ಆನಂದದೆಡೆಗಿನ ಪ್ರಯಾಣ ಇಂದೇ ಆರಂಭವಾಗಲಿ!

Sadguru 19 march 20
Published on
ಹೆಚ್ಚೆಚ್ಚು ಆಧ್ಯಾತ್ಮಿಕತೆಯನ್ನು ಅರಸಿದಾಗ ಮತ್ತಷ್ಟು ಗೊಂದಲಕ್ಕೆ ಒಳಗಾಗುವಿರಿ. ಅದೊಂದು ಒಳ್ಳೆಯ ಸೂಚನೆ. ಏಕೆಂದರೆ, ಈ ಗೊಂದಲದ ಸ್ಥಿತಿಯಲ್ಲಿರುವುದು, ಒಂದು ದಡ್ಡತನದ ನಿರ್ಣಯದಲ್ಲಿ ಜೀವಿಸುವುದಕ್ಕಿಂತಲೂ ಒಳ್ಳೆಯ ಸ್ಥಿತಿಯಾಗಿದೆ. ಜೀವನದಲ್ಲಿ ಮಾಡಿದ ದಡ್ಡತನದ ನಿರ್ಣಯಗಳಲ್ಲಿ ನಿಮಗೊಂದು ರೀತಿಯ ನೆಮ್ಮದಿ, ಸಮಾಧಾನ ಮತ್ತು ಅನುಕೂಲತೆಗಳಿದ್ದವು.

ಆದರೆ ಒಮ್ಮೆ ಆಧ್ಯಾತ್ಮಿಕ ಪಥದಲ್ಲಿ ಕಾಲಿರಿಸಿದಾಗ, ಎಲ್ಲವೂ ಗೊಂದಲಮಯವಾಗುತ್ತವೆ. ಎಲ್ಲದರೊಡನೆ ಹೊಂದಿದ್ದ ನೆಮ್ಮದಿ ಈಗ ಮೂರ್ಖತನವೆನಿಸುತ್ತದೆ. ಎಲ್ಲ ವಿಷಯಗಳೊಂದಿಗೆ ಇರಿಸಿಕೊಂಡಿದ್ದ ಮೌಲ್ಯಗಳು ಹಾಗೂ ಮಾನ್ಯತೆಗಳು ಒಮ್ಮೆಗೇ ಅರ್ಥಹೀನವಾಗಿ ಯೋಗ್ಯವಲ್ಲವೆನಿಸುತ್ತದೆ. ಜೆನ್​ನಲ್ಲಿ ಒಂದು ಸುಂದರವಾದ ಮಾತಿದೆ. ‘ನೀವು ಅಜ್ಞಾನಿಗಳಾಗಿದ್ದಾಗ ಪರ್ವತಗಳು, ನದಿಗಳು, ಮೋಡಗಳು, ಮರಗಳು ಎಲ್ಲವೂ ಅವುಗಳಿದ್ದ ಹಾಗೆಯೇ ತೋರುತ್ತವೆ. ಅದೇ, ಆಧ್ಯಾತ್ಮಿಕ ಪಥವನ್ನು ಪ್ರವೇಶಿಸಿದಾಗ, ಪರ್ವತಗಳು ಕೇವಲ ಪರ್ವತಗಳೇ ಆಗಿರುವುದಿಲ್ಲ, ನದಿಗಳು ಕೇವಲ ನದಿಗಳೇ ಆಗಿರುವುದಿಲ್ಲ. ಮೋಡಗಳು ಕೇವಲ ಮೋಡಗಳೇ ಆಗಿರುವುದಿಲ್ಲ, ಇದರ ಜ್ಞಾನೋದಯವಾದಾಗ, ಮತ್ತೊಮ್ಮೆ ಎಲ್ಲವೂ ಅವುಗಳಿದ್ದ ಹಾಗೆಯೇ ತೋರುತ್ತವೆ. ಅಜ್ಞಾನದಿಂದ ಜ್ಞಾನೋದಯದವರೆಗೆ ಸಂಪೂರ್ಣ ವೃತ್ತವಾಗಿ ಅದೇ ಸ್ಥಳಕ್ಕೆ ಬಂದು ಸೇರುತ್ತದೆ, ಆದರೆ ಅಲ್ಲೊಂದು ಅಗಾಧವಾದ ವ್ಯತ್ಯಾಸವಿರುತ್ತದೆ, ವಿವರಿಸಲಾಗದಂತಹ ವ್ಯತ್ಯಾಸವಿರುತ್ತದೆ’.

ಆಧ್ಯಾತ್ಮಿಕ ಪಥವನ್ನು ಪ್ರವೇಶಿಸಿದರೆ, ಎಲ್ಲವನ್ನೂ ಪ್ರಶ್ನಿಸುವಂತಿರುತ್ತದೆ. ಎಲ್ಲಿ ಸ್ಥಿತರಾಗಿರುವಿರಿ ಎನ್ನುವುದೇ ತಿಳಿದಿರುವುದಿಲ್ಲ. ಆಧ್ಯಾತ್ಮಿಕತೆ ಕುರಿತು ಏನನ್ನಾದರೂ ತಿಳಿದುಕೊಳ್ಳುವ ಮುನ್ನ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಇದ್ದಿರಿ, ಸಂತೃಪ್ತಿಯಿಂದಿದ್ದಿರಿ. ಬೆಳಗಿನ ತಿಂಡಿ ತಿಂದಿರಿ, ಕಾಫಿ ಕುಡಿದಿರಿ, ಅದನ್ನೇ ಸವೋತ್ಕೃಷ್ಟವೆಂದು ತಿಳಿದಿರಿ. ಈಗ ಅವೆಲ್ಲ ಏನೂ ಅಲ್ಲ ಎಂದೆನುಸುತ್ತಿದೆ. ನಿಮಗೆ ತಿನ್ನುವುದಕ್ಕಾಗಲಿ, ಮಲಗುವುದಕ್ಕಾಗಲಿ ಅಥವಾ ಏನನ್ನಾದರು ಮಾಡುವುದಕ್ಕಾಗಲಿ ಇಷ್ಟವಾಗುತ್ತಿಲ್ಲ, ಏಕೆಂದರೆ, ಯಾವುದೂ ವಾಸ್ತವದಲ್ಲಿ ಯೋಗ್ಯವೆನಿಸುತ್ತಿಲ್ಲ. ಅದು ಎಂದಿಗೂ ಯೋಗ್ಯವಾಗಿರಲಿಲ್ಲ. ಅದು ಯೋಗ್ಯವೆಂದು ನಂಬಿ ನಿಮಗೆ ನೀವೇ ವಂಚಿಸಿಕೊಂಡಿದ್ದೀರಿ ಅಷ್ಟೆ. ಅದು ಯೋಗ್ಯವಾಗಿದ್ದಿದ್ದರೆ, ಅದು ಏಕೆ ದೂರ ಸರಿಯುತ್ತಿತ್ತು? ನಿಮಗೆ ನಿಜವಾಗಿಯೂ ಯಾವುದು ಏನು ಎಂದು ತಿಳಿದಿದ್ದರೆ, ನೀವೇಕೆ ಕಂಗೆಡುತ್ತಿದ್ದಿರಿ? ನೀವೇಕೆ ಕೆಂಗೆಟ್ಟಿರುವಿರೆಂದರೆ, ನಿಮಗದರ ಅರಿವಿರಲಿಲ್ಲ ಎಂದರ್ಥ. ನಿಮ್ಮ ಅನುಕೂಲತೆ ಮತ್ತು ರಕ್ಷಣೆಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಿರಿ.

ಬದುಕಿನಲ್ಲಿ ಕೇವಲ ಸೌಕರ್ಯಗಳನ್ನೇ ಎದುರು ನೋಡುತ್ತಿದ್ದರೆ, ನೀವು ನೀವಾಗಿಯೇ ಪರಿಪೂರ್ಣರು, ಬದುಕಿನಲ್ಲಿ ಎಲ್ಲವೂ ಸರಿಯಾಗಿದೆಯೆಂದು ನಂಬಲು ಸಿದ್ಧರಾಗುವಿರಿ. ‘ನನ್ನ ಮನೆಯು ಚೆನ್ನಾಗಿದೆ, ನನ್ನ ಸಂಗಾತಿ ಉತ್ತಮ, ನನ್ನ ಮಕ್ಕಳು ಚೆನ್ನ, ನನ್ನ ನಾಯಿಯೂ ಅದ್ಭುತವಾಗಿದೆ, ನನ್ನ ಜೀವನ ಶ್ರೇಷ್ಠ! ಇದು ಹೀಗೆಯೇ ಇದೆ. ಇದುವೇ ಜೀವನ’. ಪ್ರತಿದಿನವೂ ಇದನ್ನೇ ಹೇಳುತ್ತ ಹೋಗಬೇಕು. ಅದು ಸರಿಯಾಗಿಯೇ ಇರುತ್ತದೆ, ಅದರಲ್ಲಿ ತಪ್ಪೇನಿಲ್ಲ. ಅದು ಕೇವಲ ಮಿತಿಯಲ್ಲಿದೆಯಷ್ಟೆ, ಆದರೆ ಈ ಶರೀರವು ಈ ಮಿತಿಯಲ್ಲಿ ತನ್ನನ್ನು ಇರಿಸಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ. ನಿಮ್ಮನ್ನು ನೀವು ಎಷ್ಟೇ ರೀತಿಯಲ್ಲಿ ಮೂರ್ಖರಾಗಿಸಿಕೊಳ್ಳಲು ಪ್ರಯತ್ನಿಸಿದರೂ, ಎಲ್ಲಿಯೋ ಒಂದು ಆಕಾಂಕ್ಷೆ ಇದ್ದೇ ಇರುತ್ತದೆ. ಜೀವನದಲ್ಲಿ ನಿಮಗೆ ತಿಳಿದ ಎಲ್ಲ ಸಂತೋಷದ ಸಂದರ್ಭಗಳನ್ನು ಎಚ್ಚರಿಕೆಯಿಂದ ಅವಲೋಕಿಸಿ. ಮೇಲ್ನೋಟಕ್ಕೆ ಸಂತೋಷವಿರುತ್ತದೆ. ಆದರೆ, ಅಂತರಾಳದಲ್ಲಿ ಎಲ್ಲದರಲ್ಲಿಯೂ ಏನೋ ನಿರ್ದಿಷ್ಟ ವೇದನೆ ಇರುತ್ತದೆ. ಆ ವೇದನೆ ಏಕೆಂದರೆ, ನಿಮ್ಮ ಅದುಮಿಟ್ಟ ಅಸ್ತಿತ್ವ ಸದಾ ಹಂಬಲಿಸುತ್ತಿರುತ್ತದೆ; ಈ ವೇದನೆಯನ್ನು ಪ್ರಜ್ಞಾಯುತವಾಗಿ ಅರಿಯಬೇಕಾದರೆ, ಜನರು ಜನ್ಮಗಳನ್ನೇ ತೆಗೆದುಕೊಳ್ಳುತ್ತಾರೆ.

ಆಧ್ಯಾತ್ಮಿಕ ಪಥವನ್ನು ಪ್ರವೇಶಿಸುವುದೆಂದರೆ, ನಿಮ್ಮ ವೇದನೆಗೆ ಪ್ರಜ್ಞಾಪೂರ್ವಕವಾಗಿರುವಿರಿ ಎಂದರ್ಥ. ಪ್ರಜ್ಞಾರಹಿತರಾಗಿ ನೋವನ್ನು ಅನುಭವಿಸುತ್ತಿದ್ದಿರಿ. ಈಗ ನಿಮಗೆ ಅದರ ಅರಿವಾಗಿದೆ. ಪ್ರಜ್ಞಾಯುತ ನೋವು, ಪ್ರಜ್ಞಾರಹಿತ ನೋವಿಗಿಂತಲೂ ತೀವ್ರವಾಗಿರುತ್ತದೆ. ಆದರೆ ಅದು ಒಳ್ಳೆಯದು, ಏಕೆಂದರೆ, ನಿಮಗೆ ಅದರ ಕುರಿತಾಗಿ ಅರಿವಿದೆ. ಅರಿವಿಲ್ಲದೇ ಇದ್ದಾಗಲೂ ವೇದನೆ ಹಾಗೆಯೇ ಇರುತ್ತದೆ. ಪ್ರಜ್ಞಾಯುತರಾದರೆ, ಅದು ಅಲ್ಲಿ ಉಳಿಯುವ ಅಗತ್ಯವಿಲ್ಲ. ಅಲ್ಲೊಂದು ಸಾಧ್ಯತೆ ಇದೆಯಲ್ಲವೇ?

ಆಧ್ಯಾತ್ಮಿಕ ಪಥದ ಪ್ರವೇಶವು ಒಂದು ಸಾಧ್ಯತೆ, ಒಬ್ಬ ಗುರುವಿನೊಡನೆ ಇರುವುದು ಒಂದು ಸಾಧ್ಯತೆ. ಈ ಸಾಧ್ಯತೆ ಸಾಕಾರವಾಗಬೇಕಾದರೆ, ಮೊಟ್ಟ ಮೊದಲನೆಯದಾಗಿ ಎಲ್ಲವನ್ನೂ ಯಥಾಸ್ಥಿತಿಯಲ್ಲಿ ನೋಡಲು ಇಚ್ಛಿಸಬೇಕು. ಕನಿಷ್ಠ ನಿಮ್ಮ ಮಿತಿಗಳನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ಮಿತಿಗಳನ್ನು ಮುಚ್ಚಿಡಲು ಇಚ್ಛಿಸಿದರೆ, ಮುಕ್ತಿಯ ಪ್ರಶ್ನೆ ಎಲ್ಲಿದೆ? ಆ ಸಾಧ್ಯತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವಿರಿ. ಈಗ ಸಂಕೋಲೆಗಳಿಂದ ಬಂಧಿತರಾಗಿದ್ದು ಬಿಡುಗಡೆ ಬೇಕೆಂದರೆ, ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ನಿಮ್ಮ ಸಂಕೋಲೆಗಳು. ನೀವು ಬಂಧಿತರಾಗಿರುವುದನ್ನೇ ನೀವು ಒಪ್ಪಿಕೊಳ್ಳದಿದ್ದರೆ, ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರಶ್ನೆ ಎಂದಿಗೂ ಉದ್ಭವಿಸುವುದಿಲ್ಲ.

ಸಂಕೋಲೆಗಳೊಂದಿಗೆ ಬಂಧಿತರಾಗಿರುವುದನ್ನು ಅರಿತುಕೊಂಡಾಗ ಅಲ್ಲಿ ನೋವು, ವೇದನೆ, ಗೊಂದಲಗಳು ಇರುತ್ತವೆ. ಹಳೆಯ ನೆನಪುಗಳು, ‘ನಾನು ಹಿಂದೆಯೇ ಚೆನ್ನಾಗಿದ್ದೆ’ ಎಂದು ಹೇಳುತ್ತವೆ. ಇದು ನಿಮ್ಮ ಮನಸ್ಸಿನ ಸ್ಥಿತಿಯಾಗಿದೆ. ನೀವು ಹೈಸ್ಕೂಲಿನಲ್ಲಿರುವಾಗ, ನಿಮ್ಮ ಮನಸ್ಸು, ‘ಓಹ್! ಶಿಶುವಿಹಾರ ಚೆನ್ನಾಗಿತು’ ಎಂದು ಹೇಳುತ್ತದೆ. ಶಿಶುವಿಹಾರಕ್ಕೆ ಹೇಗೆ ಹೋದಿರೆಂದು ನಿಮಗೆ ತಿಳಿದಿದೆ. ಕಾಲೇಜಿಗೆ ಹೋದಾಗ, ‘ಓಹ್! ನನ್ನ ಹೈಸ್ಕೂಲ್ ದಿನಗಳು ಅದ್ಭುತವಾಗಿತ್ತು’ ಎಂದು ಹೇಳುವಿರಿ. ಆದರೆ ಹೈಸ್ಕೂಲ್​ನಲ್ಲಿ ಹೇಗಿದ್ದಿರೆಂಬುದು ನಮಗೆ ತಿಳಿದಿದೆ. ವಿದ್ಯಾಭ್ಯಾಸವು ಮುಗಿದಾಗ, ‘ನನ್ನ ಯೂನಿವರ್ಸಿಟಿ ದಿನಗಳು ಬಲು ಆನಂದದ ದಿನಗಳಾಗಿದ್ದವು’ ಎಂದು ಹೇಳುವಿರಿ. ಅಲ್ಲಿ ನಿಮಗೆ ವಹಿಸಿದ ಕೆಲಸಗಳನ್ನು ಹೇಗೆ ಮಾಡಿದಿರಿ, ಲೈಬ್ರರಿಯಲ್ಲಿ ನಿಮಗೆ ಬೇಕಾದ ಪುಸ್ತಕಗಳಿಗಾಗಿ ಹುಡುಕಾಟ, ನೀವು ಆ ತರಗತಿಗಳಲ್ಲಿ ಕುಳಿತುಕೊಳ್ಳಲು ಹಾಗೂ ಪೊ›ಫೆಸರುಗಳ ಪಾಠವನ್ನು ಕೇಳಲು ಪಟ್ಟಪಾಡು, ಇವನ್ನೆಲ್ಲ ನಾವು ಬಲ್ಲೆವು, ಆದರೆ ಈಗ ಅವೆಲ್ಲ ಮುಗಿದಮೇಲೆ ಆ ದಿನಗಳು ಅದ್ಭುತವಾಗಿದ್ದವು ಎಂದು ಕೊಚ್ಚಿಕೊಳ್ಳುತ್ತಿದ್ದಿರಿ. ಬದುಕುಳಿಯುವ ತಂತ್ರದ ಒಂದು ಭಾಗವಾಗಿ, ನೆನಪಿನ ಶಕ್ತಿ ಕೆಲವು ಅಹಿತಕರ ವಿಷಯಗಳನ್ನು ಅಳಿಸಿಹಾಕುವ ಮತ್ತು ಹಿಂದಿನದನ್ನು ಈಗ ಇರುವುದಕ್ಕಿಂತ ಹೆಚ್ಚು ಆಹ್ಲಾದಕರವಾಗಿಸುವ ವಿಧಾನವನ್ನು ಹೊಂದಿದೆ. ಇದು ಉಳಿವಿನ ಚಾತುರ್ಯವಾಗಿದೆ. ಇಲ್ಲದಿದ್ದಲ್ಲಿ, ಮಾನಸಿಕವಾಗಿ ನರದೌರ್ಬಲ್ಯ ಪೀಡಿತರಾಗುತ್ತಿದ್ದಿರಿ-ಯಾವಾಗಲೂ ಯಾವುದಾದರೊಂದನ್ನು ಅವಲಂಬಿಸಿ, ‘ಓಹ್! ಅದು ಅದ್ಭುತವಾಗಿತ್ತು’ ಎಂದು ಹೇಳುವಿರಿ.

ಗೊಂದಲಮಯವಾದ ಸ್ಪಷ್ಟತೆ:

ಆದರೆ ಇಲ್ಲೊಂದು ಗೊಂದಲಮಯವಾದ ಸ್ಪಷ್ಟತೆ ಇದೆ. ಅದು ಒಳ್ಳೆಯದಲ್ಲವೇ? ಗಲಿಬಿಲಿಗೊಂಡರೂ, ಸ್ಪಷ್ಟತೆಯಿದೆ. ಈಗ ನಿಮ್ಮನ್ನು ನರಕಕ್ಕೆ ತಳ್ಳಿದರೂ ಪರವಾಗಿಲ್ಲ, ಚೆನ್ನಾಗಿಯೇ ಇರುತ್ತೀರಿ. ನನಗೆ ಜನರನ್ನು ಸ್ವರ್ಗಕ್ಕೆ ಕಳುಹಿಸುವುದರಲ್ಲಿ ಆಸಕ್ತಿಯಿಲ್ಲ. ಜನರು ನರಕಕ್ಕೆ ಹೋದರೂ ಅವರು ಯಾರಿಂದಲೂ ಸಂಕಟಕ್ಕೀಡಾಗದಂತೆ ಇರುವ ರೀತಿಯಲ್ಲಿ ರೂಪಿಸಬೇಕೆಂಬುದು ನನ್ನ ಆಸಕ್ತಿ. ಅದುವೇ ಸ್ವಾತಂತ್ರ್ಯ, ‘ನಾನು ಸ್ವರ್ಗಕ್ಕೆ ಹೋಗಬೇಕು’ ಎನ್ನುವುದು ಒಂದು ದೊಡ್ಡ ಬಂಧನ. ಒಂದು ವೇಳೆ ನೀವು ತಪ್ಪಾದ ಸ್ಥಳದಲ್ಲಿ ಇಳಿದರೆ? ಸ್ವರ್ಗದ ಹಾದಿಯಲ್ಲಿ ನಿಮ್ಮ ವಿಮಾನವನ್ನು ಯಾರಾದರು ಹೈಜಾಕ್ ಮಾಡಿದರೆ! ಚಾಲಕನೇನು ಡಿಕ್ಕಿ ಹೊಡೆಯಲಿಲ್ಲ, ಆದರೆ ತಪ್ಪಾದ ಪ್ರದೇಶದಲ್ಲಿ ಇಳಿದರೂ ಅಪಾಯಕ್ಕೆ ಸಿಲುಕುವಿರಿ. ಸದಾ ‘ಯಾವುದರೊಡನೆಯೋ ಜೀವಿಸುತ್ತಿದ್ದಿರಿ’ ಅದನ್ನು ಯಾರಾದರೂ ನಿಮ್ಮಿಂದ ಕಸಿದುಕೊಂಡು ಹೋಗಬಹುದು. ನಿಜವಾದ ಮುಕ್ತಿಯೆಂದರೆ, ಯಾರೂ ಯಾವುದನ್ನೂ ನಿಮ್ಮಿಂದ ಕಸಿದುಕೊಳ್ಳದೆ ಇರುವುದಾಗಿದೆ; ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಾಗದ ಸಂಗತಿಗಳೆಂದರೆ, ನಿಮ್ಮ ಆನಂದ ಮತ್ತು ವೇದನೆಗೊಳಗಾಗುವ ನಿಮ್ಮ ಅಸಮರ್ಥತೆ. ‘ನಾನು ಸ್ವರ್ಗಕ್ಕೆ ಹೋಗಬೇಕು’ ಎಂದರೆ ನೀವಿನ್ನೂ ವೇದನೆಯನ್ನು ಅನುಭವಿಸಲು ಸಮರ್ಥರಾಗಿದ್ದೀರಿ ಎಂದರ್ಥ. ಆದ್ದರಿಂದಲೇ ಒಳ್ಳೆಯ ಸ್ಥಳಕ್ಕೆ ಹೋಗಲು ಇಚ್ಛಿಸುತ್ತಿರುವಿರಿ.

ಗೌತಮ ಬುದ್ಧ ಯಾವಾಗಲೂ, ‘ನಾನು ಸ್ವರ್ಗಕ್ಕೆ ಹೋಗಲು ಇಚ್ಛಿಸುವುದಿಲ್ಲ. ನರಕಕ್ಕೆ ಹೋಗಲು ಇಚ್ಛಿಸುತ್ತೇನೆ’ ಎಂದು ಹೇಳುತ್ತಿದ್ದ. ಜನರು ಅವನನ್ನು ಮೂರ್ಖನೆಂದು ತಿಳಿದರು. ಆದರೆ, ಮುಕ್ತನಾದ ವ್ಯಕ್ತಿ ಇರುವುದು ಹಾಗೆಯೇ. ‘ನರಕದೊಂದಿಗೆ ನನಗೆ ಸಮಸ್ಯೆ ಏನಿದೆ? ಹೇಗೂ ಅವರು ನನ್ನನ್ನು ವೇದನೆಗೆ ಈಡುಮಾಡಲಾರರು, ಆದ್ದರಿಂದ ನರಕಕ್ಕೆ ಹೋಗುತ್ತೇನೆ’-ಇಂಥ ವ್ಯಕ್ತಿ ಮುಕ್ತ. ಆದ್ದರಿಂದ ನೀವು ಗೊಂದಲಗೊಂಡಿದ್ದರೂ ಸ್ಪಷ್ಟವಾಗಿದ್ದರೆ ಅದು ಒಳ್ಳೆಯದು. ಹಾಗಾದರೆ ‘ನನ್ನೆಲ್ಲ ಗೊಂದಲಗಳು ಯಾವಾಗ ಹೋಗುತ್ತವೆ?’ ‘ಸಂಪೂರ್ಣ ಸ್ಪಷ್ಟತೆ ಯಾವಾಗ ಬರುತ್ತದೆ?’ ಎಂದು ಕೇಳಿದರೆ, ನಾನು ಯಾವ ತಾರೀಕನ್ನು ನಿಗದಿಪಡಿಸಲು ಇಷ್ಟ ಪಡುವುದಿಲ್ಲ. ಆದರೆ ಅದು ಇಂದೇ ಆಗಲಿ ಎಂದು ಹಾರೈಸುತ್ತೇನೆ, ನಾಳೆಗೆ ಏಕೆ ಮುಂದೂಡುವುದು? ಇವತ್ತಿನ್ನೂ ಬಹಳ ಸಮಯ ಉಳಿದಿದೆ. ಅದು ಇಂದೇ ಆಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net