

ಅಳಿಲು ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟದಾದ ಮುದ್ದು ಪ್ರಾಣಿ. ಈ ಪುಟ್ಟ ಪ್ರಾಣಿ ಏನಾದರೂ ಸೇವೆ ಮಾಡಲು ಸಾಧ್ಯವೆ? ಎಲ್ಲಾದರೂ ದೊಡ್ಡ ಪ್ರಮಾಣದ ಕೆಲಸ ನಡೆಯುವ ಜಾಗಕ್ಕೆ ಹೋಗಿ ಏನಾದರೂ ಚಿಕ್ಕ ಪುಟ್ಟ ಕೆಲಸ ಮಾಡಿಕೊಟ್ಟು ತಮ್ಮ ಅಳಿಲು ಸೇವೆ ಸಂದಿತು ಎಂದು ಸಮಾಧಾನ ಪಟ್ಟುಕೊಳ್ಳುವುದು ಇದೆ. ನಿಮ್ಮದೊಂದು ಅಳಿಲು ಸೇವೆ ಇರಲಿ ಎಂದು ಕರೆ ಕೊಡುವುದನ್ನು ಕೇಳಿದ್ದೇವೆ. ಈ ಅಳಿಲು ಸೇವೆ ಎಂಬುದರ ಅರ್ಥ ಕೆಲವರಿಗೆ ಗೊತ್ತಿರುವುದಿಲ್ಲ.
ಸೀತೆಯನ್ನು ಕದ್ದೊಯ್ದ ರಾವಣನ ಮೇಲೆ ಯುದ್ಧ ಅನಿವಾರ್ಯವಾದಾಗ, ಕಪಿಸೇನೆಯ ಸಹಾಯದಿಂದ ಶ್ರೀರಾಮ ಲಂಕೆಗೆ ಸೇತುವೆ ನಿರ್ವಿುಸುವ ಕಾರ್ಯ ಕೈಗೊಳ್ಳುತ್ತಾನೆ. ವಾನರರೆಲ್ಲರೂ ಇದನ್ನು ಭಗವಂತನ ಸೇವೆಯೆಂದು ಶ್ರೀರಾಮ ನಾಮ ಜಪಿಸುತ್ತಾ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತು ತಂದು ಸೇತುವೆ ನಿರ್ವಿುಸತೊಡಗುತ್ತಾರೆ. ಆಗ ಚಿಕ್ಕ ಅಳಿಲೊಂದು ಈ ಮಹತ್ತರ ಕಾರ್ಯದಲ್ಲಿ ತಾನೂ ಕೈ ಜೋಡಿಸಬೇಕೆಂದು ಬಯಸಿ, ಸೇತುವೆ ನಿರ್ವಣಕ್ಕೆ ಬೇಕಾದ ಮರಳನ್ನು ಒಟ್ಟುಗೂಡಿಸಿ ಅರ್ಪಿಸಿತಂತೆ. ಸಮುದ್ರದ ನೀರಿನಲ್ಲಿ ಮುಳುಗಿ ತನ್ನ ಒದ್ದೆ ಮೈಯನ್ನು ಮರಳಿನಲ್ಲಿ ಹೊರಳಿಸಿ, ತನ್ನ ಮೈಗಂಟಿದ ಮರಳನ್ನು ಸೇತುವೆ ನಿರ್ವಣಕ್ಕೆ ಶೇಖರಿಸಿತಂತೆ. ಆ ಪುಟ್ಟ ಅಳಿಲಿನ ಈ ಕಾರ್ಯವನ್ನು ಕಂಡ ಶ್ರೀರಾಮ ಸಂತಸದಿಂದ ಅದರ ಮೈದಡವಿ ಆಶೀರ್ವದಿಸಿದನಂತೆ. ರಾಮನ ಆಶೀರ್ವಾದದ ಗುರುತಾಗಿ ಅದರ ಬೆನ್ನಿನ ಮೇಲೆ ಈಗಲೂ ಮೂರು ಗೆರೆಗಳಿವೆ ಎಂಬ ನಂಬಿಕೆ.
ನಮ್ಮ ಕೈಲಾದ ಚಿಕ್ಕಸಹಾಯ ಮಾಡುವ ಮನಸ್ಥಿತಿಯನ್ನು ಅಳಿಲು ಸೇವೆ ಎಂದು ಕರೆಯಲಾಯಿತು. ಅಳಿಲು ತನ್ನ ಪುಟ್ಟ ದೇಹದಿಂದ ಅದೆಷ್ಟು ಮರಳನ್ನು ಸಂಗ್ರಹಿಸಿರಲು ಸಾಧ್ಯ. ವಿಸ್ತಾರವಾದ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಬೊಗಸೆಯಷ್ಟು ಮರಳಿಗೆ ಮಹತ್ವವೆನಿಸುವುದಿಲ್ಲ. ಆದರೆ ಇಲ್ಲಿ ಅಳಿಲು ಶೇಖರಿಸಿದ ಮರಳಿನ ಪ್ರಮಾಣ ಮುಖ್ಯವಾಗುವುದೇ ಇಲ್ಲ. ಮಹತ್ತರವಾದ ಕಾರ್ಯದಲ್ಲಿ ತನಗಾದ ಸೇವೆಯನ್ನೋ ಸಹಾಯವನ್ನೋ ಮಾಡಬೇಕೆಂಬ ಮನಸ್ಥಿತಿಯೇ ಹೆಚ್ಚುಗಾರಿಕೆಯಾಗಿ ನಿಲ್ಲುತ್ತದೆ. ವಿರಾಧಿವೀರ ಕಪಿ ಸೈನ್ಯದ ಮುಂದೆ ತಾನೇನು ಮಾಡಬಲ್ಲೆ ಎಂದು ಅಳಿಲು ಅಂದು ಯೋಚಿಸಿದ್ದರೆ ಆ ಭಗವಂತನ ಪ್ರೀತಿಯನ್ನು ಪಡೆಯಲಾಗುತ್ತಿತ್ತೇ?
ಯಾವುದೇ ಒಳ್ಳೆಯ ಕಾರ್ಯದಲ್ಲಿ ಭಾಗಿಯಾಗುವ ಮನೋಭಾವವನ್ನು ರೂಢಿಸಿಕೊಳ್ಳಲು ಪುಟ್ಟ ಅಳಿಲು ನಮಗೆ ಮಾದರಿ. ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಸಂಕೋಚವನ್ನು ದೂರವಿಡಬೇಕು. ಹಿಂಜರಿಕೆ ತೊರೆದು ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು. ಸೇವೆ ಎಂದರೆ ಸೇವೆ, ಸಹಾಯವೆಂದರೆ ಸಹಾಯ ಅಷ್ಟೆ. ಅದರಲ್ಲಿ ಚಿಕ್ಕದು ದೊಡ್ಡದೆಂಬ ಭೇದವಿಲ್ಲ. ಹನಿ ಹನಿ ಸೇರಿದರೆ ತಾನೇ ಹಳ್ಳವಾಗುವುದು. ಯಾವುದೇ ಕಾರ್ಯ ಅಥವಾ ಸೇವೆ ಎಷ್ಟೇ ಚಿಕ್ಕದಾದರೂಸರಿ, ಪ್ರತಿಯೊಂದು ಕೆಲಸ ಭಗವಂತನ ಸೇವೆ ಎಂದು ಪರಿಗಣಿಸಬೇಕು, ಪ್ರತಿಷ್ಠೆಯನ್ನು ಪ್ರದರ್ಶನ ಮಾಡದೇ, ಭಕ್ತಿ ಪ್ರೀತಿಯಿಂದ ಸೇವೆ ಸಮರ್ಪಿಸಿದರೆ ಆಶೀರ್ವಾದ ಸದಾ ನಮ್ಮೊಟ್ಟಿಗಿರುತ್ತದೆ. ಇಂತಹ ಚಿಕ್ಕ ಪ್ರಾಣಿ ಇಷ್ಟೆಲ್ಲಾ ಪರೋಪಕಾರಿಯಾಗಿರುವಾಗಿ ಮಾನವರಾದ ನಾವೇಕೆ ಹಿಂದೆ ಬೀಳಬೇಕು. ಸಂಕೋಚ ಬಿಡೋಣ, ನಮ್ಮಲ್ಲಿರುವ ಹಿಂಜರಿಕೆ ಸ್ವಭಾವವನ್ನು ದೂರ ಮಾಡೋಣ.