

| ಭಾರತಿ ಎ. ಕೊಪ್ಪ
ಕಾಲೇಜಿನ ಪರೀಕ್ಷಾ ಫಲಿತಾಂಶಗಳಲ್ಲಿ ಸದಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಸಿಂಚನಾ ಸಿಇಟಿ, ನೀಟ್, ಜೆಇಇ ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ತನ್ನ ತರಗತಿಯ ಬಾಲಕರ ಬಳಿ ಮೊರೆ ಹೋಗುತ್ತಾಳೆ. ಗಂಡು ಮಕ್ಕಳು ತಾಂತ್ರಿಕ ವಿಷಯದಲ್ಲಿ ನನಗಿಂತ ಮುಂದೆ ಇರುತ್ತಾರೆ. ಅವರ ಸಹಾಯದಿಂದಲೇ ತಂತ್ರಜ್ಞಾನ ಆಧಾರಿತವಾಗಿ ನೋಂದಣಿ ಮಾಡುವುದೇ ಸೂಕ್ತ ಅಥವಾ ಸೈಬರ್ಸೆಂಟರ್ನಲ್ಲಿಯೇ ಮಾಡಿಸಬಹುದು, ತಂತ್ರಜ್ಞಾನ ಆಧಾರಿತ ಕೆಲಸದಲ್ಲಿ ಹಿಂದೆ ಇದ್ದೇನೆ ಎಂಬ ಕೀಳರಿಮೆ ಸದಾ ಅವಳನ್ನು ಕಾಡುತ್ತಿರುತ್ತದೆ. ಸಿಇಟಿ ಪರೀಕ್ಷೆಯ ನೋಂದಣಿ ಬಳಿಕ ಪರೀಕ್ಷಾ ದಿನ ಕೂಡ ಪರೀಕ್ಷಾ ಕೇಂದ್ರ ದೂರದ ಊರಿನಲ್ಲಿದೆ ಎಂಬ ಕಾರಣದಿಂದ ಪಾಲಕರ ಜೊತೆಯಲ್ಲಿಯೇ ಹೋಗಿ ಪರೀಕ್ಷೆ ಬರೆದು ಬಂದಳು ಸಿಂಚನಾ. ಸಿಂಚನಾಳಂತಹ ಅನೇಕ ಯುವತಿಯರು ನಮ್ಮ ನಡುವೆ ಇದ್ದಾರೆ. ಶಿಕ್ಷಣವನ್ನು ಕೇವಲ ಪಠ್ಯ ಪುಸ್ತಕ-ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿರಿಸಿಕೊಂಡು ಉಳಿದೆಲ್ಲಾ ಶೈಕ್ಷಣಿಕ ಪೂರಕ ಕೆಲಸಗಳಿಗೆ ಸಹಪಾಠಿಗಳನ್ನು ಮತ್ತು ಪಾಲಕರನ್ನು ಅವಲಂಬಿಸುವ ಮನಸ್ಥಿತಿ ನಮ್ಮದಾಗಬಾರದು. ಕಾಲೇಜು ಶಿಕ್ಷಣದ ಹಂತಕ್ಕೆ ಬರುವಾಗಲೇ ಶೈಕ್ಷಣಿಕ ಜ್ಞಾನದ ಜೊತೆಗೆ ವ್ಯಾವಹಾರಿಕ, ಔದ್ಯೋಗಿಕ ಎಲ್ಲ ರಂಗಗಳ ಕೆಲಸಗಳನ್ನು ಕಲಿಯುತ್ತಾ ಸಾಗಬೇಕಿದೆ. ಆಗ ಮಾತ್ರ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಎದೆಗುಂದದೆ ಜೀವನದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.
ಕಾನೂನಿನ ಅರಿವು: ಬಹಳಷ್ಟು ಸಲ ಒಂಟಿಯಾಗಿ ಪ್ರಯಾಣಿಸುವಾಗ, ವಾಹನಗಳನ್ನು ಚಾಲನೆ ಮಾಡುವಾಗ,ಯಾವುದಾದರೂ ಹಣಕಾಸು ವ್ಯವಹಾರ ಮಾಡುವಾಗ, ಗ್ರಾಹಕರ ನೆಲೆಯಲ್ಲಿ ಖರೀದಿಸುವಾಗ ಸಣ್ಣಪುಟ್ಟ ತೊಂದರೆ ಅಡೆತಡೆಗಳು ಬರಬಹುದು. ಆಗ ಅವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಅತೀ ಅಗತ್ಯವಾದ ಕಾನೂನು ಅಂಶಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ಗ್ರಾಹಕರ ರಕ್ಷಣೆಗೆ ಇರುವ ಗ್ರಾಹಕರ ನ್ಯಾಯಾಲಯಗಳು, ಮಹಿಳಾ ಸಹಾಯವಾಣಿ ಸಂಖ್ಯೆ 1091 ಈ ರೀತಿಯ ಅಗತ್ಯ ಮಾಹಿತಿಗಳನ್ನು ತಿಳಿದಿರುವುದು ಅತ್ಯಗತ್ಯ.
ಹಣಕಾಸಿನ ವ್ಯವಹಾರ: ಹೆಣ್ಣು ಮಕ್ಕಳಿಗೆ ಹಣಕಾಸಿನ ವ್ಯವಹಾರ ಪ್ರಜ್ಞೆ ಕಡಿಮೆ ಎನ್ನುವ ಮಾತಿದೆ. ಸುಶಿಕ್ಷಿತರಾಗಿ ಕೈ ತುಂಬಾ ಸಂಬಳ ಪಡೆಯುವ ಕೆಲವು ಮಹಿಳೆಯರು ಕೂಡ ಬ್ಯಾಂಕ್ ವ್ಯವಹಾರದ ಕಡೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಪ್ರತಿ ಬಾರಿಯೂ ಬ್ಯಾಂಕ್, ಅಂಚೆ ಕಚೇರಿ ಹೀಗೆ ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಮನೆಯ ಪುರುಷರನ್ನು ಮಾತ್ರ ಕಳಿಸಿ, ತಾವು ಮನೆಯೊಳಗಿನ ಕೆಲಸಗಳಿಗೆ ಸೀಮಿತವಾಗುವ ಬದಲು, ಮನೆಯಲ್ಲಿ ಪತಿ ಅಥವಾ ತಂದೆಯ ಜತೆಗೆ ಒಂದೆರಡು ಬಾರಿ ತಾವೂ ಇಂತಹ ಹಣದ ವ್ಯವಹಾರದ ಸಂದರ್ಭದಲ್ಲಿ ತೆರಳಿ ಅದರ ಬಗ್ಗೆ ತಿಳಿದರೆ, ನಿರಾತಂಕವಾಗಿ ತಮ್ಮ ಜವಾಬ್ದಾರಿಗಳನ್ನು ತಾವೇ ನಿರ್ವಹಿಸಬಹುದು.
ಉನ್ನತ ಶಿಕ್ಷಣದ ದೂರದೃಷ್ಟಿ: ನಮ್ಮ ಕಲಿಕಾ ಆಸಕ್ತಿ, ಸಾಮರ್ಥ್ಯದ ಅರಿವು ನಮಗೆ ಇದ್ದೇ ಇರುತ್ತದೆ.ಆದರೆ ಉನ್ನತ ಶಿಕ್ಷಣ ಪಡೆಯುವಾಗ ಮನೆಯಲ್ಲಿ ಹೆಣ್ಣು ಮಕ್ಕಳು ದೂರದ ಊರಿಗೆ ಓದಿಗೆ ತೆರಳುವುದು ಕಷ್ಟ ಎಂಬ ಕಾರಣಕ್ಕೋ, ಹಣಕಾಸಿನ ಕೊರತೆಯ ಕಾರಣಕ್ಕೋ , ಮನೆಯ ಹಿರಿಯರು ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಅನಿವಾರ್ಯತೆಗೋ ಸಿಲುಕಿ ಕೆಲವು ಯುವತಿಯರಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ವಾವಲಂಬಿ ಬದುಕಿಗಾಗಿ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಪಡೆಯುವ ಅಗತ್ಯತೆಯನ್ನು ನಾವೇ ಮನೆಯ ಹಿರಿಯರಿಗೆ ಮನವರಿಕೆ ಮಾಡಿಕೊಟ್ಟು, ಶಿಕ್ಷಣ ಮುಂದುವರೆಸಿ ಔದ್ಯೋಗಿಕ ನೆಲೆ ಕಂಡುಕೊಳ್ಳಬೇಕಾಗುತ್ತದೆ.
ಸಮಾರಂಭಗಳ ನಿರ್ವಹಣೆ: ಜೀವನದ ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಮನೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಲು ಪುರುಷರೇ ಇಲ್ಲದೇ ಮಹಿಳೆಯರೇ ಎಲ್ಲವನ್ನೂ ನಿಭಾಯಿಸುವ ಸಂದರ್ಭ ಬರಬಹುದು. ಆಗಲೂ ಎದೆಗುಂದದೆ ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬ, ಉಪನಯನ, ಮದುವೆಯಂತಹ ಸಮಾರಂಭಗಳನ್ನೂ ಕೂಡ ತಾವೇ ಮುಂದೆ ನಿಂತು ಮಾಡುವಷ್ಟು ಮಾನಸಿಕ ಸಿದ್ಧತೆ ಹಾಗೂ ವ್ಯಾವಹಾರಿಕ ಜ್ಞಾನ ನಮ್ಮದಾಗಿಸಿಕೊಳ್ಳಬೇಕು. ಯಾವುದೇ ವಸ್ತುಗಳ ಖರೀದಿ, ಆಪ್ತರ ಆಮಂತ್ರಣದ ಜವಾಬ್ದಾರಿ, ಸಭಾಂಗಣದ ವ್ಯವಸ್ಥೆ ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಈ ಎಲ್ಲವನ್ನೂ ಯೋಜಿತ ರೀತಿಯಲ್ಲಿ ಮಾಡಬೇಕು. ಇಂತಹ ಜವಾಬ್ದಾರಿಯುತ ಕೆಲಸಗಳನ್ನು ಕಾಲೇಜು ಶಿಕ್ಷಣ ಪಡೆಯುವಾಗಲೇ ಮನೆಯಲ್ಲಿ ತಂದೆ-ತಾಯಿಗಳ ಜೊತೆಗೆ ಅವರಿಗೆ ಸಹಕಾರ ನೀಡುತ್ತಾ ಕಲಿತರೆ ಮುಂದಿನ ದಿನಗಳಲ್ಲಿ ತಾವೇ ಈ ಎಲ್ಲಾ ಕೆಲಸಗಳನ್ನು ಮಾಡುವಾಗ ನಿರಾತಂಕವಾಗಿ ಮಾಡಬಹುದು.
ತಂತ್ರಜ್ಞಾನದ ಅರಿವು: ನಾಗಾಲೋಟದಲ್ಲಿ ಓಡುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ತಂತ್ರಜ್ಞಾನದ ಬಗ್ಗೆ ತಕ್ಕಮಟ್ಟಿಗಿನ ತಿಳುವಳಿಕೆಯಾದರೂ ಹೊಂದಿರಲೇಬೇಕು.ತಂತ್ರಜ್ಞಾನ ಕ್ಷೇತ್ರವು ಮಹಿಳೆಯರಿಗೆ ವಿಫುಲ ಅವಕಾಶ ನೀಡಿದೆ. ಮಹಿಳಾ ಸಬಲೀಕರಣ ಪರಿಕಲ್ಪನೆ ದಿನೇ ದಿನೇ ಗಟ್ಟಿಯಾಗಲು ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಬೇಕು.ತಂತ್ರಜ್ಞಾನವು ಮಹಿಳೆಯರಿಗೆ ಅನೇಕ ಆನ್ಲೈನ್ಕೋರ್ಸ್ಗಳು, ಟ್ಯುಟೋರಿಯಲ್ ಮತ್ತು ಸಂಪನ್ಮೂಲಗಳನ್ನು ಒದಗಿಸಿದೆ. ಹೊಸ ಕೌಶಲಗಳನ್ನು ಅಭಿವೃದ್ಧಿಪಡಿ ಸಲು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಲು ಈ ಸಂಪನ್ಮೂಲಗಳ ಲಾಭ ಪಡೆಯಬಹುದು. ಪ್ರಪಂಚ ಹಾಗೂ ದೇಶದ ಪ್ರತಿಷ್ಠಿತ ಟೆಕ್ ಕಂಪನಿಗಳಲ್ಲಿ ಪ್ರಧಾನ ಸ್ಥಾನದಲ್ಲಿ ಮಹಿಳೆಯರಿದ್ದಾರೆ.ರೋಶಿನಿ ನಡಾರ್ ಮಲ್ಹೋತ್ರ ಅವರನ್ನು ತಂತ್ರಜ್ಞಾನ ಕ್ಷೇತ್ರದ ಲೆಜೆಂಡ್ ಅಂತಲೇ ಕರೆಯುತ್ತಾರೆ. ಏಇಔ ಟೆಕ್ನಾಲಜಿ ಮುಖ್ಯಸ್ಥೆಯಾಗುವ ಮೂಲಕ ಭಾರತದ ಐಟಿ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಒತ್ತಿರುವ ರೋಶಿನಿಯಂತಹವರು, ಇನ್ಪೋಸಿಸ್ನ ಸುಧಾಮೂರ್ತಿಯಂತವರನ್ನು ಯುವತಿಯರು ಸ್ಪೂರ್ತಿಯ ಐಕಾನ್ಗಳಂತೆ ಸ್ವೀಕರಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಡಿ ಇಡಬೇಕಿದೆ.
ವಾಹನ ಚಾಲನೆಯ ಅನಿವಾರ್ಯತೆ: ಶಾಲಾ ಕಾಲೇಜು ದಿನಗಳಲ್ಲಿ ಬಹಳಷ್ಟು ಉತ್ಸಾಹದಿಂದ ಟು ವೀಲರ್, ಫೋರ್ ವೀಲರ್ಗಳನ್ನು ಚಾಲನೆ ಮಾಡಲು ಕಲಿತರೂ, ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸದಾ ಪತಿಯ ಜೊತೆಯ ಓಡಾಡುವ ಅಭ್ಯಾಸ ಮಾಡಿಕೊಂಡು ವಾಹನ ಚಾಲನೆಯಿಂದ ದೂರ ಉಳಿಯುವ ಬಹಳಷ್ಟು ಮಹಿಳೆಯರು ಇದ್ದಾರೆ. ಮನೆಯಲ್ಲಿ ಹಿರಿಯರ ಅನಾರೋಗ್ಯ, ಮಕ್ಕಳ ಕಾಳಜಿ, ಮನೆಗೆ ಬೇಕಾಗುವ ವಸ್ತುಗಳ ತುರ್ತು ಖರೀದಿ ಈ ಎಲ್ಲಾ ಕೆಲಸಗಳಿಗೆ ವಾಹನಗಳನ್ನು ಬಳಸುವುದು ಅವಶ್ಯಕವಾಗಿರುತ್ತದೆ. ಪ್ರತಿ ಸಂದರ್ಭದಲ್ಲಿಯೂ ಮನೆಯ ಪುರುಷರನ್ನೇ ಇದಕ್ಕಾಗಿ ಅವಲಂಬಿಸುವುದು ಕಷ್ಟ. ತಾವೇ ಆತ್ಮವಿಶ್ವಾಸದಿಂದ ವಾಹನ ಚಾಲನೆ ಮಾಡಲು ಕಲಿತರೆ ಈ ರೀತಿಯ ಕೆಲಸಗಳು ಅತ್ಯಂತ ಸುಲಭವಾಗಿ ಸಾಗುತ್ತವೆ. ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇನ್ನಷ್ಟು ಏರಿಕೆ ಆದಾಗ್ಯೂ ಮತ್ತಷ್ಟು ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ದೈನಂದಿನ ಜವಾಬ್ದಾರಿಗಳನ್ನು ಮುನ್ನಡೆಸಲು ವಾಹನ ಚಾಲನೆಯನ್ನು ಅಭ್ಯಾಸ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ವ್ಯವಹಾರ ಜ್ಞಾನ ಬೇಕು: ಮಹಿಳೆಯರು ಓದುವುದು, ಬರೆಯುವುದನ್ನು ಕಲಿಯುವುದರ ಜೊತೆಗೆ ವ್ಯವಹಾರ ಜ್ಞಾನವನ್ನು ಹೊಂದಬೇಕು. ಮೂಢನಂಬಿಕೆಗಳಿಂದ ಹೊರಬರಬೇಕು. ಸಾಧನೆಯ ಪರಿಶ್ರಮ, ಪ್ರಗತಿ ಹಂಬಲ ಹೊಂದುವ ಮೂಲಕ ಆರ್ಥಿಕ ಅಭಿವೃದ್ಧಿ ಕಾಣಬೇಕು. ಇದಕ್ಕೆ ಸ್ಪಷ್ಟ ಯೋಚನೆ, ಯೋಜನೆ ಹಾಗೂ ಕಾರ್ಯಕ್ರಮ ಇರಬೇಕು. ಯೋಚನೆಗಳು ಆರೋಗ್ಯದಾಯಕವಾಗಿರಬೇಕು. ಪ್ರಗತಿ ಹಾಗೂ ಬದಲಾವಣೆಯ ಕಡೆಗೆ ಮಹಿಳೆಯರು ಸಾಗಬೇಕು ಎಂದು ಧರ್ಮಸ್ಥಳದ ಧರ್ವಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ, ಹೆಣ್ಣು ತಮ್ಮ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಅವಕಾಶಗಳನ್ನು ಬಳಸಿಕೊಂಡು, ಅನಾವಶ್ಯಕ ಆತಂಕಗಳನ್ನು ದೂರ ಮಾಡಿಕೊಂಡು ಬದುಕಿನಲ್ಲಿ ಯಶಸ್ವಿಯಾಗಬೇಕಿದೆ.