ವಿಲ್ ಸಾಕ್ಷಿಗಳು ನ್ಯಾಯಾಲಯಕ್ಕೆ ಬರಲು ಆಗದಿದ್ದರೆ ಏನು ಮಾಡುವುದು?

Legal
Published on
 ನಮ್ಮ ತಾತ ನನಗೆ ಮತ್ತು ನಮ್ಮ ಚಿಕ್ಕಪ್ಪನ ಮಗನಿಗೆ ಎರಡು ಆಸ್ತಿಗಳನ್ನು ವಿಲ್ ಮಾಡಿದ್ದಾರೆ. ನಮ್ಮ ದೊಡ್ಡಪ್ಪ ಮತ್ತು ನಮ್ಮ ತಂದೆಗೆ ಬೇರೆ ಆಸಿಗಳೆಲ್ಲಾ ಹೋಗಿವೆ. ಅದರೆ ಈಗ ನಮ್ಮ ಚಿಕ್ಕಪ್ಪ ವಿಲ್ ಮೋಸ ಮಾಡಿ ಬರೆಸಿಕೊಂಡಿದ್ದೇವೆ ಎಂದು ಹೇಳಿ ಆ ಸ್ವತ್ತುಗಳನ್ನು ನಮಗೆ ಬಿಟ್ಟುಕೊಡುತ್ತಿಲ್ಲ. ಈಗ ಕೇಸು ಹಾಕೋಣ ಎಂದರೆ ವಿಲ್ ಸಾಕ್ಷಿಗಳಲ್ಲಿ ಒಬ್ಬರು ತೀರಿಹೋಗಿದ್ದಾರೆ. ಮತ್ತೊಬ್ಬರಿಗೆ 85 ವರ್ಷ ವಯಸ್ಸು ಆಗಿದ್ದು ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಎರಡು ವರ್ಷಗಳಿಂದ ಜ್ಞಾನವೇ ಸರಿಯಾಗಿ ಇಲ್ಲವಂತೆ. ಏನು ಮಾತಾಡುತ್ತಿದ್ದಾರೋ ಯಾರಿಗೂ ತಿಳಿಯುವುದಿಲ್ಲವಂತೆ. ಅವರು ನ್ಯಾಯಾಲಯಕ್ಕೆ ಬರಲು ಆಗುವುದಿಲ್ಲ. ಈಗ ನಾನು ಕೇಸು ಹಾಕಿದರೆ, ವಿಲ್ ಸಾಕ್ಷಿಗಳು ಇಲ್ಲದೇ ತೊಂದರೆ ಆಗುತ್ತದೆ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.

ಯಾವುದೇ ವಿಲ್ /ಮರಣಶಾಸ್ತ್ರವನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಲು ವಿಲ್ ಪತ್ರಕ್ಕೆ ಸಾಕ್ಷಿ ಹಾಕಿದ್ದಂತಹ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಾಕ್ಷಿಗಳಲ್ಲಿ ಒಬ್ಬರನ್ನಾದರೂ ವಿಚಾರಣೆ ಮಾಡಲೇ ಬೇಕು. ನಿಮ್ಮ ವಿಷಯದಲ್ಲಿ ಒಬ್ಬ ಸಾಕ್ಷಿ ತೀರಿಹೋಗಿರುವುದರಿಂದ, ಅವರು ತೀರಿ ಹೋಗಿದ್ದಾರೆ ಎನ್ನುವ ಬಗ್ಗೆ ಮರಣ ಪ್ರಮಾಣ ಪತ್ರ/ಡೆತ್ ಸರ್ಟಿಫಿಕೇಟನ್ನು ನ್ಯಾಯಾಲಯಕ್ಕೆ ಕೊಡಿ. ತೀರಿ ಹೋಗಿರುವವರ ಮಕ್ಕಳಲ್ಲಿ ಯಾರಾದರೂ ಒಬ್ಬರ ಸಾಕ್ಷಿ ಮಾಡಿಸಿ ಇದು ನಮ್ಮ ತಂದೆಯ ಸಹಿ ಎಂದು ಅವರ ಮೂಲಕ ಗುರ್ತಿಸಿ. ಇನ್ನು ಒಬ್ಬ ಸಾಕ್ಷಿ ಬದುಕಿದ್ದರೆ ಅವರ ವಿಚಾರಣೆ ಮಾಡಲೇ ಬೇಕಾಗುತ್ತದೆ. ಆದರೆ ಬದುಕಿರುವ ಸಾಕ್ಷಿ ವಿಚಾರಣೆಗೆ ಬಂದು ಸಾಕ್ಷಿ ಹೇಳುವ ಸ್ಥಿತಿಯಲ್ಲಿ ಇಲ್ಲ ಎನ್ನುವುದನ್ನು ನೀವು ಪರ್ಯಾಯ ಸಾಕ್ಷಿಗಳ ಮೂಲಕ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿ. ಆ ಸಾಕ್ಷಿಯ ವಯಸ್ಸು ಆರೋಗ್ಯ ಅವರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಅವರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ನ್ಯಾಯಾಲಯದಲ್ಲಿ ಹೇಳಿಸಿ. ಅವರಿಗೆ ಸಾಕ್ಷಿ ಹೇಳುವ ಚೈತನ್ಯವಿಲ್ಲ ಎನ್ನುವುದನ್ನು ಕೋರ್ಟ್ ಕಮಿಷನ್ನರ ಮೂಲಕ ಸಾಬೀತುಪಡಿಸಿ.

ಹಾಗೆಯೇ ಸಾಕ್ಷಿದಾರರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ಸಾಕ್ಷಿಯ ಸಹಿಯನ್ನು ಗುರುತಿಸಲು ಅವಕಾಶವನ್ನು ಕೇಳಿಕೊಂಡು , ಗುರುತಿಸಲು ಪ್ರಯತ್ನಿಸಿ. ಒಂದು ವೇಳೆ ಅವಕಾಶ ಕೊಡದಿದ್ದರೆ, ಸಾಕ್ಷಿ ಮುಂದೆ ತೀರಿಕೊಂಡ ನಂತರವಾದರೂ ( ಆ ವೇಳೆಗೆ ಕೇಸು ಬಾಕಿ ಇದ್ದರೆ) ಅವರ ಮಕ್ಕಳಲ್ಲಿ ಯಾರಾದರೂ ಒಬ್ಬರ ಮೂಲಕ ಈ ಎಲ್ಲ ಪ್ರಯತ್ನವನ್ನೂ ನೀವು ಮಾಡಿದರೆ, ನಿಮಗೆ ತೊಂದರೆಯಾಗುವುದಿಲ್ಲ. ವಿಲ್ ಸಾಕ್ಷಿಗಳ ವಿಚಾರಣೆಯ ಬಗ್ಗೆ ನಿಮ್ಮ ಪ್ರಕರಣದಂತಹ ಪ್ರಕರಣಗಳಲ್ಲಿ ಯಾವ ರೀತಿಯಾಗಿ ಇರಬೇಕು ಎನ್ನುವುದನ್ನು ಸುಪ್ರೀಂ ಕೋರ್ಟು ಹಲವಾರು ಸಂದರ್ಭಗಳಲ್ಲಿ ತಿಳಿಸಿದೆ. ಈ ಬಗ್ಗೆ ನಿಮ್ಮ ವಕೀಲರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಹಿರಿಯ ಮಧ್ಯಸ್ಥಿಕೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net