರು ತಿಂಗಳಿನಲ್ಲಿ ಅಂತರಿಕ್ಷದಲ್ಲಿ ಲೈಗ್ನೋಸ್ಯಾಟ್ನ ತಾಳಿಕೆ ಬಾಳಿಕೆ ಕೇವಲ ಉಪಗ್ರಹಗಳಿಗಷ್ಟೇ ಅಲ್ಲ, ಭವಿಷ್ಯದಲ್ಲಿ ಚಂದಿರ ಮತ್ತು ಮಂಗಳ ಗ್ರಹಗಳಲ್ಲಿ ಸೂರು ಕಟ್ಟುವ ಕನಸನ್ನು ಹೊತ್ತ ವಿನ್ಯಾಸಕಾರರಿಗೂ ಸ್ಪೂರ್ತಿಯಾಗಲಿದೆ. ಮುಂಬರುವ ಐವತ್ತು ವರ್ಷಗಳಲ್ಲಿ ಈ ಎರಡು ಗ್ರಹಗಳಲ್ಲಿ ಮರದ ಮನೆಗಳನ್ನು ನಿರ್ವಿುಸುವುದರ ಜೊತೆಗೆ ಮರಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡು ಕಾರ್ಯಪ್ರವೃತ್ತರಾಗಿರುವ ವಿಜ್ಞಾನಿಗಳ ತಂಡದ ಮುಂದಿನ ನಡೆ ಲೈಗ್ನೋಸ್ಯಾಟ್ನ ಯಶಸ್ಸಿನ ಮೇಲೆ ನಿರ್ಭರವಾಗಿದೆ.
ಉದ್ಯಮಿ ಎಲಾನ್ ಮಸ್ಕ್ರ ಸ್ಟಾರ್ಲಿಂಕ್ ನೆಟ್ವರ್ಕ್ನಂತಹ ದೊಡ್ಡ ಯೋಜನೆಗಳು ಬರುವ ದಿನಗಳಲ್ಲಿ ಆಗಸದಲ್ಲಿ ಚಟುವಟಿಕೆಗಳು ಮತ್ತಷ್ಟು ಹೆಚ್ಚುವ ಮುನ್ಸೂಚನೆಯನ್ನು ಈಗಾಗಲೇ ನೀಡಿವೆ. ಇಂತಹ ಸನ್ನಿವೇಶದಲ್ಲಿ ಲೈಗ್ನೋಸ್ಯಾಟ್ ಅಂತರಿಕ್ಷದ ಕಸದ ಹಾವಳಿಗೆ ಕಡಿವಾಣ ಹಾಕುವ ಏಕೈಕ ಆಶಾಕಿರಣದಂತೆ ಕಂಡುಬರುತ್ತಿದೆ. ಇದು ಆಗಸದ ಕೊಳಚೆಯನ್ನು ಸ್ವಚ್ಛಗೊಳಿಸುವ ಕಾರ್ಯವಾದರೆ ಮತ್ತೊಂದೆಡೆ ಬೇಕೆಂದೇ ಕೊಳಚೆಯನ್ನು ಸಾಗರಕ್ಕೆ ಚೆಲ್ಲುವ ಕಾರ್ಯವನ್ನು ವಿಜ್ಞಾನಿಗಳು ಕೈಗೊಂಡಿದ್ದಾರೆ. ಏನದು ಏಕದು ಎಂಬುದನ್ನು ಮುಂದಿನ ಅಂಕಣದಲ್ಲಿ ತಿಳಿಯೋಣ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)