ಕಾಲೇಜುಗಳಿಗೆ ಸೂಕ್ತ ಅನುದಾನ ದೊರೆಯಲಿ

Janamatha
Published on

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೆಸರನ್ನು ಬದಲಿಸಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಖಂಡನಾರ್ಹ. ಹೆಸರು ಬದಲಿಸಿದಾಕ್ಷಣ ಆ ಸಂಸ್ಥೆಗಳ ಸಮಸ್ಯೆಗಳೆಲ್ಲ ಮಾಯವಾಗಿ ಬಿಡುವುದಿಲ್ಲ. ನಾನು ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯನಾಗಿದ್ದುಕೊಂಡು ಅಲ್ಲಿನ ಸಮಸ್ಯೆಗಳನ್ನು ತೀರಾ ಹತ್ತಿರದಿಂದ ಬಲ್ಲವನಾಗಿ ಹೇಳುತ್ತಿದ್ದೇನೆ.

ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರದಿಂದ ಬರುವ ಅನುದಾನ ತುಂಬ ಕಡಿಮೆ. ಪ್ರೌಢಶಾಲೆ, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಬರುವುದರಿಂದ ಅವುಗಳಿಗೆ ಬಂದಷ್ಟು ಅನುದಾನ ಪದವಿ ಪೂರ್ವ ಕಾಲೇಜುಗಳಿಗೆ ಬರುವುದಿಲ್ಲ. ಈ ಕಾಲೇಜುಗಳಿಗೆ ನೇರವಾಗಿ ಸರ್ಕಾರದಿಂದ ಇಲ್ಲವೆ ಪಿ.ಯು. ಮಂಡಳಿಯಿಂದ ಅನುದಾನ ಬರಬೇಕಾಗುತ್ತದೆ. ಆ ಅನುದಾನ ತುಂಬ ಮಿತವಾಗಿರುವುದರಿಂದ ನಗರಗಳಲ್ಲಿರುವ ಅಥವಾ ಮಕ್ಕಳ ಸಂಖ್ಯೆ ಜಾಸ್ತಿ ಇರುವ ಕಾಲೇಜುಗಳ ಪಾಲಾಗುತ್ತದೆಯೇ ಹೊರತು ಕಡಿಮೆ ಮಕ್ಕಳ ಸಂಖ್ಯೆ ಇರುವ ಗ್ರಾಮೀಣ ಪ್ರದೇಶದ ಕಾಲೇಜುಗಳು ಈ ಅನುದಾನದಿಂದ ವಂಚಿತವಾಗುತ್ತಿವೆ.

ಇಲ್ಲಿನ ಮಕ್ಕಳಿಗೆ ಸಮವಸ್ತ್ರ , ಮಧ್ಯಾಹ್ನದ ಊಟ, ಕಟ್ಟಡ, ಶೌಚಗೃಹ ಮುಂತಾದ ಮೂಲಭೂತ ಸೌಕರ್ಯಗಳಿಗಾಗಿ ಯಾವುದೇ ಅನುದಾನಗಳಿಲ್ಲದೆ ಈ ಸಂಸ್ಥೆಗಳು ಸೊರಗಿಹೋಗುತ್ತಿವೆ. ಪ್ರತಿ ವಿಷಯಗಳಿಗೂ ಬೇಕಾದ ಉಪನ್ಯಾಸಕರ ಕೊರತೆ ಹಲವೆಡೆಗಳಲ್ಲಿ ಕಾಡುತ್ತಿದೆ. ಇದೆಲ್ಲ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಹೆಸರು ಬದಲಾವಣೆ ಬಗ್ಗೆ ಗಮನಹರಿಸುವುದು ಎಷ್ಟು ಸರಿ? ಈ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲಿಸಲಿ.

| ಚಾವಲ್ಮನೆ ಸುರೇಶ್ ನಾಯಕ್ ಹಾಲ್ಮತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net