

ನಮ್ಮ ಅತಿಯಾದ ಆಸೆಗಳಿಗೆ ಕಡಿವಾಣ ಹಾಕಬೇಕು. ವಿವೇಕಯುತವಾಗಿ ಬದುಕಬೇಕು. ಮನಸೋಇಚ್ಛೆ ಬದುಕಿದರೆ ಜೀವನದ ಗುರಿ ತಲುಪುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿಲಾಸಿ ಜೀವನದ ನೆಪದಲ್ಲಿ ಅನೇಕ ಅಪಸವ್ಯಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ ಅವಶ್ಯಕತೆ ಇದೆ.
1825ರಲ್ಲಿ ಸಹ, ಭಾರತ ಶ್ರೀಮಂತ ದೇಶವಾಗಿದ್ದಾಗ, ಮಹಾರಾಜರುಗಳು ವಜ್ರಖಚಿತ ಕಿರೀಟ ಧರಿಸುತ್ತಿದ್ದರು, ಬಂಗಾರದಿಂದ ಹೆಣೆದ ಕೋಟು, ಜಗತ್ತಿನಲ್ಲೇ ಅತಿ ದೊಡ್ಡದಾದ ವಜ್ರವಿರುವ ಬಂಗಾರದ ಶೂಗಳನ್ನು ಧರಿಸುತ್ತಿದ್ದರು. ಭಾರತ ಪ್ರಪಂಚದ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿತ್ತು, ಆದರೆ ಅದು ಕೇವಲ ಕೆಲವೇ ಜನರ ಬಳಿ ಕೇಂದ್ರೀಕೃತವಾಗಿತ್ತು; ದೊಡ್ಡ ಸಂಖ್ಯೆಯ ಜನಸಾಮಾನ್ಯರು ಅದೇ ಬಡತನ, ತೀವ್ರ ಬಡತನದ ಬವಣೆಯಲ್ಲಿ ಹತಾಶ ಜೀವನ ನಡೆಸುತ್ತಿದ್ದರು. ಆದರೆ ಈಗ ಹಾಗಾಗುವುದಿಲ್ಲ. ಆರ್ಥಿಕ ಕ್ಷೇಮ ಬಂದಲ್ಲಿ ಅದು ಎಲ್ಲಡೆ ಪಸರಿಸಬೇಕು. ಯಾರೋ ಒಬ್ಬರು ಒಡೆತನ ಹೊಂದುವಂತಿಲ್ಲ, ಆದರೆ ಜೀವನ ಏನೇ ಕೊಟ್ಟರೂ ಅತಿರೇಕ ಮಾಡುವ, ವಿವೇಕ ಮರೆಯುವ ಜನ ಬೇಕಾದಷ್ಟಿರುತ್ತಾರೆ.
ಜಗತ್ತಿನ ಸಮೃದ್ಧ ಸಮುದಾಯಗಳು ಹಲವು ರೀತಿಯಲ್ಲಿ, ಎಲ್ಲ ಹಂತಗಳಲ್ಲೂ ಅತಿ ಎನಿಸುವಂತೆ ಬದುಕಲು ಆರಂಭಿಸಿವೆ. ದುರದೃಷ್ಟವಶಾತ್, ಎಲ್ಲರೂ ಅತಿರೇಕ ಮಾಡುವುದಕ್ಕೆ ಅಮೆರಿಕ ಒಂದು ದೊಡ್ಡ ಉದಾಹರಣೆ. ಭಾರತದ ಸಮೃದ್ಧ ಸಮುದಾಯ ಕೂಡ ತೀರಾ ಅತಿರೇಕ ಮಾಡುತ್ತಿದ್ದು, ಅವಿವೇಕ ತೋರುತ್ತಿದೆ. ಕಳೆದ ವರ್ಷ ಯಾರೋ ಒಂದು ಮದುವೆಗೆ 200 ಮಿಲಿಯನ್ ಡಾಲರ್ ಖರ್ಚು ಮಾಡಿದರು. ಮತ್ತೊಂದು ಮದುವೆಗೆ ಎರಡು ದಿನದಲ್ಲಿ 150 ಕೋಟಿ ರೂಪಾಯಿ ಖರ್ಚು ಮಾಡಿದರು. ಇವರೆಲ್ಲ ಹೊಸ ಮಹಾರಾಜರು, ಆದರೆ ಅದು ಬದಲಾಗಬೇಕು. ಏಕೆಂದರೆ ಮಹಾತ್ಮ ಗಾಂಧಿ ಹೇಳಿದ ಹಾಗೆ, ‘ಈ ಪ್ರಪಂಚದಲ್ಲಿ ಎಲ್ಲರ ಅವಶ್ಯಕತೆಗೆ ಸಾಕಾಗುವಷ್ಟಿದೆ, ಆದರೆ ಒಬ್ಬರ ದುರಾಸೆಗೆ ಸಾಕಾಗುವಷ್ಟಿಲ್ಲ’. ಮನುಷ್ಯರು ತಮ್ಮ ವೈಭವ ಮೆರೆಯಲಿಕ್ಕೆ ಎಷ್ಟು ಬೇಕು ಎನ್ನುವುದಕ್ಕೆ ಕೊನೆಯೇ ಇಲ್ಲ. ಪ್ರತಿಯೊಬ್ಬರೂ ಎಲ್ಲೋ ಒಂದು ಕಡೆ ಮಿತಿ ಹಾಕಲು ಸಾಧ್ಯವಾಗುವಂತಿರಬೇಕು. ಅವರು ಬರಡು ಬದುಕನ್ನು ಬದುಕಬೇಕೆಂದು ಅಲ್ಲ, ಆದರೆ ಅವರು ಒಂದು ಹಂತದ ನಂತರ ಅವಶ್ಯಕತೆ ಇಲ್ಲ ಎಂದು ಸ್ವಯಂ-ನಿಯಂತ್ರಣ ಹಾಕಿಕೊಳ್ಳಬೇಕು. ಆ ನಿಯಂತ್ರಣ ಹಾಕದೇ ಇದ್ದರೆ ಜೀವನ ಅತಿರೇಕದ್ದಾಗುತ್ತದೆ.
ಅತಿರೇಕದ ಜೀವನ ಒಂದು ಉತ್ತಮ ಜೀವನವಲ್ಲ, ಅದು ಹಾಳು ಜೀವನ. ಯಾವಾಗ ಜನರು ಯಾವುದನ್ನಾದರೂ ಅತಿರೇಕ ಮಾಡಿದರೆ ಅದು ವಿರೂಪಕ್ಕೆ ದಾರಿಯಾಗುತ್ತದೆ, ಅಲ್ಲಿ ಸಂತೋಷ ಇರುವುದಿಲ್ಲ, ಜನರು ಪೂರ್ತಿ ನಿರಾಶರಾಗುತ್ತಾರೆ ಹಾಗೂ ಮಾನಸಿಕವಾಗಿ ಬಳಲುತ್ತಾರೆ. ಇದು ವಿಶ್ವದೆಲ್ಲೆಡೆ ಸಮೃದ್ಧವರ್ಗಕ್ಕೆ ಆಗುತ್ತಿದೆ. ಹಣ ಯೋಗಕ್ಷೇಮವನ್ನು ತರಬೇಕಿತ್ತು, ಆದರೆ ಬಹಳ ಜನರಿಗೆ ಅವರೊಳಗೆ ಅದು ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ.
ಒಮ್ಮೆ ಹೀಗಾಯಿತು, ಶಂಕರನ್ ಪಿಳ್ಳೈ ಮಗ ಐಟಿ ಉದ್ಯೋಗಿಯಾಗಿ ಆಫ್ರಿಕಾಗೆ ಹೋದ, ನಿಮಗೆ ಗೊತ್ತು ಭಾರತೀಯರು ಐಟಿ ಉದ್ಯೋಗಿಯಾಗಿ ಮಾತ್ರ ಎಲ್ಲಿ ಬೇಕಾದರೂ ಹೋಗಬಲ್ಲರು. ಅಲ್ಲಿ ಅವನು ಕೆಲವು ಸ್ಥಳೀಯರ ಸ್ನೇಹ ಸಂಪಾದಿಸಿದ. ಒಂದು ವಾರಾಂತ್ಯ ಇವನ ಗೆಳೆಯ ತಾನು ತನ್ನ ಮಂತ್ರವಾದಿ ವೈದ್ಯರನ್ನು ಭೇಟಿಯಾಗಲು ಬುಡಕಟ್ಟು ಜನರಿರುವಲ್ಲಿಗೆ ಹೋಗುತ್ತಿದ್ದೇನೆಂದು ಹೇಳಿ ಇವನನ್ನೂ ಬರಲು ಕರೆದ. ಶಂಕರನ್ ಪಿಳ್ಳೆ ೖಯ ಮಗನಿಗೆ ಬೇರೇನೂ ಕೆಲಸವಿಲ್ಲದ್ದರಿಂದ ಅವನು ಹೋಗಲು ತೀರ್ವನಿಸಿದ. ದಾರಿಯಲ್ಲಿ ಇವನ ಗೆಳೆಯ, ಮಂತ್ರವಾದಿಯ ಬಗ್ಗೆ ಅದ್ಭುತ ವಿಷಯಗಳನ್ನು ಹೇಳಿದನಲ್ಲದೆ ಅವರು ಮಾಡಲು ಸಾಧ್ಯವಿರುವ ಎಲ್ಲ ವಿಷಯಗಳ ಬಗ್ಗೆ ತಿಳಿಸಿದ. ಶಂಕರನ್ ಪಿಳ್ಳೆ ೖ ಮಗ ನುರಿತವ, ಅವನು ಭಾರತದಿಂದ ಬಂದವ, ಅವನು ಸಾಕಷ್ಟು ಈ ಛೂಮಂತ್ರ ಕಾಳಿ ಎಲ್ಲ ನೋಡಿದವ, ಅವನು ಓಕೆ, ನೋಡೋಣ ಎಂದ.
ಅವರು ಅಲ್ಲಿ ಹೋದರು ಮತ್ತು ಮಂತ್ರವಾದಿ ಹಲವು ವಿಷಯಗಳನ್ನು ಮಾಡಿದರು. ಕೇವಲ ಆಫ್ರಿಕಾದ ಮಂತ್ರವಾದಿ ಮಾತ್ರ ಮಣ ಮಣ ಮಾಡುವಹಾಗೆ, ಮಣ ಮಣ ಮಣ ಮಣ ಮಾಡುತ್ತಲೇ ಇದ್ದ, ಆದಾಗ್ಯೂ ಅವನು ಮಾಡಿದ ಕೆಲವು ವಿಷಯಗಳು ಶಂಕರನ್ ಪಿಳ್ಳೆ ೖ ಮಗನಿಗೆ ಇಷ್ಟವಾದವು. ನಂತರ ಗೆಳೆಯ ‘ನಿನಗೇನಾದರೂ ಬೇಕಿದ್ದರೆ ಕೇಳು ಅವರು ನಿನಗೆ ಮಾಡಿಕೊಡುತ್ತಾರೆ’ ಎಂದು ಹೇಳಿದ. ಶಂಕರನ್ ಪಿಳ್ಳೆ ೖ ಮಗನಿಗೆ ತಂದೆಯ ಬಗ್ಗೆ ಯೋಚನೆ ಬಂತು. ಅವನ ತಂದೆ ಯಾವಾಗಲೂ, ‘ನಾನು ಮುದುಕನಾಗಿಬಿಟ್ಟೆ, ಯುವಕನಾಗಿರಲು ನನಗೆ ಇಷ್ಟ’ ಎಂದು ವಿಷಾದದಿಂದ ಹೇಳುತ್ತಿದ್ದರು. ಆದ್ದರಿಂದ ಅವನು ಮಂತ್ರವಾದಿಯ ಬಳಿ, ‘ನನ್ನ ಪಾಲಕರ ಯೌವನವನ್ನು ಮರಳಿ ತರಬಹುದೆ?’ ಎಂದು ಕೇಳಿದ. ಮಂತ್ರವಾದಿ ಒಂದು ಕಪ್ಪನೆಯ ಕೆಟ್ಟದಾಗಿ ಕಾಣುವ ಪಾತ್ರೆಯನ್ನು ತೆಗೆದರು. ಅದರಲ್ಲಿ ಕಪ್ಪನೆಯ ಅತಿ ಕೆಟ್ಟದಾಗಿ ಕಾಣುವ ಮಾತ್ರೆಗಳಿದ್ದವು. ಅವರು ಇದರಲ್ಲಿ ಒಂದು ಮಾತ್ರೆಯನ್ನು ಅವರಿಗೆ ಕೊಡು, ಅವರ ವಯಸ್ಸು ಹಲವು ವರ್ಷ ಕಡಿಮೆಯಾಗುತ್ತದೆ ಎಂದು ಹೇಳಿದರು. ತಕ್ಷಣ ಅವನು ಅದನ್ನು ತೆಗೆದುಕೊಂಡು ಭಾರತಕ್ಕೆ ಕೊರಿಯರ್ ಮಾಡಿದ.
ಆಮೇಲೆ ಮೂರು ತಿಂಗಳ ನಂತರ, ಆಫ್ರಿಕಾದಲ್ಲಿ ಅವನ ಪ್ರಾಜೆಕ್ಟ್ ಮುಗಿದ ನಂತರ, ವಾಪಾಸು ಭಾರತಕ್ಕೆ ಬಂದ. ಅವನು ಮನೆಗೆ ಬಂದು ಮನೆಯೊಳಗೆ ನಡೆದನು, ಅಲ್ಲಿ ಯುವಕನೊಬ್ಬ ಒಂದು ಶಿಶುವನ್ನು ನೋಡಿಕೊಳ್ಳುತ್ತಿದ್ದ. ಮನೆಯೊಳಗೆ ಬಂದು ಸುತ್ತಮುತ್ತ ನೋಡಿ, ‘ಎಲ್ಲಿ ನನ್ನ ಪಾಲಕರು? ಎಲ್ಲಿದ್ದಾರೆ ನನ್ನ ತಂದೆ?’ ಎಂದು ಕೇಳಿದ. ಆಗ ಯುವಕ ಹೇಳಿದ, ‘ಏ, ನನ್ನ ಗುರುತು ಸಿಗಲಿಲ್ವ? ನಾನು ನಿನ್ನ ತಂದೆ’. ‘ಓ ಅಪ್ಪ, ಏನಾಯ್ತು?’ ‘ಅದೇ ನೀನು ಕಳಿಸಿದ್ದೆಯಲ್ಲ ಆ ಅದ್ಭುತ ಮಾತ್ರೆ, ನಾನು ಅದನ್ನು ತಗೊಂಡೆ ಅಷ್ಟೆ, ಅದು ನನ್ನ ವಯಸ್ಸನ್ನು ಕಡಿಮೆ ಮಾಡಿತು’. ‘ಅಪ್ಪ, ಅದು ಅದ್ಭುತ; ನಿನಗೆ ಸಂತೋಷವೇ? ಅಮ್ಮ ಎಲ್ಲಿ?’ ಪಿಳ್ಳೆ ೖ ಶಿಶುವಿನ ಕಡೆಗೆ ಕೈ ತೋರಿಸಿ ಹೇಳಿದರು, ‘ನೋಡು ಅವಳೇ, ಅವಳು ಮೂರು ಮಾತ್ರೆ ತಿಂದಳು’.
ಹೀಗೆ ಅತಿರೇಕ ಎಂಬುದು ಹಾನಿಯನ್ನೇ ಮಾಡುತ್ತದೆ. ಎಲ್ಲ ಅಂತಸ್ತಿನ ಜನರು; ತಾವು ಜೀವಿಸುತ್ತಿರುವ ವಾಸ್ತವ ಸ್ಥಿತಿಯನ್ನು ಅಥವಾ ಭೂಗ್ರಹದ ಇತಿಮಿತಿಯನ್ನೇ ಪರಿಗಣಿಸದೆ ಅತಿರೇಕ ಮಾಡುವ ಪ್ರಯತ್ನ ಮಾಡುತ್ತಾರೆ. ನಾವು ಸೂಜಿ ತಯಾರಿಸಲಿ ಇಲ್ಲ ದೊಡ್ಡಯಂತ್ರವನ್ನೇ ಮಾಡಲಿ, ಅದಕ್ಕಾಗಿ ನಾವು ಭೂಮಿಯನ್ನು ಅಗೆಯುತ್ತೇವೆ. ಹಾಗಾಗಿ, ನಾವು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದಕ್ಕೆ ಒಂದು ಮಿತಿ ಇರಬೇಕು. ನಾವು ಕೇವಲ ಆಡಿನ ಹಾಲು ಕುಡಿದು ಬದುಕಬೇಕು ಎಂದಲ್ಲ, ಆದರೆ ಎಲ್ಲಿಯೋ ಒಂದು ಕಡೆ ಕಡಿವಾಣ, ನಿರ್ಬಂಧ ಇರಲೇ ಬೇಕು, ಇಲ್ಲವಾದಲ್ಲಿ ಅದು ವಿರೂಪಕ್ಕೆ ದಾರಿಯಾಗುತ್ತದೆ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.www.isha.sadhguru.org)