1. ಸಾಮಾಜಿಕ ಜಾಲತಾಣದ ಅಬ್ಬರ, ಒಟಿಟಿ ಪ್ಲಾಟ್ಫಾಮ್ರ್, ಸಾಲುಸಾಲು ಚಲನಚಿತ್ರಗಳ ಬಿಡುಗಡೆ ನಡುವೆಯೂ ನಾಟಕಗಳು ಜೀವಂತಿಕೆ ಉಳಿಸಿಕೊಂಡಿವೆ. ಅದರಲ್ಲೂ ಇಂದಿಗೂ ಮಂಡ್ಯ ಜಿಲ್ಲೆಯಲ್ಲಿ ನಾಟಕ ಪ್ರದರ್ಶನಕ್ಕೆ ವಿಶೇಷ ಸ್ಥಾನವಿದ್ದು, ಬಹುತೇಕ ಪ್ರದರ್ಶನ ಹೌಸ್ಫುಲ್ ಇರುತ್ತದೆ. ಕಾರಣ, ನಾಟಕದಲ್ಲಿನ ಸಂಗೀತದ ಏರಿಳಿತ, ಅಭಿನಯ, ಸಂಭಾಷಣೆಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಪೌರಾಣಿಕ ನಾಟಕದಲ್ಲಿನ ಪಾತ್ರಧಾರಿಗಳು ನಿರರ್ಗಳವಾಗಿ ಆಡುವ ಸಂಭಾಷಣೆ ಕೇಳುವುದೇ ಪ್ರೇಕ್ಷಕರಿಗೂ ಆನಂದ. ಗ್ರಾಮೀಣ ಭಾಗದಲ್ಲಿ ಹಬ್ಬಗಳಲ್ಲಿ ನಾಟಕ ಆಡಿಸುವ ಸಂಪ್ರದಾಯ ಇನ್ನೂ ಇದೆ. ಸ್ಥಳೀಯರೇ ಅಭಿನಯಿಸುವುದರಿಂದ ನೋಡುಗರಿಗೆ ಆಪ್ತವಾಗುತ್ತದೆ.