

ಡಿಸೆಂಬರ್ 13ರಿಂದ ಗಡಿಭಾಗದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಉತ್ತರ ಕರ್ನಾಟಕದ ಸಮಸ್ಯೆ, ನಿರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬೇಕಿದೆ. ಪ್ರತಿ ಸಲ ಅದೇ ಮಾತು, ಅದೇ ಆಶ್ವಾಸನೆ, ಆಡಳಿತ-ವಿರೋಧ ಪಕ್ಷಗಳ ಹಾರಾಟ-ಚೀರಾಟ ಒಂದು ಕಡೆಯಾದರೆ, ಅಧಿವೇಶನದ ಹೊರಗಡೆ ತಮ್ಮ ಹಕ್ಕಿಗಾಗಿ-ಮೂಲಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸುವ ಜನರು. ಇದು ಪ್ರತಿ ಬಾರಿಯೂ ಕಾಣುವ ದೃಶ್ಯ. ಹೀಗಾಗಿ ವಿಪರೀತ ಖರ್ಚು ಮಾಡಿ ಯಾವ ಪುರುಷಾರ್ಥಕ್ಕಾಗಿ ಅಧಿವೇಶನ ನಡೆಸಲಾಗುತ್ತಿದೆ ಎಂಬ ಜಿಜ್ಞಾಸೆ ನಾಗರಿಕರಿಗೆ ಕಾಡುತ್ತಿದೆ. ಹಾಗಾಗಿ, ಅಧಿವೇಶನ ಸಾರ್ಥಕವಾಗಿ ನಡೆಯಬೇಕು, ರಾಜಕೀಯ ಉದ್ದೇಶಗಳಿಗಾಗಿ ಕಲಾಪ ಹಾಳಾಗಾಬಾರದು ಎಂಬ ಕಾಳಜಿ ಆಡಳಿತ ಪಕ್ಷಕ್ಕೂ, ವಿರೋಧ ಪಕ್ಷದವರಿಗೂ ಅಗತ್ಯ.
ಈಗಾಗಲೇ ಕರೊನಾ ಹಾವಳಿಯಿಂದ ತತ್ತರಿಸಿರುವ ಜನರು ಬಸವಳಿದಿದ್ದಾರೆ. ಉತ್ತರ ಕರ್ನಾಟಕವಂತೂ ಅಕಾಲಿಕ ಮಳೆ, ಬೆಳೆನಷ್ಟ, ಮೂಲಸೌಕರ್ಯಗಳ ಕೊರತೆ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ದನಿ ಎತ್ತುವುದು ಮಾತ್ರವಲ್ಲ, ಪರಿಹಾರ ದಾರಿಗಳನ್ನು ಕಂಡುಕೊಂಡು ಅನುಷ್ಠಾನಕ್ಕೆ ತರಬೇಕು. ಉತ್ತರ ಕರ್ನಾಟಕ ಭಾಗ ಸುಧಾರಣೆ ಆಗಬೇಕೆಂಬ ಸದುದ್ದೇಶ ಇಟ್ಟುಕೊಂಡು ಹೊಸ ಚಿಂತನೆಗಳನ್ನು ಮಂಡಿಸಬೇಕು. ಅಭಿವೃದ್ಧಿ ವಿಷಯದಲ್ಲಿ, ಜ್ವಲಂತ ಸಮಸ್ಯೆಗಳ ನಿವಾರಣೆಯ ವಿಷಯದಲ್ಲಿ ಪಕ್ಷಭೇದ ಮರೆತು, ರಾಜಕೀಯ ಒಗ್ಗಟ್ಟು ಪ್ರದರ್ಶಿಸಬೇಕು. ಅಂದಾಗಲೇ, ಉತ್ತರ ಕರ್ನಾಟಕದ ಅಭಿವೃದ್ಧಿಯ ಪಥ ಪ್ರಶಸ್ತವಾಗುವುದಲ್ಲದೆ, ಅಧಿವೇಶನದ ಆಶಯವೂ ಸಾರ್ಥಕವಾಗುವುದು.
| ಮಹಾಂತೇಶ ರಾಜಗೋಳಿ ಬೈಲಹೊಂಗಲ (ಬೆಳಗಾವಿ ಜಿಲ್ಲೆ)
ಅಕಾಲಿಕ ಮಳೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳೆಗಳು ಹಾಳಾಗಿವೆ. ಕೈಗೆ ಬರಬೇಕಾದ ಫಸಲು ಕಣ್ಣೆದುರೇ ಹಾಳಾಗಿರುವುದರಿಂದ ರೈತರು ಧೃತಿಗೆಟ್ಟಿದ್ದಾರೆ. ಆದರೆ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ವಿಧಾನ ಪರಿಷತ್ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಮುಳುಗಿವೆ.
ರೈತರಿಗೆ ಆಗಿರುವ ನಷ್ಟದ ಬಗ್ಗೆ ನಿಖರ ಅಂದಾಜು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾದ ಅಧಿಕಾರಿಗಳು ಕೂಡ ಉದಾಸೀನ ತೋರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರೈತರು ಯಾರ ಬಳಿ ನ್ಯಾಯ ಕೇಳಬೇಕು? ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಬದಿಗಿರಿಸಿ, ಸರ್ಕಾರ ಮತ್ತು ಜನಪ್ರತಿನಿಧಿಗಳು ಮೊದಲು ರೈತರ ನೆರವಿಗೆ ಧಾವಿಸಬೇಕು.
| ರವಿ ಮಂಗಳೂರು