

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ( MLA Munirathna ) ಪ್ರಕರಣವು ದಿನದಿಂದ ದಿನಕ್ಕೆ ಹಲವು ಮಜಲುಗಳನ್ನು ಪಡೆಯುತ್ತಿದ್ದು, ಅವರ ವಿರುದ್ಧ ದಾಖಲಾದ ಗಂಭೀರ ಪ್ರಕರಣಗಳ ತನಿಖೆ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ವಿಧಾನಸಭೆ ಸದಸ್ಯತ್ವದಿಂದ ಶಾಸಕ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕೆಂದು ಸ್ವತಃ ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಸ್ಪೀಕರ್ ಯುಟಿ ಖಾದರ್ಗೆ ಪತ್ರ ಬರೆದಿದ್ದಾರೆ.
ಈ ಕುರಿತು ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಸುಧೀಗ್ರ ಪತ್ರ ಬರೆದಿದ್ದು, ವಿಧಾನಸಭೆ ಸದಸ್ಯತ್ವದಿಂದ ಶಾಸಕ ಕೆ.ಮುನಿರತ್ನ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ, ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದು ಹೇಳಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ. ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ “ನೀತಿ-ನಿರೂಪಣಾ ಸಮಿತಿ” (Ethics Committee of State Legislature) ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತೀ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು.
ಸಂವಿಧಾನದತ್ತವಾಗಿ ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಾಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ವಿಧಾನಸಭೆ ಸದಸ್ಯರಾದ ಕೆ.ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
“ನೀತಿ-ನಿರೂಪಣಾ ಸಮಿತಿ” (Ethics Committee of State Legislature) ರಚನೆ ಮಾಡಿ ಆ ಸಮಿತಿಯ ಮೂಲಕ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದು ಸ್ಪೀಕರ್ ಯುಟಿ ಖಾದರ್ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಘಟನೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೌಲ್ಯಗಳಿಗೆ, ಸತ್ಸಂಪ್ರದಾಯಗಳಿಗೆ ತೀವ್ರವಾದ ಕೊಡಲಿ ಪೆಟ್ಟು ಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾನಸಭೆಯ ಘನತೆ, ಗೌರವಕ್ಕೆ ತೀವ್ರವಾದ ಧಕ್ಕೆಯುಂಟಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನವನ್ನು ನಿಯಂತ್ರಿಸಲು ತೀವ್ರವಾಗಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಈ ಕೆಳಕಂಡ ನಿಯಮಗಳನ್ವಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಒತ್ತಾಯಿಸಿದ್ದಾರೆ.