

ಶಿಕ್ಷಣವನ್ನು ಪೂರ್ಣಗೊಳಿಸಿದ ಯುವ ಸಮುದಾಯ ಉದ್ಯೋಗ ಅವಕಾಶಗಳನ್ನು ಅರಸುತ್ತಿರುತ್ತದೆ. ಕೆಲಸ ಪಡೆದು, ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ನಿರೀಕ್ಷೆ ಬಹುತೇಕರದ್ದು. ಇದಕ್ಕಾಗಿ ಹಲವು ಆಯಾಮದ ತಯಾರಿ ನಡೆಸಿರುತ್ತಾರೆ. ಪರೀಕ್ಷೆಗಳನ್ನು ಬರೆದಿರುತ್ತಾರೆ. ಈ ನಿಟ್ಟಿನಲ್ಲಿ ವ್ಯಯಿಸಿದ ಸಮಯ ಅಮೂಲ್ಯವಾಗಿರುತ್ತದೆ ಮತ್ತು ಶ್ರಮ ಕೂಡ. ಆದರೆ, ಸರ್ಕಾರ ಆಗಾಗ ನಿಯಮಗಳಲ್ಲಿ ಸೂಕ್ತವಲ್ಲದ ಬದಲಾವಣೆಗಳನ್ನು ತರುವುದರಿಂದ ಉದ್ಯೋಕಾಂಕ್ಷಿಗಳು ಕಷ್ಟಕ್ಕೆ ಸಿಲುಕುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಪೂರಕವಾದ, ಯುವಕರ ಕನಸುಗಳಿಗೆ ರೆಕ್ಕೆ ಮೂಡಿಸುವಂಥ ನೀತಿಯನ್ನು ರೂಪಿಸುವುದು ಸಂಬಂಧಪಟ್ಟ ವ್ಯವಸ್ಥೆಯ ಆದ್ಯ ಕರ್ತವ್ಯ. ಆದರೆ, ನೇಮಕಾತಿ ಪ್ರಕ್ರಿಯೆಗಳು ದಿನಕಳೆದಂತೆ ಗೊಂದಲದ ಗೂಡಾಗಿ ಮಾರ್ಪಡುತ್ತಿರುವುದು ವಿಷಾದನೀಯ. ಉದ್ಯೋಗ ನೇಮಕಾತಿಯ ನೀತಿಗಳು ಸರಳವಾಗಿರಬೇಕು, ಪಾರದರ್ಶಕವಾಗಿರಬೇಕು ಎಂಬ ಆಶಯಗಳು ಅನುಷ್ಠಾನದ ರೂಪಕ್ಕೆ ಬಂದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲು ಸಾಧ್ಯ.
ಅರಣ್ಯ ಇಲಾಖೆಯಲ್ಲಿ 13 ವಲಯಗಳಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ ಗ್ರೂಪ್ ಸಿ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ, ಈ ಮೊದಲಿದ್ದ ಲಿಖಿತ ಪರೀಕ್ಷೆಯ ವ್ಯವಸ್ಥೆಯನ್ನು ಕೈಬಿಟ್ಟು ದ್ವಿತೀಯ ಪಿಯುಸಿ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಹೊಸ ಪದ್ಧತಿ ಜಾರಿಯಾದರೆ ಅನ್ಯಾಯವಾಗುತ್ತದೆ ಎಂದು ನೂರಾರು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದ್ದಕ್ಕಿದ್ದಂತೆ ಹೊಸ ಪದ್ಧತಿ ಜಾರಿಯಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ವಿಜಯವಾಣಿಯ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ನೋವು ತೋಡಿಕೊಂಡಿರುವ ಅಭ್ಯರ್ಥಿಗಳು, ಅರಣ್ಯ ರಕ್ಷಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಕರೊನಾ ಕಾರಣದಿಂದ 2019 ಮತ್ತು 2020ರಲ್ಲಿ ಪಿಯುಸಿ ಪರೀಕ್ಷೆ ನೆಪ ಮಾತ್ರಕ್ಕೆ ನಡೆದಿದ್ದು, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶೇಕಡ 95ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ಇದೀಗ ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆದರೆ, ಈ ವಿದ್ಯಾರ್ಥಿಗಳೇ ಹೆಚ್ಚು ನೇಮಕವಾಗುತ್ತಾರೆ. ಹಾಗಾಗಿ, ಅರಣ್ಯ ರಕ್ಷಕ ಹುದ್ದೆಗಳಿಗೆ ಮೊದಲಿನಂತೆ ಲಿಖಿತ ಪರೀಕ್ಷೆ ನಡೆಸಬೇಕು ಎಂಬುದು ಅಭ್ಯರ್ಥಿಗಳ ಆಗ್ರಹ.
ಈ ಹಿಂದೆ ದೈಹಿಕ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣರಾದವರು ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆಯಾಗುತ್ತಿದ್ದರು. ಇದರಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿತ್ತು. ಬಳಿಕ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗುತ್ತಿತ್ತು. 2011, 2016 ಹಾಗೂ 2018ರ ನೇಮಕಾತಿ ಸಂದರ್ಭದಲ್ಲಿ ಈ ವಿಧಾನ ಅನುಸರಿಸಲಾಗಿತ್ತು. ಈಗಲೂ ಇದೇ ವಿಧಾನವನ್ನು ಅನುಸರಿಸುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಒಳ್ಳೆಯ ಮಾನದಂಡವೂ ಹೌದು. ಹೀಗಾಗಿ, ಅರಣ್ಯರಕ್ಷಕ ಉದ್ಯೋಕಾಂಕ್ಷಿಗಳ ಬೇಡಿಕೆಯನ್ನು ಸರ್ಕಾರ ಅನುಕಂಪ ಮತ್ತು ವಿವೇಚನೆಯಿಂದ ಪರಿಶೀಲಿಸಿ, ಸ್ಪಂದಿಸಬೇಕು.