ಜೀವನ ಅನಿಶ್ಚಿತ, ಆದರೆ ಅನಿಶ್ಚಿತತೆಯೇ ಸ್ವಾತಂತ್ರ್ಯ…

Children Enjoy
Published on

ನೀವು ಈ ಭೂಮಿಗೆ ಯಾವುದೇ ರೀತಿಯ ಹೂಡಿಕೆಯಿಲ್ಲದೇ ಬಂದಿರಿ. ಮತ್ತು ನೀವು ನಿಮ್ಮ ಕೈಯಲ್ಲಿ ಯಾವುದೇ ರೀತಿಯ ಬಂಡವಾಳವಿಲ್ಲದೇ ಹೋಗುತ್ತೀರಿ. ಮಧ್ಯದಲ್ಲಿ ಏನೇ ಆದರೂ, ನೀವು ಲಾಭದಲ್ಲೇ ಇರುತ್ತೀರಿ, ಏಕೆಂದರೆ ನಿಮ್ಮ ಬಳಿ ಇರುವುದೆಲ್ಲಾ ಜೀವನದ ಅನುಭವವಷ್ಟೆ. ನೀವು ಅದನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದು ಮುಖ್ಯ.

ಹೊರಗಿನ ಜಗತ್ತಿನಲ್ಲಿ ಯಾವುದೂ ನಿಶ್ಚಿತವಲ್ಲ, ಅದೊಂದು ವಾಸ್ತವ. ಅದು ಅನಿಶ್ಚಿತ ಮತ್ತು ಹಾಗಾಗಿಯೇ ಅದು ಸವಾಲಿನ ಸಂಗತಿಯಾಗಿರುವುದು. ಅನಿಶ್ಚಿತತೆ ಎಂದರೆ ಎಲ್ಲವೂ ಬದಲಾಗುತ್ತಿರುವುದು; ಬೇರೆ ರೀತಿಯಲ್ಲಿ ಹೇಳುವುದಾದರೆ ಅಲ್ಲಿ ಯಾವುದೇ ರೀತಿಯ ಭರವಸೆಯಿರುವುದಿಲ್ಲ. ನೀವು ವೇಗವಾಗಿ ನಡೆಯುತ್ತಿದ್ದರೆ, ಪ್ರತಿಯೊಂದು ಹೆಜ್ಜೆಯೂ ಒಂದು ಹೊಸ ಪ್ರದೇಶವಾಗಿರುತ್ತದೆ. ಈ ಹೊಸ ಪ್ರದೇಶವನ್ನು ನೀವು ಈಗ ಅನಿಶ್ಚಿತತೆ ಎಂದು ಕರೆಯುತ್ತಿದ್ದೀರಿ.

ಅನಿಶ್ಚಿತತೆ ಎಂದರೆ ಬದುಕಿನ ಹೊಸ ಅವಕಾಶಗಳು. ಅವಕಾಶಗಳನ್ನು ಅರಸುತ್ತಿರುವವರಿಗೆ ಅನಿಶ್ಚಿತತೆಯೇ ಒಳ್ಳೆಯ ಸಮಯ. ದೂರದೃಷ್ಟಿ ಇರುವವರು ಅದನ್ನು ಒಂದು ಸಾಧ್ಯತೆಯನ್ನಾಗಿಸಿಕೊಳ್ಳುವರು; ಇಲ್ಲದವರು ಅದನ್ನೊಂದು ಸಮಸ್ಯೆ ಎಂಬಂತೆ ನೋಡುವರು. ಆದರೆ, ನೀವು ನಿಮ್ಮ ಮನಸ್ಸಿನಲ್ಲಿ ನಿರಂತರವಾದ ವಿವಶತೆಯ ಸ್ಥಿತಿಯಲ್ಲಿರುವುದರಿಂದ, ನೀವು ನಿಶ್ಚಿತತೆಯನ್ನು ಅರಸುತ್ತಿರುವಿರಿ.

ನಿಶ್ಚಿತತೆ ಎನ್ನುವುದು ಒಂದು ಭರವಸೆಯ ಸ್ಥಿತಿ. ನಿಶ್ಚಿತತೆ ಇದ್ದರೆ ಅಲ್ಲಿ ಯಥಾಸ್ಥಿತಿ ಇರುತ್ತದೆ, ಅಲ್ಲವೇ? ಒಂದು ವ್ಯಾಪಾರದಲ್ಲಿ, ರಾಜಕೀಯ ಅಥವಾ ಸಾಮಾಜಿಕ ಪರಿಸ್ಥಿತಿಯಲ್ಲಿ ಯಥಾಸ್ಥಿತಿ ಎಂದರೆ ಅಲ್ಲಿ ಏನೂ ಬದಲಾವಣೆ ಇರುವುದಿಲ್ಲ; ಏನೂ ವಿಕಾಸಗೊಳ್ಳುವುದಿಲ್ಲ. ನಿಶ್ಚಿತತೆಯನ್ನು ಅರಸುವುದರಿಂದ, ಅಂತಿಮವಾಗಿ, ನೀವು ನಿಂತ ನೀರಿನಂತಹ ಪರಿಸ್ಥಿತಿಗೆ ಎಡೆಮಾಡಿಕೊಡುತ್ತೀರಿ. ಜೀವನವು ನಿಂತ ನೀರಿನಂತಾದರೆ, ನಿಮಗೆ ಬೇಸರವಾಗುತ್ತದೆ. ಸಂಗತಿಗಳು ಬೇಗ ಬೇಗ ಸಂಭವಿಸಿದರೆ, ಅದನ್ನು ನಿರ್ವಹಿಸಲು ಬೇಕಾದ ಸಮತೋಲನ ನಿಮ್ಮಲ್ಲಿರುವುದಿಲ್ಲ. ಹಾಗಾಗಿ, ಸಮಸ್ಯೆಯಿರುವುದು ಅನಿಶ್ಚಿತತೆಯಲ್ಲಲ್ಲ; ನಿಮ್ಮ ಆಂತರ್ಯ ಅನಿಶ್ಚಿತ ಸ್ಥಿತಿಯಲ್ಲಿರುವುದೇ ಸಮಸ್ಯೆ. ನೀವು ಶಾಂತವಾಗಿರಲು ನಾವು ಇಡೀ ಪ್ರಪಂಚವನ್ನು ಸರಿಪಡಿಸಬೇಕೆಂದರೆ, ಅದು ಎಂದಿಗೂ ಸಾಧ್ಯವಿಲ್ಲ. ಅದಕ್ಕೆ ಬದಲಾಗಿ ನಾವು ಮಾಡಬೇಕಾಗಿರುವುದೇನೆಂದರೆ ಆಂತರ್ಯವನ್ನು ಸರಿಪಡಿಸುವುದು. ನಾವು ಹಾಗೆ ಹೇಳುತ್ತಿರುವುದರ ಅರ್ಥವೇನು? ನಿಮ್ಮ ಆಂತರ್ಯ ನಿರ್ಬಂಧಿತವಲ್ಲದಿದ್ದರೆ, ನೀವು ಪ್ರತಿಯೊಂದು ಪರಿಸ್ಥಿತಿಯನ್ನೂ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ನಿಮ್ಮಿಂದ ಸಾಧ್ಯವಾದಷ್ಟು ಚೆನ್ನಾಗಿ ನಿರ್ವಹಿಸುತ್ತೀರಿ ಎನ್ನುವುದು ಅದರರ್ಥ. ಬೇರೆಯವರು ನಿರ್ವಹಿಸಿದಂತೆ ನಿಮಗೆ ನಿರ್ವಹಿಸಲು ಸಾಧ್ಯವಾಗದಿರಬಹುದು, ಆದರೆ ನೀವು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನಿರ್ವಹಿಸುತ್ತೀರಿ, ಅಷ್ಟು ಸಾಕು. ನೀವು ನಿಮಗೆದುರಾಗುವ ಪ್ರತಿಯೊಂದು ಪರಿಸ್ಥಿತಿಯಿಂದಲೂ ಸಂಕಟಕ್ಕೊಳಗಾಗುತ್ತೀರಿ. ಏಕೆಂದರೆ ನೀವು ಒಂದು ಪ್ರತಿಕ್ರಿಯಾತ್ಮಕ ವಿವಶ ಸ್ಥಿತಿಯಲ್ಲಿರುವಿರಿ.

ನಿಶ್ಚಿತತೆ- ಅನಿಶ್ಚಿತತೆಯಿಂದ ಬಿಡುಗಡೆ: ಆಂತರ್ಯ ಎನ್ನುವುದು ಸ್ವಯಂ ಒಂದು ಆಯಾಮವಾಗಿದೆ. ಅದನ್ನು ಬಾಹ್ಯ ಪರಿಸ್ಥಿತಿಗಳಿಗನುಗುಣವಾಗಿ ರೂಪಿಸಲಾಗುವುದಿಲ್ಲ. ಈಗ ಜೀವನದಲ್ಲಿ ನಿಶ್ಚಿತತೆ ಇದೆ, ಹಾಗಾಗಿ ನಾನು ಒಂದು ರೀತಿಯ ಆಂತರಿಕತೆಯನ್ನು ಹೊಂದುತ್ತೇನೆ, ಈಗ ಜೀವನದಲ್ಲಿ ಅನಿಶ್ಚಿತತೆ ಇದೆ, ಹಾಗಾಗಿ ನಾನು ಮತ್ತೊಂದು ರೀತಿಯ ಆಂತರಿಕತೆಯನ್ನು ಹೊಂದುತ್ತೇನೆ, ನನ್ನ ಸುತ್ತಲೂ ಇರುವ ಜನರು ಸರಿಯಾಗಿದ್ದರೆ, ನಾನು ಒಂದು ರೀತಿಯ ಆಂತರಿಕತೆಯಲ್ಲಿರುತ್ತೇನೆ. ಜನರು ಕೆಟ್ಟದಾಗಿದ್ದಾಗ, ನಾನು ಬೇರೆ ರೀತಿಯಲ್ಲಿರುತ್ತೇನೆ. ಅದು ಹಾಗೆ ಕೆಲಸ ಮಾಡುವುದಿಲ್ಲ. ಅದು ನೀವು ನಿರ್ಧರಿಸುವ ಸಂಗತಿಯಲ್ಲ; ಅದು ಇರುವುದೇ ಹಾಗೆ. ಹಾಗಾಗಿ, ಅದನ್ನು ಹೇಗೆ ಇಟ್ಟುಕೊಳ್ಳುವುದು? ಅದನ್ನು ಸರಿಯಾಗಿಟ್ಟುಕೊಳ್ಳುವ ವಿಧಾನವೇನೂ ಇಲ್ಲ. ಅದು ಪ್ರಜ್ಞಾಪೂರ್ವಕವಾಗಿದ್ದರೆ, ಅದು ನಿರ್ಬಂಧಿತವಾಗಿರುವುದಿಲ್ಲ.

ನೀವು ಈ ಭೂಮಿಗೆ ಯಾವುದೇ ರೀತಿಯ ಹೂಡಿಕೆಯಿಲ್ಲದೇ ಬಂದಿರಿ. ಮತ್ತು ನೀವು ನಿಮ್ಮ ಕೈಯಲ್ಲಿ ಯಾವುದೇ ರೀತಿಯ ಬಂಡವಾಳವಿಲ್ಲದೇ ಹೋಗುತ್ತೀರಿ. ಮಧ್ಯದಲ್ಲಿ ಏನೇ ಆದರೂ, ನೀವು ಲಾಭದಲ್ಲೇ ಇರುತ್ತೀರಿ, ಏಕೆಂದರೆ ನಿಮ್ಮ ಬಳಿ ಇರುವುದೆಲ್ಲಾ ಜೀವನದ ಅನುಭವವಷ್ಟೆ. ನೀವು ಅದನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದು ಮುಖ್ಯ. ಹಾಗಾಗಿ, ನಿಮ್ಮ ಆಂತರಿಕತೆಯು ಅನಿರ್ಬಂಧಿತವಾಗಿದ್ದರೆ, ಪ್ರಜ್ಞಾಪೂರ್ಣ ಸ್ಥಿತಿಯಲ್ಲಿದ್ದರೆ, ಆಗ ನೀವು ನಿಮ್ಮ ಅನುಭವವನ್ನು ನಿರ್ಧರಿಸುತ್ತೀರಿ. ಪರಿಸ್ಥಿತಿಗಳಲ್ಲಿ, ನೀವು ಒಂದು ಭಾಗವನ್ನು ನಿರ್ಧರಿಸಿದರೆ, ಜಗತ್ತು ಒಂದು ಭಾಗವನ್ನು ನಿರ್ಧರಿಸುತ್ತದೆ. ಆದರೆ ನೀವು ಜೀವನವನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದು ನೂರಕ್ಕೆ ನೂರರಷ್ಟು ನಿಮ್ಮ ಕೈಯಲ್ಲೇ ಇದೆ.

ಆಂತರ್ಯದ ಆನಂದಮಯ ಸೂತ್ರ: ನಿಮ್ಮ ಕೆಲಸ ಮಹತ್ವದ್ದು ಎಂದು ನೀವು ಭಾವಿಸುವುದಾದರೆ, ನಿಮ್ಮ ಮೇಲೆ ನೀವು ಕೆಲಸ ಮಾಡಿಕೊಳ್ಳುವುದು ಮುಖ್ಯ, ಅಂದರೆ - ಹೊರಗಿನ ಪರಿಸ್ಥಿತಿಗಳೇನೇ ಇರಲಿ ನೀವು ಅಂತರಿಕವಾಗಿ ಸುಸ್ಥಿರ ಜೀವವಾಗಿರುವಂತೆ, ನೀವು ನಿಮ್ಮನ್ನು ಸುಧಾರಿಸಿಕೊಳ್ಳಬೇಕು. ನೀವು ಒಂದು ದೊಡ್ಡ ವ್ಯಾಪಾರ ಅಥವಾ ಉದ್ಯಮವನ್ನು ನಡೆಸುತ್ತಿರುವಾಗ, ಅದು ಕೇವಲ ನಿಮ್ಮ ಕುರಿತಾದದ್ದಷ್ಟೇ ಅಲ್ಲ. ಅಲ್ಲಿ, ನಿಮ್ಮ ಜೊತೆ ಇನ್ನೊಂದು ಸಾವಿರ ಜನರು ತೊಡಗಿಕೊಂಡಿರುತ್ತಾರೆ. ಹಾಗಾಗಿ ನೀವು ಒಂದು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದು ನಿಮ್ಮ ಜೀವನವಷ್ಟೇ ಅಲ್ಲದೆ, ಇನ್ನೂ ಒಂದು ಸಾವಿರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೆ ನೀವು ಬೆಳೆದಿರೆಂದರೆ, ಸವಾಲುಗಳೂ ಸಹ ಸಹಜವಾಗಿ ಬೆಳೆಯುತ್ತವೆ; ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಆದರೆ ನೀವು ಕುದುರೆ ಓಡಿಸುವ ಜಾಕಿಯ ಸ್ಥಾನಕ್ಕೆ ಹೋಗಬೇಕೆಂದರೆ, ನೀವು ಒಂದು ಪರಿಸ್ಥಿತಿಯನ್ನು ನಿರ್ವಹಿಸಬೇಕೆಂದರೆ, ಅದು ಎಷ್ಟೇ ದೊಡ್ಡದಾಗಿರಲಿ, ನೀವು ಮಾಡಬೇಕಾದ ಮೊದಲನೇ ಕೆಲಸವೆಂದರೆ ನೀವು ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕು. ನೀವು ನಿಮ್ಮೊಳಗೆ ಒಂದು ಸುಸ್ಥಿರ ಮತ್ತು ಆನಂದಮಯ ರಾಸಾಯನಿಕತೆಯನ್ನು ಸೃಷ್ಟಿಸಿಕೊಂಡು, ಜೀವನದ ವಿವಿಧ ರೀತಿಯ ಏಳುಬೀಳುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯವನ್ನು ಅಪಾರವಾಗಿ ವೃದ್ಧಿಸುವ ವಿಧಾನವನ್ನು ನಾನು ನಿಮಗೆ ಹೇಳಿಕೊಡಬಲ್ಲೆ. ಹೇಗೆ? ಯೋಗದಿಂದ.

ನೀವು ಇಲ್ಲಿ ಸುಮ್ಮನೆ ಕುಳಿತರೆ, ನೀವು ಮತ್ತು ನಿಮ್ಮ ಶರೀರದ ನಡುವೆ ಸ್ವಲ್ಪ ಅಂತರ ಏರ್ಪಡುವ, ನೀವು ಮತ್ತು ನಿಮ್ಮ ಮನಸ್ಸಿನ ನಡುವೆ ಸ್ವಲ್ಪ ಅಂತರ ಏರ್ಪಡುವ ಮತ್ತು ನೀವು ಮತ್ತು ಜಗತ್ತಿನ ನಡುವೆ ಸ್ವಲ್ಪ ಅಂತರ ಏರ್ಪಡುವ ಸಾಧ್ಯತೆಯನ್ನು ಯೋಗವು ನಿಮಗೆ ನೀಡುತ್ತದೆ. ಒಮ್ಮೆ ನೀವು ಈ ಅಂತರವನ್ನು ಏರ್ಪಡಿಸಿಕೊಂಡರೆ; ಯಾವುದು ನೀವು ಮತ್ತು ಯಾವುದು ನೀವಲ್ಲ ಎಂಬುದನ್ನು ತಿಳಿದರೆ, ಅದೇ ದುಃಖದ ಅಂತ್ಯ. ದುಃಖದ ಭಯವಿಲ್ಲದಿದ್ದಾಗ, ನೀವು ಎಲ್ಲವನ್ನೂ ಅತ್ಯುನ್ನತ ಸ್ಪಷ್ಟತೆಯಿಂದ ನೋಡಲು ಸಾಧ್ಯವಾಗುತ್ತದೆ ಮತ್ತು ಪ್ರತಿಯೊಂದು ವಿಷಯದ ಕಡೆಗೂ, ನಿಮ್ಮ ಬುದ್ಧಿಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರವಾಗಿ ಗಮನಕೊಡಲು ಸಾಧ್ಯವಾಗುತ್ತದೆ. ಪರಿಸ್ಥಿತಿಗಳು ಎಂದಿಗೂ ನಿಮ್ಮನ್ನು ಉತ್ತೇಜಿಸುವುದಿಲ್ಲ.

ಅತ್ಯುನ್ನತ ಸೌಖ್ಯಕ್ಕೆ 112 ವಿಧಾನಗಳು: ನಾನು ಯೋಗ ಎಂದು ಹೇಳಿದಾಗ, ಮುಂಬಯಿ ಅಥವಾ ಲಾಸ್ ಏಂಜಲೀಸ್ ಅಥವಾ ಟಿವಿಯಲ್ಲಿ ಬರುವ ಯೋಗದ ಕುರಿತಾಗಿ ಹೇಳುತ್ತಿಲ್ಲ. ಯೋಗವನ್ನು ಒಂದು ಸಮಗ್ರವಾದ ವಿಧಾನದ ಮೂಲಕ ಸಮೀಪಿಸಬೇಕು. ಯೋಗವು ನಿಮಗೆ ತಕ್ಷಣದ ಮತ್ತು ಅತ್ಯುನ್ನತವಾದ ಶ್ರೇಯಸ್ಸನ್ನು ಸಾಧಿಸಲು 112 ವಿಧಾನಗಳನ್ನು ನೀಡುತ್ತದೆ. ಆ ಮೂಲಕ ವ್ಯವಸ್ಥಿತವಾಗಿ ನಿಮ್ಮ ಆಂತರ್ಯದ ಮೇಲೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದೊಂದು ಪರಿಪೂರ್ಣ ವಿಜ್ಞಾನ ಮತ್ತು ತಂತ್ರಜ್ಞಾನ. ನೀವು ಪ್ರತಿದಿನ 30-40 ನಿಮಿಷಗಳ ಸಮಯವನ್ನು ಮೀಸಲಿಟ್ಟರೆ, ಮುಂದಿನ ಆರು ತಿಂಗಳಲ್ಲಿ ನಿಮ್ಮ ಶರೀರ ಮತ್ತು ಮನಸ್ಸಿನ ಚುರುಕತನದಲ್ಲಿ ನಿಮ್ಮ ವಯಸ್ಸು ಕನಿಷ್ಠ 10 ವರ್ಷಗಳಷ್ಟು ಹಿಮ್ಮುಖಗೊಳ್ಳುತ್ತದೆ. ವಿಷಯಗಳನ್ನು ಸೃಷ್ಟಿಸುವ ಮತ್ತು ನಿರ್ವಹಿಸುವ ನಿಮ್ಮ ಸಾಮರ್ಥ್ಯ ಹೇಗಿರುತ್ತದೆಯೆಂದರೆ ನೀವು ಎಂಟು ಗಂಟೆಗಳಲ್ಲಿ ಮಾಡಬಹುದಾದ ಕೆಲಸವನ್ನು, ಸುಲಭವಾಗಿ 4-5 ಗಂಟೆಗಳಲ್ಲಿ ಮಾಡುತ್ತೀರಿ. ದಿನಕ್ಕೆ ಎಂಟು ಗಂಟೆ ನಿದ್ರಿಸುತ್ತಿದ್ದರೆ, ಅದನ್ನು ಶರೀರಕ್ಕೆ ಏನೂ ಒತ್ತಡ ನೀಡದೇ ಸುಲಭವಾಗಿ 4-5 ಗಂಟೆಗಳಿಗೆ ತಗ್ಗಿಸಬಹುದು. ಹಾಗಾಗಿ 40 ನಿಮಿಷಗಳ ಹೂಡಿಕೆ ನಿಮಗೆ ಹೆಚ್ಚುವರಿ ಸಮಯ, ಹೆಚ್ಚಿನ ಸ್ಪಷ್ಟತೆ, ಹೆಚ್ಚುವರಿ ಸಾಧ್ಯತೆ ಮತ್ತು ಖಂಡಿತವಾಗಿಯೂ ಹೆಚ್ಚುವರಿ ಹಣವನ್ನು ತಂದುಕೊಡುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಯೋಗ ಎನ್ನುವುದು ಅತ್ಯಂತ ಸಂಕೀರ್ಣ ಉಪಕರಣವಾದ ಮಾನವ ಶರೀರವ್ಯವಸ್ಥೆಯ ಬಳಕೆದಾರರ ಕೈಪಿಡಿಯಾಗಿದೆ. ಮಾನವ ಶರೀರವ್ಯವಸ್ಥೆಯನ್ನು ನಿರ್ವಹಿಸುವುದು ಹೇಗೆಂದು ನಿಮಗೆ ತಿಳಿದರೆ, ಆಗ ಹೊರಗಿನ ಪರಿಸ್ಥಿತಿಗಳ ಕಥೆಯೇನು? ಅವುಗಳಲ್ಲಿ ಕೆಲವನ್ನು ನೀವು ನಿರ್ವಹಿಸಬಹುದು, ಮತ್ತೆ ಕೆಲವು ನಿಮ್ಮಿಂದ ಸಾಧ್ಯವಿಲ್ಲ. ಆದರೆ ನೀವು ನಿಮ್ಮನ್ನು ನಿರ್ವಹಿಸುವುದು ಹೇಗೆಂದು ತಿಳಿದುಕೊಂಡಿದ್ದರೆ, ಅದು ನಿಜವಾಗಿಯೂ ಒಂದು ಸಮಸ್ಯೆಯಾಗುವುದಿಲ್ಲ. ಸವಾಲಾಗಿರಬಹುದು, ಆದರೆ ಸಮಸ್ಯೆಯಾಗಿರುವುದಿಲ್ಲ. ಜೀವನದಲ್ಲಿ ಕೇವಲ ಪರಿಸ್ಥಿತಿಗಳು, ಪರಿಸ್ಥಿತಿಗಳು ಮತ್ತು ಪರಿಸ್ಥಿತಿಗಳಷ್ಟೇ ಇರುತ್ತವೆ. ತಮ್ಮನ್ನು ತಾವು ನಿರ್ವಹಿಸಿಕೊಳ್ಳುವುದು ಹೇಗೆಂದು ತಿಳಿಯದವರು ಮಾತ್ರ ಅವುಗಳಿಗೆ ಒಂದು ಸಮಸ್ಯೆ ಎಂದು ಹಣೆಪಟ್ಟಿ ಹಚ್ಚುತ್ತಾರೆ.

ಬೇಕಾದದ್ದು ನಿಶ್ಚಿತತೆಯಲ್ಲ, ಸ್ಪಷ್ಟತೆ: ಎಲ್ಲವನ್ನೂ ಬೇರೇನೋ ಆಗಿ ಬದಲಾಯಿಸುವುದು ಹೇಗೆ ಎಂಬ ದೃಷ್ಟಿಯಿಂದ ಯೋಚಿಸಬೇಡಿ. ಅದು ಹೇಗಿದೆಯೋ ಹಾಗೆಯೇ ನೋಡುವುದು ಹೇಗೆ ಎಂಬುದನ್ನು ಕಲಿಯಿರಿ. ನಿಮಗೆ ಸ್ಪಷ್ಟತೆ ಬೇಕಾದರೆ, ನಿಮಗೆ ಪೂರ್ವಗ್ರಹಿಕೆಯಿಲ್ಲದ ಮತ್ತು ಮಂಕುತನವಿಲ್ಲದ ಮನಸ್ಸಿನ ಅಗತ್ಯವಿದೆ, ಗೊಂದಲದ ಸ್ಥಿತಿಯಲ್ಲಿಲ್ಲದ, ಆದರೆ ಅರಿವಿನ ಮಡಿಲಲ್ಲಿರುವ ಮನಸ್ಸಿನ ಅಗತ್ಯವಿದೆ. ಆ ಮನಸ್ಸು ಎಲ್ಲವನ್ನೂ ಅದು ಇರುವಂತೆಯೇ ಕಾಣುತ್ತದೆ. ಒಮ್ಮೆ ಅದು ಹೀಗೆ ಆಯಿತೆಂದರೆ, ನೀವು ಎಲ್ಲವನ್ನೂ ಒಂದು ಅವಕಾಶವಾಗಿ ಪರಿವರ್ತಿಸಲು ಬಯಸಿದರೆ ಅದು ನಿಮಗೆ ಬಿಟ್ಟದ್ದು, ಅಥವಾ ನೀವದನ್ನು ಅದು ಇರುವಂತೆಯೇ ಅನುಭವಿಸಬಹುದು. ಜೀವನದ ಮಹತ್ತರ ಸಾಧ್ಯತೆಗಳೆಂದರೆ ಅದರ ಅನಿಶ್ಚಿತತೆಗಳು.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net