ವಿಶಾಲ ಜಗತ್ತು ನೋಡೋಣ: ಮನೋಲ್ಲಾಸ

Search
Published on
| ಅನೀಶ್ ಬಿ. ಕೊಪ್ಪ 
ಅದೊಂದು ಗುರುಕುಲ. ಗುರುಗಳು ತಮ್ಮ ದೈನಂದಿನ ಪಾಠಗಳೊಂದಿಗೆ ಶಿಷ್ಯರಿಗೆ ತಾಳ್ಮೆ, ಸಮಾಧಾನ ಮತ್ತಿತರ ಜೀವನ ಪಾಠಗಳನ್ನು ಬೋಧಿಸುತ್ತಿದ್ದರು. ಸದಾ ಸಿಡುಕು ಸ್ವಭಾವ ಹೊಂದಿದ್ದ ಶಿಷ್ಯನೊಬ್ಬ ಒಮ್ಮೆ ಗುರುಗಳ ಬಳಿ, ಗುರುಗಳೇ, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ. ನನ್ನ ಅತಿಯಾದ ಸಿಟ್ಟಿನಿಂದಾಗಿ ಸ್ನೇಹಿತರು ದೂರವಾಗಿದ್ದಾರೆ. ಈ ಸಿಟ್ಟಿನಿಂದ ಪಾರಾಗಲು ಏನಾದರೂ ಉಪಾಯ ಹೇಳಿ ಎಂದು ಭಿನ್ನವಿಸಿಕೊಂಡ. ಆಗ ಗುರುಗಳು, ಹೌದಾ...! ಎಲ್ಲಿ, ಒಮ್ಮೆ ನಿನ್ನ ಸಿಟ್ಟು ತೋರಿಸು ನೋಡೋಣ ಎಂದರು. ಆಗ ಆ ಶಿಷ್ಯ, ಗುರುಗಳೇ ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ? ಎಂದ.

ಆಗ ಗುರುಗಳು, ಹಾಗಾದರೆ ನಿನ್ನ ಸಿಟ್ಟನ್ನು ನನಗೆ ಯಾವಾಗ ತೋರಿಸುವೆ? ಎಂದು ಪ್ರಶ್ನಿಸಿದರು. ಅಯ್ಯೋ! ಅದು ಹಾಗೆ ಹೇಳಲಾಗುವುದಿಲ್ಲ, ಅಚಾನಕ್ ಆಗಿ ಒಮ್ಮೆಲೇ ಬಂದು ಬಿಡುತ್ತದೆ ಎಂದು ಶಿಷ್ಯ ಪ್ರತಿಕ್ರಿಯಿಸಿದ. ಆಗ ಗುರುಗಳು, ಅಯ್ಯೋ ಶಿಷ್ಯ, ಹೇಳಿದ ಕೂಡಲೆ ತೋರಿಸಲಾಗದ ಸಿಟ್ಟು ನಿನ್ನ ಸ್ವಂತದ್ದಲ್ಲ. ಅದು ನಿನ್ನ ಸ್ವಂತದ್ದಾಗಿದ್ದರೆ ಕೇಳಿದಾಗೆಲ್ಲ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ತಂದೆ ತಾಯಿಗಳಿಂದ, ನೆಂಟರಿಂದ ಬಂದದ್ದೂ ಅಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರುತ್ತದೆ ಆ ಸಿಟ್ಟು? ಎಂದರು. ನಮ್ಮದಲ್ಲದ ಯಾವ ವಸ್ತುವೂ ನಮ್ಮ ಹತೋಟಿಗೆ ಸಿಗುವುದಿಲ್ಲ. ನಮ್ಮದಲ್ಲದ ವಸ್ತು ಸದಾ ನಮ್ಮ ಹಿಡಿತ ತಪ್ಪಿಸಿಕೊಂಡು ಹೋಗುತ್ತದೆ ಎಂದು ಸಮಾಧಾನದಿಂದ ಹೇಳಿದರು. ಗುರುಗಳು ನೀಡಿದ ಜೀವನ ಪಾಠ ಶಿಷ್ಯನನ್ನು ಮೂಕವಿಸ್ಮಿತನನ್ನಾಗಿಸಿತು. ಗುರುವಿನ ಪಾದಗಳಿಗೆ ವಂದಿಸಿ,ಮನದಲ್ಲೇ ಹೊಸ ಯೋಚನೆಗೆ ಹೊರಳಿದ.

ಈ ಶಿಷ್ಯನಂತೆ ನಾವೂ ದಿನ ಕಳೆಯುತ್ತಿರುತ್ತೇವೆ. ಪಿತ್ರಾರ್ಜಿತ ಜಮೀನಿನ ಮೇಲೆ ನಮಗೆ ಅಷ್ಟು ಆಸೆ-ಆಸಕ್ತಿ ಇರುವುದಿಲ್ಲ. ಬಂದಷ್ಟು ಬೆಳೆ ಬರಲಿ ಎಂಬ ಮನಸ್ಥಿತಿಗೂ ಒಮ್ಮೊಮ್ಮೆ ಜಾರುತ್ತೇವೆ. ಆದರೆ, ನಾವೇ ಸ್ವತಃ ದುಡಿಮೆಯಿಂದ ಖರೀದಿಸಿದ ನಿವೇಶನ ಪುಟ್ಟದಾಗಿದ್ದರೂ ಅದನ್ನು ಬಹಳ ಜಾಗರೂಕತೆಯಿಂದ ಉಳಿಸಿಕೊಳ್ಳಲು ಮನಸ್ಸು ಹಾತೊರೆಯುತ್ತಿರುತ್ತದೆ. ಯೌವನಕ್ಕೆ ಬಂದ ಮಕ್ಕಳಿಗೆ ತಂದೆ ತಾಯಿ ದುಡಿದ ಹಣವನ್ನು ಖರ್ಚು ಮಾಡುವಾಗ ಖರ್ಚಿನ ಮೇಲೆ ಹಿಡಿತವೇ ಇರುವುದಿಲ್ಲ. ಆದರೆ, ತಾವೇ ದಿನಪೂರ್ತಿ ದುಡಿದು, ಖರ್ಚು ಮಾಡುವಾಗ ಹಿತ-ಮಿತವಾದ ಖರ್ಚಿನ ದಾರಿ ಹುಡುಕಿಕೊಂಡು ಖರ್ಚು ಹಿಡಿತಕ್ಕೆ ಬರುತ್ತದೆ.

ನಿನ್ನನ್ನು ಕಣ್ಣೀರಿಡಿಸುವ ಮತ್ತು ನಗಿಸುವ ಎಲ್ಲ ಅಂಶಗಳೂ ನಿನ್ನವೇ ಆಗಿರುತ್ತದೆ. ಅವುಗಳನ್ನು ಮೀರಿ ನೀನು ಬೆಳೆದರೆ ನಿನ್ನ ಜಗತ್ತು ವಿಶಾಲವಾಗಿ ನಿನ್ನಲ್ಲಿ ಸಣ್ಣತನ ಸವೆದು ನೀನೂ ಸಹ ಬೆಳೆಯುತ್ತೀಯ ಎಂಬ ಡಿವಿಜಿಯವರ ಕಗ್ಗದ ಸಾಲುಗಳಂತೆ, ನಮ್ಮ ಊಹೆಗೆ ನಿಲುಕುವಂತಹ, ಭಾವನೆಗೆ ಸ್ಪಂದಿಸುವಂತಹ ಎಲ್ಲ ವಸ್ತುಗಳೂ ನಮ್ಮದಾಗುತ್ತವೆ. ನಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು, ದ್ವೇಷಾಸೂಯೆ, ಕೋಪ ತಾಪಗಳನ್ನು ನಮ್ಮದಲ್ಲವೆಂದು ಕೈ ಬಿಟ್ಟಾಗ ಮನದ ಸದ್ಭಾವಗಳು ನಮ್ಮ ಹಿಡಿತಕ್ಕೆ ಸಿಗುತ್ತವೆ. ಬದುಕು ನಂದನವನವಾಗುತ್ತದೆ

(ಲೇಖಕರು: ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net