

ಯಾರೂ ನಿರೀಕ್ಷಿಸದಿದ್ದಂಥ ವಿದ್ಯಮಾನವೊಂದು ಕಳೆದ 4-5 ತಿಂಗಳುಗಳಲ್ಲಿ ಘಟಿಸಿದೆ. ಸಾವಿರಾರು ಜನರು, ವಿಶೇಷತಃ ಯುವಕರು, ಸ್ವಯಂಪ್ರೇರಣೆಯಿಂದ ಪಟ್ಟಣವನ್ನು ಬಿಟ್ಟು ಹುಟ್ಟಿದೂರುಗಳಿಗೆ ಹಿಂತಿರುಗಿದ್ದಾರೆ. ಪಟ್ಟಣದ ಆರ್ಥವ್ಯವಸ್ಥೆಯ ದೃಷ್ಟಿಯಿಂದ ಇದೊಂದು ಹಿನ್ನಡೆಯೆಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಇತ್ತೀಚಿನ ಗ್ರಾಮೀಣ ಭಾಗದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದಾಗ ಇದೊಂದು ಸಕಾರಾತ್ಮಕ ಬೆಳವಣಿಗೆಯೆಂದೇ ಪರಿಗಣಿಸಬೇಕಾಗುತ್ತದೆ. ಹೀಗೆ ಹಿಂತಿರುಗಿದ ಜನರು ಖಾಲಿ ಕುಳಿತುಕೊಳ್ಳದೆ ಬೇರೆ ಬೇರೆ ಕೆಲಸ-ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಕೆಲವರು ಕೃಷಿ ಕಾರ್ಯದಲ್ಲಿ, ಇನ್ನು ಕೆಲವರು ತರಕಾರಿ-ಹಣ್ಣು-ಸಾಮಾನು ಸಾಗಣೆ ಮತ್ತು ವಿತರಣೆಯಲ್ಲಿ, ಮತ್ತೆ ಕೆಲವರು ವರ್ಕ್ ಫ್ರಮ್ ಹೋಂನಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ಜನರು ಸ್ವಂತ ಉದ್ಯಮ ಸ್ಥಾಪಿಸುವತ್ತಲೂ ಚಿತ್ತ ಹರಿಸಿದ್ದಾರೆ.
ಹಳ್ಳಿಯಲ್ಲಿ ಹೇಗೋ ಕಾಲ ನೂಕುತ್ತಿದ್ದ ವೃದ್ಧ ತಂದೆ-ತಾಯಿಗಳ ಮೊಗದಲ್ಲಿ ಸ್ವಲ್ಪ ಮಂದಹಾಸ ಮೂಡುತ್ತಿದೆ. ರಾಜಕೀಯ ನಾಯಕರ ಮಾತಿನಲ್ಲಿ ಮಾತ್ರ ನಡೆಯುತ್ತಿದ್ದ ‘ಗ್ರಾಮೀಣ ಬದುಕಿನ ಉದ್ಧಾರ’ ನಿಜವಾಗಿಯೂ ಸಾಧ್ಯವಾಗುವಂಥ ಕುರುಹು ಗೋಚರಿಸುತ್ತಿದೆ. ಆದರೆ ಈ ಬೆಳವಣಿಗೆ ತಾತ್ಕಾಲಿಕವಾಗದೆ ಶಾಶ್ವತವಾದರೆ ಮಾತ್ರ ಗ್ರಾಮೀಣ ಭಾರತದ ಪುನರ್ ನಿರ್ಮಾಣ ಸಾಧ್ಯ. ಯುವಕರಲ್ಲಿ ಹೊಸ-ಹೊಸ ಪ್ರಯೋಗ ಮಾಡುವ ಹುಮ್ಮಸ್ಸು ಸ್ವಾಭಾವಿಕ. ಅವರಿಗೆ ಬೇಕಾದದ್ದು ಪ್ರೋತ್ಸಾಹ ಸರಿಯಾದ ಸಹಾಯ ಮತ್ತು ಮಾರ್ಗದರ್ಶನ . ಈ ಅವಶ್ಯಕತೆಯನ್ನು ಗಮನದಲ್ಲಿ ಇರಿಸಿಕೊಂಡು ಈಗಾಗಲೇ ಕೇಂದ್ರ ಸರ್ಕಾರ ‘ಕೃಷಿ ಮೂಲಸೌಕರ್ಯ ನಿಧಿ’ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿಯನ್ನು ಘೊಷಿಸಿ, 1 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದೆ. ಇಂತಹ ಯೋಜನೆಗಳಲ್ಲಿ ಬಿಡುಗಡೆಯಾದ ಹಣವನ್ನು ಸಾಮಾನ್ಯವಾಗಿ ಆಗುವಂತೆ ಪೋಲಾಗಗೊಡದೆ, ಅದರ ಸದ್ವಿನಿಯೋಗ ಆಗುವಂತಾಗಬೇಕು. ಇದಕ್ಕಾಗಿ ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಸಂಬಂಧಿತ ಇತರ ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಬೇಕು. ಇರುವ ಜಾಗದಲ್ಲಿಯೇ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಗುಣಮಟ್ಟದ ಬೆಳೆಯನ್ನು ಬೆಳೆಯುವುದು, ಒಳ್ಳೆಯ ಬೆಲೆ ಬರುವವರೆಗೆ ಉತ್ಪನ್ನ ಹಾಳಾಗದಂತೆ ಶೇಖರಣೆ ಮಾಡುವುದು, ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ತಂತ್ರಜ್ಞಾನದ ಉಪಯೋಗ ಮಾಡಿಕೊಳ್ಳುವುದು, ಮುಂತಾದ ವಿಶೇಷ ಕೌಶಲಗಳಲ್ಲಿ ಯುವ ರೈತರಿಗೆ ತರಬೇತಿ ಕೊಡುವುದು ಅಗತ್ಯವಿದೆ. ಹಾಗಾದಾಗಲೇ ಗ್ರಾಮೀಣ ಯುವಕರ ಆಶೋತ್ತರಗಳಿಗೊಂದು ಸರಿಯಾದ, ಸುಸ್ಥಿರವಾದ ದಾರಿ ಸಿಕ್ಕಂತಾಗುತ್ತದೆ. ಇಲ್ಲವಾದರೆ ಭ್ರಮನಿರಸನವಾದ ಯುವಕರಲ್ಲಿ ಕೆಲವರು ಮತ್ತೆ ಪಟ್ಟಣಗಳಿಗೆ ಹಿಂತಿರುಗುವ, ಇಲ್ಲವೆ ದುಶ್ಚಟಗಳಿಗೆ ಈಡಾಗುವ ಸಂದರ್ಭ ಬರಬಹುದು. ಇದನ್ನೂ ಓದಿ: ಕರ್ನಾಟಕದ ಪುರುಷೋತ್ತಮ್ ರೈ ಹೆಸರು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು
ನಾವಿನ್ಯಪೂರ್ಣ ಯೋಜನೆಗಳನ್ನು ತಂದು ಇಂತಹ ದುರಂತ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ, ಕೃಷಿಕರ ಸಲುವಾಗಿರುವ ವಿಶ್ವವಿದ್ಯಾಲಯಗಳ ಹಾಗೂ ಇತರ ಸಂಸ್ಥೆಗಳ ಮೇಲಿದೆ. ಆದರೆ ಸಂಬಂಧಪಟ್ಟ ಇಲಾಖೆ-ಸಂಸ್ಥೆಗಳ ವೆಬ್ಸೈಟುಗಳನ್ನು ನೋಡಿದರೆ ನಿರಾಶೆಯಾಗುತ್ತದೆ. ಇವು ವಾರ್ಷೀಕವಾಗಿ ಮಾಡಲೇಬೇಕಾದ ಕೆಲವು ಕಾರ್ಯಕ್ರಮಗಳನ್ನು ಬಿಟ್ಟರೆ ಗ್ರಾಮೀಣ ಯುವಕರಿಗಾಗಿ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇನೂ ಕಂಡುಬರುವುದಿಲ್ಲ. ಇವುಗಳಲ್ಲಿ ಕೆಲವು ಕಳೆದ 5-6 ತಿಂಗಳುಗಳಿಂದ ನಿಷ್ಕ್ರಿಯವಾಗಿದ್ದಂತೆ ಕಾಣುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಪರಿಣಾಮಕಾರಿಯಾದ ಕಾರ್ಯಯೋಜನೆಗಳು ಜಾರಿಯಾಗುವಂತಾಗಲಿ.
| ಮನೋಹರ ಎಂ. ಬೆಂಗಳೂರು
ತಳವಾರ ಮತ್ತು ಪರಿವಾರದಿಂದ ಬಿಟ್ಟು ಹೋದ ನಾಯಕ ಹಾಗೂ ನಾಯ್ಕಡ್ ಜಾತಿ ಸಮಾನಾಂತರ ಪದಗಳೇ ಆಗಿವೆ. ಈ ಬಗ್ಗೆ ಸಂಸತ್ತಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಆದರೆ, ರಾಜ್ಯದಲ್ಲಿ ಇನ್ನೂ ತಳವಾರ ಸಮುದಾಯಕ್ಕೆ ಪ್ರಮಾಣಪತ್ರ ನೀಡದಿರುವುದು ವಿಷಾದದ ಸಂಗತಿ. ಕೆಲ ದಿನಗಳಲ್ಲಿ ಶೈಕ್ಷಣಿಕ ಪ್ರವೇಶಾತಿಗಳು ಆರಂಭಗೊಳ್ಳಲಿವೆ. ಹಾಗಾಗಿ, ತಳವಾರ ಸಮುದಾಯದ ಬಡಮಕ್ಕಳಿಗೆ ಸರ್ಕಾರದ ಸೌಲಭ್ಯ ದೊರೆಯುವಂತಾಗಬೇಕು, ಇದಕ್ಕಾಗಿ ಪ್ರಮಾಣಪತ್ರ ವಿತರಿಸುವ ಪ್ರಕ್ರಿಯೆ ಆರಂಭಿಸಬೇಕು. ಮತ್ತು ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸೃಷ್ಟಿಯಾಗಿರುವ ಗೊಂದಲಗಳು ಆದಷ್ಟು ಬೇಗ ನಿವಾರಣೆಯಾಗಲಿ.
| ರಾಘವೇಂದ್ರ ತಳವಾರ ಬಳ್ಳಾರಿ